! ರಸ್ತೇಲಿ ಹೊರಟರೆ ಗಟಗಟನೆ ಇಂಧನ ಕುಡಿಯೋವಷ್ಟು ಬಾಯಾರಿಕೆ. ಒಮ್ಮೆ ನೋಡಿದವರು ತಿರುಗಿ ನೋಡುವಂತಹ ಆಕರ್ಷಕ ವಿನ್ಯಾಸವಿಲ್ಲ. ಪ್ರಯಾಣಿಸುವ ಸುಖವೂ ಅಷ್ಟಕ್ಕಷ್ಟೇ. ಆದರೆ ಗಟ್ಟಿಮುಟ್ಟು. ಒಂಥರಾ ಮೇಡ್ ಫಾರ್ ಇಂಡಿಯಾ, ಮೇಡ್ ಇನ್ ಇಂಡಿಯಾ ಆಗಿತ್ತು. ಹಾಗಾಗಿಯೇ ಅಂಬಾಸಿಡರ್ ನಮ್ಮ ದೇಶದ ಕಾರಾಗಿತ್ತು! ಕೋಲ್ಕತಾದಲ್ಲಿರುವ ಅದರ ಫ್ಯಾಕ್ಟರಿ ಮುಚ್ಚಿಹೋಯಿತಂತೆ ಎಂದಾಗ ಯಾಕೋ ಮನಸಿಗೆ ಕಸಿವಿಸಿ. ಇತಿಹಾಸದ ಕೊಂಡಿಯೊಂದು ಕಳಚಿಕೊಂಡ ಅನುಭವ. ಅಂಬಾಸಿಡರ್‌ದು ಸಡನ್ ಸಾವಲ್ಲ. ಅಂಬಾಸಿಡರ್ ಗ್ರಾಹಕರಿಂದ ದೂರವಾಗಿ ಸಾಕಷ್ಟು ವರ್ಷಗಳೇ ಕಳೆದವು. ಹೆದ್ದಾರಿಗಳಲ್ಲಿ ಓಡಾಡುವುದು ಬಿಟ್ಟು ಅದ್ಯಾವುದೋ ಕಾಲವಾಗಿತ್ತು. ಹೊಸ ಹೊಸ ಐಶಾರಾಮಿ ಮತ್ತು ಆಧುನಿಕ ತಂತ್ರಜ್ಞಾನದ ಕಾರುಗಳು ಮಾರುಕಟ್ಟೆಗೆ ಬಂದು ಬಡ ಅಂಬಾಸಿಡರನ್ನು ಮೂಲೆಗೆ ತಳ್ಳಿದ್ದವು. ಹಾಗೆಯೇ ಅಂಬಾಸಿಡರ್ ಕೂಡ ಕಾಲಕ್ಕೆ ತಕ್ಕಂತೆ ಬದಲಾಗಲೇ ಇಲ್ಲ. ಹೊಸ ಮಾದರಿ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲೂ ಇಲ್ಲ. ಹೊಸ ಮಾದರಿ ಕಾರು ಬೇಡ ಇರುವ ಅಂಬಾಸಿಡರ್ ಕಾರನ್ನೇ ಭಾರೀ ಪ್ರಮಾಣದಲ್ಲಿ ಬದಲಾಯಿಸಿ, ಉನ್ನತೀಕರಿಸಿ ಮಾರುಕಟ್ಟೆಗೆ ಬಿಡುವ ಪ್ರಯತ್ನವೂ ನಡೆಯಲಿಲ್ಲ. ಒಮ್ಮೆ ಮಾತ್ರ ಕೊಂಚ ಹೊಸ ರೂಪ ಕೊಟ್ಟು ಮಾರುಕಟ್ಟೆಗೆ ಬಿಡಲಾಯಿತಾದರೂ ಅದೂ ಕೂಡ ಕ್ಲಿಕ್ ಆಗಲಿಲ್ಲ. ಹೊಸ ