ಇಸ್ರೋದ ಮಹತ್ವದ ಚಂದ್ರಯಾನ-2ಗೆ ರಷ್ಯಾ ತಂತ್ರಜ್ಞಾನ! ಏಕಕಾಲಕ್ಕೆ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿ ದಾಖಲೆ ನಿರ್ಮಿಸಿದ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಚಂದ್ರಯಾನ-2 ಯೋಜನೆಗೆ ಸಿದ್ಧತೆ ನಡೆಸಿದೆ. ನವದೆಹಲಿ: ಏಕಕಾಲಕ್ಕೆ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿ ದಾಖಲೆ ನಿರ್ಮಿಸಿದ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಚಂದ್ರಯಾನ-2 ಯೋಜನೆಗೆ ಸಿದ್ಧತೆ ನಡೆಸಿದೆ. ಚಂದ್ರಯಾನ-1 ಯೋಜನೆ ಮೂಲಕ ಅತೀ ಕಡಿಮೆ ವೆಚ್ಚದಲ್ಲಿ ಚಂದ್ರನ ಅಂಗಳಕ್ಕೆ ಉಪಗ್ರಹ ರವಾನೆ ಮಾಡಿ ಇಡೀ ಜಗತ್ತಿನ ಅಚ್ಚರಿಗೆ ಕಾರಣವಾಗಿದ್ದ ಇಸ್ರೋ ಇದೀಗ ಅದರ ಮುಂದುವರಿದ ಭಾಗ ಚಂದ್ರಯಾನ-2ಗೆ ಶೀಘ್ರದಲ್ಲೇ ಚಾಲನೆ ನೀಡಲಿದೆ. ಈ ಮಹತ್ವದ ಯೋಜನೆಗೆ ರಷ್ಯಾದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಚಂದ್ರನ ಮೇಲ್ಮೈಯಲ್ಲಿರುವ ಬಂಡೆಗಳು ಹಾಗೂ ಮಣ್ಣಿನ ರಾಸಾಯನಿಕ ಸಂಯೋಜನೆಯನ್ನು ಅಧ್ಯಯನ ಮಾಡಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ರಷ್ಯಾ ಮೂಲದ ಐಸೋಟೇಪ್ ಸಂಸ್ಥೆ ರೆಡಿಯೋನ್ಯೂಕ್ಲೈಡ್ ಕ್ಯೂರಿಯಂ ಆಲ್ಫಾ ಎಮಿಟ್ಟರ್ (-244) ವ್ಯವಸ್ಥೆಯನ್ನು ಇಸ್ರೋಗೆ ನೀಡಲಿದ್ದು, ಸಂಸ್ಥೆಯ ತಜ್ಞರು ಮತ್ತು ಇಸ್ರೋ ವಿಜ್ಞಾನಿಗಳು ಅಹ್ಮದಾಬಾದ್ ನಲ್ಲಿರುವ ಲ್ಯಾಬೋರೇಟರಿಯಲ್ಲಿ ಕುಳಿತು ಇದನ್ನು ನಿಯಂತ್ರಿಸಲಿದ್ದಾರೆ. ಈ ತಂತ್ರಜ್ಞಾನದ ನೆರವಿನಿಂದಾಗಿ ಚಂದ್ರನ ಮೇಲ್ಮೈನಲ್ಲಿರುವ ಬಂಡೆಗಳು ಮತ್ತು ಮಣ್ಣಿನ ಸಂಯೋಜನೆ ಮತ್ತು ಗುಣವನ್ನು ಅಧ್ಯಯನ ಮಾಡಬಹುದಾಗಿದೆ ಎಂದು ರಷ್ಯಾದ ಪರಮಾಣು ಸಂಶೋಧನಾ ಮತ್ತು ವೈಜ್ಞಾನಿಕ ಕೇಂದ್ರ ()ದ ದಕ್ಷಿಣ ಏಷ್ಯಾ ವಕ್ತಾರ ಅಲೆಕ್ಸಾಂಡರ್ ಅಂಟಿಪಿನ್ ತಿಳಿಸಿದ್ದಾರೆ. ಈ ಆಲ್ಫಾ ಎಮಿಟ್ಟರ್ ಅನ್ನು ರಷ್ಯಾದ ಪರಮಾಣು ಸಂಶೋಧನಾ ಮತ್ತು ವೈಜ್ಞಾನಿಕ ಕೇಂದ್ರ ಸಂಸ್ಥೆ ತಯಾರಿಸಿದ್ದು, ಈ ವ್ಯವಸ್ಥೆಯನ್ನು ಚಂದ್ರಯಾನ-2 ನೌಕೆಯ ಆಲ್ಫಾ ಪ್ರೋಟಾನ್ ಎಕ್ಸ್ ರೇ ಸ್ಪೆಕ್ಟ್ರೋಮೀಟರ್ ನಲ್ಲಿ ಅಳವಡಿಸಲಾಗುತ್ತದೆ. ಚಂದ್ರನ ಮೇಲ್ಮೈ ಅಧ್ಯಯನ ಮಾಡುವ ಇಸ್ರೋದ ಇಡೀ ಚಂದ್ರಯಾನ-2 ಯೋಜನೆಯಲ್ಲಿ ಈ ಅಲ್ಫಾ ಎಮಿಟರ್ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಭಾರತಕ್ಕೆ ನೀಡಿರುವಂತೆಯೇ ಈ ಹಿಂದೆಯೂ ರಷ್ಯಾ ಅಮೆರಿಕದ ನಾಸಾ ಸಂಸ್ಥೆಗೆ ವಿವಿಧ ಬಗೆಯ ಆಲ್ಫಾ ಎಮಿಟರ್ ಗಳನ್ನು ನೀಡಿತ್ತು. ನಾಸಾದ ಮಾರ್ಸ್ ಪಾತ್ ಫೈಂಡರ್ (1997), ಆಪರ್ಚುನಿಟಿ (2004) ಮತ್ತು ಕ್ಯೂರಿಯಾಸಿಟಿ (2012) ಯೋಜನೆಗೆ ರಷ್ಯಾ ತನ್ನ ಅಲ್ಫಾ ಎಮಿಟರ್ ತಂತ್ರಜ್ಞಾನವನ್ನು ನೀಡಿತ್ತು. ಅಲ್ಫಾ ಎಮಿಟ್ಟರ್ (-244) ಭೂಮಿಗೆ ತನ್ನ ನಿಖರವಾದ ದತ್ತಾಂಶವನ್ನು ರವಾನಿಸುತ್ತದೆ ಎಂದು ಅಲೆಕ್ಸಾಂಡರ್ ಅಂಟಿಪಿನ್ ತಿಳಿಸಿದ್ದಾರೆ.