ಫುಡ್ ವಾರ್ನಿಂಗ್ ಮಳೆ, ಚಳಿಗಾಲದಲ್ಲಿ ಆಹಾರ ಪದಾರ್ಥಗಳನ್ನು ಕಾಪಾಡೋದೇ ದೊಡ್ಡ ಸರ್ಕಸ್. ಇಂಥ ತಂಪು ವಾತಾವರಣದಲ್ಲಿ... ಮಳೆ, ಚಳಿಗಾಲದಲ್ಲಿ ಆಹಾರ ಪದಾರ್ಥಗಳನ್ನು ಕಾಪಾಡೋದೇ ದೊಡ್ಡ ಸರ್ಕಸ್. ಇಂಥ ತಂಪು ವಾತಾವರಣದಲ್ಲಿ ತರಕಾರಿ, ಹಣ್ಣುಗಳು ಮತ್ತು ಮಾಂಸದ ಮೇಲೆ ಸೂಕ್ಷ್ಮಾಣು ಜೀವಿಗಳು ಅಂಟಿಕೊಂಡು ಹಾಳುಗೆಡವುತ್ತವೆ. ಪದಾರ್ಥಗಳಲ್ಲಿನ ಜೀವಸತ್ವ ಕಣಗಳನ್ನು ಬ್ಯಾಕ್ಟೀರಿಯಾಗಳು ಹಾಳುಮಾಡಿ, ದುರ್ವಾಸನೆಯನ್ನೂ ಹೊರಡಿಸುತ್ತವೆ. ಇದನ್ನು ಸೇವಿಸಿದರೆ ಆರೋಗ್ಯ ಕ್ಷೀಣಿಸುವುದು ನಿಶ್ಚಿತ. ಆದರೆ, ಶಿಲೀಂಧ್ರ (ಫಂಗಸ್) ಆಹಾರ ಪದಾರ್ಥವನ್ನು ವಿಕಾರಕ್ಕೆ ತಂದರೂ ಅಷ್ಟೊಂದು ಅಪಾಯಕಾರಿಯಲ್ಲ. ಹಾಳಾಗುವ ಲಕ್ಷಣಗಳು ಹಣ್ಣು, ತರಕಾರಿ, ಒಣಗಿದ ಆಹಾರ ಪದಾರ್ಥದ ಮೇಲೆ ನಾರಿನಂತೆ ಎಳೆಎಳೆಯಾಗಿ ಹೊಟ್ಟು ಕಾಣಿಸಿಕೊಳ್ಳುವುದು. ಕಂದುಬಣ್ಣಕ್ಕೆ ತಿರುಗುವುದು. ಇದನ್ನು 'ಶಿಲೀಂಧ್ರ ಜಾಲದ ತಂತು' ಎಂದೂ ಕರೆಯಲಾಗುತ್ತದೆ. ಜೀವಸತ್ವ ಕಣಗಳು ದ್ರವರೂಪಕ್ಕೆ ತಿರುಗಿ ಸೋರತೊಡಗುತ್ತವೆ. ಗೂಡು ಕಟ್ಟುತ್ತವೆ. ಪದಾರ್ಥ ಮೃದುವಾಗುತ್ತ ಸಾಗುತ್ತದೆ. ನಂತರ ಪಾಚಿಗಟ್ಟಿ ಹಾಳಾಗುತ್ತದೆ. ಶಿಲೀಂಧ್ರಗಳು ವ್ಯಾಪಿಸಿದ ಸ್ಥಳದಲ್ಲಿ ಮೊದಲು ಪಾಚಿ, ಹೊಟ್ಟಿನಂತೆ ಕಾಣಿಸಿಕೊಂಡು ನಂತರ ವಸ್ತುವಿನ ಒಳಭಾಗಕ್ಕೆ ಶಿಲೀಂದ್ರ ಜಾಲದ ತಂತುಗಳು ವ್ಯಾಪಿಸುತ್ತವೆ. ಆದರೆ ಬ್ಯಾಕ್ಟೀರಿಯಾ, ಸೂಕ್ಷ್ಮಾಣುಜೀವಿಗಳು ಪದಾರ್ಥದ ಒಳಭಾಗದಲ್ಲಿ ಮೊದಲು ವ್ಯಾಪಿಸಿ ಅದನ್ನು ವಿವರ್ಣಗೊಳಿಸಿ, ಅಂಟಾಗಿಸಿ, ದುರ್ವಾಸನೆ ಬರುವಂತೆ ಮಾಡುತ್ತವೆ. ಕೊಳೆಯದಿರಲು ಕಾರಣ ಕೆಲ ಹಣ್ಣು ಮತ್ತು ತರಕಾರಿ ಕೊಳೆಯುವುದು ತುಂಬಾ ಅಪರೂಪ. ಏಕೆಂದರೆ ಇವುಗಳಲ್ಲಿ ಬ್ಯಾಕ್ಟೀರಿಯಾ, ಸೂಕ್ಷ್ಮಾಣು ಜೀವಿಗಳನ್ನು ಪ್ರತಿರೋಧಿಸುವ ಶಕ್ತಿ ಇರುತ್ತದೆ. ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಬಾಧಿಸುವುದು ತೇವವಿರುವ ಹಾಗೂ ಒದ್ದೆಯಾಗಿರುವ ಪದಾರ್ಥಗಳಲ್ಲಿ. ಅದಕ್ಕೇ ಒಣಗಿದ ಆಹಾರ ಪದಾರ್ಥ, ಪರಾಸರಣ(ಆಸ್ಮೋಸಿಸ್), ಸಿಹಿ ಮತ್ತು ಲವಣಾಂಶ ಅಧಿಕವಾಗಿರುವಲ್ಲಿ ತಮ್ಮ ಕೈಚಳಕ ತೋರಲು ಆಗದು. ಅದಕ್ಕಾಗಿ ಬಾಳೆಹಣ್ಣು ಮತ್ತು ಸೇಬು ಇವುಗಳಿಂದ ಮುಕ್ತವಾಗಿರುತ್ತವೆ. ಗಮನಾರ್ಹ ಅಂಶವೆಂದರೆ, 5 ಸಾವಿರ ವರ್ಷಗಳ ಹಿಂದೆ ಈಜಿಪ್ಟರ ಕಾಲದಲ್ಲಿನ ಜೇನುತುಪ್ಪ ವೈಜ್ಞಾನಿಕವಾಗಿ ಈಗಲೂ ತಿನ್ನಲು ಯೋಗ್ಯವಾಗಿದೆ. ಇದಕ್ಕೆ ಕಾರಣ ಅದರಲ್ಲಿ ಸಿಹಿ ಪ್ರಮಾಣ ಅಧಿಕವಿರುವುದು. ಮಾಂಸ ಮತ್ತು ಕ್ರಿಮಿ ಮಾಂಸಕ್ಕೂ ಮತ್ತು ಕ್ರಿಮಿಗಳಿಗೂ ಅವಿನಾಭಾವ ಸಂಬಂಧ. ಏಕೆಂದರೆ ನೀರು, ದ್ರಾವಣ ಮತ್ತು ಕೊಬ್ಬಿನಂಶ ಅಧಿಕವಿರುವ ಮಾಂಸದಲ್ಲಿ ಸೂಕ್ಷ್ಮಾಣುಜೀವಿಗಳು ಬೇಗನೆ ಉತ್ಪತ್ತಿಯಾಗುತ್ತವೆ. ಹೆಣ್ಣು ಕ್ರಿಮಿಗಳು ನಿಮಿಷಕ್ಕೆ ಸುಮಾರು 150ರಿಂದ 200ರಷ್ಟು ಲಾರ್ವಾ(ಮೊಟ್ಟೆ)ಗಳನ್ನು ಹಾಕುತ್ತವೆ. ಈ ಲಾರ್ವಾಗಳು 24 ಗಂಟೆಗಳಲ್ಲೇ ಕ್ರಿಮಿಗಳಾಗಿ ಹೊರಬರುತ್ತವೆ. ಇವುಗಳು ಮಾಂಸದಲ್ಲಿರುವ ಕಿಣ್ವಗಳನ್ನು ಶೀಘ್ರದಲ್ಲೇ ಅವಸಾನಗೊಳಿಸುತ್ತವೆ. ರಕ್ಷಣಾ ಕಾರ್ಯ ಹೇಗೆ? ಆಹಾರ ಪದಾರ್ಥದ ಕೊಳೆಯುವಿಕೆ, ವಿಷಯುಕ್ತವಾಗುವುದನ್ನು ತಪ್ಪಿಸಲು ಮುಖ್ಯವಾಗಿ 3 ಅಂಶಗಳನ್ನು ಗಮನದಲ್ಲಿಡಬೇಕು. ಸೂಕ್ಷ್ಮಾಣು ಜೀವಿಗಳ ತಡೆ (ಆಂಟಿ ಮೈಕ್ರೋಬ್ಸ್), ಗಾಳಿ (ಆಕ್ಸಿಜನ್) ಮತ್ತು ಕಿಣ್ವಗಳು(ಎಂಜಿಮ್ಸ್). ಮೈಕ್ರೋಬ್ಸ್- ಯಾವ ಆಹಾರದಲ್ಲಿ ಸೂಕ್ಷ್ಮಾಣು ಜೀವಿ ಹಾಗೂ ಫಂಗಸ್ ಪ್ರತಿರೋಧಕ ಅಂಶವಿರುವುದಿಲ್ಲವೋ ಅದರಲ್ಲಿ ಲವಣಾಂಶ ಮತ್ತು ಸಿಹಿಯನ್ನು ಬೇರ್ಪಡಿಸಬೇಕು. ಇದರಿಂದ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುವುದಿಲ್ಲ. ಅಲ್ಲದೆ ಆಸ್ಮಾಸಿಸ್ಸೂ ಇವುಗಳನ್ನು ಪ್ರತಿರೋಧಿಸುತ್ತದೆ. ಆಹಾರಕ್ಕೆ ಪೂರಕ ವಾತಾವರಣವನ್ನು ಸೃಷ್ಚಿಸುತ್ತದೆ. ಆಕ್ಸಿಜನ್- ಆಹಾರ ರಕ್ಷಣೆಯಲ್ಲಿ ಇದು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರ ಪದಾರ್ಥ ಹಾಳಾಗಲು ಆಕ್ಸೈಡೇಷನ್ ಕಾರಣವಾಗುತ್ತದೆ. ಕೊಬ್ಬಿನಾಂಶವೇ ತುಂಬಿಕೊಂಡಿರುವ ಬೆಣ್ಣೆ ಮತ್ತು ಎಣ್ಣೆಯಲ್ಲಿ ಆಕ್ಸೈಡ್ ಸೇರಿದಂತೆ ಕಮಟು ವಾಸನೆ ಬರುತ್ತದೆ. ಇದನ್ನು ಆಕ್ಸಿಜನ್‌ನಿಂದ ತಡೆಯಲು ಸಾಧ್ಯ. ಆಕ್ಸೈಡ್ ನಿರೋಧಕ ಕಣಗಳನ್ನು ಬೇರ್ಪಡಿಸಿದರೆ ಕೊಬ್ಬಿನಾಮ್ಲದ ಪದಾರ್ಥಗಳು ತಮ್ಮ ಮೂಲ ಸ್ವರೂಪಕ್ಕೆ ಬರುತ್ತವೆ. ಎಂಜಿಮ್ಸ್- ಕಿಣ್ವಗಳ ಕಾರ್ಯ ಅತಿ ಮಹತ್ವದ್ದು. ಇವುಗಳು ಅತ್ಯಂತ ಸಂವೇದನಾಶೀಲವಾಗಿ ಆಹಾರವನ್ನು ಬದಲಾಯಿಸುತ್ತದೆ. ಅಲ್ಲದೆ ವಿಟಾಮಿನ್ 'ಇ' ಮತ್ತು ಸಿಟ್ರಿಕ್ ಆಮ್ಲ ಹೆಚ್ಚುವುದನ್ನು ಪ್ರತಿರೋಧಿಸುತ್ತದೆ. ಆಹಾರ ಯಾವಾಗ ಉತ್ತಮ? ಆಹಾರ ಪದಾರ್ಥದ ಪೊಟ್ಟಣದ ಮೇಲೆ ಬರೆದಿರುವ ದಿನಾಂಕದೊಳಗೇ ಸೇವಿಸಿ. ಅದರ ಅವಧಿ ಮೀರಿದರೆ ಆಹಾರ ಸತ್ವ ಕಳೆದುಕೊಂಡು ಕ್ರಿಮಿಗಳ ಕೈವಶವಾಗಿರುತ್ತೆ. ಅಲ್ಲದೆ ಈ ಅವಧಿ ದೇಶದಿಂದ ದೇಶಕ್ಕೆ, ಆಹಾರ ಪ್ರಕಾರ ಮತ್ತು ಹವಾಗುಣಕ್ಕೆ ತಕ್ಕಂತೆ ವ್ಯತ್ಯಾಸವಾಗುತ್ತದೆ. ತಯಾರಕರೂ ಆಹಾರದ ಗುಣಮಟ್ಟ, ರಕ್ಷಣೆ ಮತ್ತು ಬಾಳಿಕೆಯನ್ನು ನಿರ್ಧರಿಸಿಯೇ ದಿನಾಂಕವನ್ನು ಸೂಚಿಸಬೇಕು. ಅದರಲ್ಲೂ ಮಾಂಸ ಮತ್ತು ಮೀನಿನ ಬಳಕೆಯಲ್ಲಿ ಎಚ್ಚರ ಅಗತ್ಯ. ಅತಿ ಹಳೆಯ ಬರ್ಗರ್ ಅಮೆರಿಕದ ಮ್ಯೂಸಿಯಂನಲ್ಲಿ 1989ರಲ್ಲೇ ತಯಾರಿಸಿದ ಬರ್ಗರ್ ಅನ್ನು ಸುಗಂಧ ದ್ರವ್ಯಗಳನ್ನು ಲೇಪಿಸಿ ಸಂಗ್ರಹಿಸಿಡಲಾಗಿದೆ. ಇಂದಿಗೂ ಸುಸ್ಥಿತಿಯಲ್ಲಿದೆ. ಸಮಾರು 25ನೇ ವರ್ಷಕ್ಕೆ ಕಾಲಿಟ್ಟಿರುವ ಬರ್ಗರ್ ಜಗತ್ತಿನ ಅತ್ಯಂತ ಹಳೆಯದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಅಲ್ಲದೆ ಇದೀಗ ಮಾಂಸವನ್ನೇಕೆ ಈ ರೀತಿ ರಕ್ಷಿಸಬಾರದು ಎಂಬ ಚರ್ಚೆಗೂ ಗ್ರಾಸವಾಗಿದೆ. ಫಂಗಸ್ ಪರಿಣಾಮ ಯಾವಾಗ? ಮೇಲ್ಪದರು ಕ್ಷೀಣಿಸಿದಾಗ- ಲಿಂಬೆಹಣ್ಣಿನ ಮೇಲಿನ ಪದರು ಹೊರಗಿನ ವಾತಾವರಣದೊಂದಿಗೆ ಸಿಟ್ರಿಕ್ ಆಮ್ಲ ಬೆರೆಯುವುದನ್ನು ತಪ್ಪಿಸುತ್ತದೆ. ಇದರಿಂದ ಬೆಳವಣಿಗೆ ಬೇಗ ವೃದ್ಧಿಯಾಗುತ್ತದೆ ಕೂಡ. ಅಲ್ಲದೆ ಈ ಪದರು ಹಣ್ಣನ್ನು ಶಿಲೀಂಧ್ರದಿಂದಲೂ ರಕ್ಷಿಸುತ್ತದೆ. ಸತ್ವ ಗೋಚರವಾಗುವಲ್ಲಿ- ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಗೋಚರವಾಗುವ ಸ್ಥಳದಲ್ಲೇ ಫಂಗಸ್ ಬರುತ್ತದೆ. ನಂತರ ಅದು ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಇದರ ತಂತುಗಳು ಸಿಟ್ರಿಕ್ ಆಮ್ಲದೊಂದಿಗೆ ಸೇರಿಕೊಳ್ಳುತ್ತವೆ. ಕಿಣ್ವಗಳು ಅಶಕ್ತವಾದಾಗ- ಲಿಂಬೆಹಣ್ಣಿನಲ್ಲಿರುವ ಕಿಣ್ವಗಳು ಸತ್ವ ಕಳೆದುಕೊಂಡು ಪೋಷಿಸುವಲ್ಲಿ ಎಡವಿದಾಗ ಫಂಗಸ್ ತನ್ನ ತಂತುಗಳ ಮೂಲಕ ಸಿಟ್ರಿಕ್ ಆಮ್ಲವನ್ನು ತಿನ್ನಲು ಆರಂಭಿಸುತ್ತದೆ. ಗಾಳಿಯ ಕೊರತೆಯಿದ್ದಾಗ- ಫಂಗಸ್ ತನಗೆ ಎಷ್ಟು ಸಾಧ್ಯವೋ ಅಷ್ಟು ವಿಸ್ತರಣೆಯಾಗುತ್ತ ಸಾಗುತ್ತದೆ. ಅಸಾಧ್ಯವಾದಾಗ ಏಕಕೋಶ ಸಂಯೋಗರಹಿತ ಅಂಕುರ ಬೀಜಗಳನ್ನು ಪಸರಿಸುತ್ತದೆ. ನಿರೋಧಕ ಶಕ್ತಿ ಕಳೆಗುಂದಿದಾಗ- ಹಸಿರು ಶಿಲೀಂಧ್ರಗಳು ಯಾವತ್ತೂ ಕಿರಣಗುಚ್ಛಗಳ ಸಮ್ಮಿಲನ. ಇವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತವೆ. ಸುಕ್ಕುಗಟ್ಟಿದಾಗ- ಲಿಂಬೆಹಣ್ಣು ನೀರಿನಾಂಶವನ್ನು ಕಳೆದುಕೊಂಡು ಸುಕ್ಕುಗಟ್ಟಲು ಆರಂಭಿಸಿದಾಗ, ಕೊಳೆಯುವ ಸ್ಥಿತಿಗೆ ಬಂದಾಗ ಫಂಗಸ್ ಅಂಟಿಕೊಳ್ಳುತ್ತದೆ. - ವೀರೇಶ ಜಿ. ಮಠ @.