ಅಣು ಶಕ್ತಿ! ನಮ್ಮ ವಿಜ್ಞಾನಿಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಸಾಗಿದ್ದಾರೆ! ಮಾನವನನ್ನು ಮಂಗಳನ ಅಂಗಳದಲ್ಲಿ ಇಳಿಸಲು ಸಕಲ ಸಿದ್ಧತೆ ನಡೆದಿದೆ. ಆದರೆ ಈ ಬಾರಿ ಗಗನಯಾನ ವಿಧಾನದಲ್ಲಿ ಭಾರಿ ಬದಲಾವಣೆ ಕಾಣಲಿದ್ದೇವೆ. ಮಂಗಳನ ಯಾತ್ರೆಗೆ ರಾಸಾಯನಿಕ ಇಂಧನ ಚಾಲಿತ ರಾಕೆಟ್‌ಗಳನ್ನು ಬಳಸಿಕೊಳ್ಳಲಾಗುವುದಿಲ್ಲ. ಬದಲಾಗಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಗಗನಯಾನಕ್ಕಾಗಿ 'ನ್ಯೂಕ್ಲಿಯರ್ ಥರ್ಮಲ್ ರಾಕೆಟ್‌' ತಂತ್ರಜ್ಞಾನ ಬಳಕೆಯಾಗಲಿದೆ. ಇಲ್ಲಿ ರಾಸಾಯನಿಕ ಇಂಧನದ ಬದಲಿಗೆ ಅಣು ಸಮ್ಮಿಲನ ಅಥವಾ ಅಣು ಬೆಸುಗೆ (ನ್ಯೂಕ್ಲಿಯರ್ ಫ್ಯೂಷನ್) ಯಿಂದ ಉತ್ಪತ್ತಿಯಾಗುವ ಶಕ್ತಿಯಿಂದ ರಾಕೆಟ್ ವೇಗ ಪಡೆಯಲಿದೆ. ಸೂರ್ಯ ಮತ್ತು ನಕ್ಷತ್ರಗಳಿಗೆ ಶಕ್ತಿ ತುಂಬುವುದು ಕೂಡ ಇದೇ ಅಣು ಬೆಸುಗೆ ಕ್ರಿಯೆ. ಸೂರ್ಯನಲ್ಲಿ ಹೈಡ್ರೋಜನ್ ಅಥವಾ ಜಲಜನಕ ಪರಮಾಣುಗಳ ಬೆಸುಗೆ ಉಂಟಾಗುತ್ತದೆ. ಇದರಿಂದ ಶಕ್ತಿ ಬಿಡುಗಡೆಯಾಗಿ ಜಗತ್ತಿಗೇ ಬೆಳಕು ದೊರೆಯುತ್ತದೆ. ಅಣು ಇಂಧನವು ರಾಸಾಯನಿಕ ಇಂಧನಕ್ಕಿಂತ ನೂರಾಏಳು ಪಟ್ಟು ಹೆಚ್ಚು ಶಕ್ತಿಯ ತೀವ್ರತೆಯನ್ನು ಹೊಂದಿರುತ್ತದೆ. ಹಾಗಾಗಿ ಅಣುಶಕ್ತಿ ಚಾಲಿನ ನ್ಯೂಕ್ಲಿಯರ್ ಥರ್ಮಲ್ ರಾಕೆಟ್‌ಗಳು 1:1ರಿಂದ ಹಿಡಿದು 7:1ರವರೆಗಿನ ಅನುಪಾತದಲ್ಲೂ ಮಾನವನೇ ಇತ್ಯಾದಿ ಸರಕು ಮತ್ತು ಇಂಧನವನ್ನು ಹೊತ್ತೊಯ್ಯಬಲ್ಲವು. ಅದಷ್ಟೇ ಅಲ್ಲ, ರಾಸಾಯನಿಕ ಇಂಧನಕ್ಕೆ ಹೋಲಿಸಿದಾಗ ಅಣು ಇಂಧನದ ಖರ್ಚು ಕೂಡ ಕಡಿಮೆಯೇ. ಹಾಗಾಗಿ ಅಣುಶಕ್ತಿ ಚಾಲಿತ ನ್ಯೂಕ್ಲಿಯರ್ ಥರ್ಮಲ್ ರಾಕೆಟ್‌ನ ಬಳಕೆ ಹೆಚ್ಚು ಲಾಭದಾಯಕ ಎನ್ನುತ್ತಾರೆ ನಾಸಾದ ವಿಜ್ಞಾನಿಗಳು. ರಾಸಾಯನಿಕ ಇಂಧನದಿಂದ ರಾಕೆಟ್ ಚಾಲನೆಯಲ್ಲಿ ಎದುರಾಗುವ ತೊಡಕುಗಳನ್ನು ಮನಗಂಡು ವಿಜ್ಞಾನಿಗಳು ಅಣುಬೆಸುಗೆ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ರಾಸಾಯನಿಕ ಇಂಧನ ಚಾಲಿತ ರಾಕೆಟ್‌ಗಳಂತೆ ಇಲ್ಲಿ ಗಗನಯಾನವು ಅಷ್ಟೊಂದು ದೀರ್ಘವಾಗಿರುವುದಿಲ್ಲ; ಖರ್ಚೂ ಕಡಿಮೆಯೇ. 'ಬಾಹ್ಯಾಕಾಶದಲ್ಲಿ ಸಾಕಷ್ಟು ಬಲಶಾಲಿ ಶಕ್ತಿಮೂಲವನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ಈ ಪ್ರಯೋಗವು ಗ್ರಹಗಳ ನಡುವಣ ಯಾನಕ್ಕೆ ನಾಂದಿಯಾಗಬಲ್ಲದು' ಎಂದು ನಾಸಾದ ಮುಖ್ಯ ಸಂಶೋಧಕ ಜಾನ್ ಸ್ಲೆ ಹೇಳುತ್ತಾರೆ. ಇಂದಿನ ರಾಸಾಯನಿಕ ಇಂಧನ ರಾಕೆಟ್ ತಂತ್ರಜ್ಞಾನವನ್ನು ಬಳಸಿಕೊಂಡು ಮಂಗಳ ಗ್ರಹ ಯಾತ್ರೆ ಕೈಗೊಳ್ಳಬೇಕಾದರೆ ನಾಲ್ಕಕ್ಕಿಂತ ಹೆಚ್ಚು ವರ್ಷಗಳು ಬೇಕಾಗಬಹುದು. ಅಲ್ಲದೆ ಇದಕ್ಕೆ ಅಪಾರ ಪ್ರಮಾಣದ ರಾಸಾಯನಿಕ ಇಂಧನ ಬೇಕು. ಹಾಗೆಯೇ ಇದರ ವೆಚ್ಚವೂ ಅತ್ಯಧಿಕ. ಅಂದರೆ ಸುಮಾರು ಹನ್ನೆರಡು ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು. ಅಣುಬೆಸುಗೆ ತಂತ್ರಜ್ಞಾನ ಚಾಲಿತ ರಾಕೆಟ್‌ಗಳನ್ನು ಬಳಸಿ ಪಯಣಿಸಿದಲ್ಲಿ ಮಂಗಳ ಗ್ರಹಕ್ಕೆ ಹೋಗಿ ಬರಲು ಕೇವಲ 30ರಿಂದ 90 ದಿನಗಳು ಸಾಕು. ಈ ಯಾನವು