ಆ್ಯಪ್ತ ಸಹಾಯ ಸ್ಮಾರ್ಟ್‌ಫೋನ್‌ಗಳಿಂದು ಜನರಿಗೆ ಹತ್ತಿರವಾಗಲು ಕಾರಣವಾಗಿದ್ದು ಆಕರ್ಷಕ ಆ್ಯಪ್‌ಗಳಿಂದ. ಮೊಬೈಲ್.. ಸ್ಮಾರ್ಟ್‌ಫೋನ್‌ಗಳಿಂದು ಜನರಿಗೆ ಹತ್ತಿರವಾಗಲು ಕಾರಣವಾಗಿದ್ದು ಆಕರ್ಷಕ ಆ್ಯಪ್‌ಗಳಿಂದ. ಮೊಬೈಲ್ ಎಷ್ಟೇ ಸ್ಮಾರ್ಟ್ ಆಗಿದ್ದರೂ ಬಳಕೆದಾರರನ್ನು ರಂಜಿಸುವುದು ಅದರಲ್ಲಿನ ರೋಚಕ ಗೇಮ್, ಕೆಲಸವನ್ನು ಹಗುರ ಮಾಡುವ ಹತ್ತಾರು ಅಪ್ಲಿಕೇಷನ್‌ಗಳು ಮೊಬೈಲ್‌ನ್ನು ಸ್ಮಾರ್ಟ್ ಮಾಡುವುದಲ್ಲದೇ ನಿಮ್ಮನ್ನು ಕೂಡ ಸ್ಮಾರ್ಟಿಯಾಗಿಸುತ್ತದೆ. ಇಂತಹ ಅಪ್ಲಿಕೇಷನ್‌ಗಳು ಹುಟ್ಟುವುದು ಮೈಕ್ರೋಸಾಫ್ಟ್, ಸ್ಯಾಮ್‌ಸಂಗ್ ಕಚೇರಿಗಳಲ್ಲಲ್ಲ, ಬದಲಾಗಿ ನಮ್ಮ ನಿಮ್ಮ ಪಕ್ಕದ ಬೀದಿಯ ಯುವ ತಂತ್ರಜ್ಞರ ಪಡೆ ಇಂತಹ ಲಕ್ಷಾಂತರ ಆ್ಯಪ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿರುತ್ತದೆ. ಆದರೆ ಇವರಿಗೆಲ್ಲ ವೇದಿಕೆ ಬೇಕಾಗುವುದರಿಂದ ದಿಗ್ಗಜ ಕಂಪನಿಗಳ ಪ್ಲಾಟ್‌ಫಾರ್ಮ್ ಬಳಸಿಕೊಳ್ಳುತ್ತಾರೆ. ಇಂತಹ 2 ಸಾವಿರಕ್ಕೂ ಅಧಿಕ ಆ್ಯಪ್ ಡೆವಲಪರ್ಸ್‌ಗಳ ತಂಡವನ್ನು ಮೈಕ್ರೋಸಾಫ್ಟ್ ಸಂಸ್ಥೆ ಇತ್ತೀಚೆಗೆ ಒಂದೇ ವೇದಿಕೆ ರೂಪಿಸಿತ್ತು. ಅವರಲ್ಲಿಯೇ ಸ್ಪರ್ಧೆಗಳನ್ನು ಏರ್ಪಡಿಸಿ ಅತ್ಯುತ್ತಮ ಆ್ಯಪ್‌ಗಳಿಗೆ ಮೈಕ್ರೋಸಾಫ್ಟ್ ಸಂಸ್ಥೆಯು 2 ಲಕ್ಷ ನಗದು ಹಾಗೂ ಗೌರವ ಪುರಸ್ಕಾರ ನೀಡಿತ್ತು. ದೇಶದ ಎಲ್ಲ ಆ್ಯಪ್ ಡೆವಲಪರ್ಸ್‌ಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸುಮಾರು 2 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿ ಒಟ್ಟು 5 ವಿಭಾಗದಲ್ಲಿ ಅಂತಿಮ ಸುತ್ತಿಗೆ 15 ಅಪ್ಲಿಕೇಷನ್‌ಗಳನ್ನು ಆಯ್ಕೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಮೈಕ್ರೋಸಾಫ್ಟ್ ಸಂಸ್ಥೆಯ ಮನಗೆದ್ದಿರುವ ಸುಮಾರು 100 ಅಪ್ಲಿಕೇಷನ್‌ಗಳು ಒಂದು ತಿಂಗಳೊಳಗೆ ವಿಂಡೋಸ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತವೆ. ಈ ಸ್ಪರ್ಧೆಯಲ್ಲಿ 'ಕೋಡ್ ಆಫ್ ಹಾನರ್‌' ಪ್ರಶಸ್ತಿ ಗಳಿಸಿದ 6 ಆ್ಯಪ್‌ಗಳ ವಿವರ ಈ ಕೆಳಗಿದೆ. ನಿಮಗೂ ಆಸಕ್ತಿ ಮೂಡಿಸಬಹುದು. ಮನ ಗೆದ್ದ 6 ಆ್ಯಪ್‌ಗಳು ಮೈಫೇರ್ ಬಾಕ್ಸ್ ಮಿಸ್ಟಿಫೈ ಕನ್ಸಲ್ಟಿಂಗ್ ಇಂಡಿಯಾ ಈ ಸಂಸ್ಥೆ ಹೇಳುವಂತೆ ಇನ್ನೆರಡು ವರ್ಷದಲ್ಲಿ ಜಾಗತಿಕ ವಿಮಾನಯಾನ ಮಾಡುವವರ ಸಂಖ್ಯೆ ಒಂದೂವರೆ ಬಿಲಿಯನ್‌ಗೂ ಹೆಚ್ಚಾಗಲಿದೆ. ಆದರೆ ಜಗತ್ತಿನಲ್ಲಿರುವ ಎಲ್ಲ ವಿಮಾನಯಾನದ ಮಾಹಿತಿ ಇಂದು ಯಾರೊಬ್ಬರ ಬಳಿಯೂ ಇಲ್ಲ. ಒಂದೇ ವೇದಿಕೆಯಲ್ಲಿ ಎಲ್ಲ ರಾಷ್ಟ್ರಗಳ ವಿಮಾನಗಳ ದರ ಹಾಗೂ ವೇಳಾಪಟ್ಟಿ ಸಿಗುವುದೇ ಇಲ್ಲ. ಈ ಕಾರಣದಿಂದ ಮಿಸ್ಟಿಫೈ ಕನ್ಸಲ್ಟಿಂಗ್ ಇಂಡಿಯಾ ಸಂಸ್ಥೆಯು ಮೈಫೇರ್‌ಬಾಕ್ಸ್ ಎಂಬ ಆ್ಯಪ್ ರೂಪಿಸಿದೆ. ಸುಮಾರು 70 ರಾಷ್ಟ್ರಗಳ 900ಕ್ಕೂ ಅಧಿಕ ಏರ್‌ಲೈನ್ಸ್‌ಗಳ ಮಾಹಿತಿ ಇದರಲ್ಲಿ ಸಿಗುತ್ತದೆ. ಎಲ್ಲ ರೀತಿಯ ದರಗಳ ಮಾಹಿತಿಯ ಜತೆಗೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತದೆ. ಅಂದಹಾಗೆ ಇದು ಬೆಂಗಳೂರಿನಲ್ಲೇ ಇರುವ ಕಂಪನಿ. ಸಿನೆರ್ಗಿಟಾ ಆಯಿಸ್ಟರ್ ಸಾಫ್ಟವೇರ್ ತಮಿಳುನಾಡಿನ ತಂಜಾವೂರು ಮೂಲದ ಈ ಕಂಪನಿ ಉದ್ಯೋಗಿಗಳಳ ಮೌಲ್ಯಮಾಪನಕ್ಕೆಂದೆ ಹೊಸ ಆ್ಯಪ್ ತಯಾರಿಸಿದೆ. ಕಂಪನಿಗಳ ಎಚ್‌ಆರ್ ಮಾನ್ಯೇಜರ್‌ಗಳ ಕೆಲಸ ಕಡಿಮೆ ಮಾಡಲೆಂದೇ ತಯಾರಿಸಿರುವ ಅಪ್ಲಿಕೇಷನ್ ಇದು. ಉದ್ಯೋಗಿಯ ಪ್ರತಿಯೊಂದು ವಿವರವನ್ನು ಸಂಗ್ರಹಿಸುವುದಲ್ಲದೇ ಅವರ ಕೆಲಸಗಳ ಮೌಲ್ಯಮಾಪನವಾಗುತ್ತದೆ. ಇದರಿಂದ ಆರ್ಥಿಕ ವರ್ಷಾಂತ್ಯಕ್ಕೆ ಸಂಬಳ ಹೆಚ್ಚಳ ಹಾಗೂ ಬಡ್ತಿ ನೀಡುವಾಗ ಆ್ಯಪ್‌ಗಳನ್ನು ನೋಡಿ ಎಚ್‌ಆರ್‌ಗಳು ತಮ್ಮ ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಬಹುದು. ಸ್ಮಾಟ್‌ಸೊಸೈಟಿ.