ನೋಕಿಯಾ ಸಂಪೂರ್ಣ ತೆರೆಮರೆಗೆ ಒಂದು ಕಾಲದಲ್ಲಿ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದ ... ವಾಷಿಂಗ್ಟನ್: ಒಂದು ಕಾಲದಲ್ಲಿ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದ ನೋಕಿಯಾ ಬ್ರಾಂಡ್ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ತೆರೆಮರೆಗೆ ಸರಿಯಲಿದೆ. ವಿಂಡೋಸ್-8 ಆಪರೇಟಿಂಗ್ ಸಿಸ್ಟಂನ ನೋಕಿಯಾದ ಲುಮಿಯಾ ಸ್ಮಾರ್ಟ್‌ಫೋನ್‌ಗಳು ಇನ್ನು ಮುಂದೆ 'ಮೈಕ್ರೋಸಾಫ್ಟ್ ಲುಮಿಯಾ' ಹೆಸರಿನಲ್ಲಿ ಮಾರುಕಟ್ಟೆಗೆ ಬರಲಿವೆ. ಈ ವಿಚಾರವನ್ನು ಸ್ವತಃ ಮೈಕ್ರೋಸಾಫ್ಟ್ ಖಚಿತ ಪಡಿಸಿದೆ. ಈ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ತನ್ನ ವೆಬ್‌ಸೈಟ್‌ನಲ್ಲೂ ಬದಲಾವಣೆ ಮಾಡಿಕೊಳ್ಳಲು ಆರಂಭಿಸಿದೆ. ನೋಕಿಯಾ ಕಂಪನಿಯನ್ನು ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್ ಏ.25 ರಂದು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆ ಬಳಿಕ ನೋಕಿಯಾದಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂನ ಸ್ಮಾರ್ಟ್‌ಫೋನ್‌ಗಳನ್ನಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ , 'ಮೈಕ್ರೋಸಾಫ್ಟ್ ಲುಮಿಯಾ' ಹೆಸರಿನ ಮೊದಲ ಮೊಬೈಲ್ ಯಾವಾಗ ಮಾರುಕಟ್ಟೆಗ ಬಿಡುಗಡೆಯಾಗಲಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿ ಕಂಪನಿ ಈಗಲೇ ಖಚಿತ ಉತ್ತರ ನೀಡಲು ಹಿಂದೇಟು ಹಾಕುತ್ತಿದೆ. ಆದರೆ, ಶೀಘ್ರದಲ್ಲೇ ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಹೇಳಿಕೊಂಡಿದೆ.