ಮ್ಯೂಟ್! ಮಾತು ಮನುಷ್ಯನಿಗೆ ಅತಿ ಮುಖ್ಯ. ಆದರೆ ಮಾತೇ ಬಾರದ ಮೂಕ ಪ್ರಾಣಿಗಳು? ಪಾಪ, ಅವು ಏನು ಮಾಡ್ತವೇ?... ಮಾತು ಮನುಷ್ಯನಿಗೆ ಅತಿ ಮುಖ್ಯ. ಆದರೆ ಮಾತೇ ಬಾರದ ಮೂಕ ಪ್ರಾಣಿಗಳು? ಪಾಪ, ಅವು ಏನು ಮಾಡ್ತವೇ? ತಮ್ಮ ಭಾವನೆಗಳನ್ನು ಹೇಗೆ ತೋರ್ಪಡಿಸಿಕೊಳ್ತವೆ? ಪ್ರಕೃತಿದತ್ತವಾದ ಕೆಲ ವಿಶಿಷ್ಟ ಗುಣಗಳು ಪ್ರಾಣಿಗಳಿಗೆ ಸಾಧ್ಯವಾಗಿದೆ. ಆಂಗಿಕ ಭಾಷೆ, ವಿಚಿತ್ರ ಕೂಗು, ವಾಸನೆಗಳನ್ನು ಹೊರಸೂಸುವ ಮೂಲಕ ಸಹವರ್ತಿಗಳಿಗೆ, ಇತರ ಪ್ರಾಣಿಗಳಿಗೆ ಸಂದೇಶಗಳನ್ನು ರವಾನೆ ಇವುಗಳ ಗುಟ್ಟು. ಪ್ರಾಣಿಗಳ ಸಂವಹನ ವಿಧಾನಗಳಲ್ಲಿ ವಿಷುವಲ್ ಅಥವಾ ದೃಷ್ಟಿಗೋಚರ ಸಂವಹನವೂ ಒಂದು. ಈ ವಿಧಾನದಲ್ಲಿ ತಮ್ಮ ಇಂಗಿತವನ್ನು ತಿಳಿಸಲು ಅವು ತಮ್ಮ ಬಣ್ಣ ಅಥವಾ ಆಕಾರವನ್ನೂ ಬದಲಾಯಿಸುವುದುಂಟು; ವಿಚಿತ್ರವಾಗಿ ವಿಭಿನ್ನವಾಗಿ ವರ್ತಿಸುವುದೂ ಉಂಟು. ಕೆಲ ಪ್ರಾಣಿಗಳು ತಮ್ಮ ಸಂಗಾತಿಯನ್ನು ಆಕರ್ಷಿಸಲು ತಮ್ಮ ದೇಹದ ಬಣ್ಣವನ್ನು ಬದಲಿಸಿಕೊಳ್ಳುತ್ತವೆ. ಇನ್ನು ಕೆಲ ಪ್ರಾಣಿಗಳು ಆಂಗಿಕ ಸನ್ನೆ, ಸಂಕೇತಗಳ ಮೂಲಕ ಇಂಗಿತ ತಿಳಿಸುತ್ತವೆ. ಆಂಗಿಕ ಚಲನೆಯಿಂದ ಭಾವನೆಗಳನ್ನು ಹೊರಗೆಡವುತ್ತವೆ. ಉದಾಹರಣೆಗೆ, ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ನಾಯಿಯು ಬಾಲ ಅಲ್ಲಾಡಿಸುತ್ತದೆ. ವೈರಿಯನ್ನು ಹೆದರಿಸಲು ಹಲ್ಲುಗಳೆಲ್ಲವನ್ನೂ ತೋರಿಸುತ್ತ ಗುರುಗುಟ್ಟುತ್ತವೆ. ಇನ್ನು ಈ ವೇಳೆ ಬೆಕ್ಕು ಬಿಲ್ಲಿನಂತೆ ಸೆಟೆದು ನಿಂತು ಜೋರಾಗಿ ಕೂಗುತ್ತ ತನ್ನ ವಿರೋಧಿಯಲ್ಲಿ ಭೀತಿ ಹುಟ್ಟಿಸುತ್ತದೆ. ಅಮೆರಿಕದಲ್ಲಿ ಕಂಡುಬರುವ ಸ್ಕಂಕ್ ಎನ್ನುವ ಪ್ರಾಣಿಯು ಶತ್ರುಗಳನ್ನು ದೂರ ಓಡಿಸಲು ಗುರುಗುಟ್ಟುವುದಷ್ಟೇ ಅಲ್ಲ, ತನ್ನ ಬಾಲವನ್ನು ಎತ್ತಿ ಅಗಲಿಸುತ್ತದೆ. ಕೆಲವೊಂದು ಜಾತಿಯ ಹಲ್ಲಿಗಳು ವೈರಿಯನ್ನು ಹೆದರಿಸಲು ಬಣ್ಣ ಬದಲಾಯಿಸುತ್ತವೆ. ಉಷ್ಣವಲಯದ ಕಡಲಪಕ್ಷಿಗಳಲ್ಲಿ ಗಂಡು ಪಕ್ಷಿಯ ಕತ್ತಿನಲ್ಲಿರುವ ಚೀಲ ಸಾಮಾನ್ಯವಾಗಿ ಕಿತ್ತಳೆ ಬಣ್ಣದಲ್ಲಿರುತ್ತದೆ. ತನ್ನ ಸಂಗಾತಿಯನ್ನು ಆಕರ್ಷಿಸ ಹೊರಟಾಗ ಅದರ ಕತ್ತಿನ ಚೀಲ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹೆಣ್ಣು ಪಕ್ಷಿಯು ಆಕರ್ಷಿತಗೊಂಡರೆ, ಅದು ಗಂಡು ಹಕ್ಕಿಗೆ ಕಡ್ಡಿ ತುಂಡುಗಳನ್ನು ನೀಡುತ್ತದೆ! ನವಿಲು ಸಂಗಾತಿಯನ್ನು ಆಕರ್ಷಿಸಲು ಏನು ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದು ಗರಿಗಳನ್ನು ಬಿಚ್ಚಿ ನಲಿಯುತ್ತದೆ. ಕೆಲವು ಪಕ್ಷಿಗಳು ವಿಚಿತ್ರವಾಗಿ ಕೂಗಿ ತಮ್ಮ ಸಂಗಾತಿಯನ್ನು ಹತ್ತಿರ ಬರಮಾಡಿಕೊಳ್ಳುತ್ತವೆ. ಇನ್ನು ಸ್ಪರ್ಶದ ಮೂಲಕವೂ ಪ್ರಾಣಿಗಳು ಮಾತಾಡಬಲ್ಲವು; ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಲ್ಲವು! ನಾಯಿಗಳು, ಹಸುಗಳು ತಮಗೆ ಆಹಾರ ನೀಡುವವರನ್ನು ನೆಕ್ಕಿ ಪ್ರೀತಿ ವ್ಯಕ್ತಪಡಿಸಿದರೆ ತಾಯಿ ಬೆಕ್ಕು ತನ್ನ ಮರಿಗಳನ್ನು ಮೂಗಿನಿಂದ ಒತ್ತಿ ಮುದ್ದು ಮಾಡುತ್ತದೆ. ಗಂಡು ಜಿಂಕೆಗಳು ಕೊಂಬುಗಳನ್ನು ಒಂದಕ್ಕೊಂದು ತಗುಲಿಸಿಕೊಂಡು ಹೋರಾಟ ನಡೆಸುತ್ತವೆ. ಯಾರು ಹೆಚ್ಚು ಬಲಶಾಲಿ ಎಂಬುದನ್ನು ನಿರ್ಧರಿಸುತ್ತವೆ. ಕೆಲವು ಪ್ರಾಣಿಗಳು ಒಟ್ಟಾಗಿ ವಾಸಿಸುತ್ತವೆ. ಇಂಥ ಪ್ರಾಣಿಗಳು ಕೂಗಿನ ಮೂಲಕ ಸಂದೇಶ ರವಾನಿಸುತ್ತವೆ. ಆನೆಯು ನೀರಿರುವ ಪ್ರದೇಶ ಕಂಡಾಗ ಕೂಗುತ್ತಾ ಸಹಚರರನ್ನು ಕರೆಯುತ್ತದೆ. ಹಾಗೆಯೇ ಕಾಗೆ ಕೂಡ. ಆಹಾರವನ್ನು ಕಂಡರೆ ಸಾಕು, ಕಾಕಾ ಎನ್ನುತ್ತ ಸಹಚರರನ್ನು ಕೂಗಿ ಕರೆಯುತ್ತದೆ. ದುಂಬಿಯು ಸುತ್ತು ಹಾಕುತ್ತಾ, ನೃತ್ಯ ಮಾಡುತ್ತಾ ಇದ್ದರೆ, ಅಲ್ಲೇ ಹತ್ತಿರ ಆಹಾರ ಇದೆ ಎಂದೇ ಅರ್ಥ. ತನ್ಮೂಲಕ ಅದು ಆಹಾರವಿರುವ ಜಾಗವನ್ನು ತನ್ನ ಸಹಚರರಿಗೆ ತೋರಿಸುತ್ತದೆ. ನಾನಾ ಬಗೆಯ ಸಂದೇಶಗಳನ್ನು ರವಾನಿಸಲು ಪ್ರಾಣಿಗಳು ಬೇರೆ ಬೇರೆ ಬಗೆಯಲ್ಲಿ ಕೂಗು ಹಾಕುತ್ತವೆ. ಪಕ್ಷಿಗಳು