ಇನ್ ಸಿಸ್ಟ್‌ಸಾಫ್ಟ್ ಟೆಕ್ನಾಲಜೀಸ್ ಎಲ್‌ಎಲ್‌ಪಿ ಇಂದು ಪ್ರತಿ ನಗರಗಳಲ್ಲಿಯೂ ಅಪಾರ್ಟ್‌ಮೆಂಟ್ ವಾಸಿಗಳ ಸಂಖ್ಯೆ ಹೆಚ್ಚುತ್ತಿದೆ. ಅದರ ನಿರ್ವಹಣೆ ಕೂಡ ಅಲ್ಲಿಯ ನಿವಾಸಿಗಳ ಸಂಘ ಹಾಗೂ ಅಪಾರ್ಟ್‌ಮೆಂಟ್ ಮಾಲೀಕರಿಗೆ ದೊಡ್ಡ ಸವಾಲಾಗಿರುತ್ತದೆ. ಈ ಹಂತದಲ್ಲಿ ಅಪಾರ್ಟ್‌ಮೆಂಟ್‌ನ ಪ್ರತಿ ಸೌಕರ್ಯ ಹಾಗೂ ಕಾರ್ಯಗಳ ಬಗ್ಗೆ ನಿಗಾ ಇಡುವಂತಹ ಆ್ಯಪ್ ಇದಾಗಿದೆ. ಮುಂಬಯಿ ಮೂಲದ ಕಂಪನಿಯು ಈ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದು, ಯಾವುದೇ ಕ್ಲೇಷೆಗಳಿಗೆ ಕಾರಣವಾಗದೇ ಅಪಾರ್ಟ್‌ಮೆಂಟ್‌ನ ಸಂಘದ ಕೆಲಸಗಳನ್ನು ಸುಲಲಿತವಾಗಿ ಮಾಡಬಹುದು ಎನ್ನುವುದು ಸಂಸ್ಥೆಯ ವಾದಾಗಿದೆ. ಅಪಾರ್ಟ್‌ಮೆಂಟ್ ವಾಸಿಗಳೆಲ್ಲರಿಗೆ ಅಪ್ಲಿಕೇಷನ್ ಮೂಲಕ ಅನರ ಪ್ರತಿ ಬಿಲ್ ಹಾಗೂ ಇತರ ಸೇವೆಗಳ ಬಗ್ಗೆ ಆಗಾಗ ಸೂಚನೆ ನೀಡಲಾಗುತ್ತದೆ. ಲ್ಯಾಂಗ್ವೇಜ್ ಟ್ರಾನ್ಸ್ಲೇಷನ್ ರಿವಿರಿ ಲ್ಯಾಂಗ್ವೇಜ್ ಟೆಕ್ನಾಲಜಿ ಪ್ರಾದೇಶಿಕ ಭಾಷೆಗಳಿಂದ ಇಂಗ್ಲಿಷ್‌ಗೆ ಅನುವಾದ ಮಾಡುವ ಆ್ಯಪ್ ಇದು. ಬೆಂಗಳೂರು ಮೂಲದ ಈ ಕಂಪನಿಯು ಈಗಾಗಲೇ ಮೈಕ್ರೋಮ್ಯಾಕ್ಸ್ ಹಾಗೂ ಇನ್ನಿತರ ಮೊಬೈಲ್ ಕಂಪನಿಗಳ ಜತೆ ಕೆಲಸ ಮಾಡುತ್ತಿದೆ. ಇತರೆ ಭಾಷೆಗಳಲ್ಲಿ ಬರುವ ವಾಕ್ಯಗಳನ್ನು ಇಂಗ್ಲಿಷ್‌ಗೆ ಇದು ಅರ್ಥಾನುಸಾರ ಅನುವಾದ ಮಾಡುತ್ತದೆ. ಭಾವಾನುಸಾರ ಅನುವಾದಕ್ಕೆ ಈ ಆ್ಯಪ್ ಕೂಡ ಯಶಸ್ವಿಯಾಗಿಲ್ಲ. ಇದಲ್ಲದೇ ಇಂಗ್ಲಿಷ್‌ನ್ನು ಕಲಿಯಲು ಇದು ನೆರವು