ಸ್ಮಾರ್ಟ್ ಬ್ರಷ್ ನಮಗೆ ಅತಿ ಬೇಜಾರಿನ ಕೆಲಸವೊಂದಿದೆ. ಬೆಳಗ್ಗೆ ಎದ್ದಕೂಡಲೇ ಹಲ್ಲುಜ್ಜಬೇಕು ಹಾಗೂ ರಾತ್ರಿ ಮಲುಗುವ ಮುಂಚೆ ಹಲ್ಲುಜ್ಜಬೇಕು. ಕೆಟ್ಟ ವಾಸನೆ ಬರದಿದ್ದರೇ ಎಷ್ಟೋ ಜನ ನಿತ್ಯ ಹಲ್ಲುಜ್ಜುವುದನ್ನೇ ಮರೆಯುತ್ತಿದ್ದರೇನೋ? ಇನ್ನು ಮಕ್ಕಳು ಯಾವುದಾದರು ಕೆಲಸದಿಂದ ಹೆಚ್ಚು ತಪ್ಪಿಸಿಕೊಳ್ಳಲು ಯತ್ನಿಸುವುದು ಎಂದರೆ ಬ್ರಷ್ ಮಾಡಲು. ಹೆಚ್ಚಿನ ಮನೆಯಲ್ಲಿ ನಿತ್ಯ ಇದಕ್ಕೆ ದೊಡ್ಡ ಸರ್ಕಸ್ ನಡೆಯುತ್ತದೆ. ಈಗ ಜಗತ್ತೇ ಸ್ಮಾರ್ಟ್ ಆಗುತ್ತಿರುವ ದಿನದಲ್ಲಿ ಫ್ರೆಂಚ್ ಕಂಪನಿಯೊಂದು ಸ್ಮಾರ್ಟ್ ಟೂತ್ ಬ್ರಷ್ ಅನ್ನು ರೂಪಿಸಿದೆ. ಲಾಸ್ ವೆಗಾಸ್‌ನಲ್ಲಿ ನಡೆಯುತ್ತಿರುವ ಜಾಗತಿಕ ಎಲೆಕ್ಟ್ರಾನಿಕ್ ಹಬ್ಬದಲ್ಲಿ ಸ್ಮಾರ್ಟ್ ಮನೆಯ ನಾನಾ ಪರಿಕರಗಳನ್ನು ಪ್ರದರ್ಶಿಸಲಾಗುತ್ತಿದೆ. ಈಗಾಗಲೇ ಬಂದಿರುವ ಸ್ಮಾರ್ಟ್ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಷಿನ್ ಜತೆ ಈಗ ಟೂತ್ ಬ್ರಷ್ ಕೂಡ ಸೇರಿಕೊಂಡಿದೆ. ಈ ಸ್ಮಾರ್ಟ್ ಟೂತ್‌ಬ್ರಷ್‌ನ ವೈಶಿಷ್ಟ್ಯಗಳನ್ನು ಗಮನಿಸಿದರೆ ಪಕ್ಕಾ ದಂತವೈದ್ಯರಂತೆಯೇ ಇದು ಕಾರ್ಯನಿರ್ವಹಿಸುತ್ತದೆ. ದಂತವೈದ್ಯಲೋಕದ ಕೆಲಸವನ್ನು ಇದು ಅಲ್ಪಮಟ್ಟಿಗೆ ಕಡಿಮೆ ಮಾಡಲಿದೆ. ಲಾಸ್ ವೆಗಾಸ್‌ನಲ್ಲಿ ನಡೆಯುತ್ತಿರವ ಎಲೆಕ್ಟ್ರಾನಿಕ್ ಹಬ್ಬದಲ್ಲಿ ಎಲ್ಲರ ಹುಬ್ಬೇರಿಸುವಂತಿದೆ. ಸ್ಮಾರ್ಟ್‌ಫೋನ್ ಹಾಗೂ ಎಲೆಕ್ಟ್ರಾನಿಕ್ ಟೂತ್‌ಬ್ರಷ್ ಮೂಲಕ ಇದು ಸ್ಮಾರ್ಟ್ ಬ್ರಷ್ ಆಗಿ ಕಾರ್ಯನಿರ್ವಹಿಸುತ್ತದೆ. ಸೆನ್ಸಾರ್ ತಂತ್ರಜ್ಞಾನವನ್ನು ಅಳವಡಿಸಿ ಈ ಸ್ಮಾರ್ಟ್ ಬ್ರಷ್ ರೂಪಿಸಲಾಗಿದೆ. ವೈ-ಫೈ ಅಥವಾ ಬ್ಲ್ಯೂಟೂತ್ ನೆರವಿನಿಂದ ಈ ಬ್ರಷ್ ನಮ್ಮ ಸ್ಮಾರ್ಟ್‌ಪೋನ್ ಅನ್ನು ಸಂಪರ್ಕಿಸುತ್ತದೆ. ನಾವು ಹೇಗೆ ಹಲ್ಲು ಉಜ್ಜುತ್ತಿದ್ದೇವೆ ಎಂದು ಸ್ಮಾರ್ಟ್‌ಫೋನ್ ಲೆಕ್ಕ ಹಾಕುತ್ತಿರುತ್ತದೆ. ಹಲ್ಲಿನ ವಸಡಿನ ಪ್ರತಿ ಮೂಲೆಗೂ ನೀವು ಬ್ರಷ್ ಅನ್ನು ತಾಕಿಸಿ ಉಜ್ಜಿದ್ದೀರೋ ಇಲ್ಲವೋ ಎನ್ನುವುದನ್ನು ಇದು ರೇಟಿಂಗ್ ಮಾಡುತ್ತದೆ. ಮೊಬೈಲ್‌ನಲ್ಲಿ ರೇಟಿಂಗ್ ಅನ್ನು ಗಮನಿಸಿಯೇ ಹಲ್ಲನ್ನು ಶುದ್ಧವಾಗಿ ಹಾಗೂ ಆರೋಗ್ಯವಾಗಿರಿಸಿಕೊಳ್ಳಲು ಸಾಧ್ಯವಿದೆ. ಇದರ ಮತ್ತೊಂದು ವಿಶೇಷವೆಂದರೆ ಹೇಗೆ ಹಲ್ಲು ಉಜ್ಜಬೇಕು ಎಂದು ಲೈವ್ ಸಲಹೆಗಳನ್ನು ಇದು ನೀಡುತ್ತದೆ. ಇದರಿಂದ ಯರ್ರಾಬಿರ್ರಿ ಹಲ್ಲು ಉಜ್ಜುವವರಿಗೆ ಶಿಕ್ಷಣವನ್ನು ನೀಡುತ್ತದೆ. ನೇರವಾಗಿ ಈ ಬ್ರಷ್ ದಂತವೈದ್ಯನಂತೆ ಕಾರ್ಯನಿರ್ವಹಿಸದಿದ್ದರೂ ನಿತ್ಯ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಂಡು ಹೋದರೆ ದಂತವೈದ್ಯರ ಅಗತ್ಯವೇ ಬೀಳದಿರಬಹುದು. ಇನ್ನೊಂದು ವಿಚಿತ್ರ ಅಪ್ಲಿಕೇಷನ್ ಅನ್ನು ಕಂಪನಿ ಅಭಿವೃದ್ಧಿಪಡಿಸುತ್ತಿದೆ. ಬ್ರಷ್ ಅನ್ನು ಸಮರ್ಪಕವಾಗಿ ಚಲಿಸಲು ಮಾರ್ಗದರ್ಶನ ನೀಡುವ ಸಲುವಾಗಿ ಅದಕ್ಕೆ ನೆರವಾಗುವಂತೆ ಮೊಬೈಲ್ ಗೇಮ್ ರೂಪಿಸಲಾಗುತ್ತಿದೆ. ಹಲ್ಲುಜ್ಜುತ್ತಲೇ ನಾವು ಬೆಳಗ್ಗೆ ಏಳುತ್ತಲೇ ಮೊಬೈಲ್‌ನಲ್ಲಿ ಗೇಮ್ ಆಡಬಹುದಾಗಿದೆ. ಇನ್ನೊಂದು ವರ್ಷದಲ್ಲಿ ಈ ಸ್ಮಾರ್ಟ್ ಬ್ರಷ್ ಅನ್ನು ಫೋಟೋಗ್ರಾಫರನ್ನಾಗಿ ರೂಪಿಸಲು ಕಂಪನಿ ಚಿಂತಿಸಿದೆ. ಈ ಪ್ರಕಾರ ಈ ಬ್ರಷ್‌ನಲ್ಲಿ ನಾಜೂಕಾದ ಕ್ಯಾಮೆರಾ ಕೂರಿಸಿ ಹಲ್ಲಿನ ವಸಡಿನ ಮೂಲೆಯನ್ನು ಪರೀಕ್ಷಿಸಲಾಗುತ್ತದೆ. ಯಾವುದೇ ಹುಳುಕು ಅಥವಾ ದಂತಕ್ಷಯವಾಗಿದ್ದರೇ ಕೂಡಲೇ ಇದು ಪತ್ತೆ ಹಚ್ಚಿ ಮೊಬೈಲ್‌ಗೆ ಫೋಟೋ ಸಮೇತ ಸಂದೇಶ ರವಾನಿಸುತ್ತದೆ. ಅಂದಹಾಗೆ, ಇದರ ಬೆಲೆ 6 ಸಾವಿರದಿಂದ 12 ಸಾವಿರ ರುಪಾಯಿ. ಬ್ರಷ್‌ನ ವೈಶಿಷ್ಟ್ಯಗಳನ್ನು ಆಧರಿಸಿ ಬೆಲೆ ನಿಗದಿಯಾಗುತ್ತದೆ. ಈ ವರ್ಷದ ಮಧ್ಯಭಾಗದೊಳಗೆ ಅಮೆರಿಕದಲ್ಲಿ ಇದು ಬಿಡುಗಡೆಯಾಗಲಿದ್ದು, ಅಲ್ಲಿ ದೊರೆಯುವ ಪ್ರತಿಕ್ರಿಯೆಯ ಬಳಿಕ ಇತರ ಮಾರುಕಟ್ಟೆಗೆ ವಿಸ್ತರಿಸಲಾಗುತ್ತದೆ. ಸ್ಮಾರ್ಟ್ ಹೋಮ್ ಮನೆಯಲ್ಲಿನ ಟಿವಿ ಈಗಾಗಲೇ ಸ್ಮಾರ್ಟ್ ಆಗಿದೆ. ವಾಷಿಂಗ್ ಮಷಿನ್, ರೆಫ್ರಿಜರೇಟರ್‌ಗಳೂ ಇದೇ ಸಾಲಿಗೆ ಸೇರಿದರೆ ಹೇಗಿರುತ್ತದೆ, ಒಮ್ಮೆ ಆಲೋಚಿಸಿ. ಈ ರೀತಿ ಇಂಟಿಗ್ರೇಟೆಡ್ ಸ್ಮಾರ್ಟ್ ಡಿವೈಸ್‌ಗಳ ತಯಾರಿಕೆಗೆ ಎಲ್‌ಜಿ ಹಾಗೂ ಸ್ಯಾಮ್‌ಸಂಗ್ ಕಂಪನಿಗಳು ಮುಂದಾಗಿವೆ. ನಿಮ್ಮ ಒಂದು ಮೊಬೈಲ್ ಮೂಲಕ ಮನೆಯಲ್ಲಿನ ಎಲ್ಲ ಡಿವೈಸ್‌ಗಳನ್ನು ನಿಯಂತ್ರಿಸಬಹುದು ಅಥವಾ ಸ್ಕ್ಯಾನ್ ಮಾಡಬಹುದು. ರೆಫ್ರಿಜರೇಟರ್‌ನಲ್ಲಿ ಏನೇನಿದೆ ಎಂದು ಸ್ಕ್ಯಾನ್ ಮಾಡಬಹುದು. ಖಾಲಿಯಾದ ತರಕಾರಿ, ಹಣ್ಣು ಹಾಗೂ ಆಹಾರ ಪದಾರ್ಥಗಳ ಪಟ್ಟಿಯನ್ನು ಅದೇ ತಯಾರಿಸುತ್ತದೆ. ಮತ್ತೊಂದು ವಿಶೇಷವೆಂದರೆ, ರಿಮೋಟ್ ಮೂಲಕ ಮನೆಯ ಯಾವುದೋ ಮೂಲೆಯಲ್ಲಿ ಕುಳಿತು ರೆಫ್ರಿಜರೇಟರ್‌ನಲ್ಲಿ ಏನಿದೆ ಎಂಬುದನ್ನು ತಿಳಿಯಬಹುದು. ಇದರೊಂದಿಗೆ ಬ್ಲ್ಯೂಟೂತ್ ಮೂಲಕ ಮ್ಯೂಸಿಕ್ ಕೇಳುವ ಅವಕಾಶವನ್ನು ನೀಡಲಾಗುತ್ತಿದೆ. ಇದರ ಕೆಲ ಫೀಚರ್‌ಗಳನ್ನು ವಾಷಿಂಗ್ ಮಷಿನ್‌ನಲ್ಲೂ ಅಳವಡಿಸಲಾಗಿದೆ. ಲಾಸ್ ವೆಗಾಸ್‌ನ ಮೇಳದಲ್ಲಿ ಇದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. -ರಾಧೆ