ಪಾರ್ಸಲ್ ಹೊತ್ಕೊಂಡು ಡ್ರೋನ್ ಮನೆಗೆ ಬರುತ್ತೆ! ಅಮೆಝಾನ್‍ನಲ್ಲೋ, ಫ್ಲಿಪ್ ಕಾರ್ಟ್ ನಲ್ಲೋ ಆರ್ಡರ್ ಮಾಡಿದ ಮೊಬೈಲ್, ಡಾಮಿನೋಸ್ ನ ಪಿಜ್ಜಾ ಅಥವಾ ನೀವು ಡ್ರೈಕ್ಲೀನಿಂಗ್‍ಗೆಂದು ಕೊಟ್ಟ ಬಟ್ಟೆ ಕೊರಿಯರ್... ನವದೆಹಲಿ: ಅಮೆಝಾನ್‍ನಲ್ಲೋ, ಫ್ಲಿಲ್ಪ್ ರ್ಟ್ ನಲ್ಲೋ ಆರ್ಡರ್ ಮಾಡಿದ ಮೊಬೈಲ್, ಡಾಮಿನೋಸ್ ನ ಪಿಜ್ಜಾ ಅಥವಾ ನೀವು ಡ್ರೈಕ್ಲೀನಿಂಗ್‍ಗೆಂದು ಕೊಟ್ಟ ಬಟ್ಟೆ ಕೊರಿಯರ್ ಹುಡುಗನೋ, ಅಂಗಡಿಯ ಹುಡುಗನೋ ನಿಮ್ಮ ಮನೆಗೆ ತಂದು ಕೊಡುವ ಕಾಲ ಮುಗಿದು ಹೋದ ಹಾಗೆ ಕಾಣುತ್ತೆ. ಅವೆಲ್ಲ ಇನ್ನು ಆಕಾಶ ಮಾರ್ಗದಲ್ಲೇ ನಿಮ್ಮ ಮನೆ ಬಾಗಿಲು ತಲುಪುತ್ತವೆ. ಅಂದರೆ ಮಾನವರಹಿತ ಕಿರು ವಿಮಾನಗಳು ಅಥವಾ ಡ್ರೋಣ್ ಗಳೇ ಅವುಗಳನ್ನು ಡೆಲಿವರಿ ಮಾಡುತ್ತವೆ. ಯಾಕೆಂದರೆ ವಿದೇಶಗಳ ಮಾದರಿಯಲ್ಲೇ ಭಾರತದಲ್ಲೂ ಮಾನವರಹಿತ ವಿಮಾನ (ಯುಎವಿ) ಅಥವಾ ಡ್ರೋನ್ ಅನ್ನು ನಾಗರಿಕ ಉದ್ದೇಶಕ್ಕೆ ಬಳಸಲು ಶೀಘ್ರದಲ್ಲೇ ಅವಕಾಶ ಸಿಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿರುವ ನಿಯಂತ್ರಣ ಕ್ರಮಗಳ ಆಧಾರದ ಮೇಲೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈಗಾಗಲೇ ಕರಡು ನಿಯಮಾವಳಿಗಳನ್ನು ಸಿದ್ಧಪಡಿಸಿದ್ದು, ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ. ಡ್ರೋನ್ ಬಳಕೆಗೆ ಸಂಬಂಧಿಸಿದ ಕರಡು ನೀತಿಯನ್ನು ಸಿದ್ಧಪಡಿಸಿದ್ದೇವೆ. ಯುಎವಿ ಬಳಕೆ ಆರಂಭಕ್ಕೂ ಮುನ್ನ ಆಪರೇಟರ್‍ಗಳು ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಹೇಗೆ ಪರವಾನಗಿಗಳನ್ನು ನೀಡಬೇಕು ಎನ್ನುವ ಅಂಶಗಳು