ಗೂಗಲ್‌ಗೆ 15ನೇ ಹುಟ್ಟುಹಬ್ಬ ವಿಶ್ವದಲ್ಲಿ ಅತಿ ಹೆಚ್ಚು ಜನರು ಉಪಯೋಗಿಸುವ ಸರ್ಚ್ ಎಂಜಿನ್ ಎಂಬ ಖ್ಯಾತಿ ಹೊಂದಿರುವ ಗೂಗಲ್ ಸೆ.27ರಂದು ತನ್ನ 15ನೇ ಹುಟ್ಟುಹಬ್ಬ ಆಚರಿಸಿಕೊಂಡಿದೆ. ಸೆ.15, 1998ರಲ್ಲಿ ಗೂಗಲ್ ಸರ್ಚ್ ಎಂಜಿನ್ ಹುಟ್ಟಿಕೊಂಡಿತ್ತು. ಆದರೆ 2004ರ ಸೆ.27ರಂದು ಅಂತರ್ಜಾಲದಲ್ಲಿ ಅತಿಹೆಚ್ಚು ಬಳಸುವ ಸರ್ಚ್ ಎಂಜಿನ್ ಎಂಬ ಪ್ರಶಂಸೆಯು ಗೂಗಲ್‌ಗೆ ದೊರೆಯಿತು. ಈ ವಿಶೇಷ ಗಳಿಗೆಯ ನೆನಪಿಗಾಗಿ ಹುಟ್ಟುಹಬ್ಬ ದಿನವನ್ನು ಸೆ.27ಕ್ಕೆ ಆಚರಿಸಲು ಕಂಪನಿ ನಿರ್ಧರಿಸಿತು. 15 ವರ್ಷಗಳ ನಂತರ ಗೂಗಲ್ ಸರ್ಚ್ ಎಂಜಿನ್ ಕೇವಲ ಸರ್ಚ್‌ಗೆ ಸೀಮಿತವಾಗದೇ ಜಿ-ಮೇಲ್, ಯೂಟ್ಯೂಬ್, ಆರ್ಕೂಟ್, ಗೂಗಲ್ ಪ್ಲಸ್ ಸೇರಿದಂತೆ ಹತ್ತಾರು ಸೇವೆಗಳನ್ನು ನೀಡುತ್ತಿದೆ. ಅಂತರ್ಜಾಲ ಜಗತ್ತಿನಲ್ಲಿ ಹೊಸದೊಂದು ವಿಶ್ವವಾಗಿ ಗೂಗಲ್ ಬೆಳೆದಿದೆ. ಬರೀ ಗೂಗಲ್ ಸರ್ಚ್ ಎಂಜಿನ್‌ನಲ್ಲಿಯೇ ಪ್ರತಿ ದಿನ ಸುಮಾರು 300 ಕೋಟಿ ವಿಷಯಗಳನ್ನು ಬಳಕೆದಾರರು ಹುಡುಕುತ್ತಿದ್ದಾರೆ!