ನನಗೆ ಕನ್ನಡ ಗೊತ್ತು! ಬೇರೆ ನಗರಗಳಿಂದ ಬರುವ ಜನರಿಗೆ ಅಲ್ಲಿನ ಸ್ಥಳೀಯ ಭಾಷೆ ಕಲಿತುಕೊಂಡಲ್ಲಿ ಮಾತ್ರವೇ ಜೀವನ ಸುಲಭ. ಹೀಗಾಗಿ ವಿವಿಧ ಭಾಷೆಗಳನ್ನು ಕಲಿಯುವುದರಿಂದ ಪ್ರಪಂಚದ ಯಾವುದೇ ಸ್ಥಳದಲ್ಲಾದರೂ ನೆಲೆಯೂರೋದು ಸಲೀಸು. ಮಹಾನಗರಿ ಬೆಂಗಳೂರಿಗೆ ಪ್ರತಿದಿನ ವಿಶ್ವದ ಎಲ್ಲೆಡೆಯಿಂದ ಜನ ಬಂದು ಇಲ್ಲಿಯೇ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಇಲ್ಲಿನ ಸ್ಥಿತಿಗತಿಗಳು ಬದಲಾಗುತ್ತಿವೆ. ಪ್ರಗತಿಯ ಹಾದಿಯಲ್ಲಿರುವ ಬೆಂಗಳೂರು ಉದ್ಯೋಗ ಅವಕಾಶಗಳನ್ನು ಕಲ್ಪಿಸುತ್ತಿದ್ದು ಜತೆಗೆ ಇಲ್ಲಿನ ಬಿಂದಾಸ್ ಜೀವನಶೈಲಿ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಕನ್ನಡ ನಮ್ಮ ರಾಜ್ಯದ ಅಧಿಕೃತ ಭಾಷೆ. ಹಾಗಾಗಿ ವಿವಿಧ ರಾಜ್ಯಗಳಿಂದ ಬರುವಂತಹ ಉದ್ಯೋಗಿಗಳಿಗೆ ಕನ್ನಡ ಕಲಿಕೆಯ ತರಬೇತಿ ನೀಡುವ ಮೂಲಕ ಇಲ್ಲಿನ ಸಮುದಾಯಕ್ಕೆ ಹೊಂದಿಕೊಳ್ಳುವಂತೆ ಮಾಡುವ ಅಗತ್ಯವಿದೆ. ಸ್ಥಳೀಯ ಸಂಸ್ಕೃತಿ, ಹಬ್ಬ ಹರಿದಿನಗಳ ಆಚರಣೆಗಳಿಗೆ ಮಹತ್ವ ನೀಡುತ್ತಾ ಬಂದಿರುವ ಭಾರ್ತಿ ಏರ್‌ಟೆಲ್ ಸಂಸ್ಥೆ, ಇತ್ತೀಚೆಗಷ್ಟೇ ಇ-ಲರ್ನಿಂಗ್ ಕಾನ್ಸೆಪ್ಟ್ ಅಳವಡಿಸಿಕೊಂಡಿದೆ. ಈ ಮೂಲಕ ಅನ್ಯರಾಜ್ಯಗಳ ಉದ್ಯೋಗಿಗಳಿಗೆ ಕನ್ನಡ ಭಾಷೆ ಮಾತನಾಡುವುದನ್ನು ಕಲಿಸುತ್ತಿದೆ. ಇ-ಮೇಲ್‌ಗಳು, ಎಸ್ಸೆಮ್ಮೆಸ್, ವಾಟ್ಸ್ ಆ್ಯಪ್‌ಗಳ ಮೂಲಕ ಉದ್ಯೋಗಿಗಳು ಕನ್ನಡ ಭಾಷೆಯ ದಿನನಿತ್ಯದ ಜೀವನದಲ್ಲಿ ಹೆಚ್ಚಾಗಿ ಬಳಸುವ ಪದಗಳನ್ನು ಕಲಿಯಬಹುದು. ಅಷ್ಟೇ ಅಲ್ಲ, ಕನ್ನಡ ಭಾಷಾಪರಿಣಿತರು ವಿವಿಧ ಏರ್‌ಟೆಲ್ ಕಾರ್ಪೊರೇಟ್ ಆಫೀಸ್‌ಗಳ ಉದ್ಯೋಗಿಗಳಿಗೆ ಕನ್ನಡ ಮಾತನಾಡುವ ತರಬೇತಿ ನೀಡಲಿದ್ದಾರೆ. ಉದ್ಯೋಗಿಗಳಿಗೆ 'ನನಗೆ ಕನ್ನಡ ಗೊತ್ತು' ಎಂಬ ವಾಕ್ಯವನ್ನು ಮೊದಲು ಕಲಿಸಿಕೊಡಲಾಗಿದೆ. ಉದ್ಯೋಗಿಗಳು ಮನೆಯಲ್ಲಿ, ಕೆಲಸದವರ ಬಳಿ, ಚಾಲಕರೊಂದಿಗೆ, ಕನ್ನಡದಲ್ಲೇ ಮಾತನಾಡಿ ಇನ್ನಷ್ಟು ಕನ್ನಡಿಗರಾಗುತ್ತಿದ್ದಾರೆ. ಈ ಬಗ್ಗೆ ಭಾರತಿ ಏರ್‌ಟೆಲ್ ಸಂಸ್ಥೆಯ ಸೀನಿಯರ್ ಮ್ಯಾನೇಜ್‌ಮೆಂಟ್ ವಿಭಾಗದ ಎಕ್ಸಿಕ್ಯೂಟಿವ್ ಕಮಿಟಿ ಮೆಂಬರ್ ಹಾಗೂ ಕನ್ನಡಿಗರಾದ ರಮಾನಂದ ಎಸ್.