ಮಂಗಳ ಕನಸಿನಂಗಳ ಭೂಮಿಯನ್ನೇ ಹೋಲುವ ಕಾರಣದಿಂದಲೋ ಏನೋ ಈ ಗ್ರಹ ವಿಜ್ಞಾನಿಗಳಿಗೆ ಅಚ್ಚುಮೆಚ್ಚು. ಎಂದೂ ತಣಿಯದ ಕುತೂಹಲ ತಾಣ 4.49 ಕೋಟಿ-ಸೂರ್ಯನಿಂದ ದೂರ 13 ಮಂಗಳಕ್ಕಿರುವ ಚಂದ್ರರು 22.40 ಕೋಟಿ ಕಿ.ಮೀ ಮಂಗಳ ಮತ್ತು ಭೂಮಿ ಅಂತರ ಸೌರಮಂಡಲದ ಉಳಿದ ಗ್ರಹಗಳಿಗೆ ಹೋಲಿಸಿದರೆ ಮನುಷ್ಯನಿಗೆ ಕೆಂಬಣ್ಣದ ಮಂಗಳ ಬಗ್ಗೆ ಮೊದಲಿನಿಂದಲೂ ತಣಿಯದ ಕುತೂಹಲ. ಭೂಮಿಯನ್ನೇ ಹೋಲುವ ಕಾರಣದಿಂದಲೋ ಏನೋ ಈ ಗ್ರಹ ವಿಜ್ಞಾನಿಗಳಿಗೆ ಅಚ್ಚುಮೆಚ್ಚು. ಭೂಮಿಗೇನಾದರೂ ಆಪತ್ತು ಎದುರಾದರೆ ಮುಂದೊಂದು ದಿನ ಈ ಗ್ರಹದಲ್ಲಿ ಭವಿಷ್ಯ ಕಟ್ಟಿಕೊಳ್ಳಬಹುದು ಎನ್ನುವ ದೂರದ ಕನಸು. ಹಾಗೆ ನೋಡಿದರೆ ಮೊದಲ ಬಾರಿಗೆ ಟೆಲಿಸ್ಕೋಪ್ ಕಂಡು ಹಿಡಿದಾಗಲೇ ಖಗೋಳ ವಿಜ್ಞಾನಿಗಳ ಕುತೂಹಲದ ನೋಟ ಮಂಗಳನತ್ತ ನೆಟ್ಟಿತ್ತು. ಈ ಕುತೂಹಲದ ಪಯಣ ಆರಂಭವಾದದ್ದು ಮಾತ್ರ 20ನೇ ಶತಮಾನದಲ್ಲಿ. ಅಮೆರಿಕ, ಯೂರೋಪ್, ರಷ್ಯಾ ಬಳಿಕ ಈಗ ಭಾರತ ಕೂಡ ಮಂಗಳನ ಅಧ್ಯಯನಕ್ಕೆ ಕೂತಿದೆ. ಮಂಗಳ ಯಾಕೆ? 1960ಕ್ಕಿಂತ ಮೊದಲು ಬಹುತೇಕರಲ್ಲಿ ಮಂಗಳ ಗ್ರಹ ಕೂಡ ಭೂಮಿಯಂತೆಯೇ ಇದೆ. ಅಲ್ಲೂ ನೀರಿದೆ ಎಂದು ನಂಬಿಕೆ ಇತ್ತು. ಆದರೆ, ಆ ಕಲ್ಪನೆಗಳೆಲ್ಲ ಈಗ ಸುಳ್ಳಾಗಿವೆ. ಆದರೆ, ನೀರಿನ ಕುರುಹಿಗಾಗಿ ಈಗ ಅಲ್ಲಿ ಹುಡುಕಾಟ ನಡೆದಿದೆ. ಭೂಮಿಯ ಸನಿಹದ ಮತ್ತು ಸೂರ್ಯ ಮಂಡಲದಲ್ಲಿರುವ ಭೂಮಿಯನ್ನೇ ಹೋಲುವ ಮತ್ತೊಂದು ಗ್ರಹವೆಂದರೆ ಅದು ಮಂಗಳ ಮಾತ್ರ. ಜತೆಗೆ ಭೂಮಿಯಲ್ಲಿ ಜೀವಿಗಳ ಅಸ್ತಿತ್ವಕ್ಕೆ ಮಂಗಳ ಗ್ರಹವೇ ಮೂಲ ಕಾರಣ ಎನ್ನುವ ವಾದ ಇದೆ. 24.6 ಗಂಟೆ ಮಂಗಳ ತನ್ನ ಕಕ್ಷೆಯಲ್ಲಿ ಒಂದು ಸುತ್ತು ಸುತ್ತಲು ತೆಗೆದುಕೊಳ್ಳೋದು ಸಮಯ. ಭೂಮಿ ತನ್ನ ಕಕ್ಷೆಯಲ್ಲಿ ಒಂದು ಸುತ್ತು ತಿರುಗಲು ತೆಗೆದುಕೊಳ್ಳುವ ಸಮಯ 24 ಗಂಟೆ ಶೇ.38 ಭೂಮಿಗೆ ಹೋಲಿಸಿದರೆ ಮಂಗಳ ಗ್ರಹದ ಗುರುತ್ವಾಕರ್ಷಣ ಶಕ್ತಿ. ಬಹುತೇಕ ವಿಜ್ಞಾನಿಗಳ ಪ್ರಕಾರ ಇಷ್ಟು ಗುರುತ್ವಾಕರ್ಷಣಾ ಶಕ್ತಿಯನ್ನು ಮಾನವನ ದೇಹ ಹೊಂದಾಣಿಕೆ ಮಾಡಿಕೊಳ್ಳಬಹುದು. 25 ಡಿಗ್ರಿ ಭೂಮಿಯು 23.5 ಡಿಗ್ರಿ ವಾಲಿದ್ದರೆ. ಮಂಗಳವು 1.5 ಡಿಗ್ರಿ ಹೆಚ್ಚುವಾಲಿದೆ. ಹಾಗಾಗಿ ಮಂಗಳ ಮತ್ತು ಭೂಮಿಯ ನಡುವಿನ ಋತುಗಳಲ್ಲಿ ಅಂಥ ವ್ಯತ್ಯಾಸವಿಲ್ಲ. ಆದರೆ ಮಂಗಳದಲ್ಲಿ ಒಂದು ವರ್ಷ ಅಂದರೆ 687 ದಿನಗಳಾಗುತ್ತವೆ. ಅಂದರೆ ಅಲ್ಲಿನ ಋತು ಚಕ್ರ ಭೂಮಿಗಿಂತ ಹೆಚ್ಚು ದೀರ್ಘ. ಮಂಗಳ ಹಾದಿ ಮಾರ್ಸನಿಕ್-1 ಆ.10 1960! ಇದು ಅಂಗಾರಕನ ಅಂಗಳವನ್ನು ಹತ್ತಿರದಿಂದ ನೋಡುವ ಅಲ್ಲಿ ಇಳಿಯುವ ಕನಸಿಗೆ ಹೊಸ ಭಾಷ್ಯ ಬರೆದ ದಿನ. ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಮೊದಲ ಪ್ರಯತ್ನ ಆರಂಭವಾದದ್ದು ಸೋವಿಯತ್ ಯೂನಿಯನ್ ಅಂದರೆ ಈಗಿನ ರಷ್ಯಾದಿಂದ. ಕೆಂಪುಗ್ರಹದ ಅಧ್ಯಯನಕ್ಕಾಗಿ ರಷ್ಯಾ ಹಾರಿಬಿಟ್ಟ ಮಾರ್ಸನಿಕ್-1 ಮಾರ್ಗದಲ್ಲೇ ಕೈಕೊಟ್ಟಿತು. ಮತ್ತೆ ಪ್ರಯತ್ನ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಗ ಅಮೆರಿಕ ಮತ್ತು ರಷ್ಯಾ ನಡುವೆ ಪೈಪೋಟಿ ನಡೆಯುತ್ತಿದ್ದ ದಿನಗಳವು. ಹಾಗಾಗಿ ಮಾರ್ಸನಿಕ್ ವೈಫಲ್ಯದಿಂದ ಸೋವಿಯತ್ ರಷ್ಯಾ ಕೈಕಟ್ಟಿ ಕೂರಲಿಲ್ಲ. ಈ ಬಾರಿ ಮೇ 19, 1971ರಂದು ಅಂದರೆ 11 