ನೀಡಲಿದೆ. ಇಂಗ್ಲಿಷ್‌ನ ಅತ್ಯಗತ್ಯ 800 ಶಬ್ದಗಳನ್ನು ಇದರಲ್ಲಿ ಸೇರಿಸಲಾಗಿದೆ. ಇದರಿಂದ ಸುಲಭವಾಗಿ ಇಂಗ್ಲಿಷ್ ಕಲಿಯಬಹುದಾಗಿದೆ. ಇಂಗ್ಲಿಷ್‌ನ ಅಗತ್ಯದ ಶಬ್ದಗಳ ಅರ್ಥವನ್ನು ಇತರೇ ಭಾಷೆಗಳಲ್ಲಿಯೂ ನೀಡಲಾಗಿದೆ. ಇಂಗ್ಲಿಷ್ ಡಿಕ್ಷನರಿ ಏವನ್ ಮೊಬಿಲಿಟಿ ಸೊಲ್ಯೂಷನ್ಸ್ ಭಾಷೆಯನ್ನು ಆಟವಾಡುತ್ತ ಕಲಿತರೆ ಮಾತ್ರ ನೆನಪಿರಲು ಸಾಧ್ಯ, ಇಲ್ಲವಾದಲ್ಲಿ ದಿನಬಳಕೆಗೆ ಭಾಷೆಯನ್ನು ಬಳಸಲು ಸಾಧ್ಯವಿಲ್ಲ ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಪ್ರನ್ಸ್‌ಟನ್ ಡಿಕ್ಷನರಿಯನ್ನು ಬಳಸಿಕೊಂಡು ಪದಗಳ ಅರ್ಥ, ಉಚ್ಛಾರಣೆ ಹಾಗೂ ಪದದ ಇತಿಹಾಸವನ್ನು ಇಲ್ಲಿ ನೀಡಲಾಗಿದೆ. ಮತ್ತೊಂದು ವಿಶೇಷವೆಂದರೆ ಬಹುತೇಕ ಶಬ್ದಗಳನ್ನು ಕಲಿಯಲು ರೈಮ್ ಗೇಮ್‌ಗಳನ್ನು ನೀಡಲಾಗಿದೆ. ಇದರ ಜತೆಗೆ ಇಂಟರ್ಯಾಕ್ಟಿವ್ ಸಂವಹನ ಕೂಡ ಮಾಡಬಹುದಾಗಿದೆ. ಮಂಡಿ ಟ್ರೇಡ್ಸ್ ಆಪ್‌ಫೇಸ್ ಟೆಕ್ನಾಲಜೀಸ್ ಯಾವುದೇ ಎಪಿಎಂಸಿಗೆ ಭೇಟಿ ನೀಡಿದರೆ ಸಾಮಾನ್ಯವಾಗಿ ಕಿವಿಗೆ ಬೀಳುವ ಶಬ್ದವೆಂದರೆ ಮಂಡಿ. ರೈತರು ಹಾಗೂ ವ್ಯಾಪಾರಿಗಳ ಮಧ್ಯೆ ಮಾತುಕತೆ ನಡೆಯುವ ಸ್ಥಳವದು. ಭಾರತದ ಪ್ರತಿಯೊಂದು ಎಪಿಎಂಸಿ ಮಾರುಕಟ್ಟೆಯ ವಿವರಗಳನ್ನು ಈ ಆ್ಯಪ್ ಹೊಂದಿರುತ್ತದೆ. ಇದರಿಂದ ಮೊಬೈಲ್ ಹೊಂದಿರುವ ಪ್ರತಿಯೊಬ್ಬ ರೈತ ಕೂಡ ತನ್ನ ಕೃಷಿ ಉತ್ಪನ್ನದ ಗರಿಷ್ಠ ಬೆಲೆ ತಿಳಿದುಕೊಳ್ಳಬಹುದು. ಸ್ಮಾರ್ಟ್‌ಪೋನ್ ಇಲ್ಲದಿದ್ದರೇ ಎಸ್‌ಎಂಎಸ್ ಮೂಲಕವು ಮಾಹಿತಿ ಪಡೆಯಬಹುದಾಗಿದೆ. ಇದರ ಜತೆಗೆ ನಿರಂತರವಾಗಿ ಬೆಲೆಯಲ್ಲಾಗುವ ಬದಲಾವಣೆ ಕುರಿತ ಸಂದೇಶವನ್ನು ರೈತ ಪಡೆಯಬಹುದು. ಇದರ ಜತೆಗೆ ವಾತಾವರಣದಲ್ಲಿನ ಬದಲಾವಣೆಗಳನ್ನು ಮಂಡಿ ಟ್ರೇಡ್ಸ್ ಮೂಲಕ ಸ್ವೀಕರಿಸಬಹುದಾಗಿದೆ. - ರಾಧೆ