ನಮೋ ನಮಃ ಭವಿಷ್ಯದ ಪ್ರಧಾನಿಗಳೆಂದೇ ಬಿಂಬಿತವಾಗಿರುವ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಈ ಇಬ್ಬರಲ್ಲಿ ಯಾರು ಟೆಕ್ ಸ್ನೇಹಿಗಳು? ನಿಸ್ಸಂದೇಹ. ವಿದೇಶದಲ್ಲಿ ಓದಿದ, ಯುವಕ ಎಂಬ ಚರಿಷ್ಮಾ ಹೊಂದಿರುವ 42ರ ರಾಹುಲ್ ಗಾಂಧಿ ಅಕ್ಷರಶಃ ಹಿಂದೆ ಬೀಳುತ್ತಾರೆ. ನರೇಂದ್ರ ಮೋದಿ ಅವರಿಗಿಂತ 20 ವರ್ಷ ಸಣ್ಣವರಾದರೂ ನೆಹರು ಕುಟುಂಬದ ಕುಡಿ ರಾಹುಲ್ ಗಾಂಧಿ ತಂತ್ರಜ್ಞಾನ ಬಳಕೆ ಬಗ್ಗೆ ತಲೆಯನ್ನು ಕೆಡಿಸಿಕೊಂಡ ಹಾಗಿಲ್ಲ. ಇದೇ ಕಾರಣದಿಂದ ಅಂತರ್ಜಾಲಗಳಲ್ಲಿ 'ನಮೋ' (ನರೇಂದ್ರ ಮೋದಿ) ಮಂತ್ರ ಟ್ವೀಟಿಸುತ್ತದೆ. ದೇಶದ ಯುವಕರಲ್ಲಿ 'ನಮೋ' ಮಂತ್ರ ಪಠಣ ಕೇಳುತ್ತದೆ. ಅಪರೂಪಕ್ಕೆ ಸಾಮಾಜಿಕ ತಾಣ ಹಾಗೂ ವೆಬ್‌ಸೈಟ್‌ಗಳಲ್ಲಿ ಪ್ರತ್ಯಕ್ಷರಾಗುವ ರಾಹುಲ್ ಗಾಂಧಿ ಒಂದು ಹಂತದಲ್ಲಿ ನಮ್ಮ ಪ್ರಧಾನಿ ಮನಮೋಹನ್ ಸಿಂಗ್‌ಗಿಂತಲೂ ಮಿತಭಾಷಿ. ಯಾವುದರ ಬಗೆಗೂ ಮಾತನಾಡುವುದು ಕಡಿಮೆ. ಅದೇ ನರೇಂದ್ರ ಮೋದಿ ಪ್ರತಿ ಗಂಟೆಯೂ ಸಾಮಾಜಿಕ ತಾಣಗಳ ಮೂಲಕ ಜನತೆಯನ್ನು ಸಂಪರ್ಕಿಸುತ್ತಿರುತ್ತಾರೆ. ಸುಮಾರು 8ಕ್ಕೂ ಅಧಿಕ ಸಾಮಾಜಿಕ ತಾಣಗಳ ಮೂಲಕ 30 ಲಕ್ಷಕ್ಕೂ ಹೆಚ್ಚು ಜನರೊಂದಿಗೆ ನೇರ ಸಂಪರ್ಕ ಹೊಂದಲು 'ನಮೋ' ಯಶಸ್ವಿಯಾಗಿದ್ದಾರೆ. ಅದೇ ರಾಹುಲ್ ಗಾಂಧಿ ಫೇಸ್‌ಬುಕ್ ಹಾಗೂ ಟ್ವೀಟರ್ ಹೊರತುಪಡಿಸಿ ಮತ್ಯಾವ ಪುಟಗಳಲ್ಲಿಯೂ ಕಾಣುವುದಿಲ್ಲ. ಕಾಂಗ್ರೆಸ್‌ನ 'ಪ್ರಧಾನಿ ಅಭ್ಯರ್ಥಿ'ಯನ್ನು ಫಾಲೋ ಮಾಡುವವರ ಸಂಖ್ಯೆ 2 ಲಕ್ಷವನ್ನೂ ಮೀರುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಸಾಮಾಜಿಕ ತಾಣಗಳಲ್ಲಿ ರಾಹುಲ್ ಗಾಂಧಿ ಪ್ರತ್ಯಕ್ಷರಾಗುವುದೇ ಅಪರೂಪ. ಇವತ್ತಿನ ರಾಜಕೀಯಕ್ಕೆ ಇದು ಅನಿವಾರ್ಯವಲ್ಲ. ಆದರೆ ಯುವಜನತೆಯನ್ನು ಆಕರ್ಷಿಸಲು ಅವಶ್ಯಕವಾಗಿದೆ. ಇದೇ ಕಾರಣದಿಂದ ನರೇಂದ್ರ ಮೋದಿ ವಯಸ್ಸು 60 ದಾಟಿದರೂ ಯುವಕರ ಕಣ್ಮಣಿಯಾಗಿದ್ದಾರೆ. ನೆಟ್‌ನಲ್ಲಿ ಮೋದಿ ಮಂತ್ರ ನರೇಂದ್ರ ಮೋದಿಯ ಅಧಿಕೃತ ವೆಬ್‌ಸೈಟಿಗೆ ಭೇಟಿ ನೀಡಿದರೆ ನಿಮಗೆ ಸುಮಾರು 8 ಸಾಮಾಜಿಕ ತಾಣಗಳ ಲಿಂಕ್ ದೊರೆಯುತ್ತದೆ. ಫೇಸ್‌ಬುಕ್ ಹಾಗೂ ಟ್ವೀಟರ್ ಹೊರತುಪಡಿಸಿ ನಾವೆಲ್ಲ ಕೇಳದ ಹೆಸರಿನ ಅಂದರೆ ಭವಿಷ್ಯದಲ್ಲಿ ಹೆಸರು ಮಾಡಬಹುದಾದ ಸಾಮಾಜಿಕ ತಾಣಗಳಲ್ಲೂ ಮೋದಿ ಕಾಣುತ್ತಾರೆ. ಫೇಸ್‌ಬುಕ್, ಟ್ವೀಟರ್, ಯೂಟ್ಯೂಬ್, ಫ್ಲಿಕರ್, ಗೂಗಲ್ ಪ್ಲಸ್, ಪಿಂಟರೆಸ್ಟ್, ಟಂಬ್ಲರ್, ಸ್ಟಂಬಲ್ ಅಪಾನ್ ಎಂಬ ಸಾಮಾಜಿಕ ತಾಣಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಇದನ್ನು ಹೊರತುಪಡಿಸಿ ಮೋದಿಗೆ ಸಂಬಂಧಿಸಿದ ವಿಡಿಯೋಗಳಿಗೆ 1 ಕೋಟಿಗೂ ಅಧಿಕ ಕ್ಲಿಕ್‌ಗಳು ಬಂದಿವೆ. ಫೇಸ್‌ಬುಕ್‌ನಲ್ಲಿ 14.34 ಹಾಗೂ ಯೂಟ್ಯೂಬ್‌ನಲ್ಲಿ 13.76 ಲಕ್ಷ ಜನರು ಮೋದಿಯನ್ನು ಫಾಲೋ ಮಾಡುತ್ತಿದ್ದಾರೆ. ದೇಶದಲ್ಲಿ ಯಾವುದೇ ಘಟನೆ ನಡೆದರೂ ಮರುಕ್ಷಣದಲ್ಲಿಯೇ ಮೋದಿ ಹೆಸರಿನಲ್ಲಿರುವ ಫೇಸ್‌ಬುಕ್ ಹಾಗೂ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ಕಾಣಬಹುದು. ಇದಲ್ಲದೇ ಅದಕ್ಕೆ ಸಂಬಂಧಪಟ್ಟ ಫೋಟೋವನ್ನು ಫೇಸ್‌ಬುಕ್‌ನಲ್ಲಿಯೂ ಹಾಕುತ್ತಾರೆ. ಮಾಧ್ಯಮಗಳಿಂದ ಸದಾ ದೂರವಿರುವ ಮೋದಿ ತಮ್ಮ ಯಾವುದೇ ಪ್ರತಿಕ್ರಿಯೆಗಳನ್ನು ಇದೇ ತಾಣಗಳಿಂದ ನೀಡುತ್ತಾರೆ ಮತ್ತು ಆ ಪ್ರತಿಕ್ರಿಯೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗುತ್ತದೆ. ಇನ್ನು ಯೂಟ್ಯೂಬ್‌ನಲ್ಲಿ ನರೇಂದ್ರ ಮೋದಿ ವಿಶೇಷ ಪುಟವನ್ನೇ ಹೊಂದಿದ್ದಾರೆ. ಈ ಪುಟದಲ್ಲಿ 'ನಮೋ'ಗೆ ಸಬಂಧಿಸಿದ ಎಲ್ಲ ವಿಡಿಯೋಗಳು ಅಪಲೋಡ್ ಆಗಿರುತ್ತವೆ. ಮೋದಿಯವರ ಯಾವುದೇ ಭಾಷಣವು ಈ ಪುಟದಿಂದ ತಪ್ಪಿರಲು ಸಾಧ್ಯವೇ ಇಲ್ಲ. ಇದಲ್ಲದೇ ಗೂಗಲ್ ಹ್ಯಾಂಗೌಟ್ ಮೂಲಕ ಪದೇಪದೇ ವಿಶ್ವದ ನಾನಾ ಪ್ರದೇಶದಲ್ಲಿರುವ ಭಾರತೀಯರ ಜತೆ ವಿಡಿಯೋ ಚಾಟ್ ಮಾಡಿ ತಮ್ಮ ಆಲೋಚನಾ ಲಹರಿಯನ್ನು ಹರಿಬಿಡುತ್ತಾರೆ. ಮೊಬೈಲ್ ಅಪ್ಲಿಕೇಷನ್‌ನಲ್ಲೂ ಮೋದಿ ಆ್ಯಂಡ್ರಾಯ್ಡ್ ಹಾಗೂ ಆ್ಯಪಲ್ ಸ್ಟೋರ್‌ಗಳಲ್ಲೂ ನರೇಂದ್ರ ಮೋದಿಗೆ ಸಂಬಂಧಿಸಿದ ಅಪ್ಲಿಕೇಷನ್‌ಗಳು ಲಭ್ಯವಿವೆ. ನರೇಂದ್ರ ಮೋದಿಯವರ ವೆಬ್‌ಸೈಟ್‌ನ್ನೇ ಮೊಬೈಲ್ ಬಳಕೆಗಾಗಿ ಅಪ್ಲಿಕೇಷನ್ ಮೂಲಕ ಹೊರತರಲಾಗಿದೆ. ಗೂಗಲ್ ಸ್ಟೋರ್ ಹಾಗೂ ಐ ಟ್ಯೂನ್‌ನಲ್ಲಿ ಇದು ಲಭ್ಯವಿದೆ. ಮೋದಿಯವರ ಅಧಿಕೃತ ವೆಬ್‌ತಾಣದಿಂದ ಪ್ರಕಟವಾಗುವ ಪ್ರತಿ ಸುದ್ದಿಯೂ ಇಲ್ಲಿ ದೊರೆಯುತ್ತದೆ. ಮೋದಿ ವೆಬ್ ಮೋಡಿ ಬಹುತೇಕ ರಾಷ್ಟ್ರೀಯ ಮಾಧ್ಯಮಗಳಿಗೆ ಮೋದಿಯೆಂದರೆ ಗೋಧ್ರೋತ್ತರ ಗಲಭೆಯ ಸೂತ್ರದಾರ. ಇದೇ ಕಾರಣದಿಂದ 2008ರ ಬಳಿಕ ಮಾಧ್ಯಮಗಳಿಂದ ದೂರ ಸರಿಯಲು ಮೋದಿ ನಿರ್ಧರಿಸಿದಂತಿದೆ. ಸಾರ್ವಜನಿಕರಿಗೆ ಏನೇ ಹೇಳಬೇಕೆಂದರೂ ತಮ್ಮ ವೆಬ್‌ತಾಣದ ಮೂಲಕವೇ ಹೇಳುತ್ತಾರೆ. ಅಲ್ಲಿನ ಮೀಡಿಯಾ ಗ್ಯಾಲರಿಯಿಂದ ಎಲ್ಲ ಸಂದೇಶ ನೀಡುತ್ತಾರೆ. ತುರ್ತಾಗಿದ್ದರೆ ತಮ್ಮ ಟ್ವೀಟರ್ ಮೂಲಕ ಟ್ವೀಟಿಸುತ್ತಾರೆ. ಒಮ್ಮೆ ಮೋದಿಯ ವೆಬ್‌ತಾಣವನ್ನು ಪ್ರವೇಶಿಸಿದರೆ ಗುಜರಾತ್‌ನ್ನೇ ಒಂದು ಸುತ್ತು ಹೊಡೆದಂತಾಗುತ್ತದೆ. ದೇಶದ ರಾಜಕಾರಣಿಗಳು