ಇಸಿಸ್ ಸಂಪರ್ಕ ಹಿನ್ನಲೆ: 10 ಸಾವಿರ ಟ್ವಿಟರ್ ಖಾತೆ ರದ್ದು..! ಇಸ್ಲಾಮಿಕ್ ಸ್ಟೇಟ್ಸ್ ಇನ್ ಇರಾಕ್ ಅಂಡ್ ಸಿರಿಯಾ (ಇಸಿಸ್) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಸುಮಾರು 10 ಸಾವಿರ ಟ್ವಿಟರ್ ಖಾತೆಗಳನ್ನು ಒಂದೇ ದಿನದಲ್ಲಿ ರದ್ದುಗೊಳಿಸಲಾಗಿದೆ... ನ್ಯೂಯಾರ್ಕ್: ಇಸ್ಲಾಮಿಕ್ ಸ್ಟೇಟ್ಸ್ ಇನ್ ಇರಾಕ್ ಅಂಡ್ ಸಿರಿಯಾ (ಇಸಿಸ್) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಸುಮಾರು 10 ಸಾವಿರ ಟ್ವಿಟರ್ ಖಾತೆಗಳನ್ನು ಒಂದೇ ದಿನದಲ್ಲಿ ರದ್ದುಗೊಳಿಸಲಾಗಿದೆ ಎಂದು ಪ್ರಮುಖ ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್ ಹೇಳಿದೆ. ಇಸಿಸ್ ಉಗ್ರ ಸಂಘಟನೆಯನ್ನು ಬೆಂಬಲಿಸಿ ಟ್ವೀಟ್ ಗಳನ್ನು ಹರಿಬಿಡುತ್ತಿದ್ದ ಸುಮಾರು 10 ಸಾವಿರ ಖಾತೆಗಳು ದಿಢೀರ್ ರದ್ದಾಗಿದ್ದು, ಕಳೆದ ವಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ತಾಂತ್ರಿಕ ತೊಂದರೆಯಿಂದ ಈ ಖಾತೆಗಳು ಚಾಲ್ತಿಗೊಳ್ಳುತ್ತಿಲ್ಲ ಎಂದು ಊಹಿಸಲಾಗಿತ್ತು. ಆದರೆ ಇದೀಗ ಈ ಖಾತೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಉಗ್ರ ಸಂಘಟನೆ ಇಸಿಸ್ ಪರ ಬೆಂಬಲವನ್ನಿತ್ತು ಟ್ವೀಟ್ ಮಾಡುತ್ತಿದ್ದ ಹಿನ್ನಲೆಯಲ್ಲಿ ಈ ಎಲ್ಲ 10 ಸಾವಿರ ಖಾತೆಗಳನ್ನು ರದ್ದುಗೊಳಿಸಲಾಗಿದೆ ಎಂದು ಟ್ವಿಟರ್ ಹೇಳಿದೆ. ಸಾಮಾಜಿಕ ಮಾಧ್ಯಮ ನೆಟ್ ವರ್ಕ್ಸ್ ನ ಕಾನೂನು ಇಲಾಖೆಯು ಇದೇ ಏಪ್ರಿಲ್ 2ರಂದು 10 ಸಾವಿರಖಾತೆಗಳನ್ನು ರದ್ದು ಮಾಡಿದೆ. ಕಾನೂನು ಉಲ್ಲಂಘನೆ ಮಾಡಿ ಪರೋಕ್ಷ ಬೆದರಿಕೆ ಟ್ವೀಟ್ ಮಾಡಿದ ಹಿನ್ನಲೆಯಲ್ಲಿ ಈ ಖಾತೆಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ. ಈ ಮೊದಲು ಕೂಡ ಇದೇ ಇಸಿಸ್ ಉಗ್ರ ಸಂಘಟನೆಯನ್ನು ಬೆಂಬಲಿಸಿ ಸರಣಿ ಟ್ವೀಟ್ ಮಾಡುತ್ತಿದ್ದ ಸುಮಾರು 2 ಸಾವಿರ ಖಾತೆಗಳನ್ನು ರದ್ದುಪಡಿಸಲಾಗಿತ್ತು. ಇನ್ನು ಟ್ವಿಟರ್ ಸಂಸ್ಥೆ ಈ ಹಿಂದೆಯೂ ಕೂಡ ಸಾಕಷ್ಟು ಭಾರಿ ಇಂತಹ ಉಗ್ರ ಸಂಘಟನೆ ಬೆಂಬಲಿತ ಖಾತೆಗಳನ್ನು ರದ್ದುಪಡಿಸಿತ್ತಾದರೂ, ಅದೇ ಖಾತೆದಾರರು ಬೇರೆ ಬೇರೆ ಹೆಸರುಗಳಲ್ಲಿ ಮತ್ತೆ ಮತ್ತೆ ಖಾತೆಗಳನ್ನು ತೆರೆಯುತ್ತಿದ್ದರು. ಟರ್ಜುಮಾನ್ ಎಂಬ (@turjuman123) ಎಂಬ ಖಾತೆದಾರ 123 ಬಾರಿ ಖಾತೆ ತೆರೆದಿದ್ದ. ಪ್ರಚೋದನಾತ್ಮಕ ಟ್ವೀಟ್ ಗಳ ಹಿನ್ನಲೆಯಲ್ಲಿ ಆತನ ಈ ಹಿಂದಿನ 122 ಖಾತೆಗಳನ್ನು ಟ್ವಿಟರ್ ರದ್ದು ಮಾಡಿತ್ತು. ಪ್ರಸ್ತುತ ಆತ 123ನೇ ಖಾತೆಯನ್ನು ಬಳಕೆ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.