ಜಿ, ಹೇಳುವುದು ಹೀಗೆ- 'ನಮ್ಮ ಕಚೇರಿಯಲ್ಲಿ ಕನ್ನಡ ಮಾತನಾಡಲು ಬರದೇ ಇರುವಂತಹ ಸಹೋದ್ಯೋಗಿಗಳು ಇಂದು ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸುತ್ತಿರುವುದು ಖುಷಿ ನೀಡಿದೆ. ಏರ್‌ಟೆಲ್ ಪೂರ್ತಿಯಾಗಿ ಕನ್ನಡವಾಗುವ ಸುಸಂದರ್ಭ ಹತ್ತಿರದಲ್ಲೇ ಕಾಣುತ್ತಿದೆ'. ಮನೆಯಿಂದಲೇ ಆರಂಭ ಭಾರ್ತಿ ಏರ್‌ಟೆಲ್ ಹೊರಗಿನವರಿಗೆ ಕನ್ನಡ ಕಲಿಸುವುದಕ್ಕಿಂತ ಮುಂಚೆ ಕರ್ನಾಟಕದಲ್ಲಿರುವ ತನ್ನ ಉದ್ಯೋಗಿಗಳಿಗೇ ಮೊದಲು ಕನ್ನಡ ಕಲಿಸಿದೆ. ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ, ಪಶ್ಚಿಮ ಬಂಗಾಳ ಮೂಲದ ಹಿಮಾಂಶು ಭಟ್ಟಾಚಾರ್ಯ ಈಗ ಅಪ್ಪಟ ಕನ್ನಡಿಗನಾಗಿದ್ದಾರೆ. 'ಇಂದು ನಾನು ಸರಳ ಕನ್ನಡ ಭಾಷೆಯ ಮೂಲಕವೇ ಹಲವಾರು ಇ-ಮೇಲ್ ಹಾಗೂ ಪ್ರಿಂಟ್ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದೇನೆ. ಅಷ್ಟೇ ಅಲ್ಲದೆ ಅವುಗಳನ್ನು ಮನೆಗೂ ಸಹ ಕೊಂಡೊಯ್ದು ನನ್ನ ಹೆಂಡತಿ ಹಾಗೂ ಮಕ್ಕಳಿಗೂ ಕನ್ನಡ ಹೇಳಿಕೊಡುತಿದ್ದೇನೆ' ಎನ್ನುತ್ತಾರೆ ಅವರು. ಗ್ರಾಹಕ ಸೇವೆಗಳ ವಿಭಾಗದ ಉದಯ್‌ಕುಮಾರ್ ತೆಲುಗು ಭಾಷಿಕರು. ಅವರು ಮದುವೆಯಾಗಿರುವುದು ಕನ್ನಡತಿಯನ್ನು. ಕೆಲದಿನಗಳಲ್ಲಿ ಅತ್ತೆ-ಮಾವನವರ ವಿವಾಹ ವಾರ್ಷಿಕೋತ್ಸವ. ಅವರಿಗೆ ಕನ್ನಡದಲ್ಲೇ ಶುಭ ಕೋರುವುದರ ಮೂಲಕ ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಲು ಉದಯ್ ಪ್ರಯತ್ನ ಆರಂಭಿಸಿದ್ದಾರೆ. ಇಂಥ ಪ್ರಯತ್ನ ಎಲ್ಲ ಸಂಸ್ಥೆಗಳಲ್ಲೂ ನಡೆದರೆ ಕನ್ನಡಿಗರು ನಿರಾಳವಾಗಿರಬಹುದೇನೋ!