ಹೊಂದಿರುವ ಅತ್ಯುತ್ತಮ ವೆಬ್‌ತಾಣ ಎಂದು ಇದಕ್ಕೆ ಹೇಳಬಹುದು. ವೆಬ್‌ತಾಣಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರೂ ತಮ್ಮ ಫೀಡ್‌ಬ್ಯಾಕ್ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೇ ಮೋದಿಗೆ ಸಂಬಂಧಿಸಿದ ಉತ್ತಮ ಭಾವಚಿತ್ರ, ರಿಂಗ್‌ಟೋನ್ ಸೇರಿದಂತೆ ಇತರ ಎಲ್ಲ ಮಾಹಿತಿಗಳು ಅಲ್ಲಿ ಲಭ್ಯವಿವೆ. ದೈನಂದಿನ ಜೀವನದಲ್ಲಿ ತಂತ್ರಜ್ಞಾನವನ್ನು ಮೋದಿ ಹೇಗೆ ಅಳವಡಿಸಿಕೊಂಡಿದ್ದಾರೋ ತಮ್ಮ ಆಡಳಿತದಲ್ಲೂ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದಾರೆ. ರಾಹುಲ್ ತಾಣದಲ್ಲಿನ್ನೂ ಕಾಮಗಾರಿ ಆದರೆ, ಇದಕ್ಕೆ ತದ್ವಿರುದ್ಧವಾಗಿ ರಾಹುಲ್ ಗಾಂಧಿಯ ಅಧಿಕೃತ ವೆಬ್‌ತಾಣವಿನ್ನೂ ಲಭ್ಯವಿಲ್ಲ. ವೆಬ್‌ತಾಣವೂ 'ಅಂಡರ್ ಕನ್‌ಸ್ಟ್ರಕ್ಷನ್‌' ಹಂತದಲ್ಲಿದೆ. ಮತ್ತೊಂದೆಡೆ ಫೇಸ್‌ಬುಕ್ ಹಾಗೂ ಟ್ವೀಟರ್ ಹೊರತುಪಡಿಸಿ ಉಳಿದೆಡೆ ವಿಳಾಸವೇ ಇಲ್ಲ. ಫೇಸ್‌ಬುಕ್‌ನಲ್ಲಿಯೂ ಜ.25ರ ನಂತರ ಯಾವುದೇ ಅಪ್‌ಡೇಟ್ ಆಗಲೇ ಇಲ್ಲ. ರಾಹುಲ್ ಗಾಂಧಿ ಟ್ವೀಟಿಸಿ ಬರೋಬ್ಬರಿ ಎರಡೂವರೆ ವರ್ಷಗಳು ಕಳೆದುಹೋದವು. ಸೆ.26, 2010ರಂದು ವಿಡಿಯೋ ತುಣುಕಿನ ಲಿಂಕ್‌ನ್ನು ನೀಡಿದ್ದರು. ಫೇಸ್‌ಬುಕ್‌ನಲ್ಲಿ 1.77 ಲಕ್ಷ ಹಾಗೂ ಟ್ವೀಟರ್‌ನಲ್ಲಿ 14 ಸಾವಿರ ಜನ ಮಾತ್ರ ರಾಹುಲ್ ಗಾಂಧಿಯನ್ನು ಫಾಲೋ ಮಾಡುತ್ತಾರೆ. ಸಾಮಾಜಿಕ ತಾಣಗಳಿಂದ ರಾಹುಲ್ ಗಾಂಧಿ ದೂರವಾಗಿದ್ದರಿಂದ ಜನರೂ ದೂರವಾಗಿದ್ದಾರೆ. ಇನ್ನು ಮೊಬೈಲ್ ಅಪ್ಲಿಕೇಷನ್ ಬರುವುದು ದೂರದ ಮಾತಾಗಿದೆ. ಮುಖ ನೋಡಿ ಮಣೆ ಹಾಕಬೇಡ ಗುಣ ನೋಡಿ ಅಳೆಯಮ್ಮ... ಎಂಬ ಮಾತು