ಒಂದು ನಿಸ್ವಾರ್ಥದ ಕಥೆ... ಅದು ಬಿರುಬೇಸಗೆ. ಹ್ಯೂಸ್ಟನ್‌ನಲ್ಲಿ ಶೆರ್ಲಿ ಡೈಗರ್ಟ್ (54) ಪ್ರಪ್ರಥಮ ಬಾರಿಗೆ ಸ್ಕೈ ಡೈವ್ (ಆಗಸದಿಂದ ನೆಗೆತ) ಮಾಡಲು ಸಿದ್ಧತೆ ನಡೆಸುತ್ತಿದ್ದರು. ಎದೆ ಢವ ಢವ ಎನ್ನುತ್ತಿತ್ತು. ಹೇಗಪ್ಪಾ ಅಷ್ಟೊಂದು ಎತ್ತರದಿಂದ ಜಿಗಿಯುವುದು? ಇದು ಸಾಧ್ಯವಾ ಎಂಬ ಆತಂಕ ಮನೆಮಾಡಿತ್ತು. ಅಷ್ಟೊಂದು ನರ್ವಸ್ ಆಗಿದ್ದರೂ, ತನ್ನ ಮಾರ್ಗದರ್ಶಕ ಡೇವ್ ಹಾರ್ಟ್‌ಸಾಕ್‌ರನ್ನು ಕಂಡೊಡನೆ ಶೆರ್ಲಿ ಅವರಿಗೆ ಧೈರ್ಯ ಬಂತು. ಗುರಿ ಮುಟ್ಟುವ ಒಂದೇ ಯೋಚನೆ ಸುಳಿದಾಡಿತು. ಸ್ಕೈ ಡೈವ್‌ಗೆ ಸಿದ್ಧರಾದರು. ವಿಮಾನದಿಂದ ಇಬ್ಬರೂ ಒಟ್ಟಿಗೇ ಧುಮುಕಿದರು. ಇನ್ನೇನು ಭೂಮಿಯತ್ತ ತಲುಪುತ್ತೇವೆ ಎಂದಾಗ ಹಾರ್ಟ್‌ಸಾಕ್ ತಮ್ಮ ಪ್ಯಾರಚೂಟ್ ಬಿಚ್ಚಲು ಮುಂದಾದರು. ದುರದೃಷ್ಟಕ್ಕೆ ಚ್ಯೂಟ್ ಓಪನ್ ಆಗಲೇ ಇಲ್ಲ, ಬ್ಯಾಕ್‌ಅಪ್ ಪ್ಯಾರಚೂಟ್ ಕೂಡ ಗಂಟಿಕ್ಕಿಕೊಂಡಿತು. ಬದುಕುವ ಆಸೆ ಕಮರಿಹೋಯಿತು ಎನ್ನುವಷ್ಟರಲ್ಲಿ ಹಾರ್ಟ್‌ಸಾಕ್ ಒಂದು ದಿಟ್ಟ ನಿಲುವು ತಳೆದಿದ್ದರು. ಕಂಟ್ರೋಲ್ ಟಾಗಲ್ ಅನ್ನು ಒತ್ತಿ ತನ್ನ ದೇಹವನ್ನು ತಿರುಗಿಸಿ ಶೆರ್ಲಿಯ ದೇಹಕ್ಕೆ ಅಡ್ಡ ನಿಂತು, ಆಕೆಗೆ ಅಪಾಯವಾಗದಂತೆ ತಡೆದರು. ಪರಿಣಾಮ ಹಾರ್ಟ್‌ಸಾಕ್ ಅವರ ಬೆನ್ನುಮೂಳೆಗೆ ತೀವ್ರ ಪೆಟ್ಟಾಗಿ, ಕುತ್ತಿಗೆಯ ಕೆಳಗಿನ ಅವರ ದೇಹ ಸಂಪೂರ್ಣ ನಿಷ್ಕ್ರಿಯವಾಯಿತು. ಶೆರ್ಲಿಗೆ ಸಣ್ಣಪುಟ್ಟ ಗಾಯಗಳಾದವು. ಹಾರ್ಟ್‌ಸಾಕ್ ಅವರು ತಮ್ಮ ಜೀವವನ್ನೇ ಪಣಕ್ಕಿಟ್ಟು ಶೆರ್ಲಿಯ ಜೀವ ಕಾಪಾಡಿದ್ದರು. ಈ ಸುದ್ದಿ ಪ್ರಕಟವಾದಾಗ ಎಲ್ಲರಲ್ಲೂ ಮೂಡಿಬಂದ ಪ್ರಶ್ನೆ, 'ಎಲ್ಲರೂ ತಮ್ಮ ತಮ್ಮ ಜೀವ ಕಾಪಾಡಿಕೊಳ್ಳಲು ಮುಂದಾಗುವಾಗ ಹಾರ್ಟ್‌ಸಾಕ್ ಏಕೆ ತದ್ವಿರುದ್ಧವಾಗಿ ವರ್ತಿಸಿದರು?', 'ಯಾವುದೇ ವ್ಯಕ್ತಿಯೂ ಇಷ್ಟೊಂದು ನಿಸ್ವಾರ್ಥನೆ ಪ್ರದರ್ಶಿಸಲು ಸಾಧ್ಯವೇ?' 