ಮೊಬೈಲ್ ಕಂಪನಿಗಳೇಕೆ ಉತ್ತಮ ಬ್ಯಾಟರಿ ನೀಡುತ್ತಿಲ್ಲ? ಮೊಬೈಲ್ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲಪ್ಪಾ... ಮನೆಯಿಂದ ಬೆಳಗ್ಗೆ ಹೊರಡುಛಿವಾಗ ಬ್ಯಾಟರಿ ಫುಲ್ ಆಗಿತ್ತು, ಆದರೆ ಮಧ್ಯಾಹ್ನ ಊಟ ಮಾಡಿ ಮುಗಿಸುವುಷ್ಟರಲ್ಲಿ ಖಾಲಿಯಾಗಿದೆ. ಏನು ಚಾರ್ಜರ್ ಹಾಕಿಕೊಂಡೇ ಮಾತನಾಡಬೇಕು ಅಷ್ಟೇ....- ಸ್ಮಾರ್ಟ್‌ಫೋನ್ ಬಳಸುತ್ತಿರುವವರಲ್ಲಿ ಅರ್ಧಕ್ಕೂ ಹೆಚ್ಚು ಜನ ಗೊಣಗುವ ಮಾತಿದು. ಬ್ಯಾಟರಿ ಖಾಲಿಯಾಗುತ್ತದೆಂದು ಕೆಲವರು ಸ್ಕ್ರೀನ್ ಬ್ರೈಟ್‌ನೆಸ್ ಕಡಿಮೆ ಮಾಡಿದರೆ, ಇನ್ನು ಕೆಲವರು ಡಾಟಾ ಸಂಪರ್ಕವನ್ನು ಆಫ್ ಮಾಡಿರುತ್ತಾರೆ. ಪ್ರತಿಯೊಬ್ಬ ಗ್ರಾಹಕನಿಂದ ಬೈಗುಳ ತಿನ್ನುವ ಈ ಮೊಬೈಲ್ ಕಂಪನಿಗಳೇಕೆ ಉತ್ತಮ ಬ್ಯಾಟರಿ ನೀಡುತ್ತಿಲ್ಲ ಎಂಬ ಸಂಶಯ ಪ್ರತಿಯೊಬ್ಬರನ್ನು ಕಾಡುತ್ತಿರುತ್ತದೆ. ಇದನ್ನೇ ಹುಡುಕಿಕೊಂಡು ಹೋದಾಗ ಕೆಲವು ಇಂಟರೆಸ್ಟಿಂಗ್ ಮಾಹಿತಿಗಳು ದೊರೆತಿವೆ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವುದು ಲೀಥಿಯಂ ಪಾಲಿಮರ್ (ಲಿ-ಪಾಲಿ), ಲೀಥಿಯಂ ಇಯಾನ್, ಎನ್‌ಐಎಂಎಚ್ ಬ್ಯಾಟರಿ ಮಾತ್ರ. ಹಳೆಯ ನೋಕಿಯಾ ಮೊಬೈಲ್‌ನಲ್ಲಿ ಬಳಸುತ್ತಿದ್ದ ದೊಡ್ಡಗಾತ್ರದ ಎನ್‌ಐಎಂಚ್ ಬ್ಯಾಟರಿಗಳು ಆನ್‌ಲೈನ್ ಶಾಪ್‌ಗಳಲ್ಲಿ ತಡಕಾಡಿದಾಗ ಸಿಕ್ಕರೆ ಪುಣ್ಯವಷ್ಟೆ. ಇಂದಿನ ಲಭ್ಯತೆ ಮಟ್ಟಿಗೆ ಲಿ-ಪಾಲಿಮರ್ ಬ್ಯಾಟರಿಯನ್ನು ಉತ್ತಮ ಹಾಗೂ ಸುರಕ್ಷಿತ ಎನ್ನಬಹುದು. ಎನ್‌ಐಎಂಎಚ್‌ಗೆ ಹೋಲಿಸಿದರೆ ಶೇ.60 ಹಾಗೂ ಲಿ-ಇಯಾನ್‌ಗೆ ಹೋಲಿಸಿದರೆ ಶೇ.40ರಷ್ಟು ಈ ಬ್ಯಾಟರಿ ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ ಮೊಬೈಲ್ ತಂತ್ರಜ್ಞಾನದ ಬೆಳೆಯುತ್ತಿರುವ ವೇಗದಲ್ಲಿ ಬ್ಯಾಟರಿ ತಂತ್ರಜ್ಞಾನ ಬೆಳೆಯುತ್ತಿಲ್ಲ. ಜಿಯೋನಿ ಇ7, ಸ್ಯಾಮ್‌ಸಂಗ್ ಟ್ಯಾಬ್‌ಗಳಲ್ಲಿ ಈ ಲಿ ಪಾಲಿಮರ್ ಬ್ಯಾಟರಿಗಳನ್ನು ಬಳಸಲಾಗುತ್ತಿದೆ. ಸ್ಯಾಮ್‌ಸಂಗ್ ಎಸ್-4, ಎಲ್‌ಜಿ ಜಿ ಪ್ರೊನಂಥ ಲೇಟೆಸ್ಟ್ ಮೊಬೈಲ್‌ನ ತಂತ್ರಜ್ಞಾನದಂತೆ ಬ್ಯಾಟರಿ ರೂಪುಗೊಳ್ಳಲೇ ಇಲ್ಲ. ಲೀಥಿಯಂ ಇಯಾನ್ ಡೇಂಜರಸ್! ಇಂದು ಅತಿ ಹೆಚ್ಚು ಮೊಬೈಲ್‌ಗಳಲ್ಲಿ ಬಳಕೆಯಾಗುತ್ತಿರುವ ಬ್ಯಾಟರಿಯೆಂದರೆ ಲೀಥಿಯಂ. ಇಯಾನ್. ಮೊದಲು ಮೊಬೈಲ್‌ನಲ್ಲಿ ಬಳಸುತ್ತಿದ್ದ ಎನ್‌ಐಎಂಎಚ್ ಬ್ಯಾಟರಿಗೆ ಹೋಲಿಸಿದರೆ ಇದು ಗಾತ್ರದಲ್ಲಿ ಸಣ್ಣ ಹಾಗೂ ಹೆಚ್ಚು ಪರಿಣಾಮಕಾರಿ. ಕಳೆದ 1980ರಲ್ಲಿಯೇ ಈ ಬ್ಯಾಟರಿಯನ್ನು ಅಭಿವೃದ್ಧಿಪಡಿಸಲಾಗಿದ್ದರೂ ಮೊಬೈಲ್‌ನಲ್ಲಿ ಎರಡು ವರ್ಷಗಳಿಂದ ಬಳಸಲಾಗುತ್ತಿದೆ. ಬಹುಬೇಗ ರೀಚಾರ್ಜ್ ಆಗುವ ಲೀಥಿಯಂ ಬ್ಯಾಟರಿಗಳು ಅಷ್ಟೇ ಅಪಾಯಕಾರಿ. ಇದರಲ್ಲಿರುವ ವಿಶೇಷ ತಂತ್ರಜ್ಞಾನದಿಂದ ಲೀಥಿಯಂ ಬ್ಯಾಟರಿಗಳು ಗರಿಷ್ಠ ಎರಡೂವರೆ ಗಂಟೆಯಲ್ಲಿ ರೀಚಾರ್ಜ್ ಆಗುತ್ತವೆ. ಆದರೆ ಅಷ್ಟೇ ಬೇಗ ಬಿಸಿಯಾಗುತ್ತದೆ. ಬಹುಬೇಗ ಬಿಸಿಯಾಗುವ ಈ ಬ್ಯಾಟರಿಗಳಿಂದ ಫೋನ್ ಬಳಕೆಯೇ ಕೆಲವೊಮ್ಮೆ ಕಿರಿಕಿರಿಯೆನಿಸುತ್ತದೆ. ಸ್ಯಾಮ್‌ಸಂಗ್ ಎಸ್-4 ಬಳಸುತ್ತಿರುವ ಗ್ರಾಹಕರು ಈ ಅನುಭವವನ್ನು ನಿಶ್ಚಿತವಾಗಿ ಹೊಂದಿರುತ್ತಾರೆ. ಬಹುಬೇಗನೆ ಸ್ಫೋಟವಾಗುವ ಸಾಧ್ಯತೆಯೂ ಇರುತ್ತದೆ. ಇದೇ ಕಾರಣಕ್ಕಾಗಿ ಲೀಥಿಯಂ ಇಯಾನ್ ಬ್ಯಾಟರಿ ಹೊಂದಿರುವ ಮೊಬೈಲ್‌ಗಳನ್ನು ಯಾವುದೇ ಕಾರಣಕ್ಕೂ ದೀರ್ಘ ಕಾಲದವರೆಗೆ ಚಾರ್ಜ್ ಹಾಕಿಡಬಾರದು. ಇದರಿಂದ ಸ್ಫೋಟವಾಗುವ ಸಾಧ್ಯತೆ ಜತೆಗೆ ಬಹುಬೇಗನೆ ಬ್ಯಾಟರಿಯು ನಿರ್ಜೀವವಾಗುತ್ತದೆ. ಮಲೇಷ್ಯಾದ ಎಂಎಚ್-370 ವಿಮಾನದಲ್ಲಿಯೂ ಇದೇ ಲೀಥಿಯಂ ಇಯಾನ್ ಬ್ಯಾಟರಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂಬ ಗಾಳಿಸುದ್ದಿ ಕೇಳಿಬಂದಿತ್ತು. ಅಂದಹಾಗೆ ವಿಮಾನ, ಹಡಗಿನಲ್ಲಿ ಬ್ಯಾಟರಿಗಳನ್ನು