ನಾನಾ ವಿಧದಲ್ಲಿ ಕೂಗುವುದನ್ನು ನೀವು ಗಮನಿಸಿರಬಹುದು. ಇನ್ನು ವಾಸನೆಯನ್ನು ಹೊರಹಾಕುವುದರ ಮೂಲಕವೂ ಪ್ರಾಣಿಗಳು ಬೇರೆ ಬೇರೆ ಬಗೆಯ ಸಂದೇಶಗಳನ್ನು ರವಾನಿಸುತ್ತವೆ. ಉದಾಹರಣೆಗೆ, ಹೆಣ್ಣು ಚಿಟ್ಟೆಯು ತನ್ನ ಗ್ರಂಥಿಯಿಂದ ಒಂದು ಬಗೆಯ ವಾಸನೆಯನ್ನು ಗಾಳಿಯಲ್ಲಿ ತೇಲಿ ಬಿಡುತ್ತದೆ. ತನ್ಮೂಲಕ ತನ್ನ ಸಂಗಾತಿಯನ್ನು ಸೆಳೆಯುತ್ತದೆ. ಮೈಲುಗಳಷ್ಟು ದೂರವಿದ್ದರೂ ಗಂಡು ಚಿಟ್ಟೆಯು ಆ ವಾಸನೆಯನ್ನು ಗ್ರಹಿಸಿ ಹೆಣ್ಣು ಚಿಟ್ಟೆಯನ್ನು ವಾಸನೆಯ ಮೂಲಕ ಹಿಂಬಾಲಿಸಿಕೊಂಡು ಬರುತ್ತದೆ. ಹಲವು ಗಂಡು ಪ್ರಾಣಿಗಳು ಮಾತ್ರ ಅಥವಾ ತಮ್ಮ ದೇಹದ ಗ್ರಂಥಿಯಿಂದ ಬಿಡುಗಡೆಯಾದ ರಾಸಾಯನಿಕವನ್ನು ಅಲ್ಲಲ್ಲಿ ಸಿಂಪಡಿಸುತ್ತವೆ. ಆ ಮೂಲಕ 'ತಾವು ವಾಸಿಸುವ ಪ್ರದೇಶ ಇದು' ಎಂದು ಹೇಳಿಕೊಳ್ಳುತ್ತವೆ. ಬೇರೆ ಪ್ರಾಣಿಗಳು ಈ ವಾಸನೆಯನ್ನು ಗುರುತಿಸುತ್ತವೆ; ಅಲ್ಲಿಂದ ದೂರ ಸರಿಯುತ್ತವೆ. ಹೆಚ್ಚಾಗಿ ಒಟ್ಟಾಗಿ ವಾಸಿಸುವ ಪ್ರಾಣಿಗಳಲ್ಲಿ ಆಂಗಿಕ ಭಾಷೆಯೇ ಒಂದು ಪ್ರಾಣಿಯ ಬಲ, ಪ್ರಾಮುಖ್ಯತೆಯನ್ನು ತಿಳಿಯಪಡಿಸುತ್ತದೆ. ಉದಾಹರಣೆಗೆ ಎರಡು ತೋಳಗಳು ಪರಸ್ಪರ ಎದುರು ಬದುರಾಗುತ್ತವೆ ಎಂದಿಟ್ಟುಕೊಳ್ಳಿ. ಶಕ್ತಿಶಾಲಿಯಾದ ತೋಳದ ಬಾಲವು ಮೇಲೆ ನಿಂತಿರುತ್ತದೆ, ದೇಹವು ನೇರವಾಗಿರುತ್ತದೆ, ಕಿವಿಗಳು ಮೇಲ್ಮುಖವಾಗಿರುತ್ತವೆ. ಹಲ್ಲುಗಳು ಎದ್ದು ಕಾಣುವಂತಿರುತ್ತದೆ. ಆದರೆ ಬಲಹೀನ ತೋಳದ ಬಾಲವು ಕಾಲುಗಳ ನಡುವೆ ನುಸುಳಿರುತ್ತದೆ. ದೇಹ ಮುದುರಿರುತ್ತದೆ. ಕಿವಿಗಳು ಜೋತು ಬಿದ್ದಿರುತ್ತವೆ. ನೀವು ಗಮನಿಸಿರಬಹುದು. ಕೆಲವೊಮ್ಮೆ ನಿಮ್ಮ ಪ್ರೀತಿಯ ಸಾಕು ನಾಯಿ ಬೆನ್ನ ಮೇಲೆ ಮಲಗಿ ತನ್ನ ಹೊಟ್ಟೆಯನ್ನು ತೋರಿಸುತ್ತಿರುತ್ತದೆ. ಇದರರ್ಥ ಏನು ಗೊತ್ತೆ? 'ನಾನು ನಿಮ್ಮ ನಂಬುಗೆಯ ಬಂಟ. ನಿಮ್ಮ ಮೇಲೆ ಖಂಡಿತ ಎರಗಲಾರೆ' ಎಂದು! ಮಾತು ಬರದಿದ್ದರೇನಾಯ್ತು, ಸಾಕಲ್ಲವೇ ಸಂವಹನಕ್ಕಿಷ್ಟು! ಪ್ರಾಣಿ ಸತ್ಯ