ವರ್ಷಗಳ ಬಳಿಕ ಮತ್ತೊಂದು ನೌಕೆಯನ್ನು ಮಂಗಳನತ್ತ ಕಳುಹಿಸಿಕೊಟ್ಟಿತು. ಆದರೆ ಅದು ಮಂಗಳನಂಗಳದಲ್ಲಿ ಇಳಿಯುವ ವೇಳೆ ಅಪಘಾತಕ್ಕೀಡಾಯಿತು. ಮರೈನರ್-9 ರಷ್ಯಾ ಮಂಗಳನತ್ತ ಸಾಲು ಸಾಲು ಗಗನನೌಕೆಗಳನ್ನು ಹಾರಿ ಬಿಡುತ್ತಿದ್ದಾಗ ಅಮೆರಿಕ ಸುಮ್ಮನೆ ಕೂರಲು ಸಾಧ್ಯವೇ? ಸರಣಿ ಸೋಲಿನ ಬಳಿಕ ಮೇ.30, 1971ರಂದು ಅಮೆರಿಕ ಮರೈನರ್-9 ಗಗನನೌಕೆಯನ್ನು ಮಂಗಳನತ್ತ ಹಾರಿಬಿಟ್ಟಿತು. ಇದು ನ.14, 1971ರಂದು ಮಂಗಳನನ್ನು ಯಶಸ್ವಿಯಾಗಿ ತಲುಪಿತು. ಇದು ಇನ್ನೊಂದು ಗ್ರಹದ ಕಕ್ಷೆ ತಲುಪಿದ ಮೊದಲ ಯಶಸ್ವಿ ಗಗನೌಕೆಯಾಗಿದೆ. ವೈಕಿಂಗ್1,2 ವೈಕಿಂಗ್ 1 ಉಡಾವಣೆ ಆದದ್ದು ಆ.20 1975ರಂದು. ಮಂಗಳ ಕಕ್ಷೆಯಲ್ಲಿ ತಿಂಗಳು ಕಳೆದ ಬಳಿಕ ವೈಕಿಂಗ್ 1 ಲ್ಯಾಂಡರ್ ಅನ್ನು ಮಂಗಳನಲ್ಲಿ ಇಳಿಸಿತು. ಇದು ಮಂಗಳನ ಅಂಗಳದ ಮೇಲೆ ಇಳಿದ ಮೊದಲ ಯಶಸ್ವಿ ನೌಕೆ. ವೈಕಿಂಗ್ 2 ಅನ್ನು ಸೆ.9 1975ರಂದು ಹಾರಿಬಿಡಲಾಯಿತು. ಮಂಗಳ ಗ್ರಹದ 50 ಸಾವಿರ ಫೋಟೋಗಳನ್ನು ವೈಕಿಂಗ್ ಭೂಮಿಗೆ ಕಳುಹಿಸಿತು. ಮೊದಲ ರೋವರ್ ನಾಸಾದ ಪಾಥ್‌ಫೈಂಡರ್ ಗಗನನೌಕೆ ಗಗನದತ್ತ ಮುಖ ಮಾಡಿದ್ದು, ಡಿ.4 1996ರಂದು ಮಂಗಳ ಗ್ರಹ ತಲುಪಿದ್ದು ಜು.4. 1997ಕ್ಕೆ ಪಾಥ್ ಫೈಂಡರ್ ತನ್ನ ಹೊತ್ತೊಯ್ದಿದ್ದ ಸೊರ್ಜೊನರ್ ರೋವರ್ ಮಂಗಳನ ಮೇಲ್ಮೈ ಮೇಲೆ ಇಳಿದದ್ದು ಜುಲೈ 6ರಂದು. ಈ ಮೂಲಕ ಮಂಗಳ ಗ್ರಹದ ಮೇಲೆ ಓಡಾಡಿದ ಮೊದಲ ವಾಹನ ಎನ್ನುವ ಗೌರವಕ್ಕೆ ಸೊರ್ಜೊನರ್ ಪಾತ್ರವಾಯಿತು. ನೊಝೋವು ಮಂಗಳಗ್ರಹಕ್ಕೆ ಸಂಬಂಧಿಸಿ ಅಮೆರಿಕ, ರಷ್ಯಾಕ್ಕಷ್ಟೇ ಸೀಮಿತವಾಗಿದ್ದ ಬಾಹ್ಯಾಕಾಶ ಸ್ಪರ್ಧೆಗೆ ಪರ್ಯಾಯವಾಗಿ ಜಪಾನ್ ಜು.4 1998ರಂದು ನೋಝೋವು ಗಗನನೌಕೆಯನ್ನು ಹಾರಿಬಿಟ್ಟಿತು. ಗಗನನೌಕೆಯಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ಅದು ಮಂಗಳನತ್ತ ತಲುಪಲೇ ಇಲ್ಲ. ನಂತರ ಅನೇಕ ಬಾರಿ ಇದರ ಪಥ ಸರಿಪಡಿಸುವ ಪ್ರಯತ್ನ ನಡೆಯಿತಾದರೂ ಯಶ ಕಾಣಲೇ ಇಲ್ಲ. ಮಾರ್ಸ್ ಒಡಿಸ್ಸೆ ಏ.7 2001ರಂದು ನಾಸಾ, ಮಾರ್ಸ್ ಒಡಿಸ್ಸೆ ಗಗನನೌಕೆಯನ್ನು ಮಂಗಳನತ್ತ ಹಾರಿಬಿಟ್ಟಿತು. ಈ ಗಗನನೌಕೆ ತನಗೆ ವಹಿಸಿದ ಕೆಲಸವನ್ನು ಇಲ್ಲಿಯವರೆಗೂ ಯಶಸ್ವಿಯಾಗಿ ನಿರ್ವಹಿಸಿದೆ. ಈ ಮೂಲಕ ಡಿ. 15, 2010ರಂದು ಮಂಗಳದಲ್ಲಿ ಅತಿ ಹೆಚ್ಚು ಕಾಲ ಕಾರ್ಯಾಚರಣೆಯಲ್ಲಿರುವ ಗಗನನೌಕೆ ಎನ್ನುವ ದಾಖಲೆ ಬರೆಯಿತು. ಸ್ಪಿರಿಟ್-ಆಪರ್ಚುನಿಟಿ ಇದು ನಾಸಾದ ಎರಡು ಮಹತ್ವಾಕಾಂಕ್ಷೆಯ ರೋವರ್‌ಗಳು. ಇವೆರಡೂ ಮಂಗಳನತ್ತ ಪ್ರಯಾಣ ಆರಂಭಿಸಿದ್ದು, 2003ರಲ್ಲಿ ಸ್ಪಿರಿಟ್ ಏಪ್ರಿಲ್ 2009ರಲ್ಲಿ ಮರಳಿನಲ್ಲಿ ಸಿಕ್ಕಿಹಾಕಿಕೊಂಡು ಹಿನ್ನಡೆ ಅನುಭವಿಸಿತು. ಮಾರ್ಚ್ 22 2010ರಂದು ಸ್ಪಿರಿಟ್‌ನ ಅಧಿಕೃತ ಅಂತ್ಯ ಘೋಷಿಸಲಾಯಿತು. ಆಪರ್ಚುನಿಟಿ ಮಾತ್ರ ಈ ವರೆಗೂ ಸೇವೆಯಲ್ಲಿದೆ. ಮಾರ್ಸ್ ಎಕ್ಸ್‌ಪ್ರೆಸ್, ಬೀಗಲ್ 2 ಲ್ಯಾಂಡರ್ ಯೂರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್‌ಎ) ಜೂ.3 2003ರಂದು ಮಾರ್ಸ್ ಎಕ್ಸ್‌ಪ್ರೆಸ್ ಆರ್ಬಿಟರ್, ಬೀಗಲ್-2 ಲ್ಯಾಂಡರ್ ಅನ್ನು ಕೆಂಪುಗ್ರಹದತ್ತ ಕಳುಹಿಸಿ ಕೊಟ್ಟಿತು. ಡಿ.19, 2003ರಂದು ಬೀಗಲ್ ಲ್ಯಾಂಡರ್ ಅನ್ನು ಮೇಲ್ಮೈನಲ್ಲಿಳಿಸಿತು. ದುರದೃಷ್ಟವಶಾತ್ ಲ್ಯಾಂಡರ್ ಸಂಪರ್ಕ ಕಡಿತಗೊಂಡಿದ್ದು, ಆರ್ಬಿಟರ್ ಮಾತ್ರ ಕೆಲಸ ಪೂರ್ಣಗೊಳಿಸಿತು. ಫೋನಿಕ್ಸ್ ಮಾರ್ಸ್ ಲ್ಯಾಂಡರ್ ಇದು ನಾಸಾದ ಮತ್ತೊಂದು ಮಹತ್ವದ ಯೋಜನೆ. ಇದನ್ನು ಹಾರಿಬಿಟ್ಟದ್ದು ಆ.4, 2007ರಂದು. ಮೇ25, 2008ರಂದು ಮಂಗಳನ ಉತ್ತರ ಭಾಗದಲ್ಲಿರುವ ಕುಳಿಯಲ್ಲಿ ಇಳಿಯಿತು. ಮಂಗಳನ ಮೇಲ್ಮೈ ಮೇಲೆ ನೀರು ಮಂಜುಗಡ್ಡೆಯ ಕುರುಹು ಇದೆಯೇ ಎನ್ನುವ ಕುರಿತು ಮಹತ್ವದ ಅಧ್ಯಯನ ನಡೆಸಿತ್ತು. ಫೋಬೋಸ್-ಗ್ರಾಂಟ್ ಮಿಷನ್ ಇದು ರಷ್ಯಾ (ಮತ್ತು ಚೀನಾ)ದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ. ಮಂಗಳನ ಉಪಗ್ರಹ ಫೋಬೋಸ್‌ನಿಂದ ಕಲ್ಲಿನ ಸ್ಯಾಂಪಲ್‌ವೊಂದನ್ನು ಭೂಮಿಗೆ ತೆಗೆದುಕೊಂಡು ಬರುವುದು ಯೋಜನೆ ಉದ್ದೇಶ. 2011ರಂದು ಚೀನಾದ ಉಪಗ್ರಹ ಯಿಂಗ್ಸು-1 ಅನ್ನು ಹೊತ್ತೊಯ್ದಿದ್ದ ಉಡ್ಡಯನ ವಾಹನ ನಿಯಂತ್ರಣ ಕಳೆದುಕೊಂಡು ಫೆಸಿಫಿಕ್ ಸಾಗರಕ್ಕೆ ಬಿತ್ತು. ಎಂಆರ್‌ಒ ನಾಸಾದ ಈ ಎಂಆರ್‌ಒ ಉಪಗ್ರಹವನ್ನು ಆ.12, 2005ರಂದು ಹಾರಿಬಿಟ್ಟಿತ್ತು. ಇದು ಕೆಂಪುಗ್ರಹವನ್ನು ತಲುಪಿದ್ದು ಮಾರ್ಚ್ 2006ರಂದು. ಇದು ಎರಡು ವರ್ಷವರೆಗಿನ ಪ್ರಾಥಮಿಕ ವೈಜ್ಞಾನಿಕ ಪರೀಕ್ಷೆ ಪೂರ್ಣಗೊಳಿಸಿದೆ. ವಿಜ್ಞಾನ ಪ್ರಯೋಗಾಲಯ (ಕ್ಯೂರಿಯಾಸಿಟಿ) ಕ್ಯೂರಿಯಾಸಿಟಿ! ಇದು ಅಂಗಾರಕನ ಅಂಗಳದಲ್ಲಿ ನಾಸಾ ಇಳಿಸಿದ ಈ ವರೆಗಿನ ಅತಿದೊಡ್ಡ ರೋವರ್. ಒಂದು ರೀತಿಯಲ್ಲಿ ಇದು ಮಂಗಳನ ಅಂಗಳದಲ್ಲಿ ಕಾರ್ಯಾಚರಿಸುತ್ತಿರುವ ವಿಜ್ಞಾನ ಲ್ಯಾಬೊರೇಟರಿ. ಕ್ಯೂರಿಯಾಸಿಟಿಯನ್ನು ನ.26 2011ರಂದು ಮಂಗಳನತ್ತ ಹಾರಿ ಬಿಡಲಾಗಿತ್ತು. ಆ.5 2012ರಂದು ಇದು ಮಂಗಳನ ಮೇಲ್ಮೈನಲ್ಲಿ ಇಳಿದಿತ್ತು. ಒಂದು ದೊಡ್ಡ ಕಾರು ಗಾತ್ರದ ಕ್ಯೂರಿಯಾಸಿಟಿ ಈಗಲೂ ಮಂಗಳನಂಗಳದಲ್ಲಿ ಓಡಾಡುತ್ತಿದೆ. ಪ್ರಯೋಗಗಳನ್ನು ನಡೆಸುತ್ತಿದೆ. ಸ್ಪೇಸ್ ರೇಸ್ ಏಷ್ಯಾ ರಾಷ್ಟ್ರಗಳ ಸ್ಪರ್ಧೆ ವಿಶ್ವದಲ್ಲೇ ಅತಿ ದೊಡ್ಡ ಅರ್ಥವ್ಯವಸ್ಥೆಯನ್ನು ಹೊಂದಿರುವ ಭಾರತ ಮತ್ತು ಚೀನಾ ನಡುವೆ ಅನೇಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸ್ಪರ್ಧೆ ಬಾಹ್ಯಾಕಾಶವನ್ನೂ ತಲುಪಿದೆ. ಏಷ್ಯಾದ ಈ ಎರಡು ದಿಗ್ಗಜ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿರುವ ಈ ಸ್ಪರ್ಧೆಗೆ ಸೆ.24ರಂದು ಹೊಸ ಆಯಾಮ ಸಿಗಲಿದೆ. ವಿಶ್ವದ ಸೂಪರ್ ಪವರ್ ಆಗುವ ಕನಸಿನಲ್ಲಿರುವ ನೆರೆಯ ಚೀನಾದ ಜತೆಗಿನ ಈ ಸ್ಪರ್ಧೆಯಲ್ಲಿ ಭಾರತ ಸದ್ಯ ಮೇಲುಗೈ ಸಾಧಿಸುವ ಲಕ್ಷಣ ಸ್ವಷ್ಟವಾಗಿ ಗೋಚರಿಸುತ್ತಿದೆ. ಈಗಾಗಲೇ ಯಶಸ್ವಿ ಚಂದ್ರಯಾನ ಮುಗಿಸಿರುವ ಚೀನಾದ ಬಾಹ್ಯಾಕಾಶ ಯೋಜನೆಯ ಪ್ರಗತಿ ಮುಂದೆ ಭಾರತದ ಸಾಧನೆ ಕಡಿಮೆಯೇ. ತ್ರಿಕೋನ ಸ್ಪರ್ಧೆ ಏಷ್ಯಾದ ಪ್ರಮುಖ ಬಲಿಷ್ಠ ಅರ್ಥ ವ್ಯವಸ್ಥೆಗಳಾದ ಜಪಾನ್, ಭಾರತ ಮತ್ತು ಚೀನಾ ಈ ಮೂರೂ ದೇಶಗಳ ಮಂಗಳನ ಅನ್ವೇಷಣೆಯಲ್ಲಿ ಮೊದಲಿಗನಾಗುವ ಪ್ರಯತ್ನ ಇವತ್ತು ನಿನ್ನೆಯದಲ್ಲ. ಚೀನಾದ ಮೊದಲ ಮಹತ್ವಾಕಾಂಕ್ಷೆಯ ಮಂಗಳ ಯೋಜನೆ ಯಿಂಗ್ ಹ್ಯೊ-1 2011ರಲ್ಲಿ ವೈಫಲ್ಯ ಕಂಡಿತ್ತು. 