ಆ್ಯಪ್ಸ್ ಸವಿರುಚಿ ಪೈಪೋಟಿ ಆ್ಯಪಲ್ ಕಂಪನಿಯನ್ನು ತಟ್ಟಿದೆ. ಆ್ಯಪಲ್ ಕಂಪನಿ ಲೋಗೋದಲ್ಲಿ ಆ್ಯಪಲ್‌ನ ಒಂದು ಬದಿಯನ್ನು... ಪೈಪೋಟಿ ಆ್ಯಪಲ್ ಕಂಪನಿಯನ್ನು ತಟ್ಟಿದೆ. ಆ್ಯಪಲ್ ಕಂಪನಿ ಲೋಗೋದಲ್ಲಿ ಆ್ಯಪಲ್‌ನ ಒಂದು ಬದಿಯನ್ನು ಅರ್ಧ ತಿಂದಂತೆ ಇದೆ. ಅದು ಸತ್ಯವಾಗುವಂತೆ ಸ್ಯಾಮಸಂಗ್ ಸಂಸ್ಥೆ ಮೊಬೈಲ್‌ಗಳು ಆ್ಯಪಲ್ ಕಂಪನಿ ಲಾಭವನ್ನು ಕಬಳಿಸಲಾರಂಭಿಸಿವೆ. ಆ್ಯಪಲ್ ಆಪರೇಟಿಂಗ್ ಸಿಸ್ಟಂ (ಐಒಎಸ್) ಪಾಲನ್ನು ಆ್ಯಂಡ್ರಾಯ್ಡ್ ಕಬಳಿಸುತ್ತಿದೆ. ಆ್ಯಪಲ್ ಮೊಬೈಲ್ ಮತ್ತು ಟ್ಯಾಬ್‌ಗಳಲ್ಲಿ ಮಾತ್ರ ಐಒಎಸ್ ಲಭ್ಯ. ಆದರೆ ಆ್ಯಂಡ್ರಾಯ್ಡ್ ಬಹುತೇಕ ಕಂಪನಿಗಳ ಮೊಬೈಲ, ಟ್ಯಾಬ್‌ಗಳಲ್ಲಿ ಸಿಗುತ್ತಿದೆ. ಮೊಬೈಲ್ ಮಾರುಕಟ್ಟೆಗೆ ಎಲ್ಲರಿಗಿಂತ ಮೊದಲು ಹೊಸತುಗಳನ್ನು ನೀಡಿದ್ದು ಆ್ಯಪಲ್ ಕಂಪನಿ. ಐಫೋನುಗಳು ದೊಡ್ಡ ಕ್ರಾಂತಿಯನ್ನೇ ಮಾಡಿದವು. ಆದರೆ ಅದನ್ನೇ ಸತತವಾಗಿ ಕಾಯ್ದುಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಅದರಲ್ಲೂ ಸ್ಟೀವ್ ಜಾಬ್ಸ್ ನಿಧನಾನಂತರ ಆ್ಯಪಲ್ ಕಂಪನಿ ಹೊಸತನ ಮುಗಿದೇಹೋಯಿತು ಎಂಬ ಆರೋಪವೂ ಆರಂಭವಾಗಿತ್ತು. ಅದಕ್ಕೆ ಸರಿಯಾಗಿ ಅತೀವ ನಿರೀಕ್ಷೆಯ ನಡುವೆ ಮಾರುಕಟ್ಟೆಗೆ ಆಗಮಿಸಿದ ಐಫೋನ್ -5 ಗ್ರಾಹಕರನ್ನು ಆಕರ್ಷಿಸಲು ವಿಫಲವಾಗಿತ್ತು. ಅದರಲ್ಲಿ ಹೇಳಿಕೊಳ್ಳುವಂತಹ ಯಾವ ಹೊಸತನವೂ ಇರಲಿಲ್ಲ. ಐಒಎಸ್ 6 ಮತ್ತು ಐಒಎಸ್ 6.3 ಆಪರೇಟಿಂಗ್ ಸಿಸ್ಟಂಗಳನ್ನು ಪರಿಚಯಿಸಿದರೂ ಗ್ರಾಹಕರನ್ನು ಆಕರ್ಷಿಸುವ ಹೊಸ ಅಂಶಗಳು