ರಾಕೆಟ್ ಅನ್ನು ಯಶಸ್ವಿಯಾಗಿ ಭೂಮಿಗಿಳಿಸುವ ಪ್ರಯೋಗ! ಗಗನಕ್ಕೆ ಹಾರಿಬಿಡುವ ರಾಕೆಟ್ ಅನ್ನು... -ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಲಿರುವ ಸ್ಪೇಸ್ ಎಕ್ಸ್ ವಾಷಿಂಗ್ಟನ್: ಗಗನಕ್ಕೆ ಹಾರಿಬಿಡುವ ರಾಕೆಟ್ ಅನ್ನು ಭೂಮಿ ಮೇಲೆ ಯಶಸ್ವಿಯಾಗಿ ಇಳಿಸುವ ಮಹತ್ವದ ಪರೀಕ್ಷೆಯೊಂದು ಮಂಗಳವಾರ ನಡೆಯಲಿದೆ. ರಾಕೆಟ್‌ಗಳನ್ನು ನಿರ್ಮಿಸುವ ಖಾಸಗಿ ಸಂಸ್ಥೆ ಸ್ಪೇಸ್ ಎಕ್ಸ್ ಈ ಪ್ರಯೋಗ ನಡೆಸಲಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಇತಿಹಾಸ ದಾಖಲಾಗಲಿದೆ. ಸಾಮಾನ್ಯವಾಗಿ ಉಪಗ್ರಹವನ್ನು ಹೊತ್ತು ಗಗನಕ್ಕೆ ನೆಗೆಯುವ ರಾಕೆಟ್ ನಂತರ ಸುಟ್ಟುಭಸ್ಮವಾಗುತ್ತದೆ. ಆದರೆ, ಸ್ಪೇಸ್ ಎಕ್ಸ್ ಈ ರಾಕೆಟ್‌ಗಳನ್ನು ಯಶಸ್ವಿಯಾಗಿ ಭೂಮಿ ಮೇಲೆ ಇಳಿಸಿ ಅವುಗಳನ್ನು ಮುಂದಿನ ಯೋಜನೆಗೆ ಮರುಬಳಕೆ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡಿದೆ. ಈ ಮೂಲಕ ಉಪಗ್ರಹ ಉಡ್ಡಯನ ಯೋಜನೆಗೆ ತಗಲುವ ವೆಚ್ಚವನ್ನು ಕಡಿಮೆಗೊಳಿಸುವುದು ಕಂಪನಿ ಗುರಿ. ಇದಕ್ಕಾಗಿ ಪ್ಲೋರಿಡಾದ ಕೇಪ್ ಕೆನವೆರಲ್ ಏರ್‌ಫೋರ್ಸ್ ಕೇಂದ್ರದಲ್ಲಿ ಫಾಲ್ಕೋನ್-9 ರಾಕೆಟ್ ಅನ್ನು ಉಡ್ಡಯನ ಮಾಡಲಾಗುವುದು. ಹಾಗೆ ಹಾರಿ ಬಿಡುವ ರಾಕೆಟನ್‌ನ ಮೊದಲ ಹಂತ ಭೂಮಿ ಮೇಲೆ ಯಶಸ್ವಿಯಾಗಿ ಇಳಿದರೆ, ಎರಡನೇ ಹಂತವು ಪೇಲೋಡ್‌ಗಳನ್ನು ಭೂಕಕ್ಷೆಯಲ್ಲಿ ಕೂರಿಸುವ ಕಾರ್ಯವನ್ನು ಮುಂದುವರಿಸಲಿವೆ. ತೇಲುವ ವೇದಿಕೆ: ಸಾಮಾನ್ಯವಾಗಿ ರಾಕೆಟ್‌ನ ಮೊದಲ ಹಂತ 14 ಮಹಡಿಗಳ ಕಟ್ಟದಷ್ಟು ಎತ್ತರವಿರುತ್ತದೆ. ಹಾಗಾಗಿ ಇಷ್ಟೊಂದು ಗಾತ್ರದ ರಾಕೆಟ್‌ನ ಮೊದಲ ಭಾಗ ಯಶಸ್ವಿಯಾಗಿ ಇಳಿಯಲು ಸಮುದ್ರದಲ್ಲಿ ತೇಲುವ ವೇದಿಕೆಯೊಂದನ್ನು ನಿರ್ಮಿಸಲಾಗದೆ. ಇದರ ಗಾತ್ರ 300 ಅಡಿ ಉದ್ದ ಹಾಗೂ 170 ಅಡಿ ಅಗಲ. ಅಗಸದಿಂದ ಕೆಳಗೆ ಬೀಳುವ ರಾಕೆಟ್‌ನ ಮೊದಲ ಭಾಗ ಸಮುದ್ರದಲ್ಲಿ ಇಳಿಯುವಾಗಿ ಯಾವುದೇ ಹಾನಿಯಾಗದಂತೆ ಈ ವೇದಿಕೆ ನೋಡಿಕೊಳ್ಳಲಿದೆ.