1998ರಲ್ಲಿ ಜಪಾನ್‌ನ ಮಂಗಳಯಾನ ಕೂಡ ವಿಫಲವಾಗಿತ್ತು. ಸದ್ಯ ಭಾರತದ ಮಂಗಳಯಾನ ಯೋಜನೆಯಷ್ಟೇ ಯಶಸ್ಸಿನ ಸನಿಹ ಬಂದು ನಿಂತಿದೆ. ವೈಫಲ್ಯಕ್ಕೆ ಕಾರಣವೇನು? ಮಂಗಳಯಾನಕ್ಕೆ ಸಾಕಷ್ಟು ಅಮಂಗಳಗಳು ಎದುರಾಗಿವೆ. ಭಾರತವೊಂದನ್ನು ಬಿಟ್ಟು ಉಳಿದೆಲ್ಲ ದೇಶಗಳು ಮೊದಲ ಪ್ರಯತ್ನದಲ್ಲಿ ವಿಫಲವಾಗಿವೆ. ಮಂಗಳಯಾನದ ಹಿಂದಿನ ಸಾಕಷ್ಟು ಪ್ರಯತ್ನಗಳು ವಿಫಲವಾಗಲು ಕಾರಣಗಳಿವೆ. ಆರಂಭಿಕ ದಿನಗಳಲ್ಲಿ ಉಡಾವಣೆಯ ಸಮಯದಲ್ಲಿಯೇ ವೈಫಲ್ಯ ಕಾಣುತ್ತಿತ್ತು. ಇನ್ನು ಕೆಲವು ಭೂ ಕಕ್ಷೆಯಿಂದ ಹೊರಹೋಗಬೇಕಾದರೆ ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಸಾಗಲಾರದೇ ನಿಯಂತ್ರಣ ತಪ್ಪಿವೆ. ಹಾಗೆಯೇ ನಾಸಾ ಹೊರಡಿಸಿದ್ದ ನೌಕೆಗಳು ಆರಂಭದ ದಿನಗಳಲ್ಲಿ ಪರ್ಯಾಟನಾ ಅವಧಿ ಲೆಕ್ಕ ಹಾಕಲು ಸಾಧ್ಯವಾಗದೇ ಮಾರ್ಗ ಮಧ್ಯದಲ್ಲಿ ವಿಫಲವಾಗಿದೆ. ಇನ್ನು ಮಂಗಳ ಕಕ್ಷೆಗೆ ಸೇರಬೇಕಾದಾಗ ಲ್ಯಾಮ್ ಕಾರ್ಯನಿರ್ವಹಿಸದೇ ವಿಫಲವಾಗಿದ್ದೂ ಇದೆ. ಹಾಗೆಯೇ ಮಂಗಳ ಕಕ್ಷೆಗೆ ಸೇರಿಸುವಾಗ ಗುರುತ್ವಾಕರ್ಷಣೆಗೆ ತಕ್ಕಂತೆ ನೌಕೆಯ ವೇಗ ನಿಯಂತ್ರಿಸಲಾಗದೇ ಮಂಗಳ ಕಕ್ಷೆಗೆ ಹೋಗಿ ಸುತ್ತಾಡುತ್ತಿರುತ್ತದೆ. ಆದರೆ ಇಂದು ಭಾರತದ ವಿಜ್ಞಾನಿಗಳ ಹತ್ತಿರವೂ ನಿಖರ ಲೆಕ್ಕ-ತಂತ್ರಜ್ಞಾನವಿದ್ದು, ಗುರಿ ತಪ್ಪುವ ಸಂಭವ ಇಲ್ಲವೇ ಇಲ್ಲ ಎನ್ನುವ ವಿಶ್ವಾಸ ವಿಜ್ಞಾನಿಗಳದ್ದು. ನಾವೆಲ್ಲ ನಿರೀಕ್ಷಿಸುತ್ತಿರುವ ಸೆ.24ರಂದು ಶುಭ ಸುದ್ದಿ ಖಾತ್ರಿಯಾದರೆ ಭವಿಷ್ಯದಲ್ಲಿ ಭಾರತವು ಬಾಹ್ಯಾಕಾಶ ವಿಜ್ಞಾನದಲ್ಲಿ ಹೊಸಯುಗ ಆರಂಭಿಸುತ್ತದೆ ಎಂದು ಅಭಿಪ್ರಾಯಪಡುತ್ತಾರೆ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್ ಸಂಸ್ಥೆಯ ನಿರ್ದೇಶಕ ಡಾ.ಪಿ.ಶ್ರೀಕುಮಾರ್.