ಫೇ(ಸ್‌ಬು)ಕ್ ಪ್ರೇಯಸಿ! ಫೇಸ್‌ಬುಕ್‌ನಲ್ಲಿ ಫೇಕ್‌ಗಳ ಹಾವಳಿ ಹೆಚ್ಚಿರುವುದು ಹಳೆಯ ವಿಚಾರ. ಈಗ ಪೇಸ್‌ಬುಕ್‌ಗಾಗಿಯೇ ಫೇಕ್ ಪ್ರೇಯಸಿಯರು ಸಿಗುತ್ತಾರೆ! ಸ್ವೀಟ್ ಆ್ಯಂಡ್ ಹಾಟ್ ಹುಡುಗಿಯರು ನಿಮ್ಮ ಫೇಸ್‌ಬುಕ್ ಪೋಸ್ಟಿಂಗ್‌ಗಳಿಗೆ ನಿರಂತರ ಕಾಮೆಂಟ್ ಮಾಡುತ್ತಿರುತ್ತಾರೆ. ಇದರಿಂದ ನಿಮ್ಮ ಪ್ರೊಫೈಲ್‌ನ ಪಾಪ್ಯುಲಾರಿಟಿ ಅಥವಾ ಟಿಆರ್‌ಪಿ ಹೆಚ್ಚಲಿದೆ ಎನ್ನುವ ಲೆಕ್ಕಾಚಾರದಲ್ಲಿ ಹುಟ್ಟಿಕೊಂಡ ಉದ್ಯಮವಿದು. ನಿಮಗೆಲ್ಲ ತಿಳಿದಂತೆ ಫೇಸ್‌ಬುಕ್‌ನಲ್ಲಿ ಬ್ರೆಜಿಲ್ ಹುಡುಗಿಯರ ಹೆಸರಲ್ಲಿ ಅತಿ ಹೆಚ್ಚಿನ ಫೇಕ್ ಅಕೌಂಟ್‌ಗಳಿವೆ. ಈಗ ಇಂಥ ವ್ಯಕ್ತಿಗಳ ಗುಂಪೊಂದು ವೆಬ್‌ಸೈಟ್ ವ್ಯವಹಾರ ಆರಂಭಿಸಿದೆ. ಈ ರೀತಿಯ ಹುಚ್ಚು ಜನಪ್ರಿಯತೆ ಹಾಗೂ ಆನ್‌ಲೈನ್ ತಾತ್ಕಾಲಿಕ ಡೇಟಿಂಗ್ ಬಯಸುವವರಿಗಾಗಿ ಇಂಥದ್ದೊಂದು ವ್ಯವಹಾರ ಆರಂಭಿಸಲಾಗಿದೆ. ಫೇಸ್‌ಬುಕ್ ಮೂಲಕ ನೋಂದಣಿಯಾದರೆ ತಿಂಗಳಿಗೆ ಇಂತಿಷ್ಟು ಡಾಲರ್ ಅಂತ ಪಾವತಿಸಬೇಕು. ನೀವು ಕೊಟ್ಟ ಹಣಕ್ಕೆ ಬದಲಾಗಿ ದಿನಕ್ಕೊಂದಿಷ್ಟು ಕಾಮೆಂಟ್‌ಗಳನ್ನು ಮಾಡುತ್ತಿರುತ್ತಾರೆ. ಸ್ವಲ್ಪ ಹೆಚ್ಚಿನ ಹಣವನ್ನು ನೀಡಿದರೆ ಒಂದು ತಿಂಗಳ ಮಟ್ಟಿಗೆ 'ಇನ್ ರಿಲೇಷನ್‌ಶಿಪ್‌' ಎಂಬ ಸ್ಟೇಟಸ್‌ನ್ನು ಹಾಕಿಕೊಳ್ಳುತ್ತಾರೆ. ಆದರೆ, ಭಾರತೀಯ ಯುವಕರು ಅಷ್ಟು ಖುಷಿಪಡುವ ವಿಚಾರವಿಲ್ಲ. ಏಕೆಂದರೆ ಅಲ್ಲಿ ಸಿಗುವುದು ಕೇವಲ ಬ್ರೆಜಿಲ್‌ನ ಲಲನೆಯರು ಮಾತ್ರ. ಅಂದಹಾಗೆ ಪ್ರಪಂಚದಲ್ಲಿ ಇಂತಹ ಖಯಾಲಿ ಇರುವ ಜನರೂ ಇದ್ದಾರೆ ಅಂತಾಯ್ತು.