ಅದರಲ್ಲಿರಲಿಲ್ಲ. ಇದರಿಂದಾಗಿ ಆ್ಯಪಲ್ ಕಂಪನಿ ಶೇರುಗಳು ಕುಸಿದಿದ್ದಲ್ಲದೆ, ಮಾರುಕಟ್ಟೆ ಪಾಲು ಕೂಡ ಕುಸಿತಗೊಂಡಿತ್ತು. ಈ ಸಂದರ್ಭದಲ್ಲಿ ಐಒಎಸ್ 7 ಮೂಲಕ ಮತ್ತೆ ಹೊಸತನದ ಮಿಂಚು ಮೂಡಿಸಲು ಆ್ಯಪಲ್ ಕಂಪನಿ ಸಿದ್ಧವಾಗಿದೆ. ಐಫೋನ್ 4 ಹಾಗೂ ನಂತರದ ಮಾದರಿಯ ಐಫೋನ್ ಮತ್ತು ಐಪ್ಯಾಡ್‌ಗಳಿಗೆ ಈ ಅಪ್‌ಡೇಟ್ ಲಭ್ಯವಾಗಲಿದೆ. ಐಒಎಸ್ 7 ಹೊಸತನಗಳೇನು? ಆಕರ್ಷಣೆ, ವೈಶಿಷ್ಟ್ಯಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ. ಹೊಸ ಶೈಲಿ ಹೊಸ ನೋಟ ಸಾಕಷ್ಟು ವರ್ಷದ ನಂತರ ಇದೇ ಮೊದಲ ಬಾರಿಗೆ ಐಒಎಸ್ 7ನಲ್ಲಿ ಅಪ್ಲಿಕೇಶನ್‌ಗಳ ಶೈಲಿಯೇ ಬದಲಾಗಿದೆ. ಇದು ಐಫೋನ್‌ಗೆ ಹೊಸ ಲುಕ್ ಕೊಡುವುದರಲ್ಲಿ ಅನುಮಾನವಿಲ್ಲ. ಒಂದೇ ಮಾದರಿಯ ಹೋಂ ಸ್ಕ್ರೀನ್, ಲಾಕ್ ಸ್ಕ್ರೀನ್ ನೋಡಿ ಬೇಸರಗೊಂಡವರಿಗೆ ಇದು ಹೊಸತನ ನೀಡಲಿದೆ. ಐಒಎಸ್ 7 ಹೊಂದಿರುವ ಐಫೋನ್ ನೋಡಿದ ತಕ್ಷಣ ಇದು ಮೊದಲು ನಿಮ್ಮ ಗಮನ ಸೆಳೆಯಲಿದೆ. ಬಹುತೇಕ ಎಲ್ಲ ಅಪ್ಲಿಕೇಶನ್‌ಗಳ ಶೈಲಿ ಬದಲಾಗಿದೆ. ಸುಂದರವಾಗಿ ಕೆಲಸ ಮಾಡುವವರು ಬಳಸುವ ಫೋನ್ ಕೂಡ ಅಷ್ಟೇ ಸುಂದರವಾಗಿರಬೇಕು ಎಂದು ಕಂಪನಿ ಹೇಳಿಕೊಂಡಿದೆ. ಅದಕ್ಕೆ ತಕ್ಕಂತೆ ಹೊಸ ಲುಕ್ ನೀಡಿದೆ. ಸಿಂಪಲ್ ಕ್ಯಾಲೆಂಡರ್ ಐಒಎಸ್ 7 ತುಂಬ ಸರಳವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ ಕೆಲವೊಮ್ಮೆ ಸರಳವಾಗಿದ್ದಿದ್ದೇ ಕಷ್ಟವಾಗಿಬಿಡುವ ಅಪಾಯವೂ ಇದೆ. ಆದರೆ ಐಒಎಸ್ 7 ಹಾಗಾಗಲಾರದು ಎಂದೂ ಕಂಪನಿ ಹೇಳಿದೆ. ಕ್ಯಾಲೆಂಡರ್‌ಗೆ ಬಿಳಿ ಹಿನ್ನೆಲೆ ನೀಡಲಾಗಿದೆ. ಕಾರ್ಯಕ್ರಮ ಇರುವ ಅಥವಾ ನೀವು ಏನಾದರೂ ದಾಖಲಿಸಿರುವ ದಿನಾಂಕಗಳಿಗೆ ಕೆಂಪು ವೃತ್ತ ಇರುತ್ತದೆ. ಬಿಳಿ ಹಿನ್ನೆಲೆ ಮೇಲೆ ಕೆಂಪು ವೃತ್ತ ಎದ್ದು ಕಾಣುವುದರಿಂದ ಯಾವ ದಿನಾಂಕಗಳು ಮಹತ್ವದ್ದು ಎಂಬುದನ್ನು ನೀವು ಬಹಳ ಬೇಗನೆ ಗಮನಿಸಬಹುದು ಎಂಬುದು ಕಂಪನಿಯ ಉದ್ದೇಶ. ಕಿಟಕಿಯ ಅನುಭವ ಈಗಿರುವ ಐಫೋನ್ ಹವಾಮಾನ ಅಪ್ಲಿಕೇಶನ್ ಅವಮಾನ ಮೂಡಿಸುವಂತಿತ್ತು. ಹೊಸ ಅಪ್ಲಿಕೇಶನ್ ನಿಜವಾದ ಅರ್ಥದಲ್ಲಿ ಹವಾಮಾನವನ್ನು ತೋರಿಸಲಿದೆಯಂತೆ. ಮಳೆ ಬರುತ್ತಿದ್ದರೆ ಹಿನ್ನೆಲೆಯಲ್ಲಿ ಮಳೆ ಹನಿ, ಮಂಜು ಸುರಿಯುತ್ತಿದ್ದರೆ ಹಿನ್ನೆಲೆಯಲ್ಲಿ ಮಂಜು ಇರಲಿದೆ ಎಂದು ಕಂಪನಿ ಹೇಳಿದೆ. ಕಿಟಕಿಯ ಹೊರಗೆ ನೋಡಿದರೆ ಯಾವ ಅನುಭವ ಆಗುತ್ತದೋ ಅದೇ ಅನುಭವ ಫೋನ್‌ನಲ್ಲಿ ಹವಾಮಾನ ಅಪ್ಲಿಕೇಶನ್ ತೆರೆದಾಗ ಆಗುತ್ತದೆ ಎಂಬುದು ಕಂಪನಿಯ ಮಾತು. ಇದರ ಜತೆಗೆ ಗಡಿಯಾರ ವಿಭಾಗದಲ್ಲಿ ವರ್ಲ್ಡ್ ಕ್ಲಾಕ್ ನೀಡಲಾಗಿದೆ. ಕ್ಯಾಲ್ಕುಲೇಟರ್‌ಗೆ ಒಂದಷ್ಟು ಬಣ್ಣ ತುಂಬಲಾಗಿದೆ. ಸುಮ್ಮನೆ ಶೋಕಿಗೆಂದು ಬಣ್ಣ ತುಂಬದೇ ಕೂಡಿಸು, ಕಳೆ, ಗುಣಿಸು ಮುಂತಾದ ಬಟನ್‌ಗಳಿಗೆ ಮಾತ್ರ ಬಣ್ಣ ತುಂಬಲಾಗಿದೆ. ಇದರಿಂದಾಗಿ ಈ ಬಟನ್‌ಗಳನ್ನು ಹುಡುಕುವುದು ಇನ್ನು ತುಂಬ ಸುಲಭ. ನಿಯಂತ್ರಣ ಕೇಂದ್ರ ಮೊಬೈಲ್‌ನಲ್ಲಿ ಏನೇ ಬದಲಾಯಿಸುವುದಾದರೂ ಸೆಟಿಂಗ್ಸ್‌ಗೆ ಹೋಗಬೇಕಿತ್ತು. ಅದಕ್ಕಾಗಿ ಸಣ್ಣ ವ್ಯವಸ್ಥೆ ಇತ್ತಾದರೂ, ಬ್ಲ್ಯೂಟೂತ್, ವೈಫೈ ಆನ್-ಆಫ್ ಮಾಡುವುದು