ಹಳೆಯದು. ಈಗ ಮುಖ ನೋಡಿಯೇ ವ್ಯಕ್ತಿಗಳನ್ನು ಅಳೆಯುವ ಸಾಧನವೊಂದು ಬಂದರೂ ಅಚ್ಚರಿಯಿಲ್ಲ. ಕಂಪ್ಯೂಟರ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಫುಜಿಟ್ಸು ಕಂಪನಿನ ಸಂಶೋಧನಾ ಕೇಂದ್ರದಲ್ಲಿ ಇಂತಹ ಸಾಧನವೊಂದನ್ನು ಕಂಡುಹಿಡಿಲಾಗಿದೆಯಂತೆ. ಅದರ ಪ್ರಕಾರ ನೀವು ಮುಖನೋಡಿಯೇ ಮಣೆಹಾಕಬಹುದಂತೆ! ನಮ್ಮ ಮುಖದ ಕಾಂತಿ ಮತ್ತು ನಮ್ಮ ನಾಡಿಮಿಡಿತಕ್ಕೂ ಸಂಬಂಧವಿದೆ. ಇದನ್ನು ಆಧರಿಸಿಯೇ ಹೊಸ ತಂತ್ರಜ್ಞಾನ ರೂಪಿಸಲಾಗಿದೆಯಂತೆ. ಮುಖದ ಕಾಂತಿ ಮತ್ತು ಅದರಲ್ಲಾಗುವ ಬದಲಾವಣೆ ಆಧರಿಸಿ ವ್ಯಕ್ತಿಯ ಆರೋಗ್ಯದಲ್ಲಾಗುತ್ತಿರುವ, ಆಗಬಹುದಾದ ಬದಲಾವಣೆಗಳನ್ನು ಗುರುತಿಸುವುದು ಈ ತಂತ್ರಜ್ಞಾನದ ಮುಖ್ಯ ಉದ್ದೇಶ. ಇದೇ ತಂತ್ರಜ್ಞಾನವನ್ನು ಬಳಸಿ ಉಗ್ರಗಾಮಿಗಳನ್ನು ಅವರು ದುಷ್ಕೃತ್ಯ ಮಾಡುವ ಮೊದಲೇ ಅವರನ್ನು ಪತ್ತೆ ಮಾಡಬಹುದು ಎನ್ನಲಾಗುತ್ತಿದೆ. ಈ ತಂತ್ರಜ್ಞಾನ ಮೊಬೈಲ್, ಕಂಪ್ಯೂಟರ್, ಭದ್ರತಾ ಕ್ಯಾಮರಾ ಹೀಗೆ ಯಾವುದೇ ಸಾಮಾನ್ಯ ಕ್ಯಾಮರಾ ಸಹಾಯದಿಂದ ಮುಖದ ಕಾಂತಿ ಮತ್ತು ಅದರಲ್ಲಾಗುತ್ತಿರುವ ಬದಲಾವಣೆಗಳನ್ನು ಗುರುತಿಸಬಲ್ಲದು. ವ್ಯಕ್ತಿಯ ಮುಖ ಮತ್ತು ಅದರ ಕಾಂತಿಯಲ್ಲಾಗುತ್ತಿರುವ ಬದಲಾವಣೆಗಳನ್ನು ಗುರುತಿಸಲು ಈ ತಂತ್ರಜ್ಞಾನಕ್ಕೆ ಕೇವಲ 5 ಸೆಕೆಂಡ್ ಸಾಕಂತೆ! ಆದ್ದರಿಂದ ಅತ್ಯಂತ ಶೀಘ್ರವಾಗಿ ಪತ್ತೆ ಮಾಡುವುದರಿಂದ ವ್ಯಕ್ತಿಯ ಆರೋಗ್ಯ ಹದಗೆಡುವ ಅಥವಾ ಆತನಲ್ಲಾಗುತ್ತಿರುವ ಬದಲಾವಣೆಗಳನ್ನು ಅತ್ಯಂತ ಶೀಘ್ರವಾಗಿ ಪತ್ತೆ ಮಾಡಬಹುದು ಎನ್ನಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂಬುದು ಖಚಿತವಾಗಬೇಕಿದೆ. - ರಾಧೆ