ಆ್ಯಪಲ್ ಆದಾಯ ಹೆಚ್ಚಳ ಸ್ಯಾಮ್ ಸಂಗ್, ಎಲ್ ಜಿಯಂಥ ಕಂಪನಿಗಳ ಸ್ಪರ್ಧೆಯ ನಡುವೆಯೂ ಕಳೆದ ತ್ರೈಮಾಸಿಕದಲ್ಲಿ ಆ್ಯಪಲ್... ಸ್ಯಾನ್ ಫ್ರಾನ್ಸಿಸ್ಕೋ: ಸ್ಯಾಮ್ ಸಂಗ್, ಎಲ್ ಜಿಯಂಥ ಕಂಪನಿಗಳ ಸ್ಪರ್ಧೆಯ ನಡುವೆಯೂ ಕಳೆದ ತ್ರೈಮಾಸಿಕದಲ್ಲಿ ಆ್ಯಪಲ್ ಕಂಪನಿಯ ಆದಾಯದಲ್ಲಿ ಹೆಚ್ಚಳವಾಗಿದೆ. ಡಿಸೆಂಬರ್ 31ರಂದು ಅಂತ್ಯಗೊಂಡ ಕೊನೆಯ ತ್ರೈಮಾಸಿಕದಲ್ಲಿ 7.45 ಕೋಟಿ ಐಫೋನ್ ಮಾರಾಟವಾಗಿವೆ. ಇದರಿಂದ ಕಂಪನಿಯ ಆದಾಯ ಈ ವರ್ಷದ ಆರಂಭದಲ್ಲಿ ರು.4578 ಶತಕೋಟಿ ತಲುಪಿದೆ. ಅಂದರೆ ಒಟ್ಟಾರೆ ಕಂಪನಿಯ ಆದಾಯ ಶೇ.38ರಷ್ಟು ಏರಿಕೆಯಾಗಿದೆ. ಇದೆಲ್ಲ ಸಾಧ್ಯವಾದದ್ದು ಸೆಪ್ಟೆಂಬರ್‍ನಲ್ಲಿ ಬಿಡುಗಡೆ ಮಾಡಲಾದ ಐಫೋನ್6 ಮತ್ತು 6 ಪ್ಲಸ್ ನಿಂದಾಗಿ! ಪ್ರತಿಸ್ಪರ್ಧಿಗಳಾದ ಸ್ಯಾಮ್ ಸಂಗ್, ಎಲ್‍ಜಿಯಂಥ ಕಂಪನಿಗಳು ದೊಡ್ಡ ಸ್ಕ್ರೀನ್‍ನ ಮೊಬೈಲ್‍ಗಳನ್ನು ಬಿಡುಗಡೆ ಮಾಡುತ್ತಿದ್ದಾಗ ಆ್ಯಪಲ್ ಮಾತ್ರ ಸಣ್ಣ ಸ್ಕ್ರೀನ್ ಅನ್ನೇ ನೆಚ್ಚಿಕೊಂಡಿತ್ತು. ಈ ಹಿಂದೆ ಬಿಡುಗಡೆಯಾಗಿದ್ದ ಐಫೋನ್5 ಮಾದರಿಯ ಎಲ್ಲ ಮೊಬೈಲ್‍ಗಳು ಕೇವಲ 4 ಇಂಚಿನ ಸ್ಕ್ರೀನ್ ಹೊಂದಿದ್ದವು. ಆದರೆ, 4.7 ಇಂಚಿನ ಐಫೋನ್ 6 ಮತ್ತು 5.5 ಇಂಚಿನ ಸ್ಕ್ರೀನ್‍ನ ಐಫೋನ್6 ಪ್ಲಸ್ ಬಿಡುಗಡೆಯಾಗುತ್ತಿದ್ದಂತೆ ಸ್ಯಾಮ್ ಸಂಗ್‍ನಂಥ ಕಂಪನಿಗಳತ್ತ ಮುಖ ಮಾಡಿದ್ದ ಗ್ರಾಹಕರು ಈಗ ಮತ್ತೆ ಐಫೋನತ್ತ ಆಕರ್ಷಿತರಾಗಿದ್ದಾರೆ.