ಬ್ಲ್ಯಾಕ್‌ಬೆರ್ರಿ ಮೆಸೇಂಜರ್ ಗೂಗಲ್ ಪ್ಲೇನಲ್ಲಿ ಚಾಟಿಂಗ್ ಅಪ್ಲಿಕೇಶನ್‌ಗಳ ಹಾವಳಿ ಹೆಚ್ಚಾಗುತ್ತಿದೆ. ಚಾಟಿಂಗ್‌ನ ಯಾವುದೇ ಅಪ್ಲಿಕೇಶನ್‌ಗಳಿದ್ದರೂ ಯುವಜನತೆ ಆಕರ್ಷಿತರಾಗುತ್ತಾರೆಂಬುದು ಡೆವಲಪರ್ಸ್‌ಗಳಿಗೆ ಗೊತ್ತಾಗಿದೆ. ಈಗ ಪ್ರತಿಷ್ಠಿತ ಬ್ಲ್ಯಾಕ್‌ಬೆರ್ರಿ ಸಂಸ್ಥೆಯೂ ಬಿಬಿಎಂ (ಬ್ಲ್ಯಾಕ್‌ಬೆರ್ರಿ ಮೆಸೇಂಜರ್) ಎಂಬ ಚಾಟಿಂಗ್ ಅಪ್ಲಿಕೇಷನ್ ಅನ್ನು ಸಾರ್ವತ್ರಿಕಗೊಳಿಸಿದೆ. ಚಾಟಿಂಗ್‌ಗಾಗಿಯೇ ಒಂದು ಅಪ್ಲಿಕೇಶನ್ ಅನ್ನು ಬಿಟ್ಟ ಮೊದಲ ಕಂಪನಿಯೆಂದರೆ ಬ್ಲ್ಯಾಕ್‌ಬೆರ್ರಿ. ಆದರೆ ಅದನ್ನು ಬ್ಲ್ಯಾಕ್‌ಬೆರ್ರಿ ಹ್ಯಾಂಡ್‌ಸೆಟ್‌ಗಳಿಗೆ ಮಾತ್ರ ಮೀಸಲಿರಿಸಲಾಗಿತ್ತು. ಸ್ಮಾರ್ಟ್‌ಫೋನ್‌ನ ಜಮಾನ ಬದಲಾಗುತ್ತಿದ್ದಂತೆ ಬ್ಲ್ಯಾಕ್‌ಬೆರ್ರಿಯ ಜನಪ್ರಿಯತೆ ಕುಸಿಯುತ್ತಾ ಸಾಗಿತು. ಇದರ ಪರಿಣಾಮವಾಗಿಯೇ ಬಿಬಿಎಂ ಅಪ್ಲಿಕೇಶನ್ ಅನ್ನು ಆ್ಯಂಡ್ರಾಯ್ಡ್‌ನ ಗೂಗಲ್ ಪ್ಲೇಗೆ ಬಿಡಲಾಗಿದೆ. ಇದರಿಂದ ಬ್ಲ್ಯಾಕ್‌ಬೆರ್ರಿಯ ಬಿಬಿಎಂ ಚಾಟಿಂಗ್ ಅಪ್ಲಿಕೇಶನ್ ಅನ್ನು ಯಾವುದೆ ಸ್ಮಾರ್ಟ್‌ಫೋನ್‌ಗೂ ಡೌನ್‌ಲೋಡ್ ಮಾಡಬಹುದು. ಆದರೆ ಇತರೆ ಚಾಟ್ ಅಪ್ಲಿಕೇಶನ್‌ಗಳಂತೆ ಮೊಬೈಲ್ ಸಂಖ್ಯೆ, ಹೆಸರು ಹಾಗೂ ಫೋಟೊಗಳಿಂದ ಯಾವುದೇ ವ್ಯಕ್ತಿಯನ್ನು ಹುಡುಕಲು ಸಾಧ್ಯವಿಲ್ಲ. ಅಫ್ಲಿಕೇಶನ್ ಆ್ಯಕ್ಟಿವೇಟ್ ಆದಾಗ ಒಂದು ಪಿನ್ ಸಂಖ್ಯೆ ಕೊಡಲಾಗುತ್ತದೆ. ಇದರಿಂದ ಮಾತ್ರ ಗೆಳೆಯರನ್ನು ಆಹ್ವಾನಿಸಿ ಚಾಟ್ ಮಾಡಲು ಸಾಧ್ಯವಿದೆ. ಉಳಿದೆಲ್ಲ ಚಾಟ್ ಅಪ್ಲಿಕೇಶನ್‌ಗಳಿಗಿಂತ ಹೆಚ್ಚು ಪ್ರೈವಸಿ ಹಾಗೂ ಸೆಕ್ಯೂರ್ ಆಗಿದೆ.