2010ರಲ್ಲಿ ನಡೆದ ಈ ಘಟನೆಯು ಸಂಶೋಧಕರ ನಿದ್ದೆಗೆಡಿಸಿತು. ಒಬ್ಬ ವ್ಯಕ್ತಿಗೆ ಇಷ್ಟೊಂದು ನಿಸ್ವಾರ್ಥತೆ ಬರಲು ಕಾರಣವೇನು? ಯಾವ ವಿಶೇಷತೆ ಅವರಲ್ಲಿ ಸ್ವಾರ್ಥರಹಿತ ಗುಣ ಮೂಡಿಸಿತು ಎಂಬ ಬಗ್ಗೆ ಸಂಶೋಧನೆಗಳು ಆರಂಭವಾದವು. ದಾನಶೂರರ ಒಳಗೆ... ಕೆಲವು ವರ್ಷಗಳ ಹಿಂದೆ ಒರೆಗಾನ್ ವಿವಿಯ ಅರ್ಥಶಾಸ್ತ್ರಜ್ಞ ಬಿಲ್ ಹಾರ್ಬಗ್, ದಾನ ನೀಡುವ ಜನರಲ್ಲಿ ಯಾವ ವಿವೇಕಯುಕ್ತ ಲೆಕ್ಕಾಚಾರ ಕೆಲಸ ಮಾಡುತ್ತದೆ ಎಂಬುದನ್ನು ಪತ್ತೆಹಚ್ಚಲು ಹೊರಟರು. ಅದರಂತೆ, 100 ಡಾಲರ್ ಅನ್ನು ಆಹಾರನಿಧಿಯೊಂದಕ್ಕೆ ದಾನ ನೀಡುವಂತೆ ಕೆಲವರಲ್ಲಿ ಕೋರಿಕೊಂಡರು. ದಾನ ನೀಡುವಾಗ ಅಂಥ ವ್ಯಕ್ತಿಗಳ ಮೆದುಳಿನ ಯಾವ ಭಾಗ ಹೆಚ್ಚು ಚುರುಕುಗೊಂಡಿರುತ್ತದೆ ಎಂಬುದನ್ನು ಎಫ್‌ಎಂಆರ್‌ಐ ಸ್ಕ್ಯಾನರ್ ಮೂಲಕ ರೆಕಾರ್ಡ್ ಮಾಡಿಕೊಂಡರು. ಆಗ ಗೊತ್ತಾಗಿದ್ದು ಇಷ್ಟು. ಯಾವ ವ್ಯಕ್ತಿ ತಾನಾಗಿಯೇ ಇಷ್ಟಪಟ್ಟು ದಾನ ನೀಡಲು ಮುಂದಾಗುತ್ತಾನೋ ಆತನ ಮೆದುಳಿನ ಪ್ರತಿಫಲ ಪ್ರೊಸೆಸ್ ಮಾಡುವ ಸ್ಥಳವು ಹೆಚ್ಚು ಕ್ರಿಯಾಶೀಲವಾಗಿತ್ತು. ಆದರೆ, ಯಾರು ಮನಸ್ಸಿಲ್ಲದಿದ್ದರೂ ಇನ್ನೊಬ್ಬರ ಒತ್ತಾಯಕ್ಕೆ ಮಣಿದು ಹಣ ನೀಡುತ್ತಾನೋ ಆತನ ಮೆದುಳಿನ ಆ ಭಾಗದಲ್ಲಿ ಸಕ್ರಿಯತೆ ಇರಲಿಲ್ಲ. ಆ ಭಾಗ ಯಾವುದೆಂದರೆ 'ನ್ಯೂಕ್ಲಿಯಸ್ ಅಕಂಬೆನ್ಸ್‌'. ಇದು ಮನಸ್ಸಿಗೆ ಖುಷಿ ಕೊಡುವ ರಾಸಾಯನಿಕವಾದ ಡೋಪಮೈನ್ ಅನ್ನು ಸ್ರವಿಸುವ ನರವನ್ನು ಹೊಂದಿದೆ. ಅಂದರೆ ಇಷ್ಟಪಟ್ಟು ದಾನ ಮಾಡುವವರಿಗೆ ಸುಖಾನುಭವ ದೊರೆತರೆ, ಮನಸ್ಸಿಲ್ಲದ ಮನಸ್ಸಿನಿಂದ ದಾನ ಮಾಡುವವರು ಕಿರಿಕಿರಿ ಅನುಭವಿಸುತ್ತಿರುತ್ತಾರೆ. ನೀವು 'ಮಹಾಭಾರತ'ದಲ್ಲಿ ಕರ್ಣನ ಬಗ್ಗೆ ಕೇಳಿದ್ದೀರಿ. ಯಾರು ಏನನ್ನು ಕೇಳಿದರೂ ಇಲ್ಲ ಎನ್ನುತ್ತಿರಲಿಲ್ಲ ಕರ್ಣ. ಅದಕ್ಕೇ ಅವನನ್ನು 'ದಾನಶೂರ' ಎನ್ನಲಾಗುತ್ತದೆ. ದಾನ ಮಾಡುವ ಮೂಲಕ ಮನಸ್ಸಿಗೆ ಸಂತೃಪ್ತಿ ತಂದುಕೊಳ್ಳುವುದು ಇಂಥವರ ಗುಣವಾಗಿರುತ್ತದೆ. ಒಂದು ಡ್ರಗ್‌ಗೆ ಅಡಿಕ್ಟ್ ಆದಾಗ ಹೇಗೆ ಮನಸ್ಸಿಗೆ ಮುದ ನೀಡುತ್ತದೋ ಅದೇ ರೀತಿಯ ಅನುಭವ ದಾನ ನೀಡುವವರಿಗೆ ಉಂಟಾಗುತ್ತದಂತೆ. ಧ್ಯಾನದಿಂದ ನಿಸ್ವಾರ್ಥ ಸಹಾನುಭೂತಿಯ ಆಲೋಚನೆಗೆ ಫೋಕಸ್ ಮಾಡಿ ಧ್ಯಾನ ಮಾಡಿದರೆ ಅಂಥವರು ತಮ್ಮ ಮನಸ್ಸನ್ನು ಹೆಚ್ಚು ಸ್ವಾರ್ಥರಹಿತವಾಗಿ ನಿರ್ಮಿಸಲು ಸಾಧ್ಯ ಎನ್ನುತ್ತಾರೆ ವಿಜ್ಞಾನಿಗಳು. ಮನಃಶಾಸ್ತ್ರಜ್ಞ ರಿಚ್ ಮತ್ತು ಡೇವಿಡ್‌ಸನ್ ನಡೆಸಿದ ಅಧ್ಯಯನದಿಂದ ಕಂಡುಬಂದಿದ್ದಿದು. ದೀರ್ಘಕಾಲ ಧ್ಯಾನ ಮಾಡಿದವರ ಹಾಗೂ ಮಾಡದಿರುವವರ ಎಫ್‌ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು. ಈ ವೇಳೆ ಅವರಿಗೆ ಅಪಾಯದಲ್ಲಿರುವ ನೊಂದ ಯುವತಿಯ ಅಳುವಿನ ಸದ್ದು ಹಾಗೂ ರೆಸ್ಟೋರೆಂಟೊಳಗಿನ ಜನರ ಸದ್ದನ್ನು ಕೇಳಿಸಲಾಯಿತು. ಆಗ ಹೆಚ್ಚು ಧ್ಯಾನ ಮಾಡಿದವರ ಮೆದುಳಿನ ಭಾಗದಲ್ಲಿ ಹೆಚ್ಚಿನ ಚಟುವಟಿಕೆಗಳು ಕಂಡುಬಂದವು. ಯುವತಿಯ ಅಳು ಕೇಳಿ ಅವರು ಭಾವುಕರಾದರು. ಅಂದರೆ, ಧ್ಯಾನ ಮಾಡುವವರು ಇತರರ ಮನಸ್ಸಿನ ನೋವನ್ನು ಬೇಗನೆ ಅರ್ಥಮಾಡಿಕೊಳ್ಳಲು, ಅವರಿಗೆ ಸಹಾನುಭೂತಿ ತೋರಲು ಉತ್ಸುಕರಾಗಿರುತ್ತಾರೆ. - ದಿಯಾ