ಸಿನಿಮಾ ಆಯ್ತು, ಈಗ 3ಡಿ ಮನೆ! ಇದು 3ಡಿ ಜಮಾನ. 3ಡಿ ಪುಸ್ತಕ, 3ಡಿ ಸಿನೆಮಾ, 3ಡಿ ಟೀವಿ ಆಯ್ತು, ಈಗ 3ಡಿ ಮನೆಯೊಂದು ಲಂಡನ್‌ನಲ್ಲಿ ನಿರ್ಮಾಣವಾಗಲಿದೆ. ಹೌದು. ಹಾಲೆಂಡ್‌ನ ಆರ್ಕಿಟೆಕ್ಟ್ ಜಾನಿಯಾಪ್ ರೂಯಿಸ್ಸೆನಾರ್ಸ್ ಎಂಬಾತ ಇಂಥ ಅಪರೂಪದ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಮನೆಗೆ 35 ಕೋಟಿ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಈಗಾಗಲೇ ಜಾನಿಯಾಪ್ ಅವರು 3ಡಿ ಪ್ರಿಂಟಿಂಗ್ ತಜ್ಞ ಎನ್ರಿಕೋದಿನಿ ಅವರ ಜತೆ ಕೆಲಸ ಮಾಡುತ್ತಿದ್ದಾರೆ. ಎನ್ರಿಕೋದಿನಿ ಬಳಿ ಇರುವ 3ಡಿ ಪ್ರಿಂಟರ್ ಮಾರ್ಬಲ್‌ನಂಥ ವಸ್ತುವನ್ನು ಸೃಷ್ಟಿಸಲು ಮರಳು ಹಾಗೂ ವಿಶೇಷ ಬೈಂಡಿಂಗ್ ಏಜೆಂಟ್ ಅನ್ನು ಬಳಸುತ್ತದೆ. ಇದು ಸಿಮೆಂಟ್‌ಗಿಂತ ಹೆಚ್ಚು ಬಲಿಷ್ಠವಾಗಿರಲಿದೆಯಂತೆ. ಸಾಂಪ್ರದಾಯಿಕ ಮನೆ ನಿರ್ಮಾಣಕ್ಕೆ ಹೋಲಿಸಿದರೆ 3ಡಿ ಮನೆ ನಿರ್ಮಾಣ ವಿಭಿನ್ನವಾಗಿರಲಿದೆ. ಈ ರೀತಿಯ ಮನೆಗಳಿಗೆ ಸಿಮೆಂಟ್ ಬಳಕೆಯೂ ಕಡಿಮೆ ಅಲ್ಲದೆ, ಸಮಯದ ಉಳಿತಾಯವೂ ಆಗಲಿದೆ. ಅಂದ ಹಾಗೆ, ಜಾನಿಯಾಪ್ ಅವರ ಕನಸಿನ 'ಭೂದೃಶ್ಯ'ದ 3ಡಿ ಮನೆ 2014ರಲ್ಲಿ ಸಿದ್ಧವಾಗಲಿದೆಯಂತೆ.