ಸ್ಮಾರ್ಟ್ ಚೋರ್ ಕೈನಲ್ಲಿ ಸ್ಮಾರ್ಟ್ ಫೋನ್ ಇದ್ದಾಕ್ಷಣ 'ನಾನು ಬಹಳ ಸ್ಮಾರ್ಟ್‌' ಎಂದು ತಿಳಿದುಕೊಳ್ಳಬೇಡಿ. ಮೊಬೈಲ್‌ಗಳ ಸೆಕ್ಯುರಿಟಿ... ಕೈನಲ್ಲಿ ಸ್ಮಾರ್ಟ್ ಫೋನ್ ಇದ್ದಾಕ್ಷಣ 'ನಾನು ಬಹಳ ಸ್ಮಾರ್ಟ್‌' ಎಂದು ತಿಳಿದುಕೊಳ್ಳಬೇಡಿ. ಮೊಬೈಲ್‌ಗಳ ಸೆಕ್ಯುರಿಟಿ ಕುರಿತಂತೆ ಕೊಂಚ ಅತಿಯಾಗೇ ತಲೆಕೆಡಿಸಿಕೊಳ್ಳದಿದ್ದರೆ ನೀವು ಜಗತ್ತಿನ ಎದುರು ಬೆತ್ತಲಾಗಬಹುದು ಹುಷಾರ್! ನಿಮ್ಮ ಅರಿವಿಗೇ ಬಾರದೇ ನಿಮ್ಮ ಮೊಬೈಲ್‌ನ ಪ್ರತಿಯೊಂದು ಅಂಶವನ್ನು ಮತ್ಯಾರೋ ಮನುಷ್ಯ ಸಂಪೂರ್ಣವಾಗಿ ಸ್ಕ್ಯಾನ್ ಮಾಡುತ್ತಿರಬಹುದು. ನೀವು ಮಾಡುವ ಪ್ರತಿ ಕರೆ, ಸಂದೇಶ, ಇಂಟರ್ನೆಟ್ ಸರ್ಫಿಂಗ್, ಚಾಟಿಂಗ್‌ಗಳ ವಿವರವು ಇನ್ಯಾರದೋ ಸರ್ವರ್‌ಗಳಲ್ಲಿ ಹೋಗಿ ಕೂತಿರಬಹುದು. ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಸ್ಮಾರ್ಟ್ ಫೋನ್‌ಗಳಲ್ಲಿರುವ ಸಣ್ಣಪುಟ್ಟ ಮಾಹಿತಿಗಳು ಮತ್ಯಾರದ್ದೋ ಪಾಲಾಗುವ ಸಾಧ್ಯತೆ ಇರುತ್ತದೆ. ಇಂದಿನ ಸ್ಮಾರ್ಟ್ ಫೋನ್‌ಗಳು ಸ್ಪೈ ಜಗತ್ತಿಗೆ ಹೊಸದೊಂದು ಅವತಾರವಾಗಿ ಪರಿಣಮಿಸಿವೆ. ಕೆಲ ವಿದೇಶಿ ಸ್ಪೈ ಕಂಪನಿಗಳಿಗೆ ಅಗತ್ಯವಿದೆಯೋ ಇಲ್ಲವೋ ಗೊತ್ತಿಲ್ಲ, ಆದಾಗ್ಯೂ ಮಾಹಿತಿ ಕದಿಯುವ ಕೆಲಸದಲ್ಲಿ ನಿಸ್ಸೀಮರಾಗಿದ್ದಾರೆ ಎಂಬ ಮಾಹಿತಿಗಳು ಹೊರಬರುತ್ತಿವೆ. ಗೂಢಚರ್ಯದಲ್ಲಿ ಇಸ್ರೇಲ್‌ಗೆ ಅತಿ ಮಹತ್ವದ ಸ್ಥಾನವಿದೆ. ಆದರೆ ಈ ಮೊಬೈಲ್ ಸ್ಪೈಗಳು ಇಸ್ರೇಲ್‌ಗೂ ಸೆಡ್ಡು ಹೊಡೆಯುವ ಮಟ್ಟಿಗೆ ಬೆಳೆಯುತ್ತಿವೆ. ಮೊಬೈಲ್ ಮಾರುಕಟ್ಟೆಯಲ್ಲಿರುವ ಎಲ್ಲ ಅಪಾಯಕಾರಿ ಅಪ್ಲಿಕೇಷನ್‌ಗಳು ವೈಯಕ್ತಿಕ ಮಾಹಿತಿ ಕದಿಯುವುದಿಲ್ಲ. ಆದರೆ ಸುಮಾರು 11 ಸಾವಿರ ಅಪ್ಲಿಕೇಷನ್‌ಗಳು ಮೊಬೈಲ್ ಬಳಕೆದಾರರ ವೈಯಕ್ತಿಕ ಮಾಹಿತಿ ಕದಿಯುತ್ತಿವೆ ಎನ್ನಲಾಗಿದೆ. ಈ ಸಂಬಂಧ ಯುರೋಪಿಯನ್ ದೇಶಗಳಲ್ಲಿ ಗೂಗಲ್ ಪ್ಲೇ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅಪ್ಲಿಕೇಷನ್‌ಗಳ ಸಂತೆ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಪ್ರತಿದಿನ ಸಾವಿರಾರು ಅಪ್ಲಿಕೇಷನ್‌ಗಳು ಬಂದು ಬೀಳುತ್ತಿವೆ. ಆದರೆ ಇದರಲ್ಲೇ ಸಾಕಷ್ಟು ಅಪ್ಲಿಕೇಷನ್‌ಗಳು ಮಾಲ್‌ವೇರ್ ಅನ್ನು ಹೊತ್ತು ತರುತ್ತಿವೆ. ಇದೇ ಮಾಲ್‌ವೇರ್‌ಗಳು ಒಂದೆಡೆ ಮೊಬೈಲ್‌ಗೆ ವೈರಸ್ ಆಗಿ ಪರಿಣಮಿಸಿದರೆ, ಮತ್ತೊಂದೆಡೆ ಮಾಹಿತಿ ಕದಿಯುವ ಮಾಧ್ಯಮವಾಗಿ ಕೆಲಸ ಮಾಡುತ್ತವೆ. ವಿಶೇಷವಾಗಿ ಕೆಲ ಸೋಷಿಯಲ್ ನೆಟವರ್ಕ್ ವಿಭಾಗದಲ್ಲಿನ ಕೆಲ ಅಪ್ಲಿಕೇಷನ್‌ಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಸಾಮಾನ್ಯವಾಗಿ ವಾಟ್ಸ್‌ಆ್ಯಪ್‌ನಂತಹ ಅಪ್ಲಿಕೇಷನ್ ಹುಡುಕಲು ಸರ್ಚ್ ಆಪ್ಶನ್ ನೋಡಿದಾಗ 10ಕ್ಕೂ ಅಧಿಕ ಅಪ್ಲಿಕೇಷನ್‌ಗಳು ದೊರೆಯುತ್ತವೆ. ಬಹುತೇಕವಾಗಿ ಎಲ್ಲ ಅಪ್ಲಿಕೇಷನ್‌ಗಳ ಹೆಸರು ಹಾಗೂ ಲೋಗೋ ಅದೇ ರೀತಿ ಇರುತ್ತವೆ. ಕೋಕ್ ಹಾಗೂ ಪೆಪ್ಸಿಯನ್ನು ಹೋಲುವ 100ಕ್ಕೂ ಅಧಿಕ ಬ್ರಾಂಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆಯಂತೆ. ಅದೇ ರೀತಿ ಮೋಸ ಮಾಡಲು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿಯೂ ಅಪ್ಲಿಕೇಷನ್ ಅಭಿವೃದ್ಧಿಪಡಿಸುವ ಬುದ್ಧಿವಂತರಿದ್ದಾರೆ. ಆದರೆ ಇಂತಹ ಹೆಚ್ಚಿನ ಅಪ್ಲಿಕೇಷನ್‌ಗಳು ಮಾಲ್‌ವೇರ್ ಆಗಿರುತ್ತವೆ. ಅಂದಹಾಗೆ ಮೊಬೈಲ್ ಮಾರುಕಟ್ಟೆಯಲ್ಲಿ 10 ಲಕ್ಷಕ್ಕಿಂತಲೂ ಅಧಿಕ ಮಾಲ್‌ವೇರ್ ಅಪ್ಲಿಕೇಷನ್‌ಗಳಿವೆ. ಗೂಗಲ್ ಪ್ಲೇಯಲ್ಲಿನ ಶೇ.72ರಷ್ಟು