ರೆನೊ ಕ್ವಿಡ್ ನೋಡಲು ಮಕ್ಕಳ ಆಟಿಗೆ ಕಾರಿನಂತಿದೆ. ಅದಕ್ಕೆ ಸರಿಯಾಗಿ ಕ್ವಿಡ್ ಎಂಬ ಹೆಸರೂ ಇದೆ. ಸಾಕಷ್ಟು ಜನ ಕಿಡ್ ಅಂದುಕೊಳ್ಳಲೂ ಬಹುದು. ಇದು ರೆನೊ ಕಂಪನಿ ಮಾರುಕಟ್ಟೆಗೆ ಬಿಟ್ಟಿರುವ ಹೊಸ ಕಾರಲ್ಲ. ಆದರೆ ಕಾನ್ಸೆಪ್ಟ್ ಕಾರು. ಅಷ್ಟೇ ಆಗಿದ್ದರೆ ಅಚ್ಚರಿಯೇನೂ ಇರಲಿಲ್ಲ. ಈ ಕಾನ್ಸೆಪ್ಟ್ ಕಾರನ್ನು ಚಲಾಯಿಸಲು ಪತ್ರಕರ್ತರಿಗೆ ಅವಕಾಶ ನೀಡಲಾಗಿತ್ತು! ರೆನೊ ಕಂಪನಿಯ ಡಸ್ಟರ್ ಭಾರತೀಯ ಕಾರು ಮಾರುಕಟ್ಟೆಯ ದಿಕ್ಕನ್ನೇ ಬದಲಿಸಿತು. ಫೋರ್ಡ್ ಕಂಪನಿ ಇಕೊಸ್ಪೋರ್ಟ್ ವಾಹನ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಡಸ್ಟರ್‌ಗೆ ಮಣ್ಣು ಮುಕ್ಕಿಸಿತು. ಇಕೊಸ್ಪೋರ್ಟ್ ಮಾರುಕಟ್ಟೆಗೆ ಬಂದ ನಂತರ ಡಸ್ಟರ್ ಮಾರುಕಟ್ಟೆಗೆ ಭಾರೀ ಹೊಡೆತ ಬಿದ್ದಿದೆ. ಡಸ್ಟರ್‌ಗಾಗಿ ಗ್ರಾಹಕರು ಕಾಯಬೇಕಿತ್ತು. ಅಲ್ಲದೆ ರೆನೊ ಕಂಪನಿ ಡಸ್ಟರ್‌ಗೆ ಯಾವುದೇ ಆಫರ್‌ಗಳನ್ನು ನೀಡಿರಲಿಲ್ಲ. ಆದರೆ ಇಕೊಸ್ಪೋರ್ಟ್ ಬರುತ್ತಿದ್ದಂತೆ ಡಸ್ಟರ್‌ಗೆ ಆಫರ್‌ಗಳು ಆರಂಭವಾಗಿವೆ. ಇಕೊಸ್ಪೋರ್ಟ್‌ಗೆ ಗ್ರಾಹಕರು ಕಾಯಬೇಕಾದ ಸ್ಥಿತಿ ಇದೆ. ಇಕೊಸ್ಪೋರ್ಟ್ ಪೈಪೋಟಿಗೆಂದು ರೆನೊ ಕಂಪನಿ ಮಿನಿ ಎಸ್‌ಯುವಿ (4 ಮೀಟರ್‌ಗಿಂತ ಕಡಿಮೆ ಉದ್ದದ) ಮಾರುಕಟ್ಟೆಗೆ ಬಿಟ್ಟರೂ ಅಚ್ಚರಿಯಿಲ್ಲ. ಇದರ ಸುಳಿವು ಕ್ವಿಡ್‌ನಲ್ಲಿ ಸಿಗುತ್ತಿದೆ. ಆದರೆ ಕ್ವಿಡ್ ಕಾನ್ಸೆಪ್ಟ್ ಕೇವಲ ಮಿನಿ ಎಸ್‌ಯುವಿ ಅಷ್ಟೇ ಆಗಿಲ್ಲ. ಬದಲಾಗಿ ಕಾರಿನ ಆಂತರಿಕ ವಿನ್ಯಾಸವನ್ನು ವಿಮಾನದ ಕಾಕ್‌ಪಿಟ್ ಮಾದರಿಯಲ್ಲಿ ರೂಪಿಸಲಾಗಿದೆ. ಕಾರಿನ ಸ್ಟೇರಿಂಗ್ ಕೂಡ ಡಿಫರೆಂಟ್ ಆಗಿದೆ. ಕಾರಿನ ಗಾತ್ರಕ್ಕೆ ಹೋಲಿಸಿದರೆ ತುಂಬಾ ದೊಡ್ಡದಾಯಿತೇನೋ ಎಂಬಷ್ಟು ದೊಡ್ಡ ಟಯರ್‌ಗಳನ್ನು ಅಳವಡಿಸಲಾಗಿದೆ. ಇದೇ ಕಾರಣಕ್ಕೆ ಟಯರ್‌ಗಳು ಕಾರಿಗಿಂತ ಸಾಕಷ್ಟು ಹೊರಗಿವೆ. ಸಾಕಷ್ಟು ಗ್ರಾಹಕರು ವಾಹನದೊಂದಿಗೆ ಬಂದ ಟಯರ್ ಗಾತ್ರವನ್ನು ಹೆಚ್ಚಿಸಿ, ವಾಹನಕ್ಕಿಂತ ಟಯರ್ ಕೊಂಚ ಹೊರಗಿರುವಂತೆ ಮಾಡಿಕೊಳ್ಳುವುದನ್ನು ನೋಡಿರಬಹುದು. ಅಂತಹ ಗ್ರಾಹಕರಿಗೆ ಈ ಕಾರು ಥಟ್ಟನೆ ಇಷ್ಟವಾಗಬಹುದು. ಈ ಕಾರಿನ ಇನ್ನೊಂದು ವಿಶೇಷವೆಂದರೆ ಈ ಕಾರಿನ ಬಾಗಿಲುಗಳು ಕೊಂಚ ಮೇಲಕ್ಕೆ ತೆರೆದುಕೊಳ್ಳುತ್ತವೆ. ನಿಜವಾಗಿ ಕಾರು ಮಾರುಕಟ್ಟೆಗೆ ಬರುವಾಗ ಹೀಗೇ ಇರುತ್ತದೋ ಇಲ್ಲವೋ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಕಾನ್ಸೆಪ್ಟ್‌ನಲ್ಲಿರುವ ವ್ಯವಸ್ಥೆಯನ್ನೇ ಕಂಪನಿ ಉಳಿಸಿಕೊಂಡರೆ ಭಾರತದಲ್ಲಿ ಈ ರೀತಿಯ ಬಾಗಿಲಿರುವ ಮೊದಲ ಕಾರು ಇದಾಗಲಿದೆ. ಅಲ್ಲದೆ ಇದು ಕೇವಲ ಎರಡೇ ಬಾಗಿಲುಗಳನ್ನು ಹೊಂದಿರುವ ಕಾರು. ಇಕೊಸ್ಪೋರ್ಟ್‌ಗೆ ಪೈಪೋಟಿಗೆ ಯಾವುದೇ ವಾಹನವಿಲ್ಲ. ಮಿನಿ ಎಸ್‌ಯುವಿಗಳು ಇವೆಯಾದರೂ ಅವೆಲ್ಲ 4 ಮೀಟರ್‌ಗಿಂತ ಹೆಚ್ಚು ಉದ್ದ ಇವೆ. ಇದರಿಂದಾಗಿ ದರದಲ್ಲಿ ಇಕೊಸ್ಪೋರ್ಟ್‌ಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ರೆನೊ ಕಂಪನಿಯ ಕಾನ್ಸೆಪ್ಟ್ ವಾಹನ ಕ್ವಿಡ್ 4 ಮೀಟರ್‌ಗಿಂತ ಕಡಿಮೆ ಉದ್ದ ಹೊಂದಿದೆ. ಇದರಿಂದ ತೆರಿಗೆಯಲ್ಲಿ ಉಳಿತಾಯವಾಗಲಿದ್ದು, ಇಕೊಸ್ಪೋರ್ಟ್‌ಗೆ ಪೈಪೋಟಿ ನೀಡಲು ಸಾಧ್ಯವಾಗಲಿದೆ. ಸಾಮಾನ್ಯವಾಗಿ ನಿಜವಾಗಿ ರಸ್ತೆಗಿಳಿಯುವ ಕಾರು ಕಾನ್ಸೆಪ್ಟ್ ಕಾರಿಗಿಂತ ಸಾಕಷ್ಟು ಬದಲಾವಣೆ ಕಂಡಿರುತ್ತದೆ. ಕ್ವಿಡ್ ಅಂತಹ ಬದಲಾವಣೆಗೆ ಒಳಗಾದರೂ ಒಂದಷ್ಟು ಯುವ ಗ್ರಾಹಕರನ್ನು ಸೆಳೆಯುವ ಎಲ್ಲ ಆಕರ್ಷಣೆಗಳನ್ನು ಹೊಂದಿದೆ. ಇದು ಯಾವಾಗ ಭಾರತದ ಮಾರುಕಟ್ಟೆಗೆ ಬರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.