ಸ್ಯಾಮ್‌'ಸಂಗ' ಬಿಡುತ್ತಿರುವ ಗೂಗಲ್ ಸ್ಯಾಮ್‌ಸಂಗ್ ಹಾಗೂ ಗೂಗಲ್ ಕಂಪನಿಗಳ ನಡುವೆ ಏನೋ ಕಿರಿಕ್ ಆಗಿದೆ. ಗೂಗಲ್ ಸಂಗ ಬಿಟ್ಟು ಹೊಸದಾಗಿ ಆಪರೇಟಿಂಗ್ ಸಿಸ್ಟಮ್ ಅನ್ನೇ ನಾವು ತಯಾರಿಸುತ್ತೇವೆ ಎಂದು ಸ್ಯಾಮ್‌ಸಂಗ್ ಹೇಳುತ್ತಿದ್ದಂತೆ ಗೂಗಲ್ ತನ್ನ ವರಸೆಯನ್ನೇ ಬದಲಿಸಿದೆ. ಸ್ಯಾಮ್‌ಸಂಗ್ ಮಾರುಕಟ್ಟೆಯ ದಿಕ್ಕನ್ನೇ ಬದಲಿಸುವ ಎಚ್ಚರಿಕೆಯ ಸಂದೇಶ ನೀಡುತ್ತಿದೆ. ಇದರ ಬೆನ್ನಲ್ಲೇ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ಗೆ ಚೀನಾ ಸೆಡ್ಡು ಹೊಡೆಯುತ್ತಿದೆ. ಪ್ರತ್ಯೇಕ ಒಎಸ್‌ಗಳ ಮೂಲಕ ಗೂಗಲ್ ಮಾರುಕಟ್ಟೆಯನ್ನು ತಿನ್ನುವ ಎಲ್ಲ ಸೂಚನೆಯನ್ನು ಚೀನಾ ಮೊಬೈಲ್‌ಗಳು ನೀಡುತ್ತಿವೆ. ಇವೆರಡು ಪ್ರತಿರೋಧವನ್ನು ಒಂದೇ ಏಟಿಗೆ ಹೊಡೆದುಹಾಕುವುದು ಗೂಗಲ್ ಲೆಕ್ಕಾಚಾರ. ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ದೊಡ್ಡ ಅವಕಾಶವಿದೆ ಎನ್ನುವುದು ಗೂಗಲ್ ಅರಿತುಕೊಂಡಿದೆ. ಇದರ ಬೆನ್ನಲ್ಲೇ ಭಾರತದ ಮೂರು ಕಂಪನಿಗಳಿಗೆ ನೆರವು ನೀಡುವ ನೆಪದಲ್ಲಿ ಗೂಗಲ್ ಸಂಸ್ಥೆ 100 ಕೋಟಿ ರುಪಾಯಿ ನೆರವು ಘೋಷಿಸಿತು. ಮೈಕ್ರೋಮ್ಯಾಕ್ಸ್, ಕಾರ್ಬನ್ ಹಾಗೂ ಸ್ಪೈಸ್ ಕಂಪನಿಗಳ ಮೂಲಕ ಭಾರತದ ಮಧ್ಯಮ ವರ್ಗದ ಜನರನ್ನು ಸೆಳೆಯುವುದು ಸಂಸ್ಥೆಯ ಉದ್ದೇಶವಾಗಿದೆ. ಉಳಿದ ಕಂಪನಿಗಳು ಐದಂಕಿಯ ಮೊತ್ತದಲ್ಲಿ ನೀಡುವ ಸೌಲಭ್ಯಗಳನ್ನು ನಾಲ್ಕಂಕಿಯಲ್ಲೇ ನೀಡಿ, ಅದಕ್ಕೆ ಆ್ಯಂಡ್ರಾಯ್ಡ್‌ನ ಲೇಟೆಸ್ಟ್ ಒಎಸ್‌ಎನ್ ಬ್ರಾಂಡ್ ಹೆಸರು ಸೇರಿಸಿದರೆ ಜನ ಮರುಳಾಗುವುದರಲ್ಲಿ ಸಂಶಯವಿಲ್ಲ. ಇದರಿಂದ ಒಂದೆಡೆ ಚೀನಾ ಮೊಬೈಲ್‌ಗಳಿಗೂ ಸೆಡ್ಡು ಹೊಡೆದಂತಾಗುತ್ತದೆ, ಇತ್ತ ಕಡೆ ಕಡಿಮೆ ದರದ ಸ್ಯಾಮ್‌ಸಂಗ್ ಮಾದರಿಗಳನ್ನು ಮೂಲೆಗೆ ಅಟ್ಟಿದಂತಾಗುತ್ತದೆ. ಇದೆಲ್ಲದರ ಜತೆಗೆ ಇದ್ಯಾವುದೇ ಕಂಪನಿಗಳ ಮೊಬೈಲ್ ಮಾರಾಟವಾದರೂ ಗೂಗಲ್ ಒಎಸ್ ಹೆಸರು ಶಾಶ್ವತವಾಗಿರುತ್ತದೆ ಎನ್ನುವ ಗೂಗ್ಲಿಯಿದು.