ಸೆಕೆಂಡ್ ಇಲ್ಲಿ ನೀವು ಸೈಟು ಮಾಡಬಹುದು. ಫೈಟು ಮಾಡಬಹುದು. ಕಾರು ಖರೀದಿಸಬಹುದು. ಬಾರಿಗೆ ಹೋಗಬಹುದು. ಇಲ್ಲಿ ನೀವು ಸೈಟು ಮಾಡಬಹುದು. ಫೈಟು ಮಾಡಬಹುದು. ಕಾರು ಖರೀದಿಸಬಹುದು. ಬಾರಿಗೆ ಹೋಗಬಹುದು. ಬೇಡವೆಂದರೆ ನೀವೇ ಕಾರಾಗಬಹುದು. ಬಾರಿನ ಮಾಲೀಕರಾಗಬಹುದು. ಫ್ಲಾಟು ಖರೀದಿಸಬಹುದು. ಕುಡಿದು ಫ್ಲಾಟಾಗಬಹುದು! ಡೀಸೆಂಟ್ ಲೈಫು ನಡೆಸಬಹುದು. ಸೆಕೆಂಡ್ ವೈಫು ಇಟ್ಕೋಬಹುದು. ಮನುಷ್ಯ ಜನ್ಮವೇ ಸಾಕಪ್ಪ ಅಂತ ಅನ್ನಿಸಿದ್ದರೆ ಪ್ರಾಣಿಯಾಗಬಹುದು. ಗಿಡವಾಗಬಹುದು. ಮರವಾಗಬಹುದು. ತರಕಾರಿಯಾಗಬಹುದು. ಸೆಕೆಂಡ್ ಲೈಫಲ್ಲಿ ನಿಜ ಜೀವನದ ದುಃಖ ಮರೆತು ಸುಖಪಡಬಹುದು. ನಿಜಜೀವನದಲ್ಲಿ ಸುಖವಾಗಿದ್ದರೆ ಸೆಕಂಡ್ ಲೈಫ್‌ನಲ್ಲಿ ದುಃಖ, ಚಿಂತೆ ಹಚ್ಚಿಕೊಳ್ಳಬಹುದು. ಬಿಸಿನೆಸ್ ಕೂಡ ನಡೆಸಬಹುದು. ಲಾಸ್ ಆದರೆ ಜೀವನಕ್ಕೇನೂ ತೊಂದರೆಯಿಲ್ಲ! ಇದು ವಿ'ಚಿತ್ರ' ಪ್ರಪಂಚ. ನೀವು ನೀವಾಗಿಯೇ ಇಲ್ಲಿ ಜೀವಿಸಬಹುದು ಅಥವಾ ನೀವು ಇಷ್ಟಪಡುವ ಇನ್ನಾವುದೋ ವ್ಯಕ್ತಿ ಅಥವಾ ಪ್ರಾಣಿಯಾಗಿ ಜೀವನ ನಡೆಸಬಹುದು. ನೀವು ಇಷ್ಟಪಟ್ಟು ಆಯ್ಕೆಮಾಡುವ ಸ್ವರೂಪ ಇಲ್ಲಿ ನೀವಾಗಿ ಜೀವನ ನಡೆಸುತ್ತದೆ. ನಿಮ್ಮ ವಿಚಿತ್ರ, ವಿಕೃತ, ಸುಪ್ತ ಆಸೆಗಳನ್ನು ಈಡೇರಿಸಲೆಂದೇ ಹುಟ್ಟಿಕೊಂಡಿದೆ ಸೆಕೆಂಡ್ ಲೈಫ್! ನೀವು ಜೀವನದಲ್ಲಿ ಏನೋ ಆಗಬೇಕೆಂದು ಕನಸು ಕಂಡಿರಬಹುದು. ನಿಮ್ಮ ಕನಸು, ನಿರೀಕ್ಷೆಗಳಿಗೆ ತಕ್ಕಂತೆ ನಿಮ್ಮ ಜೀವನ ಇಲ್ಲದಿರಬಹುದು. ನಿಮ್ಮ ಎಷ್ಟೋ ಆಸೆಗಳು ಈಡೇರದೇ ಇರಬಹುದು