ಆಪತ್‌ರಕ್ಷಕ ಮಗಳು ಕಾಲೇಜಿಗೆ ಹೋಗಿದ್ದಾಳೆ. ಎಲ್ಲಿದ್ದಾಳೋ, ಎಷ್ಟು ಹೊತ್ತಿಗೆ ಮನೆ ಸೇರುತ್ತಾಳೋ? ಮಗ ಮಾರ್ಕೆಟ್‌ಗೆ ಹೋದವನು ಬಂದೇ ಇಲ್ಲ, ಏನಾಯಿತೋ? ಇಂತಹ ಹತ್ತಾರು ಪ್ರಶ್ನೆಗಳು ಮನೆಯಲ್ಲಿರುವ ಅಪ್ಪ-ಅಮ್ಮನಿಗೆ ಕಾಡುತ್ತಲೇ ಇರುತ್ತದೆ. ಅಂಥವರಿಗೆ ಆ್ಯಂಡ್ರಾಯ್ಡ್‌ನಲ್ಲಿ ಹೊಸದೊಂದು ಅಪ್ಲಿಕೇಷನ್ ಲಭ್ಯವಿದೆ. ಆನ್ ಮೊಬೈಲ್ ಸಂಸ್ಥೆಯು 'ಹೆಲ್ಪ್ ಮಿ ಆನ್ ಮೊಬೈಲ್‌' ಎಂಬ ವಿಶೇಷ ಅಪ್ಲಿಕೇಷನ್‌ನ್ನು ಗೂಗಲ್ ಪ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ನಗರ ಪ್ರದೇಶಗಳಲ್ಲಿ ಇದು ಸಹಾಯಕ್ಕೆ ಬರಲಿದೆ. ನಿಮ್ಮ ಸ್ಮಾರ್ಟ್ ಫೋನ್‌ನ ಒಂದು ಆಪ್ಶನ್ ಟಚ್ ಮಾಡುವ ಮೂಲಕ ಐವರು ಸ್ನೇಹಿತರಿಗೆ ನಿಮ್ಮ ಅನಿವಾರ್ಯತೆಯ ಸಂದೇಶ ಕಳುಹಿಸಬಹುದಾಗಿದೆ. ಕಳ್ಳತನ, ಅತ್ಯಾಚಾರ ಅಥವಾ ಇನ್ನಿತರ ಅಪರಾಧ ಪ್ರಕರಣಗಳ ಸಂದರ್ಭದಲ್ಲಿ ಈ ಅಪ್ಲಿಕೇಷನ್ ಬಹುಪಯೋಗಿಯಾಗಲಿದೆ. ಅಪ್ಲಿಕೇಷನ್ ತಯಾರಿಸಿದ ಕಂಪನಿ ಹೇಳಿಕೊಂಡಂತೆ, ಒಂಟಿ ಮಹಿಳೆಯರು ಹಾಗೂ ವಯಸ್ಕರ ರಕ್ಷಣೆಗೆ ಇದು ಸಹಕಾರಿಯಾಗಲಿದೆ. ಈ ಅಪ್ಲಿಕೇಷನ್ ಅಷ್ಟು ಚಿರಪರಿಚಿತವಾಗಿಲ್ಲ. ಪ್ರಾಥಮಿಕ ಹಂತದಲ್ಲಿ ಇದು ಗೂಗಲ್ ಪ್ಲೇನಲ್ಲಿ ಮಾತ್ರ ಲಭ್ಯವಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ವಾರದ ಎಲ್ಲ ದಿನ ಹಾಗೂ 24 ಗಂಟೆಯೂ ಈ ಅಪ್ಲಿಕೇಷನ್ ಕಾರ್ಯನಿರ್ವಹಿಸುತ್ತದೆ. ಇದಲ್ಲದೇ ಈ ಅಪ್ಲಿಕೇಷನ್ ಡೌನ್‌ಲೋಡ್ ಮಾಡಲು ಹಾಗೂ ಬಳಸಲು ಗ್ರಾಹಕರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಹೇಗೆ ಕಾರ್ಯನಿರ್ವಹಿಸುತ್ತದೆ? ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ಸೆಟ್ಟಿಂಗ್ಸ್‌ಗೆ ಹೋಗಿ 5 ಮೊಬೈಲ್ ಸಂಖ್ಯೆಗಳನ್ನು ಅಲ್ಲಿ ನೀಡಬೇಕು. ಆದರೆ ಅಲ್ಲಿ ಒಂದು ಮೊಬೈಲ್ ಸಂಖ್ಯೆಗೆ ಪ್ರಾಮುಖ್ಯತೆ ನೀಡಬೇಕು. ಗ್ರಾಹಕರು ದಾಖಲಿಸಿರುವ 5 ಸಂಖ್ಯೆಗಳಲ್ಲಿ ಮೊದಲ ಸಂಖ್ಯೆ ಅಥವಾ ಪ್ರಮುಖ ಎಂದು ದಾಖಲಿಸಿರುವ ಸಂಖ್ಯೆಗೆ ಆಪತ್ ಕಾಲದಲ್ಲಿ ಕರೆ ಹೋಗುತ್ತದೆ. ಉಳಿದ 4 ಸಂಖ್ಯೆಗಳಿಗೆ ಸಂದೇಶ ರವಾನೆಯಾಗುತ್ತದೆ. ಮೊದಲ ಸಂಖ್ಯೆಯ ದೂರವಾಣಿ ಕರೆ ಸ್ವೀಕಾರವಾಗುವವರೆಗೂ ಕರೆ ಹೋಗುತ್ತಲೇ ಇರುತ್ತದೆ. ಇನ್ನು ಉಳಿದ ಮೊಬೈಲ್‌ಗಳಿಗೆ ಪ್ರತಿ 5 ನಿಮಿಷಕ್ಕೆ ಸಂದೇಶ ಹೋಗುತ್ತಿರುತ್ತದೆ. ಇದಲ್ಲದೇ ಗ್ರಾಹಕರ ಮೊಬೈಲ್‌ನಲ್ಲಿ ಕೂಡ ಆಲಾರಾಂ ಆಗುತ್ತದೆ. ಆದರೆ ಇವೆಲ್ಲದಕ್ಕೂ ಗ್ರಾಹಕರು ಆ ಅಪ್ಲಿಕೇಷನ್‌ನಲ್ಲಿ ಸಂಬಂಧಪಟ್ಟ ಬಟನ್‌ಗಳನ್ನು ಒತ್ತಲೇಬೇಕು. ಆದರೆ ಅಫ್ಲಿಕೇಷನ್ ಕಾರ್ಯನಿರ್ವಹಿಸಲು ಅಂತರ್ಜಾಲದ ಅವಶ್ಯಕತೆಯಿಲ್ಲ. ಇದಲ್ಲದೇ ನೀವು ಆಪತ್ ಕಾಲದ ಪಟ್ಟಿಯಲ್ಲಿ ಸೇರಿಸಿರುವ ಹೆಸರಿಗೆ ನೀವಿರುವ ಜಾಗದ ವಿಳಾಸ ಕೂಡ ರವಾನೆಯಾಗುತ್ತದೆ. ಗ್ರಾಹಕರು ಒಂದು ವಿಚಾರವನ್ನು ತನ್ನ ಆಪತ್ ಕಾಲದ ಸ್ನೇಹತರಿಗೂ ತಿಳಿಸಿ ಈ ಸಂದೇಶಗಳ ಅರ್ಥವನ್ನು ಹೇಳಿರಬೇಕಾಗುತ್ತದೆ.