ಸ್ಯಾಮ್ ಯುಗ ಮೊಬೈಲ್ ಜಗತ್ತಿನ ದಿಗ್ಗಜ ಸ್ಯಾಮ್‌ಸಂಗ್ ಸಂಸ್ಥೆಯು ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಮತ್ತಷ್ಟು ಸ್ಮಾರ್ಟ್ ಆಗುತ್ತಿದೆ. ಮೊಬೈಲ್ ಜಗತ್ತಿನ ದಿಗ್ಗಜ ಸ್ಯಾಮ್‌ಸಂಗ್ ಸಂಸ್ಥೆಯು ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಮತ್ತಷ್ಟು ಸ್ಮಾರ್ಟ್ ಆಗುತ್ತಿದೆ. ಬಳಕೆದಾರ ಬಯಸುವ ಗಾತ್ರ, ಸ್ಪೆಸಿಫಿಕೇಷನ್ ಹಾಗೂ ದರದಲ್ಲಿ ಮೊಬೈಲ್, ಫ್ಯಾಬ್ಲೆಟ್, ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ತರುತ್ತಿದೆ. ಪ್ರತಿ ತಿಂಗಳು ಹೊಸದೊಂದು ಉತ್ಪನ್ನವನ್ನು ಮಾರುಕಟ್ಟೆಗೆ ತರುತ್ತಿದೆ. ಆದರೆ ಇವೆಲ್ಲ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಬೇರೂರಿರುವ ಮತ್ತೊಂದು ಬ್ರಾಂಡ್‌ಗೆ ಎಚ್ಚರಿಕೆಯ ಸಂದೇಶ ನೀಡುತ್ತಿದೆ. ಒಂದೆಡೆ ಹೊಸ ಉತ್ಪನ್ನ, ಮತ್ತೊಂದೆಡೆ ಈಗಿರುವ ಉತ್ಪನ್ನಗಳಿಗೆ ಪೈಪೋಟಿ ನೀಡುವ ಉತ್ಸಾಹವನ್ನು ಒಂದೇ ಸಮನಾಗಿ ಸ್ಯಾಮ್‌ಸಂಗ್ ಮಾಡುತ್ತಿದೆ. ಇದರ ಪರಿಣಾಮವಾಗಿ ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯ 2013ರ ಮೊದಲ ಆರ್ಥಿಕ ತ್ರೈಮಾಸಿಕದಲ್ಲಿ ಶೇ.70ರಷ್ಟು ಷೇರನ್ನು ಸ್ಯಾಮ್‌ಸಂಗ್ ಬಾಚಿಕೊಂಡಿದೆ. ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 4 ಇಂಚಿನ ಸ್ಕ್ರೀನ್‌ಗಳಿಂದ 6.3 ಇಂಚಿನ ಸ್ಕ್ರೀನ್‌ಗಳವರೆಗೆ ಫೋನ್‌ಗಳು ಲಭ್ಯವಿವೆ. ಇದಕ್ಕೂ ಹೆಚ್ಚಿನ ಗಾತ್ರದ ಫ್ಯಾಬ್ಲೆಟ್ ಹಾಗೂ ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಒಂದು ಹಂತದಲ್ಲಿ ಸ್ಯಾಮ್‌ಸಂಗ್ ಕಂಪನಿಯು ತನ್ನ ಉತ್ಪನ್ನಗಳನ್ನು 5.5 ಇಂಚಿನ ನೋಟ್-2ಗೆ ನಿಲ್ಲಿಸಿತ್ತು. ದೊಡ್ಡ ಗಾತ್ರದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಆ್ಯಪಲ್ ಎದುರು ಸರಿಸಮನಾಗಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಈಗ ಮೊಬೈಲ್, ಟ್ಯಾಬ್ಲೆಟ್ ಹಾಗೂ ಫ್ಯಾಬ್ಲೆಟ್ ಎಂಬ ಮೂರು ವಿಭಾಗಳಲ್ಲಿಯೂ ಜಾಗತಿಕ ಮಾರುಕಟ್ಟೆಗೆ ಗುಣಮಟ್ಟದ ಸ್ಪರ್ಧೆ ನೀಡಲು ಸ್ಯಾಮ್‌ಸಂಗ್ ಸಜ್ಜಾಗಿದೆ. ಸ್ಯಾಮ್‌ಸಂಗ್ ಟ್ಯಾಬ್-3 ಮಾರುಕಟ್ಟೆಯಲ್ಲಿ ಲಭ್ಯವಿರುವ ಟ್ಯಾಬ್ಲೆಟ್‌ಗಳಲ್ಲಿ ಇದು ಸ್ವಲ್ಪ ವಿಭಿನ್ನವಾಗಿದೆ. ಚಿತ್ರದಲ್ಲಿ ನೋಡಲು ಎಸ್-4ನ ಮತ್ತೊಂದು ರೂಪದಂತೆ ಗೋಚರಿಸುತ್ತದೆ. ಸ್ಕ್ರೀನ್ ಹಾಗೂ ಎಡ್ಜ್‌ಗಳ ನಡುವಿನ ಅಂತರ ತುಂಬಾ ಕಡಿಮೆಯಿದೆ. ಸ್ಮಾರ್ಟ್‌ಫೋನ್‌ಗಳನ್ನು ಆಕರ್ಷಕವಾಗಿ ಕಾಣಲು ಇರಬೇಕಿರುವ ಮೂಲಭೂತ ಅಂಶವಿದು. ಇದೊಂದೇ ಕಾರಣದಿಂದ ಈ ಹಿಂದಿನ ಟ್ಯಾಬ್‌ಗಳಿಗಿಂತ ಭಿನ್ನವಾಗಿದೆ. ಆಕರ್ಷಕ ವಿನ್ಯಾಸ ಹಾಗೂ ಗಾತ್ರದ ಕಾರಣದಿಂದ ಆ್ಯಪಲ್ ಟ್ಯಾಬ್ಲೆಟ್‌ಗಳ ಅಥವಾ ಐಪಾಡ್‌ಗಳತ್ತ ಗ್ರಾಹಕರು ಮುಖಮಾಡುತ್ತಿದ್ದರು. ಸ್ಯಾಮ್‌ಸಂಗ್, ಏಸರ್, ಮೈಕ್ರೋಸಾಫ್ಟ್ ಸೇರಿದಂತೆ ಕೆಲ ಪ್ರತಿಷ್ಠಿತ ಕಂಪನಿಗಳು ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ತಂದಿದ್ದರೂ ಎಡ್ಜ್‌ಗಳ ಗಾತ್ರ ಹೆಚ್ಚಿರುವ ಹಿನ್ನೆಲೆಯಲ್ಲಿ ಆ್ಯಪಲ್‌ನ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯವಾಗಲಿಲ್ಲ. ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಶೇ.65ಕ್ಕೂ ಹೆಚ್ಚಿನ ಪಾಲನ್ನು ಆ್ಯಪಲ್ ಹೊಂದಿತ್ತು. ಎಸ್-3, ಎಸ್-4 ಹಾಗೂ ಗ್ರ್ಯಾಂಡ್‌ಗಳ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿ ಪಾರುಪತ್ಯ ಮೆರೆದ ಸ್ಯಾಮ್‌ಸಂಗ್ ಈಗ ಟ್ಯಾಬ್-3 ಮೂಲಕ ಟ್ಯಾಬ್ಲೆಟ್ ಮಾರುಕಟ್ಟೆಯತ್ತ ಚಿತ್ತ ಹರಿಸಿದೆ. ಸರಳವಾಗಿ ಹೇಳಬೇಕೆಂದರೆ ಎಸ್-4 ಫೋನಿಗೆ ಬಳ್ಳಿ ಕಟ್ಟಿ ಎಳೆದು ಟ್ಯಾಬ್-3 ರೂಪಿಸಲಾಗಿದೆ. ಆದರೆ ತಾಂತ್ರಿಕವಾಗಿ ಎಸ್-4ನಷ್ಟು ಮನೋಜ್ಞವಾಗಿಲ್ಲ. ಇದರಿಂದ ಬೆಲೆಯಲ್ಲಿಯೂ ಎಸ್-4ಗಿಂತ ಸುಮಾರು 14 ಸಾವಿರ ಕಡಿಮೆಯಿದೆ. 8 ಇಂಚಿನ ಸ್ಕ್ರೀನ್, 316 ಗ್ರಾಂ ತೂಕ, 4,450 ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹಾಗೂ ಡ್ಯುಯಲ್ ಕೋರ್ ಪ್ರೊಸೆಸರ್ ಅನ್ನು ನೀಡಲಾಗಿದೆ. ಇದರೊಂದಿಗೆ ಎಸ್-4ನಲ್ಲಿನ ಗ್ರೂಪ್ ಮ್ಯೂಸಿಕ್ ಪ್ಲೇ ಸೇರಿದಂತೆ ಕೆಲ ಅಂಶಗಳನ್ನು ಅಳವಡಿಸಲಾಗಿದೆ. ಮರಿ ಎಸ್- 4 ಎಸ್-4 ಯಶಸ್ಸಿನ ಬಳಿಕ ಸ್ಯಾಮ್‌ಸಂಗ್ ಕಂಪನಿಯು ಎಸ್-4 ಮಿನಿ ಹೊರತರುತ್ತಿದೆ. ಎಸ್-4ನ ಎಲ್ಲ ತಾಂತ್ರಿಕ ಅಂಶಗಳನ್ನು ಒಳಗೊಂಡ ಈ ಮೊಬೈಲ್ 4.3 ಇಂಚಿನ ಗಾತ್ರದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಇನ್ನು ಕ್ಯಾಮೆರಾದಲ್ಲಿ ಎಸ್-4ಗಿಂತ ಕಡಿಮೆಯಿದ್ದು 8 ಎಂಪಿ ಮಾತ್ರ ನೀಡಲಾಗಿದೆ. ಆದರೆ ಗ್ರ್ಯಾಂಡ್‌ನಲ್ಲಿ ನೀಡಿರುವಂತೆ ಡ್ಯುಯಲ್ ಸಿಮ್ ಅವಕಾಶವನ್ನು ಮಿನಿಯಲ್ಲಿ ಇರಿಸಲಾಗಿದೆ. ಎಸ್-4ನಲ್ಲಿ ಡ್ಯುಯಲ್ ಸಿಮ್ ಇರಲಿಲ್ಲ. ಸ್ಕ್ರೀನ್ ಗಾತ್ರವನ್ನು ತಗ್ಗಿಸಿರುವ ಕಾರಣದಿಂದಲೇ ಬ್ಯಾಟರಿ ಸಾಮರ್ಥ್ಯವನ್ನು 1900 ಎಂಎಎಚ್‌ಗೆ ಇಳಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಇತರ ಫೋನ್‌ಗಳಿಗೆ ಹೋಲಿಸಿದರೆ ಕಡಿಮೆ ಎನಿಸಿದರೂ 4.3 ಇಂಚಿನ ಗಾತ್ರಕ್ಕೆ ಸಾಕಾಗಬಹುದು. ಸ್ಯಾಮ್‌ಸಂಗ್‌ನ ಎಲ್ಲ ಉತ್ತಮ ಮೊಬೈಲ್‌ಗಳು 5 ಇಂಚಿನಲ್ಲಿ ಲಭ್ಯವಿರುವ ಹಿನ್ನೆಲೆಯಲ್ಲಿ ಸಣ್ಣ ಗಾತ್ರದ ಮೊಬೈಲ್‌ಗಳ ಅಗತ್ಯ ಈ ಮೂಲಕ ಪೂರೈಸಲಾಗಿದೆ.ಮತ್ತೊಂದು ವಿಶೇಷವೆಂದರೆ ಇದರ ತೂಕ ಕೇವಲ 103 ಗ್ರಾಂ. ಗ್ರ್ಯಾಂಡ್ ಕ್ವಾಟ್ರಾ ಎಸ್-4 ಮಾರುಕಟ್ಟೆಗೆ ಬರುವ ಮುಂಚೆ ಗ್ರ್ಯಾಂಡ್ ಬಹುದೊಡ್ಡ ಸುದ್ದಿಮಾಡಿತ್ತು. ಗ್ರ್ಯಾಂಡ್ ಬೆಲೆ ಈಗಲೂ ಮಾರುಕಟ್ಟೆಯಲ್ಲಿ ರು. 