ಇದರಲ್ಲಿವೆ. ಈ ವಿಚಾರಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ಸಚಿವಾಲಯವು ಗೃಹ, ದೂರಸಂಪರ್ಕ ಮತ್ತು ರಕ್ಷಣಾ ಸಚಿವಾಲಯದ ಜತೆಗೆ ಚರ್ಚೆ ನಡೆಸಲಿದೆ. ಡ್ರೋಣ್‍ಗಳನ್ನು ವಾಣಿಜ್ಯ ಉದ್ದೇಶಕ್ಕೂ ಬಳಸಲು ಅವಕಾಶ ಮಾಡಿಕೊಡುವುದರಿಂದ ಆಗುವ ಸಾಧಕ- ಬಾಧಕಗಳ ಕುರಿತು ಸಮಾಲೋಚನೆ ನಡೆಸಲಿದೆ ಎಂದು ಡಿಜಿಸಿಎಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿರುವ ನಿಯಮವೇನು? ಅಮೆರಿಕದ ವಿಮಾನಯಾನ ಆಡಳಿತ ಒಕ್ಕೂಟವು ಯುಎವಿಯ ಖಾಸಗಿ ಬಳಕೆಗೆ ಸಂಬಂಧಿಸಿ ಒಂದಷ್ಟು ನಿಯಮಾವಳಿಗಳನ್ನು ರೂಪಿಸಿದೆ. ಅದರಂತೆ ದಿನದ ಅವಧಿಯಲ್ಲಿ 55 ಪೌಂಡ್ ತೂಕದ ಯುಎವಿಗಳನ್ನಷ್ಟೇ ಪರವಾನಗಿ ಹೊಂದಿದ ಆಪರೇಟರ್‍ಗಳು ಹಾರಿಸಬಹುದು. ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವ ಡ್ರೋನ್ ಗಳು ಗಂಟೆಗೆ 100 ಮೈಲಿ ವೇಗದಲ್ಲಿ, 500 ಅಡಿ ಎತ್ತರದಲ್ಲಿ ಹಾರಾಟ ನಡೆಸಬಹುದು. ಅಲ್ಲದೆ, ಆಪರೇಟರ್‍ಗಳು ಪ್ರತಿ ಎರಡು ವರ್ಷಗಳಿಗೊಮ್ಮೆ ತಮ್ಮ ಪರವಾನಗಿ ನವೀಕರಿಸುವುದು ಕಡ್ಡಾಯ. ಆದರೆ, ಅಮೆಝಾನ್‍ನಂಥ ಇ-ಟೈಲರ್‍ಗಳು ಬಳಸುವ ಡ್ರೋಣ್‍ಗಳಿಗೆ ಇನ್ನಷ್ಟು ಕಠಿಣ ನಿಯಮಾವಳಿಗಳಿವೆ. ಆಸ್ಟ್ರೇಲಿಯಾದಲ್ಲೂ ಡ್ರೋನ್ ಹಾರಾಟದ ಮೇಲ್ವಿಚಾರಣೆಗಾಗಿ ಕೆಲ ನಿಯಂತ್ರಣ ಕ್ರಮಗಳನ್ನು ರೂಪಿಸಲಾಗಿದೆ. ಯುಎವಿಗಳು ವ್ಯಕ್ತಿಗಳಿಂದ 30 ಮೀಟರ್ ಎತ್ತರದಲ್ಲಿ ಹಾರಾಟ ನಡೆಸಬೇಕು ಮತ್ತು ಕಡಲ ತೀರ, ಕ್ರೀಡಾ ಸ್ಪರ್ಧೆಯಂಥ ಜನನಿಬಿಡ ಪ್ರದೇಶಗಳಿಂದ ದೂರ ಇರಬೇಕು ಎಂದು ಆಸ್ಟ್ರೇಲಿಯಾದ ನಾಗರಿಕ ವಿಮಾನಯಾನ ಮತ್ತು ಸುರಕ್ಷೆ ಪ್ರಾಧಿಕಾರದ ನಿಯಮ ಹೇಳುತ್ತದೆ. ಅಲ್ಲದೆ, ಏರ್ ಪೋರ್ಟ್‍ಗಳ 5 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಡೆಸುವಂತಿಲ್ಲ, ಕೇವಲ ಹಗಲು ಹೊತ್ತು ಮಾತ್ರ ಕಾರ್ಯಾಚರಣೆ ನಡೆಸಬೇಕೆನ್ನುವ ನಿಯಮಾವಳಿಗಳು ಆಸ್ಟ್ರೇಲಿಯಾದಲ್ಲಿವೆ. ಆಮದಿನಲ್ಲಿ ಭಾರತ ನಂ.1 ವಿಶ್ವದಲ್ಲೇ ಅತಿ ಹೆಚ್ಚು ಡ್ರೋನ್ ಗಳನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಭಾರತಕ್ಕೆ ಮೊದಲ ಸ್ಥಾನವಿದೆ. ಭಾರತ ತನ್ನ ಅಗತ್ಯಕ್ಕೆ ಬೇಕಾದ ಬಹುತೇಕ ಯುಎವಿಗಳನ್ನು ಇಸ್ರೇಲ್‍ನಿಂದಲೇ ಆಮದು ಮಾಡಿಕೊಂಡಿದೆ. ಈವರೆಗೆ ಭಾರತಕ್ಕೆ 176 ಯುಎವಿಗಳು ಇಸ್ರೇಲ್‍ನಿಂದ ಆಮದಾಗಿದ್ದು, ಅವುಗಳಲ್ಲಿ 108 ಹುಡುಕಾಟ ಕಾರ್ಯಾಚರಣೆಗೆ ಬಳಕೆಯಾಗುವಂಥದ್ದು. ಇನ್ನು 68 ಹೆರಾನ್ ಮಾದರಿಯ ಯುಎವಿಗಳು. ನಿಷೇಧಿಸಿತ್ತು ಸರ್ಕಾರ! ಭಾರತದಲ್ಲಿ ಡ್ರೋನ್ ಬಳಕೆಗೆ ಸಂಬಂಧಿಸಿದ ಕಾನೂನು ಇಲ್ಲದಿದ್ದರೂ ಈಗಾಗಲೇ ದೇಶದಲ್ಲಿ ಅದನ್ನು ನಾಗರಿಕ ಉದ್ದೇಶಕ್ಕೆ ಬಳಸಿದ ಉದಾಹರಣೆ ಇದೆ. ಕಳೆದ ಸೆಪ್ಟೆಂಬರ್‍ನಲ್ಲಿ ಮುಂಬೈನ ಪಿಜ್ಜಾ ಔಟ್‍ಲೆಟ್‍ವೊಂದು ಗ್ರಾಹಕರಿಗೆ ಡ್ರೋನ್ ಮೂಲಕ ಪಿಜ್ಜಾ ಪೂರೈಸಿತ್ತು. ಇದು ದೇಶಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿತ್ತು. ಆ ಬಳಿಕ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ದೇಶದಲ್ಲಿ ಅಮೆಝಾನ್ ಇ-ಟೈಲರ್ ಕಂಪನಿ ಡ್ರೋನ್ ಗಳ ಮೂಲಕ ಆನ್‍ಲೈನ್‍ನಲ್ಲಿ ಬುಕ್ ಮಾಡಿದ ವಸ್ತುಗಳ ಪೂರೈಕೆಗೆ ಆಸಕ್ತಿ ತೋರಿದೆ. ಜತೆಗೆ, ಅನೇಕ ಪಿಜ್ಜಾ ಔಟ್‍ಲೆಟ್‍ಗಳೂ ಇಂಥದ್ದೇ ಆಸಕ್ತಿ ಪ್ರದರ್ಶಿಸಿವೆ.