ಖ್ಯಾತ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ 158ನೇ ಜನ್ಮ ದಿನ ನಿಮಿತ್ತ ಗೂಗಲ್-ಡೂಡಲ್ ಗೌರವ! ಖ್ಯಾತ ಸರ್ಚ್ ಎಂಜಿನ್ ಗೂಗಲ್ ಭಾರತದ ಖ್ಯಾತ ವಿಜ್ಞಾನಿ ಜಗದೀಶ್ ಚಂದ್ರಬೋಸ್ ಅವರ ಜನ್ಮ ದಿನ ನಿಮಿತ್ತ ಗೂಗಲ್-ಡೂಡಲ್ ನಿರ್ಮಿಸಿ ಗೌರವ ಸಲ್ಲಿಸಿದೆ. ನವದೆಹಲಿ: ಖ್ಯಾತ ಸರ್ಚ್ ಎಂಜಿನ್ ಗೂಗಲ್ ಭಾರತದ ಖ್ಯಾತ ವಿಜ್ಞಾನಿ ಜಗದೀಶ್ ಚಂದ್ರಬೋಸ್ ಅವರ ಜನ್ಮ ದಿನ ನಿಮಿತ್ತ ಗೂಗಲ್-ಡೂಡಲ್ ನಿರ್ಮಿಸಿ ಗೌರವ ಸಲ್ಲಿಸಿದೆ. ವಿದ್ಯುತ್ಕಾಂತೀಯ ತರಂಗಗಳ ಮತ್ತು ಆರಂಭಿಕ ಹಂತದ ನಿಸ್ತಂತು ದೂರಸಂಪರ್ಕ (ವೈರ್ ಲೆಸ್ ಟೆಲಿಕಮ್ಯೂನಿಕೇಷನ್) ಸಂಶೋಧಕರಾದ ಜಗದೀಶ್ ಚಂದ್ರಬೋಸ್ ಅವರ 158ನೇ ಜನ್ಮ ದಿನದ ನಿಮಿತ್ತ ಗೂಗಲ್ ಸಂಸ್ಥೆ ಡೂಡಲ್ ನಿರ್ಮಿಸುವ ಮೂಲಕ ಗೌರವ ಸಲ್ಲಿಸಿದೆ. ದೇಶದ ಮೊದಲ ಆಧುನಿಕ ವಿಜ್ಞಾನಿ ಎಂದು ಖ್ಯಾತಿ ಪಡೆದಿರುವ ಜಗದೀಶ್ ಚಂದ್ರಬೋಸ್ ಅವರು ಬಂಗಾಲ ಪ್ರಾಂತ್ಯ (ಈಗಿನ ಬಾಂಗ್ಲಾದೇಶ)ದ ಮುಷಿಗಂಜ್ ನಲ್ಲಿ 1858 ನವೆಂಬರ್ 30ರಂದು ಜನಿಸಿದರು. ಬಹುಮುಖ ಪ್ರತಿಭೆಯಾಗಿದ್ದ ಜಗದೀಶ್ ಚಂದ್ರ ಬೋಸ್ ಅವರು, ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ ಅನೇಕ ವಿಜ್ಞಾನದ ವಿಭಾಗದಲ್ಲಿ ಸಂಶೋಧನೆ ನೆಡೆಸಿದ್ದರು. ಭಾರತದಲ್ಲಿ ಇವರನ್ನು ರೇಡಿಯೋ ವಿಜ್ಞಾನದ ಪಿತಾಮಹಾ ಎಂದರೆ ತಪ್ಪಿಲ್ಲ. ಏಕೆಂದರೆ ರೇಡಿಯೋ ಪ್ರಯೋಗ ವಿಜ್ಞಾನಕ್ಕೆ ಅಡಿಪಾಯ ಹಾಕಿದ್ದು ಇದೇ ಜಗದೀಶ್ ಚಂದ್ರ ಬೋಸ್ ಅವರು. ಬೋಸ್ ಅವರು ರೇಡಿಯೋ ಮತ್ತು ವೈರ್ಲೆಸ್ ಸಂಕೇತಗಳ ಕುರಿತ ಸಂಶೋಧನೆಯಲ್ಲಿ ಅವರು ಗಮನಾರ್ಹ ಪ್ರಗತಿ ಸಾಧಿಸಿದ್ದರು. ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೊಸದಾರಿ ತೋರುವ ಹಲವಾರು ಸಂಶೋಧನೆಗಳನ್ನು ಮಾಡಿದ ಬೋಸ್ ಅವರು, ಸಸ್ಯಗಳು ಪ್ರಚೋದನೆಗೆ ತೋರುವ ಪ್ರತಿಕ್ರಿಯೆಯನ್ನು ಅಳೆಯುವ ಸಾಧನವನ್ನು ತಯಾರುಮಾಡಿ ಪ್ರಾಣಿ ಮತ್ತು ಸಸ್ಯ ಅಂಗಾಂಶಗಳಲ್ಲಿನ ಸಾಮ್ಯತೆಯನ್ನು ವೈಜ್ಞಾನಿಕವಾಗಿ ಸಾಧಿಸಿತೋರಿಸಿದರು. ಅವರ ಈ ಕಾರ್ಯಕ್ಕೆ ಪೇಟೆಂಟ್ ಸಲ್ಲಿಸುವಂತೆ ಹಿತೈಷಿಗಳ ಮಾಡಿದ ಒತ್ತಾಯಿಸಿದ್ದರು. ಆಗ ಪೇಂಟೆಂಟ್ ಅರ್ಜಿ ಸಲ್ಲಿಸಲು ವಿರೋಧಿಸಿದ್ದ ಬೋಸ್ ಅವರು, ನಾನೇನೂ ಸೃಷ್ಟಿಕರ್ತನಲ್ಲ. ಈ ಜಗದಲ್ಲಿ ಅಂತರ್ಗತವಾಗಿರುವ ಕೆಲವೊಂದು ವಸ್ತುವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿಕೊಂಡಿವೆ. ಹಾಗಾಗಿ ಜ್ಞಾನ ಯಾರ ಸ್ವತ್ತೂ ಅಲ್ಲ. ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಹೇಳಿದ್ದರು. ಆದರೂ ಹಿತೈಷಿಗಳ ಒತ್ತಾಯಕ್ಕೆ ಮಣಿದು ಬೋಸ್ ಅವರು ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಿದರು. ಆ ಮೂಲಕ ಪೇಟೆಂಟ್ ಗೆ ಅರ್ಜಿ ಸಲ್ಲಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೂ ಅವರು ಭಾಜನರಾದರು.