ಶಾಕ? ಅಮೂಲ್ಯ ಬಳುವಳಿಯಾದ ಶಾಖವನ್ನು ಅದು ಬಂದ ಹಾದಿ ಹಿಡಿಯದಂತೆ... 'ಮುಗಿಲು ನೆಲಕೆ ಮುಕ್ಕು ಚಿಕ್ಕೆ ಕಾಳುಗಳನ್ನು ಬಿತ್ತಿದೆ ನೆಲವು ಮುಗಿಲಿಗರ್ತಿಯಿಂದ ಆರತಿಯನೆತ್ತಿದೆ...' ವರಕವಿ ದ.ರಾ. ಬೇಂದ್ರೆ 'ಸಖಿಗೀತ'ದಲ್ಲಿ ಆಗಸ ಮತ್ತು ಭೂಮಿ ಹೇಗೆ ಸಾಮರಸ್ಯ ಸಾಧಿಸಿ ಜಗತ್ತಿಗೆ ಮಳೆ, ಬೆಳೆ, ಹಿತ ಹವೆ ತನ್ಮೂಲಕ ನೆಮ್ಮದಿ ನೀಡಿದೆ ಎನ್ನುವುದನ್ನು ಬಿಂಬಿಸುವ ಪರಿಯಿದು. ಆ ಸಂರಚನೆ ಅಮೋಘ, ಅಸದೃಶ. ಕೆಲವೆಡೆ ಸಸಿಗಳ ಪೋಷಣೆಗಾಗಿ ಗಾಜಿನ ಮನೆ ನಿರ್ಮಿಸುವುದಿದೆ. ಸೂರ್ಯನಿಂದ ಬಂದ ಶಾಖವನ್ನು ಅದು ಹೊರಹೋಗದಂತೆ ಬಂಧಿಸಿಕೊಳ್ಳುವ ಉಪಾಯವಿದು. ಈ ಕುಟೀರಕ್ಕೆ ಹಸಿರು ಮನೆ ( ) ಎನ್ನುತ್ತಾರೆ. ಅಮೂಲ್ಯ ಬಳುವಳಿಯಾದ ಶಾಖವನ್ನು ಅದು ಬಂದ ಹಾದಿ ಹಿಡಿಯದಂತೆ ಸೆರೆಯಾಗಿಸುತ್ತವೆ ಇಲ್ಲಿನ ಕೆಲವು ವಿಶಿಷ್ಟ ಅನಿಲಗಳು. ಆ ಪೈಕಿ ಬಹುಮುಖ್ಯವಾದವುಗಳೆಂದರೆ, ನೀರಾವಿ, ಕಾರ್ಬನ್ ಡೈ ಆಕ್ಸೈಡ್, ನೈಟ್ರಸ್ ಆಕ್ಸೈಡ್ ಹಾಗೂ ಮೀಥೇನ್. ಒಂದು ವೇಳೆ ಈ ಅನಿಲಗಳು ಇರದಿದ್ದರೆ ಭುವಿಯ ಸರಾಸರಿ ಮೇಲ್ಮೈ ಉಷ್ಣತೆ ಸೊನ್ನೆಗಿಂತಲೂ 17 ಡಿಗ್ರಿ ಸೆಲ್ಸಿಯಸ್‌ನಷ್ಟಕ್ಕೆ ಕುಸಿಯುತ್ತಿತ್ತು. ಈಗ ಅದರ ಪ್ರಮಾಣ ಪುಣ್ಯಕ್ಕೆ 13 ಡಿಗ್ರಿ ಸೆಲ್ಸಿಯಸ್! ಹಸಿರು ಮನೆ ಅನಿಲಗಳೆಂದೇ ಕರೆಯಲಾಗುವ ಇವು ಅತ್ಯುಪಕಾರಿ. ಭೂಮಿಯ ಜೀವವೈವಿಧ್ಯವನ್ನು ಸಂರಕ್ಷಿಸುವ ಸುರಕ್ಷಾ ಹೊದಿಕೆ. ಸೂರ್ಯನ ಉಷ್ಣವಿಕಿರಣ ಶಕ್ತಿ ತಲುಪುತ್ತಲೇ ನೆಲ, ಜಲ, ಅದನ್ನು ಹೀರುವುದು, ಹೀರಲಾದ ಶಕ್ತಿ ವಾಯುಮಂಡಲಕ್ಕೆ ನಸುಗೆಂಪು ಕಿರಣಗಳ ರೂಪದಲ್ಲಿ ರವಾನೆಯಾಗುತ್ತದೆ. ಒಂದಷ್ಟು ಅಂತರಿಕ್ಷಕ್ಕೆ ವಾಪಸಾಗುತ್ತದೆ. ಆದರೆ ಬಹುಭಾಗ ಹಸಿರುಮನೆ ಅನಿಲಗಳ ದೆಸೆಯಿಂದಾಗಿ ವಾಯುಮಂಡಲದಲ್ಲಿ ತಡೆ ಹಿಡಿಯಲ್ಪಡುತ್ತದೆ. ಇದರ ಫಲವಾಗಿ ಭೂಮಿ ಬೆಚ್ಚಗಿರುತ್ತದೆ. ಎಂಥ ಅನನ್ಯ ವಿನ್ಯಾಸ ಅಲ್ಲವೇ? ಹೇಳಿ ಕೇಳಿ, ನಾವು ಯಂತ್ರ ಯುಗದಲ್ಲಿದ್ದೇವೆ. ಜಗತ್ತಿನಾದ್ಯಂತ ಕೋಟ್ಯಂತರ ವಾಹನಗಳು, ವಿಮಾನಗಳು ಮತ್ತು ಎಂಜಿನ್ನುಗಳು ವರ್ಷ ವರ್ಷ ಉತ್ಪಾದನೆಯಾಗುತ್ತಲೇ ಇವೆ. ಯಾವುದೇ ಯಂತ್ರದ ಚಕ್ರ ತಿರುಗಲು ಬೇಕೇ ಬೇಕಲ್ಲ ಕಲ್ಲಿದ್ದಲು, ಇಂಧನ ತೈಲ ಅಥವಾ ನೈಸರ್ಗಿಕ ತೈಲ. ಹೇರ್ ಡ್ರೈಯರ್‌ನಿಂದ ರಾಕೆಟ್‌ವರೆಗೆ ಎಲ್ಲ ಪರಿಕರ ಬಳಕೆಯಿಂದಾಗಿ ಅವ್ಯಾಹತವಾಗಿ ಹಸಿರುಮನೆ ಅನಿಲಗಳು ವಾಯುಮಂಡಲಕ್ಕೆ ಇನ್ನಷ್ಟು ಬೆಚ್ಚಗಿಡಲು ಹೊರಟಿದ್ದೇವಲ್ಲ ಈ ಕಂಟಕವೇ 'ಗ್ಲೋಬಲ್ ವಾರ್ಮಿಂಗ್‌'. ನಾವು ಒಬ್ಬೊಬ್ಬರೂ ಜಾಗತಿಕ ತಪನಕ್ಕೆ ತನ್ಮೂಲಕ ವಾಯುಗುಣದ ಏರುಪೇರಿಗೆ ಹೊಣೆಗಾರರೇ. ಗ್ಲೋಬಲ್ ವಾರ್ಮಿಂಗ್‌ನ ಇತರೆ ಮಾರಕ ಪರಿಣಾಮಗಳು... ಧ್ರುವ ಪ್ರದೇಶಗಳಲ್ಲಿನ ಹಿಮ ಕರಗುವಿಕೆ, ಸಮುದ್ರಗಳ ಮಟ್ಟ ಏರಿ ಪ್ರವಾಹ, ತೀರಪ್ರದೇಶಗಳಲ್ಲಿನ ನಗರಗಳಿಗೆ, ತಗ್ಗು ಪ್ರದೇಶಗಳಿಗೆ ಭಾರಿ ಹಾನಿ, ಕೆಲವೆಡೆ ಅತಿವೃಷ್ಟಿಯಾದರೆ ಇನ್ನು ಕೆಲವೆಡೆ ಅನಾವೃಷ್ಟಿ. ತಾಪಮಾನದ ಅತಿರೇಕದಿಂದಾಗಿ ಜನ ಉಸಿರಾಡಲೂ ತ್ರಾಸವಾಗುತ್ತದೆ. ಹಲವು ಸಸ್ಯ ಹಾಗೂ ಪ್ರಾಣಿ ವೈವಿಧ್ಯ ನಶಿಸುವ ಸಂಭವವಿದೆಯೆನ್ನಿ. ಈಗಾಗಲೇ ಹಿಮಕರಡಿ, ಪೆಂಗ್ವಿನ್‌ನಂಥ ಪ್ರಾಣಿಗಳ ಸಂತತಿ ಅಳಿಯುತ್ತಿದೆ. ಜಲಸಂಪನ್ಮೂಲಗಳು ಬರಿದಾಗಿ ಬರ, ಕಾಡ್ಗಿಚ್ಚು, ಜಲಚರ ಜೀವಿಗಳ ವಿನಾಶ ಕಟ್ಟಿಟ್ಟ ಬುತ್ತಿ. 20ನೇ ಶತಮಾನದ ಕೊನೆಯ ಎರಡು ದಶಕಗಳಂತೂ ಹಿಂದಿನ 400 ವರ್ಷಗಳ ದಾಖಲೆಯನ್ನು ಮುರಿದು ಉಗ್ರ ತಾಪದ ವರ್ಷಗಳನ್ನು ಕಂಡವು. 1880ರ ಲಾಗಾಯ್ತು ಜಾಗತಿಕ ಬಿಸಿಯೇರಿಕೆ ಎಷ್ಟು ಗೊತ್ತೇ? 0.8 ಡಿಗ್ರಿ ಸೆಲ್ಸಿಯಸ್. ನಾವು ಆಹಾರ ಮತ್ತು ಇತರೆ ಉತ್ಪನ್ನಗಳಿಗೆ ಅವಲಂಬಿಸುವ ಬೃಹತ್ ವಾಹನ ಉತ್ಪಾದನಾ ಉದ್ಯಮಗಳು, ತೈಲ ಶುದ್ಧೀಕರಣ ಕಾರ್ಯಾಗಾರಗಳು, ವಾಣಿಜ್ಯ ಬೆಳೆ ಕೃಷಿ ಕ್ಷೇತ್ರಗಳಿಂದಲೇ ಹೆಚ್ಚು ಇಂಗಾಲ ವಿಸರ್ಜನೆಯಾಗುತ್ತಿದೆ. ನಮ್ಮ ಆಸರೆಯನ್ನು ನಿಯಂತ್ರಿಸಿಕೊಂಡರೆ ಗಮನಾರ್ಹವಾಗಿ ಅಡ್ಡಪರಿಣಾಮಗಳಿಗೆ ಕಡಿವಾಣ ಸಾಧ್ಯ. ಫ್ರಿಡ್ಜ್, ಎಸಿ ಸಾಧನಗಳಲ್ಲಿ ಬಳಸುವ ಕ್ಲೋರೋಫ್ಲೋರೋ ಕಾರ್ಬನ್, ಭೂ ವಾತಾವರಣದ ಮೇಲೆ ಕ್ಷಮಿಸಲಾಗದ ತೊಂದರೆಗಳನ್ನು ಸೃಷ್ಟಿಸುತ್ತಿದೆ. ಓಜೋನ್ ಪದರಕ್ಕೆ ಅನಿಲ ಪದರದಲ್ಲಿ ಈಗಾಗಲೇ ರಂಧ್ರವಾಗಿದೆ. ಸೂರ್ಯನಿಂದ ಬರುವ ಅಪಾಯಕಾರಿಯಾದ ಅತಿ ನೇರಳೆ ಕಿರಣಗಳನ್ನು ತಡೆಗಟ್ಟುವ ದಿವ್ಯ ಚಾಮರ ಈ ಓಜೋನ್ ಪದರ. ಬಿಸಿಲೆಂದು ಆಸಾಮಿಗೆ ಕೊಡೆ ಕೊಟ್ಟು ಕಳಿಸಿದರೆ ಆ ಮಾರಾಯ ಅದನ್ನು ಚಿಂದಿಯಾಗಿಸಿ ಹೊರಡುವುದೇ!? ಪ್ರತಿಯೊಬ್ಬ ವಿಶ್ವಪ್ರಜೆ ಅತ್ಯಂತ ಜವಾಬ್ದಾರಿಯಿಂದ ವರ್ತಿಸಿ ಭುವಿಯೆಂಬ ಆತನ ಮಹಾಮನೆಯ ಜೋಪಾಸನೆಗೆ ಕಾರ್ಯೋನ್ಮುಖವಾಗಬೇಕಿದೆ. ಇಳೆ ಉಳಿಯಲು... - ಪರಿಸರ ಸ್ನೇಹಿ ಪರಿಕರಗಳನ್ನೇ ಬಳಸಿ. ವಿದ್ಯುಚ್ಛಕ್ತಿ ಹಿತಮಿತವಾಗಿ ಬಳಕೆಯಾಗಲಿ. - ಸಾರ್ವಜನಿಕ ವಾಹನಗಳಾದ ಬಸ್ಸು, ರೈಲಿನಲ್ಲೇ ಸಂಚರಿಸಿ. ತಲುಪಬೇಕಾದ ಸ್ಥಳ ಹತ್ತಿರದಲ್ಲಿದ್ದರೆ ಕಾಲ್ನಡಿಗೆಯೇ ಯುಕ್ತ. ಕರಿಬೇವು ತರಲು ಕಾರು ಬೇಕೆ? - ಗಿಡಮರಗಳನ್ನು ಹೇರಳವಾಗಿ ಬೆಳೆಸಿ. ಅವು ಕಾರ್ಬನ್ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತವೆ. ತಾಜಾ ಗಾಳಿ ಒದಗಿ ವಾಯುಗುಣದ ವೈಪರೀತ್ಯಕ್ಕೆ ಮೂಗುದಾರ ಬೀಳುತ್ತದೆ. ಹಳೆಯ ಮರಗಳನ್ನು ಸಂರಕ್ಷಿಸುವುದು ಅಷ್ಟೇ ಮುಖ್ಯ. - ಹಬ್ಬ, ರಾಷ್ಟ್ರೀಯದಿನ, ಹುಟ್ಟಿದ ದಿನ ಮುಂತಾದ ಸಂದರ್ಭಗಳಲ್ಲಿ ಸಸಿ ನೆಡುವ ಪರಿಪಾಠವಿರಲಿ. - ನಿಮಗೆ ಮಹಡಿ ಮೆಟ್ಟಿಲುಗಳನ್ನೇರಲು ಸಾಧ್ಯವಾಗದಿದ್ದರೆ ಮಾತ್ರ ಲಿಫ್ಟ್ ಬಳಸಿ. - ಅಗತ್ಯವಿಲ್ಲದ ಸಂದರ್ಭಗಳಲ್ಲಿ ಧ್ವನಿವರ್ಧಕ ಬೇಡ. - ಅನಾವಶ್ಯಕ ಶಾಪಿಂಗ್ ಪ್ರವೃತ್ತಿ ಸಲ್ಲದು. ಪುನರ್‌ಚಕ್ರೀಯ ( ) ಉತ್ಪನ್ನಗಳನ್ನೇ ಕೊಳ್ಳುವುದನ್ನು ರೂಢಿಸಿಕೊಳ್ಳಿ. ಕಾಗದ, ಲೋಹ, ಗಾಜು, ಪ್ಲಾಸ್ಟಿಕ್ ಪದಾರ್ಥಗಳ ಮೇಲೆ ರಿಸೈಕಲ್ಡ್ ಚಿಹ್ನೆ ಖಾತರಿಪಡಿಸಿಕೊಳ್ಳಬೇಕು. ಇದರಿಂದಾಗಿ ರಾಶಿ ರಾಶಿ ಬೀಳುವ ರದ್ದಿಗೆ ಲಗಾಮು. ಜೊತೆಗೆ ಪ್ರಾಕೃತಿಕ ಸಂಪನ್ಮೂಲಗಳ ಮಿತವ್ಯಯ. - ಬಿಂಡಿಗನವಿಲೆ ಭಗವಾನ್