ಮುಂತಾದ ಕೆಲಸಗಳಿಗೆ ಸೆಟ್ಟಿಂಗ್ಸ್‌ಗೇ ಹೋಗಬೇಕಿತ್ತು. ಆದರೆ ಐಒಎಸ್ 7ನಲ್ಲಿ ಇದಕ್ಕೊಂದು ಪರಿಹಾರ ಹುಡುಕಲಾಗಿದೆ. ಇದಕ್ಕಾಗಿ ಕಂಟ್ರೋಲ್ ಸೆಂಟರ್ ಎಂಬ ಅಪ್ಲಿಕೇಶನ್ನನ್ನು ಹೋಂ ಸ್ಕ್ರೀನ್‌ನಲ್ಲೇ ನೀಡಲಾಗಿದೆ. ಇದರ ಮೂಲಕ ಬ್ಲೂಟೂತ್, ವೈಫೈ ಆನ್-ಆಫ್ ಮಾಡುವುದು, ಸಂಗೀತ ಕೇಳುವ ಶಬ್ದ ದೊಡ್ಡ-ಸಣ್ಣ ಮಾಡುವುದು, ಪ್ಲೇ-ಪಾಸ್, ಫಾರ್ವರ್ಡ್ ಅವಕಾಶವಿದೆ. ಇದರ ಜತೆಗೆ ಕ್ಯಾಲ್ಕುಲೇಟರ್, ಟೈಮರ್, ಫ್ಲ್ಯಾಶ್‌ಲೈಟ್, ಕ್ಯಾಮರಾಕ್ಕೆ ನೇರವಾಗಿ ಹೋಗುವ ಅವಕಾಶವೂ ಇದೆ. ಫೋಟೋ ಫನ್ ಫೋಟೊ ಮತ್ತು ಕ್ಯಾಮೆರ ಅಪ್ಲಿಕೇಶನ್ ಅದ್ಭುತವಾಗಿ ಬದಲಾಗಿದೆ. ಕ್ಯಾಮೆರ ಆನ್ ಮಾಡಿದ ತಕ್ಷಣ ವೀಡಿಯೋ, ಫೋಟೊ, ಯಾವ ರೀತಿಯ ಫ್ರೇಮ್ ಬೇಕು ಎಂಬುದೆಲ್ಲ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಅಲ್ಲಿಯೇ ಬೇಕಾದ ಆಯ್ಕೆ ಮಾಡಿಕೊಳ್ಳಬಹುದು. ಇದರ ಜತೆಗೆ ಫೋಟೋಗೆ ಹಲವು ಬಗೆಯ ಫಿಲ್ಟರ್‌ಗಳನ್ನು ಅಳವಡಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ. ಕಪ್ಪು-ಬಿಳುಪು ಸೇರಿದಂತೆ ಒಟ್ಟು 8 ಬೇರೆಬೇರೆ ಫಿಲ್ಟರ್ ಆಯ್ಕೆಗಳನ್ನು ನೀಡಲಾಗಿದೆ. ಫೋಟೊ ತೆಗೆಯುವಾಗ ಅಥವಾ ತೆಗೆದ ನಂತರ ಕೂಡ ಈ ಫಿಲ್ಟರ್‌ಗಳನ್ನು ಫೋಟೋಗೆ ಅಳವಡಿಸಬಹುದು. ಅಳವಡಿಸಿದ ನಂತರ ಯಾವುದೇ ಸಮಯದಲ್ಲಿ ಫಿಲ್ಟರ್ ಬೇಡ ಅನ್ನಿಸಿದರೆ ಅದನ್ನು ತೆಗೆಯುವ ಅವಕಾಶವೂ ಇದೆ. ಫೋಟೋ ಅಪ್ಲಿಕೇಶನ್ ಕೂಡ ಸುಂದರವಾಗಿರುವುದರ ಜತೆಗೆ ಹೊಸ ಆಯ್ಕೆಗಳನ್ನು ಮೈಗೂಡಿಸಿಕೊಂಡಿದೆ.