'ಅಲ್ಟ್ರಾ ಪಿಕ್ಸೆಲ್‌' ಸ್ಮಾರ್ಟ್ ಫೋನ್ ಹೊಸ ತಂತ್ರಜ್ಞಾನಗಳು ಜನರಿಗೆ ಹೊಸ ಚಟ ಅಂಟಿಸಿವೆ. ಅದು ಪಿಕ್ಸೆಲ್ ಚಟ. ಮೊದಲೆಲ್ಲ ಮೊಬೈಲ್‌ನಲ್ಲಿ 2 ಮೆಗಾಪಿಕ್ಸೆಲ್ ಕ್ಯಾಮರಾ ಅಂದರೆ ಅದೇ ದೊಡ್ಡ ಸಂಗತಿ. ಈಗ 5 ಮೆಗಾಪಿಕ್ಸೆಲ್‌ನಿಂದ ಎಂಟಾಗಿ, 13 ಆಗುವತ್ತ ದಾಪುಗಾಲಿಟ್ಟಿದೆ. ನೋಕಿಯಾ ಕಂಪನಿ 41 ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿರುವ ಮೊಬೈಲನ್ನೇ ಮಾರುಕಟ್ಟೆಗೆ ಬಿಟ್ಟು ದಿಗ್ಭ್ರಮೆ ಮೂಡಿಸಿತ್ತು. ಆದರೆ ಜನ ಮಾತ್ರ 'ಅಷ್ಟೆಲ್ಲ ಪಿಕ್ಸೆಲ್ ಬೇಕಿದ್ದರೆ ಕ್ಯಾಮರಾನೇ ಖರೀದಿ ಮಾಡ್ತೇವೆ. ಮೊಬೈಲ್ ಯಾಕೆ ತಗೋಬೇಕು' ಎಂದು ಮೊಬೈಲ್‌ನ್ನೇ ತಿರಸ್ಕರಿಸಿಬಿಟ್ರು. ಆದರೂ ಎಚ್‌ಟಿಸಿ ಸಂಸ್ಥೆ ಎಚ್‌ಟಿಸಿ ಒನ್ ಎಂಬ 'ಅಲ್ಟ್ರಾ ಪಿಕ್ಸೆಲ್‌' ಕ್ಯಾಮರಾ ಹೊಂದಿರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಹೇಳಿಕೊಳ್ಳೋದಕ್ಕೆ 'ಅಲ್ಟ್ರಾ ಪಿಕ್ಸೆಲ್‌' ಆದರೂ ಇರೋದು 4 ಮೆಗಾಪಿಕ್ಸೆಲ್ ಕ್ಯಾಮರಾ ಮಾತ್ರ! ಕಂಪನಿ ಹೇಳೋ ಪ್ರಕಾರ ಇರೋ 4 ಮೆಗಾ ಪಿಕ್ಸೆಲ್‌ಗಳು ಏನು ಕೆಲಸ ಮಾಡುತ್ತವೆ ಅನ್ನೋದೇ ಈ ಕ್ಯಾಮರಾದ ತಾಕತ್ತು. ಕಂಪನಿ ಪ್ರಕಾರ ಮೆಗಾಪಿಕ್ಸೆಲ್‌ಗಳ ಜಮಾನಾ ಮುಗಿದಿದೆ. ಈಗ ಪಿಕ್ಸೆಲ್ ಲೆಕ್ಕಕ್ಕಿಂತ ಅದರ ಗಾತ್ರ ಮುಖ್ಯ. ಈಗಿರುವ ಮೊಬೈಲ್ ಕ್ಯಾಮರಾಗಳಿಗಿಂತ ಶೇ.300ರಷ್ಟು ಹೆಚ್ಚು ಬೆಳಕನ್ನು ಸ್ವೀಕರಿಸಬಲ್ಲದು. ಜತೆಗೆ ಇಮೇಜ್ ಸ್ಟೆಬಲೈಸರ್ ಕೂಡ ಇದೆ. ಹೀಗಾಗಿ ಪಿಕ್ಸೆಲ್ ಪೈಪೋಟಿಗೆ ಎಚ್‌ಟಿಸಿ ಹೊಸ ತಿರುವು ನೀಡಿದೆ. ಇದರ ಜತೆಗೆ ಈ ಮೊಬೈಲ್‌ಗೆ ಹೊಸ ಮಾದರಿ ಸ್ಪೀಕರ್‌ಗಳನ್ನು ಅಳವಡಿಸಿದ್ದು, ಅದಕ್ಕೆ 'ಬೂಮ್ ಸೌಂಡ್‌' ಎಂಬ ಹೆಸರು ನೀಡಿದೆ.