ಎಸ್ 5.5 ವಯ್ಯಾರ ಅತಿ ತೆಳುವಾದ ಸ್ಮಾರ್ಟಿಯನ್ನು ಚೀನಾದ ಜ್ಯೋನಿ ಕಂಪನಿ ಮಾರುಕಟ್ಟೆಗೆ ಪರಿಚಯಿಸಿದೆ... ಅತಿ ತೆಳುವಾದ ಸ್ಮಾರ್ಟಿಯನ್ನು ಚೀನಾದ ಜ್ಯೋನಿ ಕಂಪನಿ ಮಾರುಕಟ್ಟೆಗೆ ಪರಿಚಯಿಸಿದೆ. ಚೀನಾ ಮೊಬೈಲ್ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿರುವ ಜ್ಯೋನಿ ಕಂಪನಿ ಕಳೆದ ಆರು ತಿಂಗಳಿಂದ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸುದ್ದಿ ಮಾಡುತ್ತಿದೆ. ಈಗ ಏಪ್ರಿಲ್ ಮೊದಲ ವಾರದಲ್ಲಿ ಇಲೈಫ್ ಎಸ್5.5 ಎಂಬ ಸ್ಮಾರ್ಟಿ ಮಾರುಕಟ್ಟೆಗೆ ಬಂದಿದೆ. ಕಂಪನಿ ಹೇಳುವ ಪ್ರಕಾರ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅತಿ ತೆಳುವಾದ ಫೋನ್ ಇದು. ಇದರ ವಯ್ಯಾರದ ಶೋಭೆಗೆ ಮತ್ತ್ಯಾವುದೂ ಸರಿಸಾಟಿಯಾಗುವುದಿಲ್ಲ ಎನ್ನುವುದು ಸಂಸ್ಥೆಯ ವಾದ. ಐದು ಇಂಚಿನ ಟಚ್ ಸ್ಕ್ರೀನ್ ಹೊಂದಿರುವ ಇಲೈಫ್ ಎಸ್5.5 ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಒಳಗೊಂಡಿದೆ. ಮೆಟಲ್ ಪ್ಯಾನಲ್ ಇರುವುದರಿಂದ ಮೊಬೈಲ್ ಸ್ಲಿಮ್ ಆಗಿದ್ದರೂ ಸುಮಾರು 130 ಗ್ರಾಂ ತೂಕ ಹೊಂದಿದೆ. ಇದು ಐಫೋನ್ ಎಸ್5ನ ತೂಕಕ್ಕಿಂತ 17 ಗ್ರಾಂ ಹೆಚ್ಚು. ಡಿಸ್‌ಪ್ಲೇ ಹಾಗೂ ಸೌಂಡ್ ಸಿಸ್ಟಮ್ ಬಗ್ಗೆ ಸ್ವಲ್ಪ ದೂರುಗಳು ಕೇಳಿಬಂದಿದ್ದು, 441ಪಿಪಿಐ ಪಿಕ್ಸಲ್ ಡೆನ್ಸಿಟಿಯಿದೆ. ಮೆಟಲ್ ಪ್ಯಾನಲ್‌ಗಳಿರುವುದರಿಂದ ಸೌಂಡ್ ಹೆಚ್ಚಿಸಿದಾಗ ಸಣ್ಣ ಪ್ರಮಾಣದಲ್ಲಿ ವೈಬ್ರೇಟ್ ಆಗುತ್ತದೆ ಎಂದು ವಿಮರ್ಶಕರು ಆರೋಪಿಸಿದ್ದಾರೆ. ಹಿಂಬದಿ ಕ್ಯಾಮೆರಾ 13 ಎಂಪಿ ಹಾಗೂ ಮುಂಬದಿ ಕ್ಯಾಮೆರಾ 5 ಎಂಪಿ ಹೊಂದಿದೆ. ಆದರೆ ಹಿಂಬದಿ ಕ್ಯಾಮೆರಾವನ್ನು ಮೊಬೈಲ್‌ನ ಬಲ ಬದಿ ತುದಿಯಲ್ಲಿ ಫಿಕ್ಸ್ ಮಾಡಲಾಗಿದೆ ಫ್ಲ್ಯಾಶ್‌ಗೆ ಇದು ನೆರವಾಗುತ್ತದೆ ಎಂಬ ಫೀಡ್‌ಬ್ಯಾಕ್ ಜತೆಗೆ ಫೋಟೋ ತೆಗೆಯುವಾಗ ಬೆರಳು ಅಡ್ಡಬರುತ್ತದೆ ಎಂಬ ಆರೋಪವೂ ಇದೆ. ಮೊಬೈಲ್ ಹಿಡಿದುಕೊಂಡಾಗ ನಾಲ್ಕು ಮೂಲೆಯಲ್ಲಿ ಬೆರಳುಗಳಿರುವುದು ಸಾಮಾನ್ಯ, ಆಗ ನಮ್ಮ ಬೆರಳುಗಳೇ ಕ್ಯಾಮೆರಾಕ್ಕೆ ಅಡ್ಡಬರುತ್ತದೆ. ಆದರೆ ಫೋಟೋ ಗುಣಮಟ್ಟ ಮಾತ್ರ ಉತ್ತಮವಾಗಿದ್ದು, ಇ7 ಮಾದರಿಯ ಕ್ಯಾಮೆರಾ ತಂತ್ರಜ್ಞಾನವನ್ನೇ ಬಳಸಲಾಗಿದೆ. ಮುಂಬದಿ ಕ್ಯಾಮೆರಾ 95 ಡಿಗ್ರಿಯನ್ನು ವ್ಯಾಪಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆ್ಯಂಡ್ರಾಯ್ಡ್ ಜೆಲ್ಲಿ ಬೀನ್ 4.2 ಆಪರೇಟಿಂಗ್ ಸಿಸ್ಟಮ್ ಅನ್ನು ತಮ್ಮ ಆಮಿಗೋ ಯುಐ ಸ್ಕಿನ್‌ಗೆ ಜಿಯೋನಿ ಕನ್ವರ್ಟ್ ಮಾಡಿಕೊಂಡಿದೆ. ಡಿಯೋನಿ ಇ7ನಲ್ಲೂ ಇದೇ ರೀತಿ ಮಾಡಲಾಗಿತ್ತು. ಇವೆರಡು ಆಪರೇಟಿಂಗ್ ಸಿಸ್ಟಮ್‌ಗೂ ಯಾವುದೇ ವ್ಯತ್ಯಾಸವಿರದಿದ್ದರೂ ಕೆಲ ಯೂಸರ್ ಇಂಟರ್‌ಫೇಸ್‌ಗಳು ಉತ್ತಮವಾಗಿವೆ. 2300 ಎಂಎಎಚ್ ಬ್ಯಾಟರಿ ನೀಡಿರುವುದರಿಂದ ಉತ್ತಮ ಸಾಮರ್ಥ್ಯವಿರುವ ಸಾಧ್ಯತೆ ಹೆಚ್ಚಿದೆ. ಇದೇ ಪ್ರಮಾಣದ ಬ್ಯಾಟರಿಯನ್ನು ಇದಕ್ಕಿಂತ ದೊಡ್ಡ ಸ್ಕ್ರೀನ್‌ನ ಇ7ಗೆ ನೀಡಲಾಗಿತ್ತು. ಸ್ಯಾಮ್‌ಸಂಗ್ ಅಥವಾ ಇತರೆ ಖ್ಯಾತ ಬ್ರಾಂಡ್‌ಗಳ ಮೊಬೈಲ್‌ಗೆ ಇದರ ಬ್ಯಾಟರಿಯನ್ನು ಹೋಲಿಸಲು ಸಾಧ್ಯವಿರದಷ್ಟು ಉತ್ತಮವಾಗಿದೆ.