ಯುಎಚ್‌ಡಿ ಯುಎಚ್‌ಡಿ ಅಂದರೆ ಅಲ್ಟ್ರಾ ಎಚ್‌ಡಿ ಎಂದರ್ಥ. ಜಗತ್ತಿನ ಅಂತ್ಯಂತ ಹೈ ರೆಸಲ್ಯೂಷನ್ ಟಿವಿ ಎಂಬ ಹೆಗ್ಗಳಿಗೆ ಈ ಯುಎಚ್‌ಡಿ... 'ಹೈ ಡೆಫಿನೇಷನ್ (ಎಚ್‌ಡಿ 720ಪಿ ರೆಸಲ್ಯೂಷನ್) ಆಯ್ತು. ಫುಲ್ ಹೈ ಡೆಫಿನೇಶನ್ (ಎಫ್‌ಎಚ್‌ಡಿ1080ಪಿ ರೆಸಲ್ಯೂಷನ್) ಆಯ್ತು. ಆ ಟಿವಿಯಲ್ಲಿ ಇದಕ್ಕಿಂತ ಕ್ಲಿಯರ್ ದೃಶ್ಯಗಳು ಕಾಣಲು ಸಾಧ್ಯವೇ ಇಲ್ಲ ಅಂದುಕೊಳ್ಳುತ್ತಿರುವಾಗ ಯುಎಚ್‌ಡಿ ಕಾಲಿಟ್ಟಿದೆ! ಯುಎಚ್‌ಡಿ ಅಂದರೆ ಅಲ್ಟ್ರಾ ಎಚ್‌ಡಿ ಎಂದರ್ಥ. ಜಗತ್ತಿನ ಅಂತ್ಯಂತ ಹೈ ರೆಸಲ್ಯೂಷನ್ ಟಿವಿ ಎಂಬ ಹೆಗ್ಗಳಿಗೆ ಈ ಯುಎಚ್‌ಡಿ ಟಿವಿಗಳಿಗಿದೆ. ಪ್ರಮುಖ ಟಿವಿ ಕಂಪನಿಗಳಾದ ಸೋನಿ, ಎಲ್‌ಜಿ ಮತ್ತು ಸ್ಯಾಮ್‌ಸಂಗ್ ಕಂಪನಿಗಳು ಯುಎಚ್‌ಡಿ ಸಮರ ಕಣದಲ್ಲಿವೆ. 4ಕೆ ತಂತ್ರಜ್ಞಾನ ಬಳಸಿ ಮೊದಲ ಯುಎಚ್‌ಡಿ ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಎಲ್‌ಜಿ ಕಂಪನಿ. ಇದರ ಸ್ಕ್ರೀನ್‌ನಲ್ಲಿ ದೃಶ್ಯಗಳು 3840x2160 ರೆಸಲ್ಯೂಶನ್‌ನಲ್ಲಿ ಇರುತ್ತವೆ. ಇದು ಎಚ್‌ಡಿ ಟಿವಿ ರೆಸಲ್ಯೂಷನ್‌ಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಇದನ್ನು 4ಕೆ ಯುಎಚ್‌ಡಿ ಎಂದು ಕರೆಯುತ್ತಾರೆ. ಅಬ್ಬಾ! ಇದೇ ಹೆಚ್ಚು. ಎಷ್ಟೊಂದು ಕ್ಲಾರಿಟಿ ಎಂದು ಅಚ್ಚರಿಪಡಬೇಡಿ. ಆಗಲೇ 8ಕೆ ಯುಎಚ್‌ಡಿ ಟಿವಿಯನ್ನೂ ಕಂಡುಹಿಡಿಯಲಾಗಿದೆ! ಅದು ನಮ್ಮ ಸಾಮಾನ್ಯ ಎಚ್‌ಡಿ ಟಿವಿಗಿಂತ 16ಪಟ್ಟು ಹೆಚ್ಚು ರೆಸಲ್ಯೂಷನ್ ಹೊಂದಿದೆಯಂತೆ! ರೆಸಲ್ಯೂಷನ್ ಹೆಚ್ಚಾದ ಹಾಗೆ ಅವುಗಳ ದರವೂ ಅದೇ ಪ್ರಮಾಣದಲ್ಲಿ ಹೆಚ್ಚುತ್ತದೆ. 55-65 ಇಂಚು ಯುಎಚ್‌ಡಿ ಟಿವಿಗಳು ರು. 