ಬರ್ತ್‌ಡೇಟಿಲ್ಲದ ಬ್ರಹ್ಮಾಂಡ! ನಮ್ಮ ಬ್ರಹ್ಮಾಂಡ ಪ್ರಾರಂಭವಾದದ್ದು ಹೇಗೆ? ಯಾವಾಗ? ಈ ಪ್ರಶ್ನೆಗಳು ವಿಜ್ಞಾನಿಗಳನ್ನು ಸದಾ ಕಾಡಿವೆ. ನಾವು... ನಮ್ಮ ಬ್ರಹ್ಮಾಂಡ ಪ್ರಾರಂಭವಾದದ್ದು ಹೇಗೆ? ಯಾವಾಗ? ಈ ಪ್ರಶ್ನೆಗಳು ವಿಜ್ಞಾನಿಗಳನ್ನು ಸದಾ ಕಾಡಿವೆ. ನಾವು ಬ್ರಹ್ಮಾಂಡವೆಂದಾಗ ಕೇವಲ ನಮ್ಮ ಜಗತ್ತೊಂದನ್ನೇ ಉದ್ದೇಶಿಸುವುದಿಲ್ಲ. ಬದಲಾಗಿ ನಾವಿರುವ ಸೌರವ್ಯೂಹದ ಜೊತೆಗೆ ಇರಬಹುದಾದ ಸಕಲ ಗ್ರಹಗಳು, ತಾರೆಗಳು, ಎಲ್ಲವನ್ನೂ ಸೇರಿಸಿಕೊಳ್ಳುತ್ತೇವೆ. ನಿಜವಾಗಿ ಅದು ನಮ್ಮ ಪುರಾಣಗಳಲ್ಲಿ ಹೇಳಲ್ಪಡುವ- ಬ್ರಹ್ಮಾಂಡ. ಪ್ರಚಲಿತ ಸಿದ್ಧಾಂತ ಹೇಳುತ್ತದೆ- ಅದರ ವಯಸ್ಸು 13.7 ಬಿಲಿಯನ್ ವರ್ಷಗಳು. ಆದರೆ ಇತ್ತೀಚಿನ ಸಂಶೋಧನೆಗಳು ಸಾರುತ್ತಿವೆ- ಹಾಗಲ್ಲ, ನಮ್ಮ ಬ್ರಹ್ಮಾಂಡ ಅನಂತವಾದದ್ದು ಅದಕ್ಕೆ ವಯಸ್ಸೆಂಬುದೇ ಇಲ್ಲ. ಬ್ರಹ್ಮಾಂಡದ ಆದಿಯ ಬಗ್ಗೆ ಉತ್ತರ ಹುಡುಕುವ ಸಾಹಸಕ್ಕೆ ಪ್ರೇರೇಪಣೆ ನೀಡಿದ್ದು ಆಲ್ಬರ್ಟ್ ಐನ್‌ಸ್ಟೀನ್ ಪ್ರತಿಪಾದಿಸಿದ ಸಾಪೇಕ್ಷ ಸಿದ್ಧಾಂತ. ಅದು ವಿಜ್ಞಾನ ಇತಿಹಾಸದ ಒಂದು ಮೈಲಿಗಲ್ಲು. 1905ರಲ್ಲಿ ವಿಶೇಷ ಸಾಪೇಕ್ಷ ಸಿದ್ಧಾಂತ ನೀಡಿದ ಐನ್‌ಸ್ಟೀನ್ 1915ರಲ್ಲಿ ಸಾಮಾನ್ಯ ಸಾಪೇಕ್ಷ ಸಿದ್ಧಾಂತವನ್ನು ನೀಡಿ ಜಗತ್ತನ್ನೇ ಚಕಿತಗೊಳಿಸಿದರು. ದೇಶ () ಮತ್ತು ಕಾಲ () ಇವೆರಡೂ ನಿರಪೇಕ್ಷವಾದುವಲ್ಲ (). ಬದಲಾಗಿ ಎರಡೂ ಸಾಪೇಕ್ಷವಾದವು () ಎಂಬುದನ್ನು ತೋರಿಸಿಕೊಟ್ಟರು. ಅವರ ಒಂದು ಪ್ರಮುಖ ಸಾಧನೆ ಎಂದರೆ ಗುರುತ್ವಕ್ಕೆ ಒಂದು ಹೊಸ ವಿವರಣೆ ಕೊಟ್ಟಿದ್ದು. ಗುರುತ್ವ ಎಂದರೆ ಎರಡು ವಸ್ತುಗಳ ನಡುವೆ ವರ್ತಿಸುವ ಬಲ ಎಂದು ಐಸಾಕ್ ನ್ಯೂಟನ್ ಇನ್ನೂರು ವರ್ಷಗಳ ಹಿಂದೆ ನಮೂದಿಸಿದ್ದ. 'ಹಾಗಲ್ಲ' ಎಂದರು ಐನ್‌ಸ್ಟೀನ್. ಅವರ ಪ್ರಕಾರ ಗುರುತ್ವಕ್ಕೆ ಎರಡು ವಸ್ತುಗಳ ಅವಶ್ಯಕತೆ ಇಲ್ಲ. ಪ್ರತಿ ವಸ್ತುವೂ ತನ್ನ ಸುತ್ತಾ ಗುರುತ್ವದ ವಲಯವೊಂದನ್ನು ನಿರ್ಮಿಸಿಕೊಳ್ಳುತ್ತದೆ. ಸಾಪೇಕ್ಷ ಸಿದ್ಧಾಂತದ ಸಾರವಾದ ಇದನ್ನು ಹೀಗೆ ವಿವರಿಸಬಹುದು. ಐನ್‌ಸ್ಟೀನರ ಪ್ರಕಾರ, ದೇಶ-ಕಾಲದ ಜಾಲವೆಂಬುದೊಂದಿದೆ (- ). ಇದು ನಾಲ್ಕು ಆಯಾಮಗಳ ಹಾಸಿಗೆಯಂತೆ. ನಾವು ಸುಲಭವಾಗಿ ಮೂರು ಆಯಾಮಗಳನ್ನು ಊಹಿಸಿಕೊಳ್ಳಬಹುದು (,, ಪೂರ್ವ- ಪಶ್ಚಿಮ, ಉತ್ತರ- ದಕ್ಷಿಣ, ಮೇಲು- ಕೆಳಗೆ). ಇವುಗಳ ಜೊತೆ ಕಾಲವನ್ನು ಸೇರಿಸಿದರೆ ನಾಲ್ಕು ಆಯಾಮಗಳಾಗುತ್ತವೆ. ಇದನ್ನು ಊಹಿಸಿಕೊಳ್ಳುವುದು ಕಷ್ಟ, ಆದರೆ ಗಣಿತದಲ್ಲಿ ನಮೂದಿಸುವುದು ಸುಲಭ. ಇಂಥ ಹಾಸಿಗೆಯ ಮೇಲೆ ಭೂಮಿ, ಸೂರ್ಯ, ಚಂದ್ರ, ಗ್ರಹ, ತಾರೆಗಳು ನೆಲೆಸಿವೆ. ಇವಕ್ಕೆಲ್ಲಾ ತಮ್ಮದೇ ಆದ ತೂಕವಿದೆ. ಪರಿಣಾಮ ಇವು ನೆಲೆಸಿರುವ ಕಡೆ ಹಾಸಿಗೆ ಜಜ್ಜಿಹೋಗಿ ದೇಶ- ಕಾಲದ ಜಾಲ ವಕ್ರವಾಗುತ್ತದೆ. ಇಲ್ಲಿ ಮತ್ತ್ಯಾವುದಾದರೂ ವಸ್ತು ಆಗಮಿಸಿದರೆ ಅದು ಈ ವಕ್ರಹಾದಿಯನ್ನು ಹಿಡಿಯದೇ ವಿಧಿ ಇಲ್ಲ. ಉದಾಹರಣೆಗೆ ಮರದಿಂದ ಬೀಳುವ ಸೇಬಿನ ಹಣ್ಣು, ಭೂಮಿಯ ಹತ್ತಿರ ಇರುವ ಚಂದ್ರ, ಇತ್ಯಾದಿ. ಈ ವಕ್ರಹಾದಿಯೇ ಗುರುತ್ವ ಎಂದರು ಐನ್‌ಸ್ಟೀನ್. ಅವರು ಮತ್ತೊಂದು ಮಾತು ಹೇಳಿದರು. ಈ ವಕ್ರಹಾದಿಯಲ್ಲಿ ಬಿದ್ದ ಯಾವುದೇ ವಸ್ತುವಿನ ಚಲನೆ ಆ ವಸ್ತುವಿನ ಶಕ್ತಿಯನ್ನು ಅವಲಂಬಿಸುವುದಿಲ್ಲ. ಎಲ್ಲ ವಸ್ತುಗಳೂ ಏಕಪ್ರಕಾರವಾಗಿ ಚಲಿಸುತ್ತವೆ. ಐನ್‌ಸ್ಟೀನರನ್ನು ನ್ಯೂಟನ್ನನ್ನ ಎತ್ತರಕ್ಕೆ ಕೊಂಡೊಯ್ದ ಸಿದ್ಧಾಂತ ಇದು. ಕೇಳಿ ಜಗತ್ತೇ ಅಚ್ಚರಿಪಟ್ಟಿತು. ಸಿದ್ಧಾಂತದ ಪರಿಣಾಮಗಳು ಅನೇಕ- ಕಪ್ಪು ರಂಧ್ರ ( ) ಇವುಗಳಲ್ಲಿ ಒಂದು. ಅಲ್ಲದೇ ಅದು ನಮ್ಮ ಬ್ರಹ್ಮಾಂಡದ ಆದಿಯ ಬಗ್ಗೆಯೂ ಬೆಳಕು ಚೆಲ್ಲಿತು. 1917ರಲ್ಲಿ ಐನ್‌ಸ್ಟೀನ್ ತಮ್ಮ ಬ್ರಹ್ಮಾಂಡವನ್ನು ತಮ್ಮ ಸಿದ್ಧಾಂತದ ಮೂಲಕ ವಿವರಿಸುವ ಸಾಹಸವನ್ನು ಕೈಗೊಂಡರು. ಹಿಂದೆ ಕೆಪ್ಲರ್, ಗೆಲಿಲಿಯೋ ಮುಂತಾದವರು ಕೇವಲ ನಮ್ಮ ಸೌರವ್ಯೂಹವನ್ನು ಪರಿಗಣಿಸಿದ್ದರು. ಆದರೆ, ಐನ್‌ಸ್ಟೀನ್ ಇಡೀ ಬ್ರಹ್ಮಾಂಡದತ್ತ ಗಮನ ಹರಿಸಿ ಒಂದು ಸಮೀಕರಣವನ್ನು ವೃದ್ಧಿಗೊಳಿಸಿದರು. ಇದನ್ನು ಬಿಡಿಸಿದಾಗ ದೊರಕಿದ ಫಲಿತಾಂಶವನ್ನು ಕಂಡು ಅವರು ಕಸಿವಿಸಿಗೊಂಡರು. ಕಾರಣ ಅವರ ಫಲಿತಾಂಶದ ಪ್ರಕಾರ ಬ್ರಹ್ಮಾಂಡ ದಿನೇ ದಿನೇ ಕುಗ್ಗುತ್ತಿದೆ 'ಇದು ಹೇಗೆ ಸಾಧ್ಯ? ಬ್ರಹ್ಮಾಂಡ ಸ್ಥಿರವಾದದ್ದು ಅಲ್ಲವೇ?' ಎಂದವರೇ ಸಮೀಕರಣಕ್ಕೆ ಮತ್ತೊಂದು ಸಂಖ್ಯೆಯನ್ನು ಸೇರಿಸಿದರು ( ). ಬ್ರಹ್ಮಾಂಡ ಸ್ಥಿರವಾಯಿತು. ಐನ್‌ಸ್ಟೀನರಿಗೆ ತೃಪ್ತಿ ಆಯಿತು. ಅವರು ಈ ವೇಳೆಗಾಗಲೇ ವಿಶ್ವವಿಖ್ಯಾತರಾಗಿದ್ದರು. ಮಿಕ್ಕ ವಿಜ್ಞಾನಿಗಳು ಅವರ ಕೊಡುಗೆಯನ್ನು ಮರುಮಾತಾಡದೇ ಒಪ್ಪಿಕೊಂಡರು. ಆದರೆ, ವಿಜ್ಞಾನ ನಿಂತ ನೀರಲ್ಲ. 1922ರಲ್ಲಿ ಅಲೆಕ್ಸಾಂಡರ್ ಫ್ರೀಡ್‌ಮನ್ ಎಂಬ ರಷ್ಯಾ ನಿವಾಸಿ ಮರುಮಾತಾಡಿ ಐನ್‌ಸ್ಟೀನರ ವಾದ ಸರಿಯಲ್ಲ ಎಂದು ಸಾರಿದ. ಅವನ ಲೆಕ್ಕಾಚಾರದ ಪ್ರಕಾರ, ನಮ್ಮ ಬ್ರಹ್ಮಾಂಡ ದಿನೇ ದಿನೇ ಉಬ್ಬುತ್ತಿದೆ, ಸ್ಥಿರವಲ್ಲ. ಆದರೆ ಐನ್‌ಸ್ಟೀನ್ ಅವನ ವಾದವನ್ನು ತಳ್ಳಿ ಹಾಕಿದರು. ಫ್ರೀಡ್‌ಮನ್ ತನ್ನ 37ನೇ ವಯಸ್ಸಿನಲ್ಲೇ ಮರಣಹೊಂದಿದಾಗ ವಾದ- ವಿವಾದಗಳಿಗೆ ತೆರೆ ಬಿತ್ತು. ನಂತರ ಬೆಲ್ಜಿಯಮ್‌ನ ವಿಜ್ಞಾನಿ ಮತ್ತು ಪಾದ್ರಿ ಜಾರ್ಜ್ ಲಮೈತ್ರೆ ಅಖಾಡಕ್ಕೆ ಇಳಿದ. ಐನ್‌ಸ್ಟೀನರಿಗೆ ಖಗೋಳ ಶಾಸ್ತ್ರದಲ್ಲಿ ಅಂಥ ಪರಣತಿ ಇರಲಿಲ್ಲ. ಆದರೆ ಆ ಶಾಸ್ತ್ರದಲ್ಲಿ ಲಮೈತ್ರೆ ನುರಿತವನಾಗಿದ್ದ. ಅವನೂ ಇದೇ ಪ್ರಶ್ನೆಯನ್ನು ಕುರಿತು ಸಂಶೋಧನೆ ನಡೆಸಿ 'ನಮ್ಮ ಬ್ರಹ್ಮಾಂಡ ದಿನೇ ದಿನೇ ದೊಡ್ಡದಾಗುತ್ತಿದೆ' ಎಂಬ ವಾದವನ್ನು ಎತಿಹಿಡಿದ. ಅಲ್ಲದೆ ಆತ ಐನ್‌ಸ್ಟೀನರ ಮನವೊಲಿಸಿದ. 1931ರಲ್ಲಿ ಐನ್‌ಸ್ಟೀನ್ ಅಮೆರಿಕ ಪ್ರವಾಸ ಕೈಗೊಂಡಾಗ ಮೌಂಟ್ ವಿಲ್ಸನ್ ಎಂಬಲ್ಲಿ ಸ್ಥಾಪಿತವಾಗಿದ್ದ ಹಬಲ್ ದೂರದರ್ಶಕವನ್ನು ಪರೀಕ್ಷಿಸಿದರು. ಅಲ್ಲಿನ ವಿಜ್ಞಾನಿಗಳು ಅತಿ ದೂರದ ತಾರೆಗಳ ವೀಕ್ಷಣೆ ನಡೆಸಿದ್ದರು. ಅವುಗಳಿಂದ ಒಂದು ಅಂಶ ಸ್ಪಷ್ಟವಾಗಿತ್ತು- ನಮ್ಮ ಬ್ರಹ್ಮಾಂಡ ಸ್ಥಿರವಾದುದ್ದಲ್ಲ, ಅದು ಸಿಡಿಯುತ್ತಿದೆ. ಐನ್‌ಸ್ಟೀನ್ ತಮ್ಮ ತಪ್ಪನ್ನು ಒಪ್ಪಿಕೊಂಡರು. ಹಾಗಾದರೆ ನಮ್ಮ ಬ್ರಹ್ಮಾಂಡ ದೊಡ್‌ಡದಾಗುತ್ತಲೇ ಇದೆ. ಇದರ ಪರಿಣಾಮವೇನು? ಯೋಚಿಸಿ. ಹಿಂದೆ ಹೇಳಿದ ದೇಶ- ಕಾಲಗಳ ಹಾಸಿಗೆಯನ್ನು ಮತ್ತೆ ಪರಿಗಣಿಸಿ. ಈ ಸಿದ್ಧಾಂತದ ಪ್ರಕಾರ, ಈ ಹಾಸಿಗೆ ಬಲೂನಿನಂತೆ ಉಬ್ಬುತ್ತಿದೆ. ಗ್ರಹಗಳ ತಾರೆಗಳ ನಡುವಿನ ಪರಸ್ಪರ ದೂರ ಹೆಚ್ಚಾಗುತ್ತಿದೆ. ಈಗ ಊಹಿಸಿ. ನೆನ್ನೆ ಈ ದೂರ ಸ್ವಲ್ಪ ಕಡಿಮೆ ಇತ್ತು, ಮೊನ್ನೆ ಇನ್ನಷ್ಟು ಕಡಿಮೆ. ಹಾಗಾದರೆ ಹೋದ ವರ್ಷ? ನೂರು ವರ್ಷಗಳ ಹಿಂದೆ? ಕೋಟಿ ವರ್ಷಗಳ ಹಿಂದೆ? ನಮ್ಮ ಬ್ರಹ್ಮಾಂಡದ ಗಾತ್ರ ತೀರಾ ಕಡಿಮೆ ಇದ್ದಿರಬೇಕು. ಹೌದು ಈ ಸಿದ್ಧಾಂತ ಹೇಳುವುದು ಇದನ್ನೇ. ಹೀಗೆ ಹಿಂದೆ ಹೋಗುತ್ತಾ 13.7 ಬಿಲಿಯನ್ ವರ್ಷಗಳನ್ನು ತಲುಪಿದರೆ ಆಗ ನಮ್ಮ ಬ್ರಹ್ಮಾಂಡ ಕೇವಲ ಒಂದು ಬಿಂದುವಾಗಿತ್ತು ಎನ್ನಲಾಗಿದೆ. ಆಗ ಒಂದು ಆಸ್ಫೋಟನೆ ಉಂಟಾಗಿ ಆಗಿನಿಂದ ಸಿಡಿತ ಮುಂದುವರಿದಿದೆ. ಇಂದಿಗೂ ನಿಂತಿಲ್ಲ. ಆಗ ಬ್ರಹ್ಮಾಂಡದ ಸಾಂದ್ರತೆ ಮತ್ತು ಉಷ್ಣತೆ ಅಪಾರವಾಗಿದ್ದವು (). ದಿನಗಳುರುಳಿದಂತೆ ಇವೆರಡೂ ಕಡಿಮೆಯಾಗುತ್ತಾ ಬಂದವು. ಹಾಗೆಯೇ ಗ್ರಹಗಳು, ತಾರೆಗಳು, ಸೌರವ್ಯೂಹಗಳು ಜನ್ಮ ತಾಳಿದವು. ಇದನ್ನು ಎಂದು ಕರೆಯುತ್ತಾರೆ. ಇಂದಿಗೂ ಈ ಸಿದ್ಧಾಂತ ಜಾರಿಯಲ್ಲಿದೆ. ಹತ್ತು ವರ್ಷಗಳ ಹಿಂದೆ ಮತ್ತೊಂದು ಮುಖ್ಯ ಅಂಶ ಹೊರಬಂತು. ನಾವು ಮೇಲೆ ಹೇಳಿದ ಬಿಗ್‌ಬ್ಯಾಂಗ್ ಐನ್‌ಸ್ಟೀನರ ಸಾಪೇಕ್ಷ ಸಿದ್ಧಾಂತದ ಪರಿಣಾಮ. ಇಲ್ಲಿ ಮತ್ತೊಂದು ವಿಷಯವನ್ನು ತಿಳಿಸಬೇಕು. ಐನ್‌ಸ್ಟೀನ್ 'ಫೋಟೋ ಎಲೆಕ್ಟ್ರಿಕ್ ಎಫೆಕ್ಟ್‌' ಕ್ರಿಯೆಯನ್ನು 1905ರಲ್ಲಿ ವಿವರಿಸಿದರು. ಅವರಿಗೆ ನೊಬೆಲ್ ಬಹುಮಾನ ಬಂದದ್ದು ಈ ಸಂಶೋಧನೆಗೇ ಹೊರತು ಸಾಪೇಕ್ಷ ಸಿದ್ಧಾಂತಕ್ಕಲ್ಲ. ಇವರು ಕೊಟ್ಟ ವಿವರಣೆಯನ್ನು ಅನುಸರಿಸಿ ಕ್ವಾಂಟಂ ಮೆಕಾನಿಕ್ಸ್ ( ) ಎಂಬ ಭೌತಶಾಸ್ತ್ರದ ವರ್ಗವೊಂದು ಪ್ರಾರಂಭವಾಯಿತು. ಸೋಜಿಗವೆಂದರೆ ಐನ್‌ಸ್ಟೀನರಿಗೇ ಅದರಲ್ಲಿ ನಂಬಿಕೆ ಇರಲಿಲ್ಲ. ಜೀವನದ ಉದ್ದಕ್ಕೂ ಅದನ್ನು ವಿರೋಧಿಸುತ್ತಲೇ ಇದ್ದರು. ಆದರೆ ಸಣ್ಣ ಕಣಗಳ ಚಲನೆ, ಅಣುವಿನ ಒಳಗಿರುವ ಕಣಗಳ ಚಲನೆ ಇವನ್ನು ವಿವರಿಸಲು ಕ್ವಾಂಟಂ ಮೆಕಾನಿಕ್ಸ್ ಅತ್ಯವಶ್ಯ ಎನಿಸಿತು. ಇತ್ತೀಚೆಗೆ ವಿಜ್ಞಾನಿಗಳು ಸಾಪೇಕ್ಷ ಸಿದ್ಧಾಂತ ಮತ್ತು ಕ್ವಾಂಟಂ ಮೆಕಾನಿಕ್ಸ್ ಇವೆರಡನ್ನೂ ಒಂದುಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರಲ್ಲಿ ಒಬ್ಬರು ಈಜಿಪ್ಟಿನ ಅಡೆಲ್ ಆವಾದ್. ಕಳೆದ ಅಕ್ಟೋಬರ್‌ನಲ್ಲಿ ಹೊರಬಂದ ಇವರ ಪೇಪರ್ ಪ್ರಕಾರ, ಒಂದು ವಸ್ತುವಿನ ದೇಶ- ಕಾಲ ಜಾಲವನ್ನು ಹೊಕ್ಕ ಕಣಗಳೆಲ್ಲ ಒಂದೇ ರೀತಿ ವರ್ತಿಸುವುದಿಲ್ಲ. ಅವುಗಳಲ್ಲಿ ಹುದುಗಿರುವ ಶಕ್ತಿಯಾನುಸಾರ ಭಿನ್ನವಾಗಿ ವರ್ತಿಸುತ್ತವೆ! ಇದು ಐನ್‌ಸ್ಟೀನರು ಹೇಳಿದ ಮಾತಿಗೆ ತದ್ವಿರುದ್ಧವಾಯಿತು. ಗುರುತ್ವ ಏಕಪ್ರಕಾರವಾಗಿ ತನ್ನ ಪ್ರಭಾವ ಚೆಲ್ಲುವುದಿಲ್ಲ. ಬೆಳಕು ಕೂಡ ಪ್ರಬಲ ಜಾಲವನ್ನು ಪ್ರವೇಶಿಸಿದಾಗ ವಿಭಜನೆ ಹೊಂದಿ ತನ್ನ ಸಪ್ತ ವರ್ಣಗಳನ್ನು ಪ್ರದರ್ಶಿಸೀತು. ಇದೇ ರೈನ್‌ಬೋ ಸಿದ್ಧಾಂತ. ಖಗೋಳಕ್ಕೆ ಇದನ್ನು ಅನ್ವಯಿಸಿದಾಗ ಬಿಗ್‌ಬ್ಯಾಂಗ್ ಸಿದ್ಧಾಂತಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. ಎರಡು ಸಾಧ್ಯತೆಗಳನ್ನು ನೀಡಲಾಗಿದೆ. ಒಂದು, ನಾವು ಹಿಂದಕ್ಕೆ ಹೋದಂತೆ ಬ್ರಹ್ಮಾಂಡದ ಗಾತ್ರ ಕುಗ್ಗುತ್ತಾ ಹೋಗುತ್ತದೆ. ಆದರೆ, ಸೊನ್ನೆ ಆಗುವುದಿಲ್ಲ. ಅದು ಒಂದು ಬಿಂದುವಾಗುವುದಿಲ್ಲ. ಎರಡು, ಹಿಂದೆ ಹೋಗುತ್ತಿದ್ದಂತೆ ಗಾತ್ರ ಕಡಿಮೆ ಆಗುತ್ತದೆ, ನಿಜ. ಆದರೆ ಅದು ಒಂದು ನಿರ್ದಿಷ್ಟ ಗಾತ್ರವನ್ನು ತಲುಪಿದ ನಂತರ ಅದೇ ಗಾತ್ರವನ್ನು ಕಾಪಾಡಿಕೊಳ್ಳುತ್ತದೆ. ಅಂದರೆ ಬಿಗ್‌ಬ್ಯಾಂಗ್ ಸಿದ್ಧಾಂತಕ್ಕೆ ಬೇಕಾದ ಸ್ಫೋಟ ಇಲ್ಲಿಲ್ಲ. ಸ್ಫೋಟ ಆಗಲೇ ಇಲ್ಲ. ಹಾಗಾದರೆ ನಮ್ಮ ಬ್ರಹ್ಮಾಂಡದ ವಯಸ್ಸು 13.7 ಬಿಲಿಯನ್ ವರ್ಷಗಳಲ್ಲ. ಅನಂತಕಾಲದಿಂದ ಅದು ಅಸ್ತಿತ್ವದಲ್ಲಿತ್ತು ಎಂದು ತೀರ್ಮಾನಿಸಬೇಕಾಗಿದೆ. ವಿಜ್ಞಾನದಲ್ಲಿ ಯಾವುದೇ ಸಿದ್ಧಾಂತವೂ ಶಾಶ್ವತವಲ್ಲ. ಹೊಸ ಪುರಾವೆ ಬಂದಂತೆ ಹಳೆಯದು ಮೂಲೆ ಸೇರುತ್ತದೆ. ರೈನ್‌ಬೋ ಸಿದ್ಧಾಂತವನ್ನು ಪ್ರಯೋಗ ವೀಕ್ಷಣೆಗಳ ಮೂಲಕ ಸಾಬೀತು ಪಡಿಸಬೇಕಾಗಿದೆ. ಅದೆಂದಾಗುವುದೋ? ಕಾದು ನೋಡಬೇಕು. - ಸಿಡ್ನಿ ಶ್ರೀನಿವಾಸ್ @.