ಕಿಲ್ಲರ್ ಗ್ಯಾಸ್ ಇದು ಯಮದೂತನೇ. ಸ್ವಲ್ಪ ಯಾಮಾರಿದರೂ ಸಾವು ಬಂದೆರಗುವುದು ನಿಶ್ಚಿತ. ಕೆಂಪು ರಕ್ತ ಕಣಗಳು ಆಮ್ಲಜನಕಕ್ಕೂ ಮುನ್ನ ಸೆಳೆದುಕೊಳ್ಳುವ ಈ ವಿಷಾನಿಲದ ಹೆಸರು ಕಾರ್ಬನ್ ಮೊನಾಕ್ಸೈಡ್! ಎರಡನೇ ಮಹಾಯುದ್ಧದ ದಿನಗಳು. ಜರ್ಮನಿಯಲ್ಲಿ ಯೆಹೂದಿಗಳ ಸಾಮೂಹಿಕ ಹತ್ಯೆಗೆ ನಾಜಿಗಳು ಅಮಾನುಷ ಮಾರ್ಗವೊಂದನ್ನು ಅನುಸರಿಸಿದರು. ವಿಷಾನಿಲವೊಂದನ್ನು ಹರಿಸಿ ಸುಮಾರು ಏಳು ಲಕ್ಷ ಕೈದಿಗಳನ್ನು ಕೊಂದು ಹಾಕಿದರು. ನಾಜಿಗಳು ಬಳಸಿದ ಅಂಥ ಘೋರ ವಿಷಾನಿಲವಾದರೂ ಯಾವುದು ಗೊತ್ತೇ? ಅದುವೇ ಕಾರ್ಬನ್ ಮೊನಾಕ್ಸೈಡ್ ಅಥವಾ . 'ಒಳಚರಂಡಿ ಸ್ವಚ್ಛಗೊಳಿಸಲು ಹೋದ ಕಾರ್ಮಿಕರ ಸಾವು' ಎಂದೋ, 'ವಾಹನಗಳ ಹೊಗೆಯಿಂದಾಗಿ ನಗರಗಳಲ್ಲಿ ಎಷ್ಟೋ ಸಹಸ್ರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ' ಎಂದೋ ಸುದ್ದಿಗಳನ್ನು ಕೇಳಿರುತ್ತೀರಿ. ಇಂಥ ಸಾವಿಗೂ ಅದೇ ವಿಷಾನಿಲವೇ ಕಾರಣ. ಕಾರ್ಬನ್ ಮೊನಾಕ್ಸೈಡ್ ಅಂದ್ರೇನು? ಇದೊಂದು ಅಪಾಯಕಾರಿ ಅನಿಲ. ಹಠಾತ್ ಅಸ್ವಸ್ಥತೆ ಮತ್ತು ಸಾವು ಉಂಟು ಮಾಡುವಂಥದ್ದು. ಎಂಜಿನ್‌ಗಳು, ವಾಹನಗಳು ಹೊರ ಬಿಡುವ ಹೊಗೆಯಲ್ಲಿ, ಕಲ್ಲಿದ್ದಲು ಗಣಿಗಳಲ್ಲಿ, ಆಳವಾದ ಬಾವಿಗಳಲ್ಲಿ, ಒಳಚರಂಡಿಗಳಲ್ಲಿ ಕಾರ್ಬನ್ ಮೊನಾಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಸಿಗರೇಟ್‌ನ ಧೂಮ, ಬೆಂಕಿಯ ಹೊಗೆ, ಕುಲುಮೆ, ಮುಚ್ಚಿದ ಬೆಂಕಿಗೂಡು, ಹೀಟರ್‌ಗಳು, ಸೌದೆ ಒಲೆಯಿಂದ ಬರುವ ಹೊಗೆಯಲ್ಲೂ ಈ ವಿಷಾನಿಲವಿರುತ್ತದೆ. ಜನರೇಟರ್‌ಗಳೂ ಕಾರ್ಬನ್ ಮೊನಾಕ್ಸೈಡ್ ಅನ್ನು ಹೊರಸೂಸುತ್ತವೆ. ಈ ಅನಿಲಕ್ಕೆ ಬಣ್ಣ, ವಾಸನೆ ಇರುವುದಿಲ್ಲ. ಪ್ರಾಣಿಯಾಗಲಿ, ಮನುಷ್ಯನಾಗಲಿ ಉಸಿರಾಡುವಾಗ ಕಾರ್ಬನ್ ಮೊನಾಕ್ಸೈಡ್ ಸೇವಿಸಿದರೆ ಅದು ವಿಷವಾಗಿ ಪರಿಣಮಿಸುತ್ತದೆ. ಆಮ್ಲಜನಕ ಅಥವಾ ಆಕ್ಸಿಜನ್ ಕೊರತೆ ಇರುವಲ್ಲಿ ಕಾರ್ಬನ್ ವಸ್ತುಗಳ ದಹನದಿಂದ ಇದು ಉತ್ಪತ್ತಿ ಆಗುತ್ತದೆ. ಏಕಿಷ್ಟು ಅಪಾಯಕಾರಿ? ಕಾರ್ಬನ್ ಮೊನಾಕ್ಸೈಡ್ ಹಿಮೊಗ್ಲೋಬಿನ್‌ನಿಂದ ಆಮ್ಲಜನಕವನ್ನೇ ಉಚ್ಛಾಟಿಸಿಬಿಡುತ್ತದೆ. ಹಾಗಾಗಿ ರಕ್ತದಲ್ಲಿನ ಆಮ್ಲಜನಕ ಪೂರೈಕೆ ವ್ಯವಸ್ಥೆಯ ಹದಗೆಡುತ್ತದೆ. ಕೆಂಪು ರಕ್ತ ಕಣಗಳು ಆಮ್ಲಜನಕವನ್ನು ಸೆಳೆದುಕೊಳ್ಳುವುದಕ್ಕಿಂತಲೂ ಮೊದಲೇ ಕಾರ್ಬನ್ ಮೊನಾಕ್ಸೈಡ್ ಅನ್ನು ಸೆಳೆದುಕೊಳ್ಳುತ್ತವೆ. ನಾವು ಉಸಿರಾಡುವ ಗಾಳಿಯಲ್ಲಿ ಕಾರ್ಬನ್ ಮೊನಾಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿದ್ದಾಗ, ದೇಹದಲ್ಲಿನ ರಕ್ತದಲ್ಲಿ ಆಮ್ಲಜನಕದ ಬದಲಾಗಿ ಕಾರ್ಬನ್ ಮೊನಾಕ್ಸೈಡ್ ಸೇರಿಕೊಳ್ಳುತ್ತದೆ. ಇದರಿಂದ ದೇಹದಲ್ಲಿ ಆಮ್ಲಜನಕದ ಪೂರೈಕೆಗೆ ತಡೆ ಉಂಟಾಗಿ ಅಂಗಾಂಗಳಿಗೆ ಹಾನಿ ಸಂಭವಿಸುತ್ತದೆ. ಕೊನೆಗೆ ಸಾವೂ ಬಂದೆರಗಬಹುದು! ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದ ಮೆದುಳಿಗೆ ತೊಂದರೆ ಉಂಟಾಗುವುದೂ ಇದೆ. ಇದರಿಂದ ಜ್ಞಾನ ತಪ್ಪಬಹುದು, ತಕ್ಷಣವೇ ಚಿಕಿತ್ಸೆ ನೀಡಿದಿದ್ದಲ್ಲಿ ಪರಿಸ್ಥಿತಿ ಚಿಂತಾಜನಕವಾಗಬಹುದು. ವಿಷಾನಿಲ ಸೇವನೆ: ಲಕ್ಷಣಗಳೇನು? ಕಾರ್ಬನ್ ಮೊನಾಕ್ಸೈಡ್ ವಿಷದಿಂದ ತಲೆನೋವು, ನಿಶ್ಯಕ್ತಿ, ವಾಂತಿ, ಎದೆನೋವು, ವೈರಲ್ ಜ್ವರದ ಲಕ್ಷಣಗಳು, ಗೊಂದಲ ಇತ್ಯಾದಿ ಸಮಸ್ಯೆಗಳು ಉಂಟಾಗಬಹುದು. ಕಾರ್ಬನ್ ಮೊನಾಕ್ಸೈಡ್ ವಿಷಸೇವನೆಯ ಲಕ್ಷಣಗಳು ಇತರ ಕೆಲ ರೋಗಗಳ ಲಕ್ಷಣಗಳನ್ನು ಹೋಲುವುದರಿಂದ ಕಾಯಿಲೆಯ ಕಾರಣವನ್ನು ಪತ್ತೆಹಚ್ಚುವುದು ತುಸು ಕಷ್ಟವೇ. ಕಾರ್ಬನ್ ಮೊನಾಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಎಲ್ಲೆಡೆಗೆ ಹರಡಿಕೊಂಡಿದ್ದರೆ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಸಾವು ಸಂಭವಿಸುವ ಸಾಧ್ಯತೆಯೂ ಇಲ್ಲದಿಲ್ಲ. ನಾವು ಉಸಿರಾಡುವ ಗಾಳಿಯಲ್ಲಿ ಶೇಕಡಾ ಒಂದರಷ್ಟು ಕಾರ್ಬನ್ ಮೊನಾಕ್ಸೈಡ್ ಬೆರೆತಿದ್ದರೆ, ಅದು ದೇಹಕ್ಕೆ ಸೇರಿದಾಗ, ಹಿಮೊಗ್ಲೋಬಿನ್ ಜೊತೆ ಸೇರಿಕೊಂಡು ಶೇಕಡಾ ಹದಿನೈದರಿಂದ ಇಪ್ಪತ್ತರಷ್ಟಾಗುತ್ತದೆ, ಆಗ ತಲೆನೋವು, ವಾಂತಿ ಇತ್ಯಾದಿ ಅಸ್ವಸ್ಥತೆ ಕಂಡುಬರಬಹುದು. ಉಸಿರಾಡುವ ಗಾಳಿಯಲ್ಲಿ ಕಾರ್ಬನ್ ಮೊನಾಕ್ಸೈಡ್ ಶೇಕಡಾ ಒಂದಕ್ಕಿಂತಲೂ ಜಾಸ್ತಿ ಇದ್ದರೆ, ಅದು ಹಿಮೊಗ್ಲೋಬಿನ್‌ನ ಜೊತೆ ಸೇರಿಕೊಂಡಾಗ, ಶೇಕಡಾ ಮೂವತ್ತರಿಂದ ನಲವತ್ತರಷ್ಟಾಗುತ್ತದೆ. ಇದರಿಂದ ಹೃದಯದ ತೊಂದರೆ, ಮೂರ್ಛೆ ತಪ್ಪುವುದು ಮುಂತಾದ ಸಾಧ್ಯತೆಗಳು ಹೆಚ್ಚು. ಹಿಮೊಗ್ಲೋಬಿನ್‌ನಲ್ಲಿ ಕಾರ್ಬನ್ ಮೊನಾಕ್ಸೈಡ್ ಪ್ರಮಾಣ ಶೇಕಡಾ ಐವತ್ತಕ್ಕಿಂತಲೂ ಹೆಚ್ಚಾದಾಗ, ಸಾವು ಸಂಭವಿಸುತ್ತದೆ. ಯಾರಿಗೆ ಹೆಚ್ಚು ತೊಂದರೆ? ಭ್ರೂಣಾವಸ್ಥೆಯಲ್ಲಿರುವ ಶಿಶು, ಪುಟ್ಟ ಹಸುಳೆಗಳು ತೊಂದರೆಗೊಳಗಾಗುವ ಸಾಧ್ಯತೆಗಳು ಹೆಚ್ಚು. ಹಾಗೇನೇ ಹೃದಯದ ಕಾಯಿಲೆ, ರಕ್ತಹೀನತೆ, ಶ್ವಾಸಕೋಶದ ಕಾಯಿಲೆ ಇರುವವರಿಗೂ ಈ ವಿಷಾನಿಲ ತೀವ್ರ ಪರಿಣಾಮವನ್ನುಂಟು ಮಾಡುತ್ತವೆ. ವಿಷಕಾರಿ ಕಾರ್ಬನ್ ಮೊನಾಕ್ಸೈಡ್‌ನಿಂದ ಜನರು ಮಾತ್ರವಲ್ಲದೆ ಪ್ರಾಣಿಗಳೂ ತೊಂದರೆಗೀಡಾಗುತ್ತವೆ. ಒಂದು