4 ಲಕ್ಷಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿವೆ. ಇಷ್ಟು ರೆಸಲ್ಯೂಷನ್ ಬೇಕಾ? ರೆಸಲ್ಯೂಷನ್ ಎಂಬುದು ಒಂದು ರೀತಿಯ ಇಲ್ಯೂಷನ್. ನೀವು 32 ಇಂಚಿನವರೆಗಿನ ಟಿವಿಗಳಲ್ಲಿ ಎಚ್‌ಡಿ ಇದ್ದರೂ, ಇಲ್ಲದಿದ್ದರೂ ಅದರ ವ್ಯತ್ಯಾಸ ಗುರುತಿಸಲಾರಿರಿ! ಅದಕ್ಕಿಂತ ದೊಡ್ಡ ಗಾತ್ರದ ಟಿವಿಗಳಲ್ಲಿ ಮಾತ್ರ ನೀವು ವ್ಯತ್ಯಾಸ ಗುರುತಿಸಬಲ್ಲಿರಿ. ಹೀಗಾಗಿ 32 ಇಂಚಿಗಿಂತ ದೊಡ್ಡ ಟಿವಿ ಖರೀದಿಸುವವರಾಗಿದ್ದರೆ ಮಾತ್ರ ರೆಸಲ್ಯೂಷನ್ ಬಗ್ಗೆ ತಲೆಕೆಡಿಸಿಕೊಳ್ಳಿ. ಇನ್ನು ಯುಎಚ್‌ಡಿ ಬಗ್ಗೆ ನೀವು ವಿಚಾರ ಮಾಡಬೇಕೆಂದರೆ, ಕನಿಷ್ಠ 45 ಇಂಚಿಗಿಂತ ದೊಡ್ಡ ಟಿವಿ ಖರೀದಿಸುವ ಉಮೇದಿ ನಿಮಗಿರಬೇಕು. ಅದಿಲ್ಲವಾದರೆ ಎಚ್‌ಡಿಗೂ ಯುಎಚ್‌ಡಿಗೂ ವ್ಯತ್ಯಾಸ ಗುರುತಿಸಲು ನಿಮಗೆ ಸಾಧ್ಯವಾಗುವುದಿಲ್ಲ. ದೊಡ್ಡ ಯುಎಚ್‌ಡಿ ಟಿವಿ ಖರೀದಿಸಿದಿರಿ ಅಂದುಕೊಳ್ಳಿ ಅಷ್ಟು ರೆಸಲ್ಯೂಷನ್‌ನಲ್ಲಿ ಯಾವುದೇ ಚಾನೆಲ್‌ಗಳು ಪ್ರಸಾರ ಮಾಡುತ್ತಿಲ್ಲ. ಅಷ್ಟು ರೆಸಲ್ಯೂಷನ್ ವಿಡಿಯೋಗಳೇ ಪ್ರಪಂಚದಲ್ಲಿ ಲಭ್ಯವಿರುವುದು ಅತ್ಯಲ್ಪ!! ಹೆಚ್ಚೆಂದರೆ ಬ್ಲ್ಯೂರೇ ಮತ್ತು 3ಡಿ ಡಿವಿಡಿಗಳು ಲಭ್ಯವಿದೆ. ಹೀಗಾಗಿ ನೀವು ಅಷ್ಟು ರೆಸಲ್ಯೂಷನ್ ಟಿವಿಗಳನ್ನು ಖರೀದಿಸಿದರೂ, ಅವರು ಕೊಟ್ಟ ಸ್ಯಾಂಪಲ್ ವಿಡಿಯೋ ಹೊರತುಪಡಿಸಿ ಬೇರೆ ವಿಡಿಯೋ ಅಷ್ಟೇ ಸ್ಪಷ್ಟವಾಗಿ ವೀಕ್ಷಿಸುವ ಭಾಗ್ಯ ಲಭಿಸುವುದಿಲ್ಲ. ಹೀಗಾಗಿ ಯುಎಚ್‌ಡಿ ಟಿವಿ ಇದ್ದರೂ ನೀವು ಎಚ್‌ಡಿ ರೆಸಲ್ಯೂಷನ್ ವಿಡಿಯೋಗಳನ್ನೇ ನೋಡಿ ಸಂತೋಷಿಸಬೇಕು. ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಯುಎಚ್‌ಡಿ ಟಿವಿಗಳನ್ನು ತಯಾರಿಸಿದ ನಂತರ ಅವುಗಳನ್ನು ಪರೀಕ್ಷಿಸಬೇಕಾದರೆ ಅಷ್ಟು ರೆಸಲ್ಯೂಷನ್ ವಿಡಿಯೋವೇ ಲಭ್ಯವಿರಲಿಲ್ಲವಂತೆ! ಆಮೇಲೆ 4-5 ಕ್ಯಾಮೆರಾಗಳ ಸಹಾಯದಿಂದ ಎಚ್‌ಡಿ ವಿಡಿಯೋ ಚಿತ್ರೀಕರಿಸಿ, ಕಂಪ್ಯೂಟರ್‌ನಲ್ಲಿ ಅದರ ರೆಸಲ್ಯೂಷನ್ ಹೆಚ್ಚಿಸಿ ಯುಎಚ್‌ಡಿ ರೆಸಲ್ಯೂಷನ್‌ಗೆ ತರಲಾಯಿತಂತೆ.