ಸಾಗಿಸಲು ಅವಕಾಶವೇ ಇಲ್ಲ. ಮೊಬೈಲ್ ಬ್ಯಾಟರಿ ಸಮಸ್ಯೆಗೆ ಲೀಥಿಯಂ ಇಯಾನ್ ದೀರ್ಘಾವಧಿವರೆಗೆ ರಕ್ಷಣೆಗೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಮೊಬೈಲ್ ಕಂಪನಿಗಳಿದ್ದರೆ ಅದು ನಿಜವಾಗಲಿಲ್ಲ. ಲೀಥಿಯಂ ಇಯಾನ್ ಬಗ್ಗೆ ಸಾಕಷ್ಟು ದೂರುಗಳು ಬರಲಾರಂಭಿಸಿದವು. ಇದಕ್ಕೆ ಪರಿಹಾರವಾಗಿ ಲಿ-ಪಾಲಿಮರ್ ಬ್ಯಾಟರಿ ಮಾರುಕಟ್ಟೆಗೆ ಬಂದರೂ ಬಲು ದುಬಾರಿಯಾಗಿದೆ. ಸಾಮಾನ್ಯ ಮೊಬೈಲ್‌ಗಳಿಗೆ ಈ ಬ್ಯಾಟರಿ ಬಳಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಈ ಬ್ಯಾಟರಿಯಲ್ಲಿ ಮೊಬೈಲ್ ಬಿಸಿಯಾಗುವುದಿಲ್ಲ. ಅರ್ಧ ಗಂಟೆ ಮಾತನಾಡಿ, ಗೇಮ್ ಆಡಿದರೂ ಬಿಸಿಯಾಗುವುದಿಲ್ಲ. ಮತ್ತೊಂದು ವಿಶೇಷವೆಂದರೆ ಸುಮಾರು ಒಂದೂವರೆ ದಿನಗಳವರೆಗೆ ಬಾಳಿಕೆ ಬರುತ್ತದೆ. ದುಬಾರಿ ಮೊಬೈಲ್ ಅಥವಾ ಟ್ಯಾಬ್ಲೆಟ್ ಕೊಳ್ಳುವ ಇರಾದೆಯಲ್ಲಿದ್ದರೆ ಲಿ- ಪಾಲಿಮರ್ ಬ್ಯಾಟರಿಯತ್ತ ಒಂದು ಕಣ್ಣಿಡಿ. ಫ್ಲ್ಯಾಶ್ ನ್ಯೂಸ್! ಮೊಬೈಲ್ ತಂತ್ರಜ್ಞರನ್ನು ಖುಷಿಪಡಿಸುವ ಹೊಸದೊಂದು ತಂತ್ರಜ್ಞಾನವನ್ನು ಇಸ್ರೇಲ್ ವಿಜ್ಞಾನಿಗಳು ಕಂಡುಹಿಡಿದ್ದಾರೆ. ಫ್ಲ್ಯಾಶ್ ಬ್ಯಾಟರಿ ಮೂಲಕ ಕೇವಲ 30 ಸೆಕೆಂಡುಗಳಲ್ಲಿ ಬ್ಯಾಟರಿ ಚಾರ್ಜ್ ಮಾಡುವುದರ ಜತೆಗೆ ಸಿ-ಪಾಲಿಮರ್‌ನ ದುಪ್ಪಟ್ಟು ಸಾಮರ್ಥ್ಯ ಹೊಂದಿದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಇದು ಮಾರುಕಟ್ಟೆಗೆ ಬರಲು ತುಸು ತಡವಾಗಬಹುದು. ಮೊಬೈಲ್ ಡಿವೈಸ್‌ಗಳಲ್ಲಿ ಎಷ್ಟು ಸುರಕ್ಷಿತವಾಗಿ ಬಳಸಬಹುದು ಹಾಗೂ ಅದರ ಸವಾಲುಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಈ ತಂತ್ರಜ್ಞಾನ ಯಶಸ್ವಿಯಾದರೆ ಮೊಬೈಲ್ ಗಾತ್ರ ಕೂಡ ಹಾಳೆಯಂತಾದರೂ ಆಶ್ಚರ್ಯವಿಲ್ಲ. ನ್ಯಾನೋ ತಂತ್ರಜ್ಞಾನವು ಇದಕ್ಕೆ ಪ್ರೇರಣೆಯಾಗಿದೆ. - ರಾಜೀವ ಹೆಗಡೆ .@.