ಅಥವಾ ಸುಪ್ತವಾಗಿರಬಹುದು. ಅದಕ್ಕಾಗಿ ನೀವು ಕೊರಗಬೇಕಿಲ್ಲ. ಯಾಕೆಂದರೆ ಅಂತಹ ಅವಕಾಶವೊಂದು ನಿಮಗೆ 'ಸೆಕೆಂಡ್ ಲೈಫ್‌'ನಲ್ಲಿ ಸಿಗಲಿದೆ! ಏನಪ್ಪಾ ಇದು ಅಂತ ಗಾಬರಿಯಾಗಬೇಡಿ. ಇದು ಅಸಲಿ ಸೆಕೆಂಡ್ ಲೈಫಲ್ಲ. ಆದರೆ ಅಂತರ್ಜಾಲದಲ್ಲಿ ನಿಮಗೆ ಸಿಗಲಿರುವ ಸೆಕೆಂಡ್‌ಲೈಫ್ ಇದು. ಇದೊಂಥರ ನಿಮ್ಮ ಹೊಸ ಅವತಾರ! ಸೆಕೆಂಡ್ ಲೈಫ್ (.) ಎಂಬ ವೆಬ್‌ಸೈಟೊಂದಿದೆ. ಇರುವುದ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಮಾತನ್ನು ಸಂಪೂರ್ಣವಾಗಿ ನಂಬಿಯೇ ಈ ವೆಬ್‌ಸೈಟ್ ಆರಂಭಿಸಿದಂತಿದೆ. ಒಂದಷ್ಟು ಕುತೂಹಲ, ಹೊಸತನ, ಥ್ರಿಲ್ ಅಂತೂ ಗ್ಯಾರೆಂಟಿ. ಎಲ್ಲ ವೆಬ್‌ಸೈಟ್ ಅಥವಾ ಸಾಮಾಜಿಕ ತಾಣಗಳಂತೆ ಲಾಗ್‌ಇನ್ ಆಗಬೇಕು. ಆಗುವಾಗ ಯಾವ ಸ್ವರೂಪದಲ್ಲಿ ನೀವು ಸೆಕೆಂಡ್‌ಲೈಫ್‌ನಲ್ಲಿ ಜೀವನ ನಡೆಸಲು ಇಷ್ಟಪಡುತ್ತೀರಿ ಎಂಬುದನ್ನು ನಿರ್ಧರಿಸಬೇಕು. ಆನಂತರ ಆರಂಭವಾಗುತ್ತದೆ ನಿಮ್ಮ ಸೆಕೆಂಡ್ ಲೈಫ್. ನೀವು ಆಯ್ಕೆ ಮಾಡಿದ ಸ್ವರೂಪದ ಜೀವನ ನಿಮ್ಮ ನಿಯಂತ್ರಣದಲ್ಲಿರುತ್ತದೆ. ಅಂದರೆ ನಿಮ್ಮದೇ ಪ್ರತಿರೂಪದಲ್ಲಿ ಅದು ಸೆಕೆಂಡ್ ಲೈಫ್‌ನಲ್ಲಿ ಜೀವನ ನಡೆಸುತ್ತದೆ. ನೀವು ಆಯ್ಕೆಮಾಡಿದ ಸ್ವರೂಪಗಳು 3ಡಿ ಚಿತ್ರಗಳ ಮೂಲಕ ಸ್ಕ್ರೀನ್‌ನಲ್ಲಿ ಗೋಚರಿಸುತ್ತವೆ ಮತ್ತು ಸಂಚರಿಸುತ್ತವೆ. ನೀವು ರೂಪಿಸಿದ ಸ್ವರೂಪಕ್ಕೆ ನಿಮಗಿಷ್ಟವಾದ ಬಟ್ಟೆ, ಬರೆ, ಆಭರಣಗಳನ್ನು ಧರಿಸಬಹುದು. ಆದರೆ ಬಹುತೇಕ ಬಟ್ಟೆ ಮತ್ತು ಆಭರಣಗಳನ್ನು ಖರೀದಿಸಬೇಕಾಗುತ್ತದೆ. ಬಹುತೇಕ ಗೇಮ್‌ಗಳಂತೆ ಇಲ್ಲಿ ಕೂಡ ಹೆಚ್ಚು ಸ್ವಾತಂತ್ರ್ಯ, ಸೌಲಭ್ಯ, ಅವಕಾಶಗಳು ಬೇಕೆಂದರೆ ಹಣ ನೀಡಬೇಕು. ಆದರೆ ಉಚಿತವಾಗಿ ಜೀವನ ನಡೆಸಲು ಸೆಕೆಂಡ್ ಲೈಫ್‌ನಲ್ಲಿ ಅವಕಾಶವಿದೆ. ಸೆಕೆಂಡ್ ಲೈಫ್‌ನಲ್ಲಿ ವ್ಯಕ್ತಿಗಳೊಂದಿಗೆ ಚಾಟ್ ಮಾಡಬಹುದು. ಮಾತಾಡಬಹುದು. ಓಡಾಡಬಹುದು ಕೂಡ. ವಾಹನದಲ್ಲಿ ಹೋಗಬಹುದು. ಇನ್ನೂ ಮುಂದಿನದ್ದಕ್ಕೆ ಕೂಡ ಅವಕಾಶವಿದೆಯಂತೆ! ಆದರೆ, ಇವರೆಲ್ಲ ನಿಮ್ಮಂತೆ ನಿಜ ವ್ಯಕ್ತಿಗಳೇ ಆಗಿರುತ್ತಾರೆ ಎಂಬುದನ್ನು ಮರೆಯಬೇಡಿ. 2003ರಲ್ಲಿಯೇ ಸೆಕೆಂಡ್ ಲೈಫ್ ಆರಂಭವಾಗಿದ್ದರೂ, ಜನರನ್ನು ಆಕರ್ಷಿಸಿದ್ದು ಇತ್ತೀಚೆಗೆ. ಆದರೂ ನಮ್ಮ ರಾಜ್ಯದಷ್ಟೇ ಜನಸಂಖ್ಯೆ ಸೆಕಂಡ್ ಲೈಫ್‌ನಲ್ಲಿದೆಯಂತೆ! ಯಾವುದೇ ಸಮಯದಲ್ಲಿ ಸರಾಸರಿ 55-60 ಸಾವಿರ ಜನ ಸಕ್ರಿಯರಾಗಿರುತ್ತಾರಂತೆ. ಈವರೆಗೆ ಸೆಕೆಂಡ್‌ಲೈಫ್‌ನಲ್ಲಿ ಸದಸ್ಯರು ಒಟ್ಟು 2,17,266 ವರ್ಷಗಳಷ್ಟು ಸಮಯವನ್ನು ಕಳೆದಿದ್ದಾರಂತೆ! ಹೆಚ್ಚಿನವರು ಉಚಿತ ಸೌಕರ್ಯಗಳನ್ನು ಮಾತ್ರ ಬಳಸುತ್ತಿರುವವರು. ಸೆಕೆಂಡ್ ಲೈಫ್‌ನಲ್ಲಿ ಗೂಗಲ್ ಸರ್ಚ್‌ನಲ್ಲಿರುವಂತೆ 3 ವರ್ಗೀಕರಣಗಳಿವೆ. ಜನರಲ್ ವಿಭಾಗದಲ್ಲಿ ಹಿಂಸೆ ಮತ್ತು ಬೆತ್ತಲೆಗೆ ಅವಕಾಶವಿಲ್ಲ. ಮೊಡರೇಟ್ ವಿಭಾಗದಲ್ಲಿ ಅಲ್ಪ ಪ್ರಮಾಣದ ಹಿಂಸೆ, ಬೆತ್ತಲೆ, ವಯಸ್ಕರ ಸಂಗತಿಗಳು ಇರುತ್ತವೆ. ಇನ್ನು ಅಡಲ್ಟ್ ವಿಭಾಗ ಅತಿಯಾದ ಲೈಂಗಿಕತೆ, ಹಿಂಸೆಗಳನ್ನು ಒಳಗೊಂಡಿದೆ. ನೀವು ನಿಮ್ಮ ಇಷ್ಟಕ್ಕೆ ತಕ್ಕಂತೆ ಸೆಟ್ಟಿಂಗ್ಸ್‌ನಲ್ಲಿ ಸೂಕ್ತವಾದ ಆಯ್ಕೆ ಮಾಡಿಕೊಂಡು ಸೆಕೆಂಡ್ ಲೈಫ್ ಜೀವನ ನಡೆಸಬಹುದು. ನಿಜ ಜೀವನದ ಸಾಕಷ್ಟು ಸ್ಥಳ, ಊರುಗಳನ್ನು ಇಲ್ಲಿ ಮರುನಿರ್ಮಾಣ ಮಾಡಲಾಗಿದೆ. ನೀವು ಎಂಜಿನಿಯರ್‌ಗಳಾಗಿದ್ದರೆ ಕಟ್ಟಡ, ಮನೆಗಳನ್ನೂ ನಿರ್ಮಿಸಬಹುದು. ಇನ್ನು ಧರ್ಮ ಸೆಕೆಂಡ್ ಲೈಫ್‌ಗೂ ಕಾಲಿಟ್ಟಿದೆ. 3-4 ಚರ್ಚ್‌ಗಳಿವೆ. ಈಜಿಪ್ಟ್ ವ್ಯಕ್ತಿಯೊಬ್ಬರು ಮಾಲಿಕತ್ವದ ಮುಸ್ಲಿಂ ಆನ್‌ಲೈನ್ ಸಂಸ್ಥೆ ಸೆಕೆಂಡ್ ಲೈಫ್‌ನಲ್ಲಿ ಭೂಮಿ ಖರೀದಿಸಿದ್ದು, ಮೆಕ್ಕಾಕೆ ಹೋಗುವ ಮೊದಲು ಅಲ್ಲಿನ ಅನುಭವಗಳನ್ನೃ ಪಡೆಯುವ ಅವಕಾಶ ಕಲ್ಪಿಸಿದೆ. ಸೆಕೆಂಡ್ ಲೈಫ್‌ನಲ್ಲಿ ಸಿಕ್ಕು ಫಸ್ಟ್ ವೈಫ್ ಆದಳು! ನಿಜ ಜೀವನ ಬೋರಾಗಿ ಸೆಕೆಂಡ್ ಲೈಫ್‌ಗೆ ಹೋದರೆ ಕೆಲವರು ಸೆಕೆಂಡ್ ಲೈಫ್‌ನಲ್ಲಿ ಭೇಟಿಯಾಗಿ ನಿಜ ಜೀವನದಲ್ಲಿ ಗೆಳೆಯರಾಗಿ, ದಂಪತಿಯಾಗಿ ಜೀವಿಸುತ್ತಿದ್ದಾರೆ. ಬೂಪರ್‌ಕಿಟ್ ಮೊಸೆಲಿ ಮತ್ತು ಶುಕ್ರಾನ್ ಫಹಿದ್ ಎಂಬವರು ಸೆಕೆಂಡ್‌ಲೈಫ್‌ನಲ್ಲಿ 2004ರಲ್ಲಿಯೇ ಭೇಟಿಯಾಗಿದ್ದರು. ನಂತರ ನಿಜ ಜೀವನದಲ್ಲೂ ಭೇಟಿಯಾಗುವ ಮನಸ್ಸಾಯಿತು. ಬೂಪರ್‌ಕಿಟ್ ಅಮೆರಿಕಕ್ಕೆ ಆಗಮಿಸಿ ಶುಕ್ರಾನ್ ಫಹಿದ್‌ರನ್ನು ಭೇಟಿ ಮಾಡಿದ. ಒಂದು ವಾರದ ನಂತರ ಶುಕ್ರಾನ್ ಫಹಿದ್‌ರೊಂದಿಗೆ ಇಂಗ್ಲೆಂಡ್‌ಗೆ ಮರಳಿದ. ಅವರು ಈಗ ಇಂಗ್ಲೆಂಡ್‌ನಲ್ಲಿ ವಾಸವಾಗಿದ್ದು 5 ವರ್ಷದ ಅವಳಿ ಜವಳಿ ಮಕ್ಕಳಂತೆ!ಹೀಗೆ ಸೆಕೆಂಡ್ ಲೈಫಲ್ಲಿ ಭೇಟಿಯಾಗಿ ಮದುವೆಯಾದ ಅಥವಾ ಸೆಕೆಂಡ್ ಲೈಫಲ್ಲಿ ಮಾತ್ರ ಮದುವೆಯಾದ ಎರಡೂ ಕಡೆ ಮದುವೆಯಾದ ಸಾಕಷ್ಟು ಜೋಡಿಗಳಿವೆಯಂತೆ. - ವಕ್ರದಂತ