ಇತಿಹಾಸ ಬದಲಿಸಿದ ಗ್ಯಾಜೆಟ್‌ಗಳು ಸನ್‌ಗ್ಲಾಸ್ ತಲೆತಲಾಂತರದಿಂದಲೂ ರೈತರು ಬಿಸಿಲಲ್ಲಿ ಮೈ ಬಗ್ಗಿಸಿ ದುಡಿಯುತ್ತಿದ್ದಾರೆ. ಆದರೆ, ಒಂದೇ ಒಂದು ಬಾರಿ ಅವರನ್ನೆಲ್ಲ ಸನ್‌ಗ್ಲಾಸ್ ಹಾಕಿಸಿ ಹೊಲದಲ್ಲಿ ನಿಲ್ಲಿಸಿ ಕಲ್ಪಿಸಿಕೊಳ್ಳಿ. ಫನ್ನಿ ಎನಿಸುತ್ತದಲ್ಲವೇ? ಆದರೆ ನಿಜಕ್ಕೂ ಸನ್‌ಗ್ಲಾಸ್‌ನ ಅವಶ್ಯಕತೆ ಇರುವವರು ಅವರೇ. ನಗದರಲ್ಲಿರುವವರು ಅರ್ಧರಾತ್ರಿಯಲ್ಲೂ ಸನ್‌ಗ್ಲಾಸ್ ಹಾಕುತ್ತಿದ್ದಾರೆ. ಸನ್ ಗ್ಲಾಸ್ ಕಣ್ಣಿಗೆ ಪ್ರೊಟೆಕ್ಷನ್ ನೀಡುವುದಾದರೂ ಹಾಕದವರಿಗೆ ಹಾಕಲು ನಾಚಿಕೆ, ಹಾಕುವವರಿಗೆ ಲಕ್ಷುರಿ, ಸ್ಟೈಲ್, ಸ್ಟೇಟಸ್. ಅಂದ ಹಾಗೆ ಸನ್‌ಗ್ಲಾಸ್‌ಗಳನ್ನು ಕಂಡು ಹಿಡಿದದ್ದು ಅಮೆರಿಕದ ಸ್ಯಾಮ್ ಫಾಸ್ಟರ್ 1929ರಲ್ಲಿ. ಬಾಲ್ ಪಾಯಿಂಟ್ ಪೆನ್ ಪೆನ್ ಕೈಯಲ್ಲಿ ಹಿಡಿಯದೆ ಆ ಪುಟ್ಟ ಅಂಗೈಗಳು ಬೆಳೆಯುವುದೇ ಇಲ್ಲವೇನೋ ಎಂಬಷ್ಟು ಬಾಲ್ ಪೆನ್‌ಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಈಗೇನೋ ಕಂಪ್ಯೂಟರ್‌ಗಳಿವೆ, ಮೊಬೈಲ್‌ಗಳಿವೆ.... ಹೀಗಾಗಿ ಮುಂದೊಂದು ದಿನ ಪೆನ್‌ಗಳೂ ಮರೆಯಾಗಬಹುದೇನೋ. ಆದರೆ ಪೆನ್ ಗಂಟೆಗೊಂಡು ವಾಕ್ಯ ಬರೆಯುತ್ತಾ ನಾವಿಷ್ಟೆಲ್ಲ ವೇಗವಾಗಿ ಬೆಳೆಯುತ್ತಿದ್ದೇವೆ? ಲಾಸ್ಲೋ ಬೈರೋ ಎಂಬ ಹಂಗೇರಿಯನ್ ಪತ್ರಿಕೆಯೊಂದರ ಸಂಪಾದಕನೊಬ್ಬ ಇಂಕ್ ಪೆನ್ನಿಗೆ ಇಂಕ್ ತುಂಬುವುದು, ಅದು ಕಕ್ಕಿದ್ದನ್ನೆಲ್ಲ ತೆಡೆದುಕೊಳ್ಳುವುದರ ಕಿರಿಕಿರಿ ತಾಳಲಾರದೆ ತನ್ನ ಪೇಪರ್ ಪ್ರಿಂಟ್‌ಗೆ ಬಳಸುತ್ತಿದ್ದ ಇಂಕನ್ನು ಬಳಸಿ ಸ್ನೇಹಿತರೊಡಗೂಡಿ ಬಾಲ್‌ಪೆನ್ನನ್ನು ಕಂಡು ಹಿಡಿಯುವ ಪ್ರಯತ್ನಕ್ಕೆ ಬಿದ್ದು, ನಮ್ಮನ್ನೆಲ್ಲ ಕಿರಿಕಿರಿಯಿಂದ ಪಾರು ಮಾಡಿದ. 1943ರಲ್ಲಿ ಬಾಲ್ ಪೆನ್‌ಗಳಿಗೆ ಪೇಟೆಂಟ್ ದೊರಕಿತು. ದೂರವಾಣಿ ಟೆಲಿಫೋನ್ ಟ್ರಿಣ್ ಟ್ರಿಣ್ ಎಂದರೆ ಸಾಕು, ಮನೆಯಲ್ಲಿರವವರಿಗೆಲ್ಲ ಓಡಿ ಹೋಗಿ ಫೋನ್ ಎತ್ತುವ ಧಾವಂತ. ರಾಂಗ್ ನಂಬರ್‌ಗಳು ಹುಟ್ಟುಹಾಕುವ ಕುತೂಹಲ, ಬ್ಲ್ಯಾಂಕ್ ಕಾಲ್‌ಗಳಿಂದ ಹುಟ್ಟಿದ ಪ್ರೇಮಕತೆಗಳು, ಪಕ್ಕದ ಮನೆಯವರಿಗೆ ಬರುವ ಫೋನ್‌ಕಾಲ್‌ಗಳು, ದೂರದಲ್ಲಿರುವ ಮಗನೊಂದಿಗೆ ಒಂದೇ ಒಂದು ನಿಮಿಷ ಮಾತನಾಡಿದರೂ ಸಿಗುತ್ತಿದ್ದ ಸಮಾಧಾನ ಅಸದಳ. ಆದರಿಂದ ಗಂಟೆಗಟ್ಟಲೆ ಮಾತನಾಡಿದರೂ ಇಲ್ಲದ ತೃಪ್ತಿ. ಟೆಪಿಫೋನ್ ಎಂಬುದು ಮನುಷ್ಯನ ದೇಹದ ಅಂಗಕ್ಕಿಂತ ಹೆಚ್ಚಾಗಿದೆ. ಮೊಬೈಲ್ ಬಿಟ್ಟು ಒಂದು ಗಂಟೆ ಇದ್ದರೂ ವಿಚಿತ್ರ ಚಡಪಡಿಕೆ ಗಂಟುಬೀಳುತ್ತದೆ. ವಿಶೇಷವೆಂದರೆ ಫೋನ್ ಎತ್ತಿದ ಕೂಡಲೇ ಹೇಳುವ 'ಹೆಲೋ', ಫೋನ್ ಕಂಡುಹಿಡಿದ ಅಲೆಕ್ಸಾಂಡರ್ ಗ್ರಹಾಂ ಬೆಲ್‌ನ ಪ್ರೇಯಸಿಯ ಹೆಸರು! ಡಿಜಿಟಲ್ ಕ್ಯಾಮೆರಾ ಮೊದಲೆಲ್ಲ ರೋಲ್ ಕ್ಯಾಮೆರಾ ಹಿಡಿದು, 36 ರೀಲ್‌ಗಳು ಮಾತ್ರ ಇರುತ್ತಿದ್ದುದರಿಂದ ಆಸೆಯಾದರೂ ಜುಗ್ಗತನ ಮಾಡುತ್ತಾ ಒಂದೊಂದು ಅಪರೂಪಕ್ಕೆ ಫೋಟೋ ತೆಗೆದು, ವರ್ಷಕ್ಕೊಂದು ಆಲ್ಬಮ್ ತೊಳೆಸಿ ಅದನ್ನು ನೋಡುವ ಮಜವೇ ಬೇರೆಯಿತ್ತು. ಯಾವಾಗ ಸ್ವೀವನ್ ಸ್ಯಾಸನ್ ಎಂಬವನ ಕೃಪಾಕಟಾಕ್ಷದಿಂದ ಡಿಜಿಟಲ್ ಕ್ಯಾಮೆರಾ ಎಂಬ ಮಾಂತ್ರಿಕ ವಸ್ತುವೊಂದು ಪ್ರತ್ಯಕ್ಷವಾಯಿತೋ(1975), ನಮ್ಮ ತೋರು ಬೆರಳಿಗೆ ಪುರುಸೊತ್ತಿಲ್ಲದಂತೆ ಕಂಡಕಂಡಿದ್ದಕ್ಕೂ ದಾಖಲೆಯಾಗುಳಿವ ಭಾಗ್ಯ ದೊರೆಕಿತು, ಈಗಂತೂ ಕಂಪ್ಯೂಟರ್ ಮೆಮೊರಿಯಲ್ಲಿ ಮುಕ್ಕಾಲು ಭಾಗ ನಮ್ಮ ಫೋಟೋಗಳು, ವಿಡಿಯೋಗಳೇ ಇರುವಷ್ಟು ಮಟ್ಟಿಗೆ ಡಿಜಿಟಲ್ ಕ್ಯಾಮೆರಾಗಳು ಜೀವನದ ಭಾಗವಾಗಿವೆ. -ರೇಶ್ಮಾರಾವ್ ಸೊನ್ಲೆ