ಅಂಕಿ ಅಂಶದ ಪ್ರಕಾರ, ಪ್ರತಿ ವರ್ಷ ನಾಲ್ಕು ನೂರಕ್ಕೂ ಹೆಚ್ಚು ಅಮೆರಿಕನ್ನರು ಅರಿವಿಲ್ಲದೆಯೇ ಕಾರ್ಬನ್ ವಿಷಕಾರಿ ಕಾರ್ಬನ್ ಮೊನಾಕ್ಸೈಡ್‌ನಿಂದ ಜನರು ಮಾತ್ರವಲ್ಲದೆ ಪ್ರಾಣಿಗಳೂ ತೊಂದರೆಗೀಡಾಗುತ್ತವೆ. ಆದರೆ ವಿಷದಿಂದ ಸಾವಿಗೀಡಾಗುತ್ತಿದ್ದಾರೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಈ ವಿಷಕಾರಿ ಅನಿಲದಿಂದ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಾರೆ. ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿ ದಾಖಲಾಗುತ್ತಾರೆ. ತುರ್ತು ಚಿಕಿತ್ಸೆ ಹೇಗೆ? ಕಾರ್ಬನ್ ಮೊನಾಕ್ಸೈಡ್ ವಿಷಾನಿಲ ಸೇವನೆಯ ಲಕ್ಷಣಗಳು ಗೋಚರಿಸಿದರೆ ಅಸ್ವಸ್ಥ ವ್ಯಕ್ತಿಯನ್ನು ಆ ವಾತಾವರಣದಿಂದ ತಕ್ಷಣವೇ ಬೇರೆಡೆಗೆ ವರ್ಗಾಯಿಸಬೇಕು. ಗಾಳಿ ಬೆಳಕಿನ ವ್ಯವಸ್ಥೆಯನ್ನು ಮಾಡುವುದೂ ಅಷ್ಟೇ ಅವಶ್ಯಕ. ಅಸ್ವಸ್ಥತೆ ತೀವ್ರ ಪ್ರಮಾಣದಲ್ಲಿದ್ದರೆ ಕೃತಕ ಉಸಿರಾಟದ ವ್ಯವಸ್ಥೆಯನ್ನೂ ಮಾಡಬೇಕಾಗುತ್ತದೆ. ಸಾಧ್ಯವಿದ್ದರೆ ನೂರಕ್ಕೆ ನೂರರಷ್ಟು ಆಮ್ಲಜನಕದ ಪೂರೈಕೆ ಮಾಡಿದರೆ ಚೆನ್ನ. ಅದು ಕಾರ್ಬನ್ ಮೊನಾಕ್ಸೈಡ್ ಅನ್ನು ಸಂಪೂರ್ಣವಾಗಿ ನಿವಾರಿಸಬಹುದು. ದೈನಂದಿನ ಬದುಕಲ್ಲಿ... ನಾವು ದಿನನಿತ್ಯ ಬಳಸುವ ಸಾಧನಗಳಿಂದಲೂ ಕಾರ್ಬನ್ ಮೊನಾಕ್ಸೈಡ್ ಬಿಡುಗಡೆ ಆಗುವುದುಂಟು. ಫ್ರಿಡ್ಜೇ ಇರಲಿ, ಜನರೇಟರೇ ಇರಲಿ ಅಥವಾ ನಾವು ಓಡಿಸುವ ಗಾಡಿಯಿಂದಲೂ ಕಾರ್ಬನ್ ಮೊನಾಕ್ಸೈಡ್ ಹೊರಸೂಸುತ್ತದೆ. ಹಾಗಾದರೆ, ದೈನಂದಿನ ಬದುಕಲ್ಲಿ ಕಾರ್ಬನ್ ಮೊನಾಕ್ಸೈಡ್‌ನಿಂದ ದೂರವಿರುವುದಾದರೂ ಹೇಗೆ? ವರ್ಷಕ್ಕೊಮ್ಮೆಯಾದರೂ ನಿಮ್ಮ ಕಾರಿನ 'ಎಕ್ಸಾಸ್ಟ್ ಸಿಸ್ಟಮ್‌'ನ್ನು ನುರಿತ ಮೆಕಾನಿಕ್‌ನಿಂದ ಪರಿಶೀಲನೆಗೊಳಪಡಿಸಿ. ಏಕೆಂದಂರೆ, ನಿಮ್ಮ ಕಾರಿನ ಎಕ್ಸಾಸ್ಟ್ ಸಿಸ್ಟಮ್ ಸರಿ ಇಲ್ಲದಿದ್ದರೆ ಕಾರಿನೊಳಗೆ ಕಾರ್ಬನ್ ಮೊನಾಕ್ಸೈಡ್ ಹರಡುವ ಸಾಧ್ಯತೆ ಇದೆ. ಗ್ಯಾರೇಜ್ ಮುಚ್ಚಿರುವಾಗ, ಆದರೊಳಗೆ ಕಾರಿನ ಹೊಗೆ ಆವರಿಸಿಕೊಳ್ಳದಂತೆ ಜಾಗ್ರತೆವಹಿಸಿ. ನಿಮ್ಮ ಮನೆಯಲ್ಲಿರುವ ಗ್ಯಾಸ್ ಒಲೆ, ವಾಟರ್ ಹೀಟರ್ ಇತ್ಯಾದಿ ಸಾಧನಗಳನ್ನು ಪ್ರತಿವರ್ಷ ತಪಾಸಣೆಗೆ ಒಳಪಡಿಸಿ. ಫ್ರಿಡ್ಜ್‌ನ 'ಕೂಲಿಂಗ್ ಯೂನಿಟ್‌'ನಿಂದ ಕೆಟ್ಟವಾಸನೆ ಬರುತ್ತಿದ್ದರೆ, ಅಲ್ಲಿ ತೊಂದರೆ ಇದೆ ಎಂದರ್ಥ, ಫ್ರಿಡ್ಜ್‌ನಿಂದ ಕಾರ್ಬನ್ ಮೊನಾಕ್ಸೈಡ್ ಹೊರಸೂಸುವ ಸಾಧ್ಯತೆ ಇದೆ. ತಕ್ಷಣವೇ ಅದನ್ನು ಸರಿಪಡಿಸಿ. ಗ್ಯಾಸ್ ಉಪಕರಣಗಳನ್ನು ಕೊಳ್ಳುವಾಗ ತಪಾಸಣೆ ಸಂಸ್ಥೆಯ ಮುದ್ರೆ ಇದೆಯೇ ಎಂದು ಪರಿಶೀಲಿಸಿ ಕೊಂಡುಕೊಳ್ಳಿ. ಸಾಧ್ಯವಾದರೆ ಬ್ಯಾಟರಿ ಚಾಲಿತ ಡಿಟೆಕ್ಟರ್‌ನ್ನು ನಿಮ್ಮ ಮನೆಯಲ್ಲಿ ಅಳವಡಿಸಿಕೊಳ್ಳಿ. ಬ್ಯಾಟರಿ ಆಗಾಗ್ಗೆ ಬದಲಾಯಿಸಲು ಮರೆಯದಿರಿ. ಹೊಗೆಗೂಡುಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಿದರೆ ಒಳಿತು. ಹೊಗೆಗೂಡು ಕಟ್ಟಿಕೊಂಡರೆ ಹೊಗೆ ಮನೆಯೊಳಗೆ ತುಂಬಿಕೊಳ್ಳುತ್ತದೆ ಮನೆಯೊಳಗೆ, ಬೇಸ್‌ಮೆಂಟ್‌ನಲ್ಲಿ ಅಥವಾ ಕಿಟಕಿಯ ಬಳಿ ಜನರೇಟನ್ನು ಬಳಸಬೇಡಿ. ನೀರಿನ ಆಳಕ್ಕೆ ಇಳಿಯುವವರು ಸ್ಕೂಬಾ () ಎನ್ನುವ ಮುಖ ಕವಚವನ್ನು ಧರಿಸುತ್ತಾರೆ. ಧರಿಸುವ ಮುನ್ನ ಅದನ್ನು ಪರಿಶೀಲಿಸುವುದು ಒಳಿತು. ಯಮದೂತನಂಥ ಈ ವಿಷಾನಿಲದಿಂದ ದೂರವಿದ್ದಷ್ಟೂ ಒಳ್ಳೆಯದು! ರಾಜೇಶ್ವರಿ ಜಯಕೃಷ್ಣ @.