ಅಂದದ ನುಡಿ 'ಸರಳ ನುಡಿ' ಈಗ ಇನ್ನಷ್ಟು ಸರಳ! ಕನ್ನಡ ಅಕ್ಷರ ಕೀಲಿಮಣೆಯಲ್ಲಿ ಹೊಸ ಕ್ರಾಂತಿ ಮೂಡಿಸಿದ್ದ ನುಡಿ ತಂತ್ರಾಂಶದ ಸುಧಾರಿತ ಮಾದರಿ ಈಗ ನುಡಿ 5.0. ಯುನಿಕೋಡ್‌ನಲ್ಲಿ ಅಲ್ಪಸ್ವಲ್ಪ ಸಮಸ್ಯೆಗಳಿದ್ದರೂ ಕನ್ನಡವನ್ನು ವೆಬ್‌ತಾಣದಲ್ಲಿ ಓದಲು ಸಹಕಾರಿಯಾಗಿದ್ದು ಇದೇ ನುಡಿ ತಂತ್ರಾಂಶದಿಂದ. ಇದಾದ ಬಳಿಕ ಸಾಕಷ್ಟು ಯುನಿಕೋಡ್ ತಂತ್ರಜ್ಞಾನಗಳು ಮಾರುಕಟ್ಟೆಗೆ ಬಂದವು. ಗೂಗಲ್ ಕನ್ನಡವೂ ಬಳಕೆಗೆ ಬಂತು. ಆದರೆ ಉಚಿತವಾಗಿ ಹಾಗೂ ಎಲ್ಲ ಕಡೆಗಳಲ್ಲೂ ಚಿರಪರಿಚಿತವಾಗಿದ್ದು ಮಾತ್ರ ನುಡಿ ತಂತ್ರಾಂಶ. ನುಡಿ ತಂತ್ರಾಂಶದ ಹಿಂದಿನ 2 ಮಾದರಿಗಳಲ್ಲಿನ ಅಡಚಣೆ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ನುಡಿ 5.0ರಲ್ಲಿ ಹೋಗಲಾಡಿಸುವ ಪ್ರಯತ್ನ ಮಾಡಲಾಗಿದೆ. ಸುಧಾರಿತ ತಂತ್ರಾಂಶದಲ್ಲಿ ಒಟ್ಟು 140 ಅಕ್ಷರ ವಿನ್ಯಾಸಗಳಿದ್ದು, ಕನ್ನಡದ 12 ಹೊಸ ಅಕ್ಷರ ಶೈಲಿಯೂ ಸೇರ್ಪಡೆಯಾಗಿದೆ. ಇದಲ್ಲದೇ ಯುನಿಕೋಡ್‌ನಲ್ಲಿಯೂ 10 ಮಾದರಿಗಳು ಬಿಡುಗಡೆಯಾಗಿವೆ. ನುಡಿ 5.0ರ ಮತ್ತೊಂದು ವಿಶೇಷವೆಂದರೆ ಎಂಎಸ್ ವರ್ಡ್ ಅಥವಾ ಇತರ ತಂತ್ರಾಂಶಗಳಲ್ಲಿ ಬರೆಯುವಾಗಲೇ ಪದ ಪರೀಕ್ಷೆ ನಡೆಸಬಹುದು. ನುಡಿ 5.0 ತಂತ್ರಾಂಶದ ಪದಪರೀಕ್ಷಕದಲ್ಲಿ ಸುಮಾರು 1.50 ಲಕ್ಷ ಪದಗಳಿವೆ. ನುಡಿ 4 ಮಾದರಿಯ ತಂತ್ರಾಂಶವು ವಿಂಡೋಸ್ 7 ಮತ್ತು ವಿಂಡೋಸ್ 8ಗೆ ಅಷ್ಟು ಸಹಾಯಕಾರಿಯಾಗಿರಲಿಲ್ಲ. ಅವೆಲ್ಲ ನ್ಯೂನತೆಗಳನ್ನು ಸರಿಪಡಿಸಿ ಇದನ್ನು ಸುಧಾರಿಸಲಾಗಿದೆ. ನುಡಿ 5.0ರ ವಿಶೇಷಗಳು ನುಡಿ 19ರಿಂದ ನುಡಿ 28, ನುಡಿ ಕೆವಿಕೆ, ನುಡಿ ವೆಬ್ 01ಕೆ ಸೇರಿದಂತೆ 12 ಹೊಸ ಅಕ್ಷರ ಶೈಲಿಗಳನ್ನು ಒಳಗೊಂಡಿದೆ. ಕೋರಲ್ ಡ್ರಾ ಹಾಗೂ ಇತರ ಡಿಸೈನಿಂಗ್ ತಂತ್ರಾಂಶಗಳಲ್ಲಿ ಸರಾಗವಾಗಿ ನಿರ್ವಹಿಸಲು ಉಪಯೋಗವಾಗುವಂತೆ ಸುಧಾರಿಸಲಾಗಿದೆ. ಸಂಗೀತಕ್ಕಾಗಿ ಸ್ವರ ಚಿಹ್ನೆ ಹಾಗೂ ವೇದ ಮಂತ್ರಗಳಿಗಾಗಿ ವೈದಿಕ್ ಅಕ್ಷರ ಶೈಲಿ ನೀಡಲಾಗಿದೆ. ಅಕ್ಷರ ವಿಂಗಡಗಳಿಗಿದ್ದ ನ್ಯೂನತೆಗಳನ್ನು ಬಗೆಹರಿಸಲಾಗಿದೆ. ಪದ ಪರೀಕ್ಷಕ ಸಾಮರ್ಥ್ಯವನ್ನು 1.50 ಲಕ್ಷ ಪದಕ್ಕೆ ಏರಿಸಲಾಗಿದೆ. ನುಡಿ 4ರಲ್ಲಿದ್ದ ಎಲ್ಲ ಅಂಶಗಳು ಹಾಗೆಯೇ ಉಳಿಯುತ್ತವೆ. ಯುನಿಕೋಡ್ ಬಳಕೆ ಮತ್ತಷ್ಟು ಸುಲಭವಾಗಲಿದೆ.