20 ಸಾವಿರದ ಆಸುಪಾಸಿನಲ್ಲಿದೆ. ಇದೇ ತಾಂತ್ರಿಕ ಅಂಶಗಳನ್ನು ಒಳಗೊಂಡ ಗ್ರ್ಯಾಂಡ್ ಕ್ವಾಟ್ರಾವನ್ನು ಸ್ಯಾಮ್‌ಸಂಗ್ ಮಾರುಕಟ್ಟೆಗೆ ತಂದಿದೆ. ಕ್ಯಾಮೆರಾವನ್ನು 8 ಎಂಪಿ ಬದಲಾಗಿ ಕೇವಲ 5 ಎಂಪಿಗೆ ಸೀಮಿತಮಾಡಲಾಗಿದೆ. ಗ್ರ್ಯಾಂಡ್‌ಗಿಂತ ಸುಮಾರು ರು. 3 ಸಾವಿರ ಕಡಿಮೆ ದರಲ್ಲಿ ಇದು ಲಭ್ಯವಾಗುತ್ತಿದೆ. ಗೇಮಿಂಗ್‌ಗಾಗಿಯೇ ಇದನ್ನು ಬಿಡುಗಡೆಮಾಡುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ. ಇದರಲ್ಲೂ ಡ್ಯುಯಲ್ ಸಿಮ್ ಸೌಕರ್ಯ ನೀಡಲಾಗಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈಗ ಮೈಕ್ರೋಮ್ಯಾಕ್ಸ್, ಎಲ್‌ಜಿ, ಆ್ಯಪಲ್‌ಗಳು ಸದ್ದು ಮಾಡುತ್ತಿವೆ. ಆದರೆ ಸ್ಯಾಮ್‌ಸಂಗ್‌ನಲ್ಲಿ ದೊರೆಯುವ ವಿಭಿನ್ನ ಮಾದರಿ, ವಿನ್ಯಾಸ ಹಾಗೂ ಗಾತ್ರದ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್‌ಗಳು ಬೇರೆ ಬ್ರಾಂಡ್‌ನಲ್ಲಿ ಸಿಗುತ್ತಿಲ್ಲ. ಮೆಗಾ ಧಾರಾವಾಹಿ ಮೆಗಾ ಧಾರಾವಾಹಿಗಳಂತೆ ಸ್ಯಾಮ್‌ಸಂಗ್‌ನಲ್ಲಿ ಬರುತ್ತಿರುವ ಸ್ಮಾರ್ಟ್‌ಫೋನ್‌ಗಳಿಗೆ ಈಗ ಮೆಗಾ ಸಿರೀಸ್‌ನಲ್ಲಿ ಮೆಗಾ 5.8 ಮತ್ತು ಮೆಗಾ 6.3 ಸೇರಿದೆ. ಇದನ್ನು ಸಂಪೂರ್ಣವಾಗಿ ಸ್ಮಾರ್ಟ್‌ಫೋನ್ ಎನ್ನಲು ಸಾಧ್ಯವಿಲ್ಲ. ಏಕೆಂದರೆ, ಸ್ಮಾರ್ಟ್‌ಫೋನ್‌ನ ಸ್ಟಾಂಡರ್ಡ್ ಗಾತ್ರವು 5 ಇಂಚಿಗೆ ಸೀಮಿತವಾಗಿದೆ. ಆದ್ದರಿಂದ ಮೆಗಾ ಸಿರೀಸ್‌ನ್ನು ಫ್ಯಾಬ್ಲೆಟ್ ಎನ್ನಬಹುದು. ಹೆಸರಿನಲ್ಲಿರುವಂತೆಯೇ ಇವೆರಡು ಫೋನ್ ಅಥವಾ ಫ್ಯಾಬ್ಲೆಟ್‌ಗಳಿಗೆ ಇರುವ ಪ್ರಮುಖ ವ್ಯತ್ಯಾಸವೇ ಗಾತ್ರ ಹಾಗೂ ಬೆಲೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಇವೆರಡು ಗಾತ್ರದ ಫ್ಯಾಬ್ಲೆಟ್‌ಗೆ ಪರ್ಯಾಯವಿಲ್ಲ. ಎರಡು ಡ್ಯುಯಲ್ ಕೋರ್ ಪ್ರೊಸೆಸರ್ ಹಾಗೂ ಜೆಲ್ಲಿಬೀನ್ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ವಿನ್ಯಾಸದಲ್ಲಿ ಎಸ್-4 ಮಾದರಿಯನ್ನೇ ಉಳಿಸಿಕೊಳ್ಳಲಾಗಿದೆ. - ರಾಧೆ