ಮೊರಾಕ್ಕೋದಲ್ಲಿ ಬುಧನ ಉಲ್ಕಾಶಿಲೆ ಪತ್ತೆ ಕಳೆದ ವರ್ಷ ಮೊರಾಕ್ಕೋದಲ್ಲಿ ವಿಚಿತ್ರ ರೀತಿಯ ಹಸಿರು ಬಣ್ಣದ ಶಿಲೆ ಪತ್ತೆಯಾಯಿತು. ಇದು ಬಾಹ್ಯಾಕಾಶದಿಂದ ಸಿಡಿದುಬಂದ ಕಲ್ಲು ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿತ್ತು. ಹೀಗಾಗಿ, ಇದಕ್ಕೆ 'ಎನ್ ಡಬ್ಲ್ಯೂಎ 7325' ಎಂದು ಹೆಸರಿಸಲಾಯಿತು. ಈ ಬಗ್ಗೆ ಅಧ್ಯಯನ ನಡೆಸುತ್ತಿರುವ ವಾಷಿಂಗ್ಟನ್ ವಿವಿಯ ಆಂಥೋನಿ ಇರ್ವಿಂಗ್ ಪ್ರಕಾರ, ಇದು ಬುಧನಿಂದ ಸಿಡಿದು ಬಂದ ಉಲ್ಕಾಶಿಲೆ. ಬುಧ ಸೂರ್ಯನಿಗೆ ಬಹು ಹತ್ತಿರವಿರುವ ಗ್ರಹವಾಗಿದ್ದು, ಅಲ್ಲಿಂದಲೇ ಸಿಡಿದು ಬಂದಿರಬಹುದಂತೆ. ಕೆಲ ಸಮಯದ ಹಿಂದೆ ಬುಧನಲ್ಲಿ ಉಲ್ಕಾಪಾತಗಳ ಸ್ಫೋಟವಾಗಿವೆ. ಈ ಆರ್ಭಟಕ್ಕೆ ಅದರ ತುಣುಕೊಂದು ಸಿಡಿದು ಬಾಹ್ಯಾಕಾಶಕ್ಕೆ ಬಂದಿರಬೇಕು. ಎಷ್ಟೋ ಶತಕೋಟಿ ವರ್ಷಗಳವರೆಗೆ ಸೂರ್ಯನನ್ನು ಸುತ್ತುತ್ತಿದ್ದ ಈ ಉಲ್ಕೆ ಕಡೆಗೆ ಭೂಮಿಯ ವಾತಾವರಣ ಪ್ರವೇಶಿಸಿ ಮೊರಾಕ್ಕೋದಲ್ಲಿ ಬಿದ್ದಿರಬೇಕು ಎಂದು ಹೇಳುತ್ತಾರೆ. ಇದು ಭೂಮಿಯ ಕಲ್ಲೂ ಅಲ್ಲ, ಮಂಗಳನ ಕಲ್ಲೂ ಅಲ್ಲ, ಕ್ಷುದ್ರಗ್ರಹವಂತೂ ಅಲ್ಲವೇ ಅಲ್ಲ. ಹೀಗಾಗಿಯೇ ಬುಧನಿಂದ ಸಿಡಿದುಬಂದ ಉಲ್ಕೆಯೇ ಎನ್ನುತ್ತಾರೆ. ಈ ಬಗ್ಗೆ ಇನ್ನಷ್ಟು ಅಧ್ಯಯನವಾಗಬೇಕು ಎಂದೂ ಅವರು ಹೇಳುತ್ತಾರೆ.