ಕಾಯೋಪಯೋಗಿ ಮತ್ತು ಕಡಿಮೆ ಖರ್ಚಿನದು ಎನ್ನುತ್ತಾರೆ ವಿಜ್ಞಾನಿಗಳು. ಇಂಥ ಯಾನಕ್ಕಾಗಿ ಈಗಾಗಲೇ ಹಲವು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರತ್ಯೇಕವಾಗಿ ನಡೆಸಲಾದ ಪ್ರತಿಯೊಂದು ಪರೀಕ್ಷೆಗಳನ್ನು ಈಗ ಒಂದುಗೂಡಿಸಿ ಅಂತಿಮ ಪ್ರಯೋಗ ನಡೆಸಬೇಕಿದೆ. ಅಣುಬೆಸುಗೆ ಬಗ್ಗೆ ಫಲಿತಾಂಶ ಪಡೆಯಬೇಕಾಗಿದೆ ಎನ್ನುತ್ತಾರೆ ಜಾನ್ ಸ್ಲೌ. ಅಣುಬೆಸುಗೆ ಹೇಗೆ? ವಿಜ್ಞಾನಿಗಳ ಸಂಶೋಧನಾ ತಂಡವು ತನ್ನದೇ ಆದ ಕಾಂತೀಯ ಕ್ಷೇತ್ರವಿರುವ ಒಂದು ಬಗೆಯ ಪ್ಲಾಸ್ಮಾವನ್ನು ಅಭಿವೃದ್ಧಿ ಪಡಿಸಿದೆ. ಕಾಂತೀಯ ಕ್ಷೇತ್ರದೊಂದಿಗೆ ಈ ಪ್ಲಾಸ್ಮಾವನ್ನು ಅತ್ಯಧಿಕ ಒತ್ತಡಕ್ಕೆ ಒಳಪಡಿಸಿದಾಗ ನ್ಯೂಕ್ಲಿಯರ್ ಅಣುಬೆಸುಗೆ ಸಂಭವಿಸುತ್ತದೆ. ವಿಜ್ಞಾನಿಗಳ ತಂಡವು ಪ್ರಯೋಗಾಲಯದಲ್ಲಿ ಈ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿದೆ. ರಾಕೆಟ್ ಚಾಲನೆಗೆ ಅಣುಬೆಸುಗೆ ಹೆಚ್ಚು ಪ್ರಮಾಣದಲ್ಲೇನೂ ಆಗಬೇಕಿಲ್ಲ. ಕಡಿಮೆ ಪ್ರಮಾಣದಲ್ಲಾದರೆ ಸಾಕು. ಪ್ಲಾಸ್ಮಾದ ಒಂದು ಪುಟ್ಟ ಕಣವು ಒಂದು ಗ್ಯಾಲನ್ ರಾಕೆಟ್ ಇಂಧನ ನೀಡುವಷ್ಟು ಶಕ್ತಿಯನ್ನು ಬಿಡುಗಡೆ ಮಾಡಬಲ್ಲದು. ಪ್ಲಾಸ್ಮಾವನ್ನು ಒತ್ತಡಕ್ಕೊಳಪಡಿಸುವ ಅವಧಿ ಬಹಳ ಕಡಿಮೆ ಆಗಿದ್ದರೂ, ಅಣು ಬೆಸುಗೆ ಕ್ರಿಯೆಯಿಂದ ಸಾಕಷ್ಟು ಶಕ್ತಿಯ ಬಿಡುಗಡೆಯಾಗುತ್ತದೆ. ಶಾಖವು ಬೇಗನೆ ಉತ್ಪತ್ತಿಯಾಗುತ್ತದೆ. ಅತ್ಯಂತ ಹೆಚ್ಚು ಶಾಖದ ಅಯಾನೀಕೃತಲೋಹಾಂಶವು ಅತ್ಯಂತ ವೇಗದಲ್ಲಿ ರಾಕೆಟ್‌ನ ಮೂತಿಯಿಂದ ಹೊರಚಿಮ್ಮುತ್ತದೆ. ಪ್ರತಿಯೊಂದು ನಿಮಿಷಕ್ಕೂ ಈ ಪ್ರಕ್ರಿಯೆ ಪುನರಾವರ್ತನೆಗೊಳ್ಳುತ್ತದೆ. ತತ್ಪರಿಣಾಮವಾಗಿ ಬಾಹ್ಯಾಕಾಶ ನೌಕೆ ಮುಂದೂಡಲ್ಪಡುತ್ತದೆ. ನ್ಯೂಕ್ಲಿಯರ್ ಥರ್ಮಲ್ ರಾಕೆಟ್ ಅಥವಾ ಅಣುಶಕ್ತಿ ಚಾಲಿತ ಅಣುಶಾಖ ರಾಕೆಟ್‌ನ ಪ್ರಥಮ ಪ್ರಯೋಗಕ್ಕೆ ವಿಜ್ಞಾನಿಗಳು ಸಜ್ಜಾಗುತ್ತಿದ್ದಾರೆ. ಮಂಗಳನ ಅಂಗಳದಲ್ಲಿ ಇಳಿಯುವ ಮಾನವನ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿವೆ. ಇಂದಿನ ರಾಸಾಯನಿಕ ಇಂಧನ ರಾಕೆಟ್ ತಂತ್ರಜ್ಞಾನವನ್ನು ಬಳಸಿಕೊಂಡು ಮಂಗಳ ಗ್ರಹ ಯಾತ್ರೆ ಕೈಗೊಳ್ಳಬೇಕಾದರೆ ನಾಲ್ಕಕ್ಕಿಂತ ಹೆಚ್ಚು ವರ್ಷಗಳು ಬೇಕಾಗಬಹುದು. ಅಣುಬೆಸುಗೆ ತಂತ್ರಜ್ಞಾನ ಚಾಲಿತ ರಾಕೆಟ್‌ಗಳನ್ನು ಬಳಸಿ ಪಯಣಿಸಿದಲ್ಲಿ ಮಂಗಳ ಗ್ರಹಕ್ಕೆ ಹೋಗಿ ಬರಲು ಕೇವಲ 30ರಿಂದ 90 ದಿನಗಳು ಸಾಕು! ಕಡಿಮೆ ಸಮಯ, ಅಧಿಕ ಉಳಿತಾಯ ರಾಕೆಟ್‌ಗಳಿಗೆ ಈಗಾಗಲೇ ರಾಸಾಯನಿಕ ಇಂಧನದ ಕೊರತೆ ಕಾಡತೊಡಗಿದೆ. 1980ರಿಂದ ರಾಸಾಯನಿಕ ಇಂಧನಕ್ಕೆ ಬೇಕಾದ ಪ್ಲುಟೋನಿಯಂ-238ನ್ನು ಅಮೆರಿಕಾ ಉತ್ಪಾದಿಸಿಯೇ ಇಲ್ಲ. ಕೆಲವು ಮೂಲಗಳ ಪ್ರಕಾರ, ಈ ದಶಕದ ಕೊನೆಯಲ್ಲಿ ಪ್ಲುಟೋನಿಯಂ ಪೂರೈಕೆ ಸಂಪೂರ್ಣ ಸ್ಥಗಿತ ಆಗಲಿದೆ! ಜ್ಞಾನಿಗಳು ಈಗ ಗಮನ ಹರಿಸುತ್ತಿರುವ ಅಣುಬೆಸುಗೆ ತಂತ್ರಜ್ಞಾನ ಯಶಸ್ವಿಯಾದರೆ ರಾಸಾಯನಿಕ ಇಂಧನ ಚಾಲಿತ ರಾಕೆಟ್‌ಗಳಂತೆ ಇಲ್ಲಿ ಗಗನಯಾನ ದೀರ್ಘವಾಗಿರುವುದಿಲ್ಲ; ಖರ್ಚೂ ಕಡಿಮೆ. - ರಾಜೇಶ್ವರಿ ಜಯಕೃಷ್ಣ