ಅಶುಭ ಮಂಗಳ ಮಂಗಳನ ಅಂಗಳಕ್ಕೆ ಅಪಾಯ ಕಟ್ಟಿಟ್ಟಬುತ್ತಿ. /2013 A1 ಎಂಬ ಧೂಮಕೇತು ಮಂಗಳನ ಗ್ರಹಕ್ಕೆ 2014ರ ಅಕ್ಟೋಬರ್‌ನಲ್ಲಿ ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಈಗಲೇ ಭವಿಷ್ಯ ನುಡಿದಿದ್ದಾರೆ. ನಮ್ಮ ಭೂಮಿಯ ಮೇಲೆ ಇದುವರೆಗೆ ಪರೀಕ್ಷಿಸಲಾದ ಅಣು ಬಾಂಬ್‌ಗಿಂತ 25 ದಶಲಕ್ಷ ಪಟ್ಟು ಹೆಚ್ಚು ಸಾಮರ್ಥ್ಯವುಳ್ಳ ಧೂಮಕೇತು ಮಂಗಳನ ಗ್ರಹಕ್ಕೆ ಅಪ್ಪಳಿಸಲಿದೆ ಎಂಬುದು ವಿಜ್ಞಾನಿಗಳ ಮುನ್ನುಡಿ. ಮಂಗಳನ ಸಮೀಪ, ತೀರಾ ಎಂದರೆ 23 ಸಾವಿರ ಮೈಲಿಗಳ ದೂರದಲ್ಲಿ ಈ ಧೂಮಕೇತು ಹಾದು ಹೋಗಲಿದ್ದು, ಇದರಿಂದ ಈ ಗ್ರಹಕ್ಕೆ ಅಪಾಯ ಆದರೂ ಆಗಬಹುದಂತೆ. ಧೂಮಕೇತುಗಳು ಕ್ಷುದ್ರಗಳಂತಲ್ಲ. ಇದರಲ್ಲಿ ಹೆಚ್ಚಾಗಿ ಮಂಜೇ ತುಂಬಿಕೊಂಡಿರುತ್ತದೆ. ಒಂದು ವೇಳೆ ಮಂಗಳನ ಮೇಲೆ ಅಪ್ಪಳಿಸುವುದರಿಂದ ತಪ್ಪಬಹುದಾದರೂ, ಪಥ ಬದಲಿಸಿ ಕೇವಲ 9 ಮೈಲಿ ಮೇಲೆ ಹೋದರೂ ಇದರ ಪರಿಣಾಮ ಹೆಚ್ಚು ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದೇ ವೇಳೆ ಮಂಗಳನ ಮೇಲೆ ಸಂಶೋಧನೆ ನಡೆಸುತ್ತಿರುವ ಕ್ಯೂರಿಯಾಸಿಟಿ ನೌಕೆ ಕೆಲ ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದ್ದು, ಇದೀಗ ತಾನೆ ಕಾರ್ಯ ಆರಂಭಿಸುತ್ತಿದೆ.