ಹೃದಯಕ್ಕೂ ವಾಸನೆ ಗೊತ್ತಾಗುತ್ತೆ! ನಾವು ಅಂದುಕೊಂಡ ಹಾಗೆ ನಮ್ಮ ಮೂಗಿಗಷ್ಟೇ ವಾಸನೆ ಗೊತ್ತಾಗುತ್ತೆ. ದೇಹದ ಇತರೆ ಅಂಗಗಳಿಗೆ ವಾಸನೆ ಗ್ರಹಿಸುವ ಶಕ್ತಿ ಇರೋದಿಲ್ಲ. ಆದರೆ ಇರೋ ಸತ್ಯವೇ ಬೇರೆಯಂತೆ. ನಮ್ಮ ಮೂಗಿನಂತೆ ಹೃದಯ, ರಕ್ತ ಮತ್ತು ಶ್ವಾಸಕೋಶಕ್ಕೂ ವಾಸನೆ ಗೊತ್ತಾಗುತ್ತಂತೆ. ಹೀಗಂತ ಇತ್ತೀಚಿನ ಒಂದು ಸಂಶೋಧನೆ ಹೇಳಿದೆ. ನಾವು ಸೇವಿಸುವ ಆಹಾರದಲ್ಲಿನ ಕೆಲ ರಾಸಾಯನಿಕಗಳು ನಮ್ಮ ಮೂಗನ್ನು ಪ್ರವೇಶಿಸಿದಾಗ ಅದು ನೇರವಾಗಿ ಮೆದುಳಿಗೆ ಕಳುಹಿಸುತ್ತದಂತೆ. ಮೆದುಳು ಅದು ಯಾವುದರ ವಾಸನೆ ಎಂದು ಹೇಳುತ್ತೆ. ಮೂಗು ಮಾಡುವ ಇದೇ ಕೆಲಸವನ್ನು ದೇಹದ ಇತರೆ ಅಂಗಗಳು ಮಾಡುತ್ತವೆ ಎಂಬುದು ಸಂಶೋಧನೆ ಹೇಳಿದ ಹೊಸ ಸುದ್ದಿ. ಆದರೆ, ಯಾವ ರೀತಿ ಗ್ರಹಿಸುತ್ತವೆ ಎಂಬುದರ ಬಗ್ಗೆ ಇನ್ನೂ ಆಳವಾದ ಸಂಶೋಧನೆಯಾಗಬೇಕಿದೆ. ಉದಾಹರಣೆಗೆ, ವೀರ್ಯಾಣುಗಳಲ್ಲಿ ವಾಸನೆ ಗ್ರಾಹಿಗಳು ಇರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೇ ರೀತಿ ಈ ವಾಸನೆ ಗ್ರಾಹಿಗಳು ಹೃದಯ, ರಕ್ತ ಮತ್ತು ಶ್ವಾಸಕೋಶದಲ್ಲೂ ಇರುತ್ತವೆ ಎಂಬುದು ಸಂಶೋಧಕರ ಹೇಳಿಕೆ. ಈ ವಾಸನೆ ಗ್ರಾಹಿಗಳಿಂದಲೇ ಈ ಮೂರು ಅಂಗಗಳೂ ವಾಸನೆ ಗ್ರಹಿಸುವ ಕೆಲಸ ಮಾಡುತ್ತವೆ ಎಂದು ವಾದಿಸುತ್ತಾರೆ.