ಅಪ್ಲಿಕೇಷನ್‌ಗಳು ಅಪಾಯಕಾರಿಯಾಗಿವೆ ಎಂದು ಅಮೆರಿಕದ ಮೊಬೈಲ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ನಿಯತಕಾಲಿಕೆಯೊಂದು ವರದಿ ಮಾಡಿದೆ. ನೀವು ಯಾವ ಉದ್ದೇಶಕ್ಕೆ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿದ್ದೀರೋ ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಉತ್ತಮವಾಗಿಯೇ ಅದು ನೀಡುತ್ತಿರುತ್ತದೆ. ಆದರೆ ನಿಮಗೆ ಗೊತ್ತಿಲ್ಲದಂತೆ ಮಾಲ್‌ವೇರ್‌ಗಳನ್ನು ಮೊಬೈಲ್‌ಗೆ ಸೇರಿಸುತ್ತಿರುತ್ತದೆ. ಈ ಮಾಲ್‌ವೇರ್‌ಗಳು ನಿಮ್ಮ ಮೊಬೈಲ್‌ನ ಮಾಹಿತಿಗಳನ್ನು ನಿಯಮಿತವಾಗಿ ಕದಿಯುತ್ತಲೇ ಇರುತ್ತದೆ. ಅವರು ಕದಿಯುವ ಎಲ್ಲ ಮಾಹಿತಿಗಳು ಲಾಭಕ್ಕೆ ಬರದಿರಬಹುದು, ಆದರೆ ಹ್ಯಾಕಿಂಗ್ ಹಾಗೂ ಕೆಲ ಗುಪ್ತ ಮಾಹಿತಿಗಳನ್ನು ಕದಿಯುವ ಅಪಾಯವಿರುತ್ತದೆ. ಗೇಮಿಂಗ್ ಅಪ್ಲಿಕೇಷನ್ ಗೇಮಿಂಗ್ ಅಪ್ಲಿಕೇಷನ್‌ಗಳಲ್ಲಿ ಮಾಲ್‌ವೇರ್ ಹೆಚ್ಚಾಗುತ್ತಿದೆ. ಅದರಲ್ಲೂ ಪಾರ್ನ್‌ಗೆ ಸಂಬಂಧಿಸಿದ ಸಾಕಷ್ಟು ಗೇಮ್‌ಗಳು ಮೊಬೈಲ್‌ನಲ್ಲಿ ಬಂದಿವೆ. ಡ್ರೆಸ್ ಅಪ್, ಸೆಕ್ಸ್‌ಟಿಂಗ್, ಪಝಲ್ ಹಾಗೂ ವರ್ಚ್ಯೂವಲ್ ಪಾರ್ನ್ ಗೇಮ್‌ಗಳು ಮೊಬೈಲ್‌ನಲ್ಲಿ ಹೆಚ್ಚಾಗುತ್ತಿವೆ. ಯುವ ಜನತೆಯೇ ಇಂತಹ ಅಪ್ಲಿಕೇಷನ್‌ಗಳತ್ತ ಹೆಚ್ಚು ವಾಲುತ್ತಾರೆ. ಕಂಪ್ಯೂಟರ್‌ನಲ್ಲಿಯೂ ಕೂಡ ವೈರಸ್ ಪ್ರವೇಶಕ್ಕೆ ಪಾರ್ನ್ ಸೈಟ್‌ಗಳೇ ಹೆಚ್ಚು ಕಾರಣವಾಗಿದ್ದವು. ಹಾಗೆಯೇ ಮೊಬೈಲ್‌ಗಳಲ್ಲಿಯೂ ಮಾಲ್‌ವೇರ್ ತುರುಕಿಸಲು ಹ್ಯಾಕರ್ಸ್ ಹಾಗೂ ಇತರ ಮಾಲ್‌ವೇರ್ ಪ್ರೋಗ್ರಾಮರ್‌ಗಳು ಪಾರ್ನ್ ಗೇಮ್‌ಗಳನ್ನು ಕೇಂದ್ರೀಕರಿಸಿಕೊಂಡಿವೆ. ಇನ್ನು ಗೂಗಲ್ ಪ್ಲೇ ಅಥವಾ ಆ್ಯಪಲ್ ಸ್ಟೋರ್‌ನಲ್ಲಿನ ಖ್ಯಾತ ಗೇಮ್‌ಗಳ ಹೆಸರಿನಲ್ಲಿ ಅಥವಾ ಅದೇ ಲೋಗೋದಲ್ಲಿ ಬಂದ ಸಾಕಷ್ಟು ಅಪ್ಲಿಕೇಷನ್‌ಗಳು ಅಪಾಯಕಾರಿಯಾಗಿ ಪರಿಣಮಿಸಬಹುದು. ಓಪನ್ ಶೇರ್ ಬೇಡ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ವೈ-ಫೈ, ಬ್ಲ್ಯೂಟೂತ್‌ಗಳು ಸಾಮಾನ್ಯವಾಗಿರುತ್ತವೆ. ಆದರೆ ಕೆಲವರು ಇವೆರಡು ಕನೆಕ್ಟಿವಿಟಿ ಟೂಲ್‌ಗಳನ್ನು ಓಪನ್ ಶೇರ್ ಆಗಿಟ್ಟಿರುತ್ತಾರೆ. ಇದರಿಂದ ನೀವು ಬಳಸುವ ಸ್ಮಾರ್ಟ್‌ಫೋನ್‌ಗೆ ಅಪಾಯದ ಆಮಂತ್ರಣ ನೀಡಿದಂತೆಯೇ. ಓಪನ್ ವೈ-ಫೈ ಅಥವಾ ಬ್ಲ್ಯೂಟೂತ್ ಮೂಲಕ ಮತ್ತೊಬ್ಬರು ಸಂಪರ್ಕ ಸಾಧಿಸಿ ಮೊಬೈಲ್‌ನಲ್ಲಿರುವ ಪಾಸ್‌ವರ್ಡ್ ಹಾಗೂ ಇತರ ಮಾಹಿತಿಗಳನ್ನು ಕದಿಯುವ ಸಾಧ್ಯತೆಯಿರುತ್ತದೆ. ಇದರಿಂದ ನಿಮ್ಮ ಸ್ಮಾರ್ಟ್‌ಪೋನ್‌ನ ಸಂಪೂರ್ಣ ಹಿಡಿತವನ್ನು ಮತ್ತೊಬ್ಬರು ಸಾಧಿಸಿ ನಿಮಗೆ ಗೊತ್ತಿಲ್ಲದೆಯೇ ಅಪ್ಲಿಕೇಷನ್‌ಗಳನ್ನು ಸೇರಿಸಬಹುದು. ಇದರಿಂದ ನೀವು ಸ್ಮಾರ್ಟ್‌ಪೋನ್‌ನಲ್ಲಿ ಮಾಡುವ ಪ್ರತಿ ಕೆಲಸವನ್ನು ಮತ್ತೊಬ್ಬರು ಕುಳಿತಲ್ಲಿಯೇ ನೋಡಬಹುದು. ಮತ್ತೆ ನಾವು ಸಾಮಾನ್ಯವಾಗಿ ಮಾಡುವ ಮತ್ತೊಂದು ದಡ್ಡತನವೆಂದರೆ ಓಪನ್ ವೈ-ಫೈ ಹಾಟ್‌ಸ್ಪಾಟ್ ಸಿಕ್ಕಿದ ತಕ್ಷಣ ಮೊಬೈಲ್‌ನಲ್ಲಿರುವ ಎಲ್ಲ ಅಪ್ಲಿಕೇಷನ್ ಹಾಗೂ ಸಾಫ್ಟವೇರ್‌ಗಳ ಅಪ್‌ಡೇಟ್ ಮಾಡುತ್ತೇವೆ. ಮೊಬೈಲ್ ಡಾಟಾದ ಹಣ ಉಳಿಸಲು ಇಂತಹ ಕಂಜೂಸಿತನದ ಕೆಲಸ ಮಾಡಲು ಮುಂದಾಗುತ್ತೇವೆ. ಆದರೆ ಇದರ ಬಗ್ಗೆ ಬಹು ಎಚ್ಚರದಿಂದಿರಬೇಕು. ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಈ ನೆಟ್‌ವರ್ಕ್ ನಿರ್ವಾಹಕರು ಆರಾಮಾಗಿ ಕದಿಯಬಹುದು. ಕೆಲವು ಹ್ಯಾಕರ್‌ಗಳು ಇದೇ ಕಾರಣಕ್ಕಾಗಿಯೇ ವೈ-ಫೈ ಹಾಟ್‌ಸ್ಪಾಟ್ ರೆಡಿ ಇಟ್ಟಿರುತ್ತಾರೆ ಎಂಬ ಮಾತುಗಳಿವೆ. ಎಚ್ಚರದಿಂದಿರಿ!