ಫೋಟೋಗಳ ಸ್ಮಾರ್ಟ್ ಗ್ರೂಪಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಸಮಯ, ಸ್ಥಳ, ವರ್ಷ ಆಧಾರಿತವಾಗಿ ಫೋಟೋಗಳನ್ನು ಪೇರಿಸಿ ಇಡಬಹುದು. ವರ್ಷ ಟೈಪ್ ಮಾಡಿದರೆ ಸಾಕು, ಆ ವರ್ಷ ತೆಗೆದ ಎಲ್ಲ ಫೋಟೋ ಮತ್ತು ವೀಡಿಯೋಗಳು ನಿಮ್ಮ ಸ್ಕ್ರೀನ್‌ಮೇಲೆ ತುಂಬಿಕೊಳ್ಳುತ್ತವೆ. ಯಾವುದೇ ಒಂದು ಕಲೆಕ್ಷನ್‌ನ ಕ್ಲಿಕ್ ಮಾಡಿದರೆ ಅದರಲ್ಲಿರುವ ಫೋಟೋಗಳು ಸಮಯ ಮತ್ತು ಸ್ಥಳ ಆಧಾರಿತವಾಗಿ ಪೇರಿಸಲ್ಪಟ್ಟಿರುತ್ತವೆ. ಐಕ್ಲೌಡ್ ಮೂಲಕ ಮೂಲಕ ಫೋಟೊ ಸ್ಟ್ರೀಮ್ ಶೇರ್ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ. ಏರ್‌ಡ್ರಾಪ್ ಹಾಡು, ಫೋಟೊ ಹೀಗೆ ಏನೇ ಇರಲಿ ಇನ್ನೊಂದು ಫೋನ್‌ನಿಂದ ಐಫೋನ್‌ಗೆ ಸ್ವಿಕರಿಸುವುದು ಮತ್ತು ಕಳುಹಿಸುವುದು ಕಷ್ಟ. ಶೇರಿಂಗ್ ವ್ಯವಸ್ಥೆ ಸರಳವಾಗಿರಲಿಲ್ಲ. ಐಒಎಸ್ 7ನಲ್ಲಿ ಏರ್‌ಡ್ರಾಪ್ ವ್ಯವಸ್ಥೆ ಮೂಲಕ ಫೋಟೊ, ಹಾಡು ಹೀಗೆ ಏನುಬೇಕಿದ್ದರೂ ಶೇರ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಐಒಎಸ್ 7 ಬಳಸುವ ಎಲ್ಲರಿಗೂ ಈ ಏರ್‌ಡ್ರಾಪ್ ಸೈಲಭ್ಯ ಸಿಗಲಿದೆ. ಇದರಲ್ಲೂ ವಿಸಿಬಲ್ ಮತ್ತು ನಾಟ್ ವಿಸಿಬಲ್ ಆಯ್ಕೆಗಳಿವೆ. ವಿಸಿಬಲ್ ಆಯ್ಕೆ ಕ್ಲಿಕ್ ಮಾಡಿದರೆ ನಿಮ್ಮ ಆಸುಪಾಸಿನಲ್ಲಿ ಐಒಎಸ್ 7 ಬಳಸುವ ಎಲ್ಲರಿಗೂ ನಿಮ್ಮ ಮೊಬೈಲ್ ಕಾಣಿಸುತ್ತದೆ. ಯಾರೇ ಏನೋ ಕಳುಹಿಸಿದರೂ ನೀವು ಒಪ್ಪಿಕೊಳ್ಳದೇ ಯಾವುದೂ ನಿಮ್ಮ ಮೊಬೈಲ್‌ಗೆ ಡೌನ್‌ಲೋಡ್ ಆಗುವುದಿಲ್ಲ. - ವಕ್ರದಂತ