ಮೈಕ್ರೋಸಾಫ್ಟ್ ಜಾಣನಡೆ ಆ್ಯಪಲ್ ಸಂಸ್ಥೆ ಗೂಗಲ್‌ನೊಂದಿಗೆ ಕಿತ್ತಾಟಕ್ಕೆ ಇಳಿದ್ದರೆ, ಇತ್ತ ವಿಂಡೋಸ್ ಸಂಸ್ಥೆ ಕೇವಲ ಒಂದು ಮನವಿ ಪತ್ರದ ಮೂಲಕ ಗೂಗಲ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ವಿಂಡೋಸ್ 8 ಆಪರೇಟಿಂಗ್ ಸಿಸ್ಟಂನಲ್ಲಿ ಆ್ಯಕ್ಟೀವ್ ಸಿಂಕ್ ಎಂಬ ಆಯ್ಕೆಯಿದೆ. ಇದರ ಮೂಲಕ ವಿಂಡೋಸ್ 8 ಬಳಕೆದಾರರು ಜಿಮೇಲ್‌ಗೆ ಬರುವ ಮೇಲ್‌ಗಳನ್ನು ಪಡೆಯಬಹುದಿತ್ತು. ಆದರೆ ಈ ಆ್ಯಕ್ಟೀವ್ ಸಿಂಕ್ ಬೆಂಬಲವನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ಹೇಳಿತ್ತು. ಹಾಗೆಯೇ ವಿಂಡೋಸ್ 8 ಗಾಗಿ ಪ್ರತ್ಯೇಕ ಜಿಮೇಲ್ ಅಪ್ಲಿಕೇಶನ್ ಕೂಡ ನಿರ್ಮಿಸುವುದಿಲ್ಲ ಎಂದು ಗೂಗಲ್ ಹೇಳಿತ್ತು. ಇದು ವಿಂಡೋಸ್ 8 ಕಂಪ್ಯೂಟರ್ ಮತ್ತು ಮೊಬೈಲ್ ಹೊಂದಿರುವ ಜಿಮೇಲ್ ಗ್ರಾಹಕರಿಗೆ ಆತಂಕ ಸೃಷ್ಟಿಸಿತ್ತು. ಪ್ರತ್ಯೇಕ ಜಿಮೇಲ್ ಅಪ್ಲಿಕೇಶನ್ ಲಭ್ಯವಿರುವುದರಿಂದ ಆ್ಯಪಲ್ ಗ್ರಾಹಕರಿಗೆ ಇದರಿಂದ ಯಾವ ತೊಂದರೆಯೂ ಇರಲಿಲ್ಲ. ಆದರೆ ಆ್ಯಕ್ಟೀವ್ ಸಿಂಕ್ ವ್ಯವಸ್ಥೆಯನ್ನು ಕೊಂಚ ದಿನ ಮುಂದುವರಿಸುವಂತೆ ಮೈಕ್ರೋಸಾಫ್ಟ್ ಸಂಸ್ಥೆ ಗೂಗಲ್‌ಗೆ ಪತ್ರ ಬರೆದಿತ್ತು. ಈ ಪತ್ರವನ್ನು ಗೌರವಿಸುವುದಾಗಿ ಹೇಳಿರುವ ಗೂಗಲ್, ಆ್ಯಕ್ಟೀವ್ ಸಿಂಕ್‌ಗೆ ನೀಡುವ ಬೆಂಬಲವನ್ನು ಸ್ವಲ್ಪ ಸಮಯದವರೆಗೆ ಮುಂದುವರಿಸುವುದಾಗಿ ಹೇಳಿದೆ.