ಯಾವ ಶಿಲ್ಪಿ ತೆಗೆದ ಸೆಲ್ಫಿ? ಇದು ಸೆಲ್ಫಿಗಳ ಕಾಲ. 'ಅಣ್ಣಾ ಒಂದು ಫೋಟೋ ಪ್ಲೀಸ್‌' ಎಂದು ಯಾರಿಗೂ ಗೋಗರೆಯಬೇಕಾಗಿಲ್ಲ... ಇದು ಸೆಲ್ಫಿಗಳ ಕಾಲ. 'ಅಣ್ಣಾ ಒಂದು ಫೋಟೋ ಪ್ಲೀಸ್‌' ಎಂದು ಯಾರಿಗೂ ಗೋಗರೆಯಬೇಕಾಗಿಲ್ಲ. ಮೈಸೂರಿನ ಕೆಲ ಪ್ರವಾಸಿ ತಾಣಗಳಲ್ಲಿದ್ದಂತೆ ಫೋಟೋ ತೆಗೆದಿರುವುದಕ್ಕೆ ಅಲ್ಲಿರುವ ಅಬ್ಬೇಪಾರಿಗೆ ಟಿಪ್ಸ್ ಕೊಡಬೇಕಾಗಿಯೂ ಇಲ್ಲ. ನಿಮ್ಮ ಕ್ಯಾಮೆರಾ, ನಿಮ್ಮ ಮೊಬೈಲ್‌ನಲ್ಲಿಯೇ ಆರಾಮಾಗಿ ಫೋಟೋ ತೆಗೆದುಕೊಳ್ಳಬಹುದು. ಆದರೆ ಅಷ್ಟು ಚೆಂದವಾಗಿ ಬರಲ್ಲ, ಸೆಲ್ಫಿ ಎಂದು ಗೊತ್ತಾಗಿಬಿಡುತ್ತದೆ ಎಂಬ ಸಣ್ಣ ಬೇಜಾರು ಪ್ರತಿಯೊಬ್ಬ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿಯೂ ಇತ್ತು. ಆದರೆ ಈ ಬೇಸರ ದೂರವಾಗಿಸುವ ತಂತ್ರಜ್ಞಾನವನ್ನು ಕ್ರಂಚ್‌ಫಿಶ್ ಹೊರತಂದಿದೆ. ಗೋಕ್ಯಾಮ್ ಎಂಬ ಅಪ್ಲಿಕೇಷನ್ ಅನ್ನು ಆ್ಯಪ್ ಸ್ಟೋರ್‌ಗೆ ಕ್ರಂಚ್‌ಫಿಶ್ ಬಿಟ್ಟಿದೆ. ಗೆಸ್ಚರ್ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸುವ ಈ ಆ್ಯಪ್ ಸೆಲ್ಫಿಗಳ ಪಾಲಿಗೆ ಸ್ವರ್ಗವಾಗುವ ಎಲ್ಲ ಲಕ್ಷಣ ಹೊಂದಿದೆ. ಆದರೆ, ಸದ್ಯದ ಮಟ್ಟಿಗೆ ಈ ಆ್ಯಪ್ ಕೇವಲ ಆ್ಯಪ್ ಸ್ಟೋರ್‌ಗೆ ಸೀಮಿತವಾಗಿದೆ. ಈಗ ಸೆಲ್ಫಿ ತೆಗೆದುಕೊಳ್ಳುವಾಗ ಬಲ ಅಥವಾ ಎಡ ಕೈನಲ್ಲಿ ಮೊಬೈಲ್ ಹಿಡಿದುಕೊಂಡು ಕೈಯನ್ನು ಎಷ್ಟು ದೂರ ಚಾಚಲು ಸಾಧ್ಯವೋ ಅಷ್ಟು ದೂರವಿಟ್ಟುಕೊಳ್ಳಬೇಕು. ಆದರೆ ಆಗ ಫೋಟೋದಿಂದ ಒಂದು ಕೈ ಮಿಸ್ ಆಗುತ್ತಿತ್ತು, ಮುಖದಲ್ಲಿ ಬೇರೆಯದೇ ರೀತಿಯ ಭಾವನೆ ಕಾಣುತ್ತಿತ್ತು. ಮುಖದಲ್ಲಿನ ಗೆಸ್ಚರ್‌ನಲ್ಲಿಯೇ ಸೆಲ್ಫಿ ಎನ್ನುವುದು ತಿಳಿಯುತ್ತಿತ್ತು. ಈ ಹೊಸ ಆ್ಯಪ್ ಅನ್ನು ಸೆಲ್ಫಿಗಾಗಿಯೇ ವಿಶೇಷವಾಗಿ ರೂಪಿಸಲಾಗಿದೆ. ಮೊಬೈಲ್ ಅನ್ನು 10 ಅಡಿ ದೂರದಲ್ಲಿಟ್ಟು ನಮ್ಮ ಅಂಗೈನಿಂದ ಮೊಬೈಲ್ ನಿಯಂತ್ರಿಸಬಹುದು. ಸ್ಕ್ರೀನ್ ಮುಟ್ಟದೇ ಫೋಟೋ ತೆಗೆಯಬಹುದು. 10 ಅಡಿ ದೂರದೊಳಗಿನ ಅಂತರದಲ್ಲಿ ಮೊಬೈಲನ್ನಿಟ್ಟು ಸ್ಕ್ರೀನ್‌ಗೆ ಎದುರಾಗಿ ನಿಂತು ಅಥವಾ ಕುಳಿತು ಫೋಟೋ ಕ್ಲಿಕ್ಕಿಸಿಕೊಳ್ಳಬಹುದು. ಮೊಬೈಲ್ ಸ್ಕ್ರೀನ್‌ನತ್ತ ಕೈ ತೋರಿಸಿ ಗೆಸ್ಚರ್ ಮೂಲಕ ನಿಯಂತ್ರಿಸಬಹುದು. ಅಂಗೈ ಚಲನೆ ನಿಲ್ಲಿಸಿದ ಕೂಡಲೇ ಇದನ್ನು ಮೊಬೈಲ್‌ನಲ್ಲಿ ಆ್ಯಪ್ ಗ್ರಹಿಸಿ ಫೋಟೋ ಹಿಡಿಯುತ್ತದೆ. ಅದೇ ಕೈಯನ್ನು ಸ್ಕ್ರಾಲ್ ಡೌನ್ ಮಾಡಿದರೆ ವಿಡಿಯೋ ಚಿತ್ರೀಕರಣ ಆರಂಭವಾಗುತ್ತದೆ. ಇದರಿಂದ ಸೆಲ್ಫಿಯನ್ನು ಕೂಡ ನಮಗೆ ಬೇಕಾದ ಹಾಗೆ ತೆಗೆದುಕೊಳ್ಳಬಹುದು. ಸದ್ಯಕ್ಕೆ ಈ ಆ್ಯಪ್ ಆ್ಯಪಲ್ ಐಫೋನ್ 4ಎಸ್ ಮತ್ತು ಅದರ ಮುಂದಿನ ಮಾದರಿ, ಐಪ್ಯಾಡ್ 2, ಐಪ್ಯಾಡ್ ಮಿನಿ ಮತ್ತು ನಂತರದ ಮಾದರಿಯಲ್ಲಿ ಇದು ಕೆಲಸ ಮಾಡುತ್ತದೆ. ಶೀಘ್ರದಲ್ಲೇ ಗೂಗಲ್ ಸ್ಟೋರ್‌ಗೂ ಬಿಡುವ ಆಲೋಚನೆಯನ್ನು ಕ್ರಂಚ್‌ಫಿಶ್ ಹೊಂದಿದ್ದು, ಎಸ್-4 ಹಾಗೂ ಎಸ್-5ನಲ್ಲಿ ಮಾತ್ರ ಇದು ಕಾರ್ಯನಿರ್ವಹಿಸಬಹುದು. ಅಂದಹಾಗೆ ಈ ಸೆಲ್ಫಿ ಎನ್ನುವುದು ಕಳೆದ ಒಂದೂವರೆ ವರ್ಷದಲ್ಲಿ ಸಾಮಾಜಿಕ ತಾಣದಲ್ಲಿ ಅತಿ ಹೆಚ್ಚು ಪ್ರಖ್ಯಾತವಾದ ಶಬ್ದ. ಮೊನ್ನೆ ಮೊನ್ನೆ ಅಂತ್ಯವಾದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯ ಸೆಲ್ಫಿ ಅತಿ ಹೆಚ್ಚು ಚರ್ಚೆಗೆ ಒಳಗಾದ ವಿಚಾರವಾಗಿತ್ತು. ಈ ಸೆಲ್ಪಿ ಪ್ರಾರಂಭವಾಗಿದ್ದು 1839ರಲ್ಲಂತೆ. ರಾಬರ್ಟ್ ಕಾರ್ನಲೂಯೀಸ್ ಎಂಬಾತ ತನ್ನ ಫೋಟೋವನ್ನು ತಾನೇ ತೆಗೆದುಕೊಂಡಿದ್ದ. ಇದಾದ ನಂತರ 1900ರಲ್ಲಿ ಕೊಡ್ಯಾಕ್ ಕ್ಯಾಮೆರಾದಿಂದ ರಷ್ಯಾದ ಬಾಲೆಯೊಬ್ಬಳು ತನ್ನ ಫೋಟೋವನ್ನು ಮಿರರ್ ಮೂಲಕ ತೆಗೆದುಕೊಂಡಿದ್ದಳು. ಆದರೆ ಇದಕ್ಕೆ ಸೆಲ್ಫಿ ಎನ್ನುವ ಹೆಸರಿರಲಿಲ್ಲ. ಆದರೆ ಫಅರಂಟ್ ಕ್ಯಾಮೆರಾ ಇರುವ ಮೊಬೈಲ್‌ಗಳು ಮಾರುಕಟ್ಟೆಗೆ ಬಂದ ಬಳಿಕ ಸೆಲ್ಫಿಕಾಲ ಆರಂಭವಾಯಿತು. ಯುವಕರು ತಮ್ಮ ಪ್ರೈವೇಟ್ ಫೋಟೋ ಸೆಷನ್‌ಗೆ ಈ ಸೆಲ್ಫಿ ಬಳಸಲು ಆರಂಭಿಸಿದರು. ಸೆಲ್ಫಿಯ ಹುಚ್ಚು ಆರಂಭಿಸಿದ್ದು ಮೊದಲ ಆಸ್ಟ್ರೇಲಿಯಾದ ಯುವಕರು. 2002ರ ಸೆ.13ರಲ್ಲಿ ಆಸ್ಟ್ರೇಲಿಯನ್ ಇಂಟರ್ನೆಟ್ ಫೋರಮ್‌ನಲ್ಲಿ ಸೆಲ್ಫಿ ಎಂಬ ಶಬ್ದ ಬಳಕೆಯಾಗಿತ್ತು. ಸುಮಾರು 11 ವರ್ಷಗಳ ಕಾಲ ಇಂಗ್ಲಿಷ್ ಶಬ್ದಕೋಶದಲ್ಲಿ ಇದಕ್ಕೆ ಜಾಗವಿರಲಿಲ್ಲ. 2013ರಲ್ಲಿ ಸೆಲ್ಫಿಯನ್ನು ಆಕ್ಪ್‌ಫರ್ಡ್ ಡಿಕ್ಷನರಿಯಲ್ಲಿ ಸೇರಿಸಲಾಯಿತು ಹಾಗೂ ವರ್ಷದ ಶಬ್ದ ಎಂಬ ಖ್ಯಾತಿಗೆ 'ಸೆಲ್ಫಿ' ಒಳಗಾಯಿತು. - ರಾಜೀವ ಹೆಗಡೆ .@.