ಇನ್ನೊಂದು ಆಲ್ಟಿಸ್ ಕೊರೊಲ್ಲಾ ಅಲ್ಟಿಸ್ ಹೊಸ ಮಾದರಿ ಹಳೆಯ ಮಾದರಿಗಿಂತ ಸಂಪೂರ್ಣ ಬದಲಾಗಿದೆ. ಹಿಂದಿನ ಆಲ್ಟಿಸ್‌ಗೂ ಇದಕ್ಕೂ ಯಾವುದೇ ಹೋಲಿಕೆ ಇಲ್ಲ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಸಂಸ್ಥೆ 11ನೇ ತಲೆಮಾರಿನ ಕೊರೊಲ್ಲಾ ಆಲ್ಟಿಸ್ ಕಾರನ್ನು ಬಿಡುಗಡೆ ಮಾಡಿತು. ಇದರೊಂದಿಗೆ ಟೊಯೊಟಾ ಕಂಪನಿಯ ಎಲ್ಲ ಕಾರುಗಳು ಹೊಸರೂಪ ಪಡೆದುಕೊಂಡಂತಾಗಿದೆ. ಕೊರೊಲ್ಲಾ ಆಲ್ಟಿಸ್ ಪ್ರೀಮಿಯಂ ಶ್ರೇಣಿ ವಾಹನವಾಗಿದ್ದು, 7 ಆಕರ್ಷಕ ಬಣ್ಣಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಪೆಟ್ರೋಲ್ ಮಾದರಿ ಎಲ್ 17,11,162, ಜಿಎಲ್ 15,60,162, ಜಿ-ಸಿವಿಟಿ 15,26,162, ಈ 13,96,162, ಜೆ(ಎಸ್) 12,20,838 ದರಗಳಲ್ಲಿ ಲಭ್ಯವಿದೆ. ಡೀಸೆಲ್ ಮಾದರಿ ಡಿಜಿಎಲ್ 16.90,162, ಡಿಜಿ 15,26,162, ಡಿಜೆ(ಎಸ್) 13,86,162, ಡಿಜೆ 13,29,162 ದರಗಳಲ್ಲಿವೆ. ಪೆಟ್ರೋಲ್ ಮ್ಯಾನ್ಯುಯಲ್ 13.96 ಕಿ.ಮೀ, ಸಿವಿಟಿ 15.74 ಕಿ.ಮೀ, ಹಾಗೂ ಡೀಸೆಲ್ 21.42 ಕಿ.ಮೀ ಮೈಲೇಜ್ ನೀಡುತ್ತದೆ. ಕೊರೊಲ್ಲಾ ಅಲ್ಟಿಸ್ ಹೊಸ ಮಾದರಿ ಹಳೆಯ ಮಾದರಿಗಿಂತ ಸಂಪೂರ್ಣ ಬದಲಾಗಿದೆ. ಪ್ರಾಜೆಕ್ಟರ್ ಹೆಡ್‌ಲ್ಯಾಂಪ್, ಇಳಿಸಿದಂತಿರುವ ಬಾನೆಟ್, ಹೊಸ ಗ್ರಿಲ್, ಬಂಪರ್ ಹಾಗೂ ಹೊಸ ವಿನ್ಯಾಸದ ಡಿಕ್ಕಿ ಹೊಂದಿದ್ದು, ಹಿಂದಿನ ಆಲ್ಟಿಸ್‌ಗೂ ಇದಕ್ಕೂ ಯಾವುದೇ ಹೋಲಿಕೆ ಇಲ್ಲ. ಆಂತರಿಕ ವಿನ್ಯಾಸದಲ್ಲಿ ಕೂಡ ಭಾರೀ ಬದಲಾವಣೆಯಾಗಿದೆ. ಅತ್ಯಂತ ಶ್ರೀಮಂತ ಎನಿಸುವಂತಹ ಆಂತರಿಕ ವಿನ್ಯಾಸ ರೂಪಿಸುವಲ್ಲಿ ಟೊಯೊಟಾ ಕಂಪನಿ ಯಶಸ್ವಿಯಾಗಿದೆ. 'ಟಿ' ಮಾದರಿಯ ಡ್ಯಾಶ್‌ಬೋರ್ಡ್ ಕೈಬಿಟ್ಟು ಎರಡು ಬಣ್ಣದ ಪದರ ಮಾದರಿಯ ಆಕರ್ಷಕ ಶೈಲಿಯ ಡ್ಯಾಶ್‌ಬೋರ್ಡ್ ನಿರ್ಮಾಸಲಾಗಿದೆ. ಕಪ್ಪು ಮತ್ತು ಬೆಳ್ಳಿ ಬಣ್ಣದ ಕಾಂಬಿನೇಷನ್‌ನ ಸ್ಟೇರಿಂಗ್ ವ್ಹೀಲ್ ಅತ್ಯಂತ ಆಕರ್ಷಕವಾಗಿದೆ. ಸ್ಟೇರಿಂಗ್‌ನಲ್ಲೇ ಆಡಿಯೋ ಮತ್ತು ಕೆಲವು ನಿಯಂತ್ರಣಗಳನ್ನು ನೀಡಲಾಗಿದೆ. ಟಚ್‌ಸ್ಕ್ರೀನ್ ಆಡಿಯೋ ಸಿಸ್ಟಂ ನೀಡಲಾಗಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಯೋವು ಇಷೀ, ರವೀಂದು ಟೊಯೋಟಾ ಅಧ್ಯಕ್ಷೆ ಮೀನಾ ವಿ.ಕಿರ್ಲೋಸ್ಕರ್, ನಂದಿ ಟೊಯೋಟಾ ಅಧ್ಯಕ್ಷ ಸಾಜು ಕೆ.ಥಾಮಸ್, ವಿವಾ ಟೊಯೋಟಾ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಬೆಂಗಳೂರಿನಿದಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು. ಇತ್ತೀಚೆಗೆ ಹೋಂಡಾ ಕಂಪನಿ ಕೂಡ ಹೊಸ ಮಾದರಿಯ ಸಿಟಿ ಕಾರು ಮಾರುಕಟ್ಟೆಗೆ ಬಿಟ್ಟಿದ್ದು, ಹುಂಡೈ ವೆರ್ನಾ ಕೂಡ ಕೆಲವು ತಿಂಗಳ ಹಿಂದೆ ಹೊಸ ಆಕರ್ಷಕ ರೂಪ ಪಡೆದುಕೊಂಡಿದೆ. ಇವುಗಳಿಗೆ ಪೈಪೋಟಿ ನೀಡುವ ಹಿನ್ನೆಲೆಯಲ್ಲಿ ಟೊಯೊಟಾ ಕಂಪನಿ ಆಲ್ಟಿಸ್‌ಗೆ ಹೊಸ ರೂಪ ನೀಡಿದೆ. ಆದರೂ ಫೋಕ್ಸ್‌ವ್ಯಾಗನ್ ಜೆಟ್ಟಾ, ಹುಂಡೈ ಎಲೆನ್ಟ್ರಾ ಮುಂತಾದ ಕಾರುಗಳಿಗೆ ಪೈಪೋಟಿ ನೀಡುವ ಮಟ್ಟ ತಲುಪಲು ಕಂಪನಿ ಸಾಧ್ಯವಾಗಿಲ್ಲ ಎಂದೇ ಹೇಳಲಾಗುತ್ತದೆ.