ಆನ್‌ಲೈನ್ ಸಂತೆ ಅತ್ಯುತ್ತಮ ಉತ್ಪನ್ನಗಳು ನಿಮ್ಮ ಬಳಿಯಿವೆ, ಆದರೆ ಅದಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತಲುಪಲು ಆಗುತ್ತಿಲ್ಲ ಅಥವಾ ಅಷ್ಟೊಂದು ಸಾಮರ್ಥ್ಯವಿಲ್ಲ ಎಂದು ಕೈಕಟ್ಟಿ ಕೂರಬೇಕಿಲ್ಲ. ಇದಕ್ಕಾಗಿಯೇ ಶಾಪ್‌ಕ್ಲ್ಯೂಸ್ ಎಂಬ ಇ-ವಾಣಿಜ್ಯ ಕಂಪನಿಯೊಂದು ಹುಟ್ಟಿಕೊಂಡಿದೆ. ಆನ್‌ಲೈನ್ ಸಂತೆಯೆನ್ನಬಹುದು ಇದಕ್ಕೆ. ಅಮೆರಿಕದಲ್ಲಿ ಸಾಫ್ಟವೇರ್ ಎಂಜಿನಿಯರ್‌ಗಳಾಗಿದ್ದ ಯುವ ಪಡೆಯೊಂದು ಗುರ್‌ಗಾಂವ್‌ನಲ್ಲಿ ಶಾಪ್‌ಕ್ಲ್ಯೂಸ್ ಆರಂಭಿಸಿದೆ. ಭಾರತದ ಕಿರಾಣಿ ಅಂಗಡಿಗಳನ್ನು ತಲೆಯಲ್ಲಿರಿಸಿಕೊಂಡು ಇಂತಹದೊಂದು ವ್ಯವಸ್ಥೆ ಜಾರಿಗೆ ತರಲು ಈ ಯುವಕರು ನಿರ್ಧರಿಸಿದ್ದರು. ಸುಮಾರು ಮೂರು ವರ್ಷಗಳ ಹಿಂದೆ ಅಮೆರಿಕದ ಸಿಲಿಕಾನ್ ವ್ಯಾಲಿಯಿಂದ ದೆಹಲಿಗೆ ಬಂದ ಸಂದೀಪ್ ಅಗರವಾಲ್ ಅವರ ತಂಡ ಹೊಸ ಪ್ರಯೋಗಕ್ಕೆ ಮುಂದಾಯಿತು. ಭಾರತೀಯ ಮಾರುಕಟ್ಟೆ ಪರಂಪರೆಯನ್ನು ಇ-ಶಾಪಿಂಗ್‌ನಲ್ಲಿಯೂ ಉಳಿಸಬೇಕು ಎನ್ನುವುದು ಇವರ ಲೆಕ್ಕಾಚಾರವಾಗಿತ್ತು. ಆನ್‌ಲೈನ್ ಮಾರುಕಟ್ಟೆಗೆ ಬರುವ ವ್ಯಕ್ತಿಯು ಅಲ್ಲಿರುವ ನಿಗದಿತ ಉತ್ಪನ್ನಗಳಿಗೆ ಜೋತು ಬೀಳಬೇಕಾಗುತ್ತದೆ. ಬಹುತೇಕ ಆನ್‌ಲೈನ್ ಮಾರುಕಟ್ಟೆಗಳಲ್ಲಿ ದೊಡ್ಡ ಬ್ರಾಂಡ್‌ಗಳ ಉತ್ಪನ್ನಗಳು ದೊರೆಯುತ್ತವೆ. ಇಲ್ಲಿ ಯಾವುದೋ ಒಂದು ಪ್ರದೇಶಗಳ ಯಶಸ್ವಿ ಹಾಗೂ ಖ್ಯಾತ ಉತ್ಪನ್ನಗಳು ಸಿಗುತ್ತವೆ. ಸಂಸ್ಥೆಯ ಆಕರ್ಷಕ ಅಂಶವೆಂದರೆ ದೇಶದ ಮೂಲೆಮೂಲೆಯಲ್ಲಿರುವ ಸಣ್ಣ ವ್ಯಾಪಾರಿಗಳಿಗೆ ವೇದಿಕೆಯಾಗುತ್ತಿದೆ. ಉತ್ತರ ಕನ್ನಡದ ಯಾವುದೋ ಹಳ್ಳಿಯಲ್ಲಿ ಬ್ಯಾಗ್ ತಯಾರಿಸುತ್ತದ್ದರೆ, ಆ ಉದ್ಯಮಿ ಮಾರುಕಟ್ಟೆ ಇಲ್ಲದೇ ಸೊರಗುತ್ತಿರಬಹುದು. ಆಗ ಶಾಪ್‌ಕ್ಲ್ಯೂಸ್ ವೆಬ್‌ಸೈಟ್ ಸಂಪರ್ಕಿಸಿ ಆನ್‌ಲೈನ್ ಸಂತೆಗೆ ಎಂಟ್ರಿ ಪಡೆಯಬಹುದು. ಉಚಿತವಾಗಿ ಸಂತೆ ನಡೆಸಲು ಇಲ್ಲಿ ಸ್ಥಳಾವಕಾಶ ದೊರೆಯುತ್ತದೆ. ಆ ನಂತರ ಮಾರಾಟದ ಬಳಿಕ ಶಾಪ್‌ಕ್ಲ್ಯೂಸ್ ಸಂಸ್ಥೆಗೆ ಒಂದಿಷ್ಟು ಕಮೀಷನ್ ನೀಡಿದರಾಯಿತು. ಒಮ್ಮೆ ಶಾಪ್‌ಕ್ಲ್ಯೂಸ್‌ನ ಸಿಬ್ಬಂದಿಗಳನ್ನು ಸಂಪರ್ಕಿಸಿದ ಬಳಿಕ ದಾಖಲೆ ಪರಿಶೀಲನೆ ಮಾಡುತ್ತಾರೆ. ಶಾಪ್‌ಕ್ಲ್ಯೂಸ್‌ನ ವೇದಿಕೆ ಮೂಲಕ ಮಾರುತ್ತಿದ್ದರೂ ಆಯಾ ಉದ್ಯಮಿಯ ಬ್ರಾಂಡ್‌ನಲ್ಲೇ ಉತ್ಪನ್ನ ಮಾರಾಟವಾಗುವುದರಿಂದ ಪ್ರತಿಯೊಬ್ಬ ವ್ಯಾಪಾರಿಯೂ ತನ್ನ ಹೆಸರು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾನೆ ಎನ್ನುವುದು ಸಂಸ್ಥೆಯ ವಾದವಾಗಿದೆ. ಈ ಸಂಸ್ಥೆಯ ವಿಶೇಷತೆಯೆಂದರೆ ಶಾಪ್‌ಕ್ಲ್ಯೂಸ್ ಕಚೇರಿಯಿಂದ ಗ್ರಾಹಕರಿಗೆ ಡೆಲಿವರಿಯಾಗುವ ಉತ್ಪನ್ನಗಳ ಪ್ರಮಾಣವೂ ಕಡಿಮೆ. ನೇರವಾಗಿ ವ್ಯಾಪಾರಿಗಳ ಮೂಲಕವೇ ಗ್ರಾಹಕರಿಗೆ ಉತ್ಪನ್ನ ತಲುಪುತ್ತದೆ. ಆದರೆ ಸುರಕ್ಷಿತ ಡೆಲಿವರಿ ಹಾಗೂ ಹಣ ಸಂದಾಯಕ್ಕೆ ಸಂಸ್ಥೆ ಗ್ಯಾರಂಟಿಯಾಗಿ ನಿಲ್ಲುತ್ತದೆ. 'ಭಾರತೀಯ ಇ-ಕಾಮರ್ಸ್‌ನ್ನು ಬದಲಿಸುವ ಗುರಿಯಿದೆ. ಒಂದು ಕಿರಾಣಿ ಅಂಗಡಿಗೆ ಹೋಗಿ ಜನ ಹೇಗೆ ವ್ಯವರಿಸುತ್ತಾರೋ ಅದೇ ರೀತಿಯಲ್ಲಿ ಆನ್‌ಲೈನ್ ಶಾಪಿಂಗ್ ಮಾಡಬೇಕು ಎನ್ನುವುದು ನಮ್ಮ ಗುರಿ. ಆದ್ದರಿಂದ ಪ್ರತಿಯೊಂದು ಸಂಸ್ಕೃತಿ, ಪರಂಪರೆಯ ಉತ್ಪನ್ನ ಸೇರಿದಂತೆ ಎಲ್ಲವೂ ನಮ್ಮಲ್ಲಿ ಇರಬೇಕು ಎಂದು ಬಯಸುತ್ತೇವೆ. ಎಷ್ಟೇ ವ್ಯಾಪಾರಿಗಳು ಬಂದರೂ ಸ್ವಾಗತಿಸುತ್ತೇವೆ. ಈಗಾಗಲೇ 50 ಸಾವಿರಕ್ಕೂ ಅಧಿಕ ವ್ಯಾಪಾರಿಗಳು ನಮ್ಮೊಂದಿಗೆ ತೊಡಗಿಕೊಂಡಿದ್ದಾರೆ' ಎನ್ನುತ್ತಾರೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಿಕಾ ಅಗರ್‌ವಾಲ್.