ಐಪೋಮೊ ಸಿಇಟಿ ರೂಮ್ 'ಏನಿದು ಯಾವಾಗ್ಲೂ ಮೊಬೈಲ್‌ನಲ್ಲಿಯೇ ಮುಳುಗಿರ್ತೀಯಾ?' ಎಂದಿನ್ನು ಮಕ್ಕಳಿಗೆ ಬೈಯುವ ಹಾಗಿಲ್ಲ! ಯಾಕ್ ಗೊತ್ತಾ? ಮೊಬೈಲ್ ಈಗ ಬದಲಾಗುತ್ತಿದೆ... 'ಏನಿದು ಯಾವಾಗ್ಲೂ ಮೊಬೈಲ್‌ನಲ್ಲಿಯೇ ಮುಳುಗಿರ್ತೀಯಾ?' ಎಂದಿನ್ನು ಮಕ್ಕಳಿಗೆ ಬೈಯುವ ಹಾಗಿಲ್ಲ! ಯಾಕ್ ಗೊತ್ತಾ? ಮೊಬೈಲ್ ಈಗ ಬದಲಾಗುತ್ತಿದೆ. ಅದೀಗ ಮಕ್ಕಳನ್ನು ಹಾಳು ಮಾಡುವ ಮೊಬೈಲ್ ಅಲ್ಲ... ಈ ಮೊಬೈಲ್ ಮೂಲಕವೇ ಪರೀಕ್ಷೆಗಳಿಗೆ ತಯಾರಿ ಸಾಧ್ಯ! ಇಂಥ ನೂತನ ಪ್ರಯೋಗಕ್ಕೆ ಐಪೋಮೊ ಸಂಸ್ಥೆ ಕೈಹಾಕಿದೆ. ಪ್ರಾಥಮಿಕ ಹಂತದಲ್ಲಿ ಇದನ್ನು ರಾಜ್ಯ ಸರ್ಕಾರದ ಸಿಇಟಿ ಪರೀಕ್ಷೆಗೆ ಸೀಮಿತಗೊಳಿಸಲಾಗಿದೆ. ಭವಿಷ್ಯದಲ್ಲಿ ರಾಜ್ಯದ ವಿದ್ಯಾರ್ಥಿಗಳು ಬರೆಯುವ ವಿಜ್ಞಾನದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಸ್ತರಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. 'ಐಪೋಮೊ ರೂಮ್ ಫಾರ್ ಸಿಇಟಿ' ಎಂಬ ಈ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಪ್ರಮುಖವಾಗಿ 3 ಸೇವೆಗಳಿವೆ. ಮುಂಬರುವ ಮೇ 1 ಮತ್ತು 2ರಂದು ನಡೆಯುವ ಸಿಇಟಿ ಪರೀಕ್ಷೆಗೆ ಪೂರ್ವ ತಯಾರಿ, ಸಂಭಾವ್ಯ ರ್ಯಾಂಕ್ ಆಧರಿಸಿ ಕೋರ್ಸ್‌ಗಳ ಆಯ್ಕೆ ಹಾಗೂ ರಾಜ್ಯದಲ್ಲಿನ ವೃತ್ತಿಪರ ಕಾಲೇಜುಗಳ ಬಗೆಗಿನ ಮಾಹಿತಿಯನ್ನು ಇದು ಒಳಗೊಂಡಿದೆ. ಈ ಸೇವೆಗಳಿಗಾಗಿ ಯಾವುದೇ ವಿದ್ಯಾರ್ಥಿಯೂ ಹಣ ವ್ಯಯಿಸಬೇಕಿಲ್ಲ. ಜಿಪಿಆರ್‌ಎಸ್ ಸೇವೆ ಹೊಂದಿರುವ ಎಲ್ಲ ಶ್ರೇಣಿಯ ಹಾಗೂ ನಾನಾ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್‌ನಲ್ಲಿ ಇದು ಲಭ್ಯವಿರುತ್ತದೆ. ಏ.19ರಿಂದಲೇ ಪೂರ್ವ ತಯಾರಿ ಆರಂಭವಾಗಲಿದ್ದು, ಮೇ 26ಕ್ಕೆ ಅಂತಿಮಗೊಳ್ಳಲಿದೆ. ಮೊದಲ ಈ 8 ದಿನಗಳಲ್ಲಿ ನಿತ್ಯ ರಾತ್ರಿ 10 ಗಂಟೆಗೆ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರದ 20 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದಕ್ಕೆ ಉತ್ತರಿಸಲು 20 ನಿಮಿಷಗಳ ಕಾಲಾವಕಾಶವಿರುತ್ತದೆ. ವಿದ್ಯಾರ್ಥಿಗಳೇ ತಮ್ಮ ಉತ್ತರ ಆಧರಿಸಿ ಸ್ವ ಮೌಲ್ಯಮಾಪನ ಮಾಡಿಕೊಳ್ಳಬಹುದು. ಇದಾದ ಬಳಿಕ ಏ. 28ರಂದು ಅಂತಿಮ ಪೂರ್ವಸಿದ್ಧತೆ ಪರೀಕ್ಷೆ ನಡೆಯುತ್ತದೆ. ಬೆಳಗ್ಗೆ 10ರಿಂದ ರಾತ್ರಿ 10 ಗಂಟೆವರೆಗೆ ಪರೀಕ್ಷೆ ನಡೆಯಲಿದ್ದು, ಪ್ರತಿ ವಿಷಯದ ಮೇಲೆ ಎಲ್ಲ ವಿದ್ಯಾರ್ಥಿಗಳಿಗೆ 60 ಪ್ರಶ್ನೆ ಕೇಳಲಾಗುತ್ತದೆ. ವಿದ್ಯಾರ್ಥಿಗಳ ಉತ್ತರ ಆಧರಿಸಿ ಸಂಭಾವ್ಯ ರ್ಯಾಂಕ್‌ಗಳನ್ನು ಇಲ್ಲಿ ಪಡೆಯಬಹುದು.