ತಲೆ ಕಸಿ ಸೌಂದರ್ಯಕ್ಕೂ ಕಸಿಗೂ ಒಂದಕ್ಕೊಂದು ಲಿಂಕು. ವಿಜ್ಞಾನ ಇದನ್ನು ಎಂದೋ ಸಾಬೀತುಪಡಿಸಿದೆ. ಮಾಧ್ಯಮಗಳೂ ಅದೆಷ್ಟು ಬಾರಿ ನಮ್ಮ ಸುತ್ತಲಿನ ಅಪೂರ್ವ ಸೌಂದರ್ಯವತಿ ಹಾಗೂ ಸುಂದರಾಂಗರ ನೈಜವಾದ ಫೋಟೋ ಪ್ರಕಟಿಸಿವೆಯೋ. ಆ ಫೋಟೋಗಳು ಮತ್ತು ಅವರ ಈಗಿನ ಸ್ಥಿತಿ ನೋಡಿದವರಿಗೆ ಅಚ್ಚರಿ ಮೂಡದೇ ಇರದು, ಅಲ್ಲವೇ? ಅದೇ ರೀತಿ ಇಲ್ಲೊಂದು ಕಲ್ಪನೆಯ ಎಳೆ ಮತ್ತು ಒಂದಷ್ಟು ನೈಜತೆಯ ಸಮೀಪದ ಪ್ರಸಂಗ. ಮೂಗು ಸರಿ ಇಲ್ಲದೇ ಇದ್ದಾಗ, ಸರಿ ಮಾಡಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗೋ ಮಂದಿ, ತಲೆಯೇ ಸರಿ ಇಲ್ಲವೆಂದು (ಆಕಾರ ಮಾತ್ರ, ಬುದ್ಧಿ ಅಲ್ಲ) ಬೇರೊಂದು ತಲೆ ಜೋಡಿಸಿಕೊಂಡರೆ ಹೇಗಿರುತ್ತೆ? ಈ ಕಲ್ಪನೆಯೆನೋ ಚೆನ್ನಾಗಿದೆ. ಆದರೆ ನೈಜತೆಗೆ ನಿಲುಕುತ್ತದೆಯೇ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ಉತ್ತರಿಸಿದ್ದಾರೆ. ಈ ಹಿಂದೆಯೇ ಕೋತಿ ತಲೆಯನ್ನು ತೆಗೆದು ಬೇರೊಂದು ಕೋತಿಗೆ ಅಳವಡಿಸಲಾಗಿದೆ. ಆದರೆ ಆಗ ಸ್ಪೈನಲ್‌ಕಾರ್ಡ್ ಅಳವಡಿಸುವ ಬಗ್ಗೆ ಗೊತ್ತಾಗಿರಲಿಲ್ಲ. ಈಗ ಈ ವಿಧಾನವನ್ನೂ ಶೋಧಿಸಲಾಗಿದ್ದು. ಸದ್ಯದಲ್ಲೇಕಾರ್ಯರೂಪಕ್ಕೆ ಬರಲಿದೆ ಎಂದಿದ್ದಾರೆ. ದಾನಿಯ ತಲೆಯನ್ನು ಇನ್ನೊಬ್ಬ ಮನುಷ್ಯನ ತಲೆಗೆ ಅಳವಡಿಸಲು 36 ಗಂಟೆಗಳು ಬೇಕು. ಅಲ್ಲದೆ 100 ಸರ್ಜನ್‌ಗಳು ಇರಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದಕ್ಕೆ ಕೋಟಿಗಟ್ಟಲೆ ವೆಚ್ಚವಾಗುತ್ತದೆ. ನಮ್ಮ ಪುರಾಣದ ಗಣೇಶನಿಗೆ ಆನೆಯ ತಲೆ ಜೋಡಿಸಿದ ಹಾಗೆ ಮನುಷ್ಯರಿಗೂ ಕಸಿ ಮೂಲಕ ಬೇರೊಂದು ತಲೆ ಜೋಡಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸರ್ಜರಿಗೆ ಒಳಪಡಿಸಬಹುದೇ? ಮಾನವನ ತಲೆಬುರುಡೆಯನ್ನೂ ಸರ್ಜರಿಗೆ ಒಳಪಡಿಸಬಹುದು. ಈ ಬಗ್ಗೆ ಸಂಶೋಧನೆಯಲ್ಲಿ ತೊಡಗಿಕೊಂಡ ಇಟಲಿಯ ನ್ಯೂರೋಸರ್ಜನ್‌ಗಳು, ಒಂದಷ್ಟು ಯಶಸ್ಸನ್ನೂ ಸಾಧಿಸಿದ್ದಾರೆ. ವೈದ್ಯಕೀಯ ಜರ್ನಲ್ ಆದ 'ನ್ಯೂರಾಲಜಿ ಇಂಟರ್‌ನ್ಯಾಶನಲ್‌'ನಲ್ಲಿ ಈ ಪ್ರಾಜೆಕ್ಟ್‌ನ ರೂಪುರೇಷೆಯನ್ನು ಹೆಡ್ ಅನ್‌ಸ್ಟೊಮೊಸಿಸ್ ವೆಂಚರ್ ಅಥವಾ ಹೆವನ್ ಎಂದು ನಿರೂಪಿಸಿದ್ದಾರೆ. ಈ ವಿಧಾನದಲ್ಲಿ ಇಬ್ಬರು ರೋಗಿಗಳಿಗೆ ಏಕಕಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅಲ್ಟ್ರಾ- ಶಾರ್ಪರ್ ಬ್ಲೇಡ್ ಅನ್ನು ಬಳಸಿ, ಇಬ್ಬರ ತಲೆಗಳನ್ನೂ ಕತ್ತರಿಸಲಾಗುತ್ತದೆ. ಈ ಎರಡು ತಲೆಗಳನ್ನು ಒಂದು ಗಂಟೆ, 12 ಸೆಂಟಿಗ್ರೇಡ್‌ನಿಂದ 15 ಸೆಂಟಿಗ್ರೇಡ್‌ನ ತಂಪಿನಲ್ಲಿ ಇಡಲಾಗುತ್ತದೆ. ಇವುಗಳಿಗೆ ತಾಂತ್ರಿಕ ಸಹಾಯದಿಂದ ಉಸಿರಾಟ ಸೇರಿದಂತೆ ಎಲ್ಲಾ ಸಹಾಯ ಒದಗಿಸಲಾಗುತ್ತದೆ. ಡಾ. ಕಾನವೆರೊ ಹೇಳುವ ಪ್ರಕಾರ, 'ನಾವು ಈಗ ಒಬ್ಬ ವ್ಯಕ್ತಿಯ ತಲೆಯನ್ನು ಇನ್ನೊಬ್ಬರ ಬೆನ್ನುಮೂಳೆಯೊಂದಿಗೆ ಮರುಸಂಪರ್ಕ ಸಾಧಿಸುವಂತೆ ಜೋಡಿಸಬಹುದಾದ ತಾಂತ್ರಿಕತೆಯನ್ನು ಹೊಂದಿದ್ದೇವೆ'. 1970ರಲ್ಲಿ, ಅಮೆರಿಕದ ನ್ಯೂರೊಸರ್ಜನ್ ಡಾ. ರಾಬರ್ಟ್, ವೈಟ್‌ಟ್ರಹೆಸಸ್ ಎಂಬ ಕೋತಿಯ ತಲೆಯನ್ನು ಇನ್ನೊಂದು ಕೋತಿಯ ದೇಹಕ್ಕೆ ಜೋಡಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ 2001ರಲ್ಲಿ ಅಮೆರಿಕದ ವೈದ್ಯರು ಇದೇ ರೀತಿಯ ಅಪರೇಷನ್ ನಡೆಸಿದ್ದರು. ನಂತರ ಕೋತಿಯು ವಾಸನೆ ನೋಡುವುದರಲ್ಲಿ, ತನ್ನ ಕಣ್ಣುಗಳನ್ನು ತೆರೆಯುವುದರಲ್ಲಿ ಮತ್ತು ಆಹಾರದ ರುಚಿ ನೋಡುವ ಕೆಲಸ ಮಾಡಲು ಸಾಧ್ಯವಾಗಿತ್ತು. ಆದಾಗ್ಯೂ ಡಾ. ವೈಟ್‌ಟ್ರಹೆಸಸ್ ಬೆನ್ನುಹುರಿಯ ಸಂಪರ್ಕ ಜೋಡಿಸುವಲ್ಲಿ ಯಶಸ್ವಿಯಾಗಲಿಲ್ಲ. ಆ ಕೋತಿಯು ಪಾರ್ಶ್ವವಾಯುವಿಗೆ ತುತ್ತಾಯಿತು ಮತ್ತು ಸರ್ಜರಿಯ ಕೆಲವು ಗಂಟೆ ನಂತರ ಸತ್ತು ಹೋಗಿತ್ತು. ಜೀವಕೋಶ ಮತ್ತು ನರದ ಮೇಲಿನ ಸಂಶೋಧನೆ ಮತ್ತು ಇತ್ತೀಚಿನ ಬೆಳವಣಿಗೆಗಳಲ್ಲಿ, ಬೆನ್ನು ಹುರಿಯ ಮರುಸಂಪರ್ಕ ಸಾಧ್ಯವಿದೆ ಮತ್ತು ಡಾ. ಕಾನವೆರೊ ಪ್ರಕಾರ, ಮನುಷ್ಯರ ತಲೆ ಜೋಡಣೆ ವೇಳೆ ಮಾತ್ರ ಈ ಸಮಸ್ಯೆ ಅಡ್ಡ ಬರುವುದಿಲ್ಲ. - ನಳಿನ ಡಿ.