ಸೂಪರ್‌ಫಿಶ್‌ಗಿಂತಲೂ ಪ್ರಿಡಾಗ್ ಅಪಾಯಕಾರಿ! ಲೆನೋವಾ ಲ್ಯಾಪ್‌ಟಾಪ್‌ಗಳಲ್ಲಿ ಸೂಪರ್ ಫಿಶ್ ಎಂಬ ಮಾಲ್‌ವೇರ್ ಪ್ರಿ ಇನ್‌ಸ್ಟಾಲ್ ಆಗಿದೆ ಎಂಬ ಸುದ್ದಿಯ ಬೆನ್ನಲ್ಲೇ ಇದೀಗ... ಲೆನೋವಾ ಲ್ಯಾಪ್‌ಟಾಪ್‌ಗಳಲ್ಲಿ ಸೂಪರ್ ಫಿಶ್ ಎಂಬ ಮಾಲ್‌ವೇರ್ ಪ್ರಿ ಇನ್‌ಸ್ಟಾಲ್ ಆಗಿದೆ ಎಂಬ ಸುದ್ದಿಯ ಬೆನ್ನಲ್ಲೇ ಇದೀಗ ಇನ್ನೊಂದು ಸಾಫ್ಟ್‌ವೇರ್‌ನಲ್ಲಿ ಕೂಡಾ ಸುರಕ್ಷಾ ದೋಷ ಪತ್ತೆಯಾಗಿದೆ. ವೆಬ್‌ಸೈಟ್‌ಗಳಲ್ಲಿ ಜಾಹೀರಾತುಗಳನ್ನು ತಡೆಯಲು ಬಳಸುವ ಆ್ಯಡ್ ಸಾಫ್ಟ್‌ವೇರ್‌ನಲ್ಲಿ ಈ ಸುರಕ್ಷಾ ದೋಷ ಪತ್ತೆಯಾಗಿದ್ದು ಇದು ಗೋಪ್ಯತೆ ಧಕ್ಕೆಯನ್ನುಂಟು ಮಾಡಲಿದೆ. ಆನ್ ಲೈನ್‌ನಲ್ಲಿ ಗೋಪ್ಯತೆ ಕಾಪಾಡಲು ಸಹಾಯ ಮಾಡುವ ಸೆಕ್ಯೂರ್ ಸೋಕೆಟ್ ಲೇಯರ್ (ಎಸ್‌ಎಸ್‌ಎಲ್) ನ್ನು ಪ್ರಿವ್ ಡಾಗ್ ಎಂಬ ಸಾಫ್ಟ್‌ವೇರ್ ದುರ್ಬಲಗೊಳಿಸುತ್ತಿದೆ ಎಂದು ಬಲ್ಲಮೂಲಗಳು ವರದಿ ಮಾಡಿದೆ. ಸುಮಾರು 57,000 ಜನರು ಈ ತಾಂತ್ರಿಕ ದೋಷದಿಂದ ಸಂಕಷ್ಟಕ್ಕೀಡಾಗಿದ್ದಾರೆ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವೊಂದು ವೆಬ್‌ಸೈಟ್ ಗಳನ್ನು ಓಪನ್ ಮಾಡುವಾಗ ಮಾತ್ರ ಈ ರೀತಿಯ ತಾಂತ್ರಿಕ ದೋಷ ಕಂಡುಬರುತ್ತದೆ ಎಂದು ಪ್ರಿವ್‌ಡಾಗ್ ಕಂಪನಿ ಹೇಳಿದೆ. ಈಗಾಗಲೇ ಈ ದೋಷವನ್ನು ಪರಿಹರಿಸಲಾಗಿದ್ದು, ಪ್ರಿವ್‌ಡಾಗ್‌ನ ಸುರಕ್ಷಾ ದೋಷವಿರುವ ಆವೃತ್ತಿ ಬಳಸುತ್ತಿರುವ 57,568 ಬಳಕೆದಾರರರಿಗೆ ಅದರ ಅಪಡೇಟೆಡ್ ಆವೃತ್ತಿಯನ್ನು ತಕ್ಷಣವೇ ಆಟೋಮ್ಯಾಟಿಕ್ ಆಗಿ ನೀಡಲಾಗುವುದು ಎಂದು ಕಂಪನಿ ಹೇಳಿದೆ. ಲೆನೋವಾದ ವಿಂಡೋಸ್ ಲ್ಯಾಪ್‌ಟ್ಯಾಪ್‌ಗಳಲ್ಲಿ ಡಿಸ್‌ಪ್ಲೇ ಜಾಹೀರಾತುಗಳು ಆಟೋಮ್ಯಾಟಿಕ್ ಆಗಿ ಪ್ರದರ್ಶಿತವಾಗಲು ಸಹಾಯ ಮಾಡುತ್ತಿದ್ದ ಸೂಪರ್ ಫಿಶ್ ಸ್ಪೈವೇರ್ ಆಗಿದ್ದು, ಇದು ಹ್ಯಾಕರ್‌ಗಳಿಗೆ ಮಾಹಿತಿಯನ್ನು ರವಾನಿಸಲು ಸಹಾಯ ಮಾಡುತ್ತಿದೆ ಎಂಬ ವಿಷಯ ಕಳೆದ ವಾರ ಸುದ್ದಿಯಾಗಿತ್ತು. ಅದೇ ವೇಳೆ ಇಂಥದ್ದೇ ಸುರಕ್ಷಾ ದೋಷ ಆ್ಯಡ್ ಸಾಫ್ಟ್‌ವೇರ್ ಆದ ಪ್ರೀವ್‌ಡಾಗ್‌ನಲ್ಲಿಯೂ ಕಾಣಿಸಿಕೊಂಡಿದ್ದು, ಬ್ಯಾಂಕ್ ವ್ಯವಹಾರಗಳ ವಿವರಗಳನ್ನು ಸೋರಿಕೆಗೆ ಇವು ಕಾರಣವಾಗಬಲ್ಲವು ಎಂದು ಹೇಳಲಾಗುತ್ತಿದೆ. ಸೂಪರ್ ಫಿಶ್ ಗಿಂತಲೂ ಪ್ರಿವ್ ಡಾಗ್ ತುಂಬಾ ಅಪಾಯಕಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹ್ಯಾಕರ್ ಫಾರಂನಲ್ಲಿ ಆರಂಭವಾದ ಚರ್ಚೆಯೊಂದು ಪ್ರಿವ್‌ಡಾಗ್ ಅಪಾಯದ ಬಗ್ಗೆ ಗಮನ ಸೆಳೆದ ನಂತರವೇ ಈ ವಿಷಯ ಬಹಿರಂಗ ಗೊಂಡಿತ್ತು. ಪ್ರಿವ್ ಡಾಗ್, ಸೂಪರ್ ಫಿಶ್ ಮಾತ್ರವಲ್ಲ, ಎಸ್‌ಎಸ್‌ಎಲ್ ರಕ್ಷಣಾತಂತ್ರವನ್ನು ದುರ್ಬಲಗೊಳಿಸುವ ಹಲವಾರು ಸಾಫ್ಟ್‌ವೇರ್‌ಗಳ ಬಗ್ಗೆಯೂ ತಜ್ಞರು ಎಚ್ಚರಿಕೆ ನೀಡಿದ್ದಾರೆ.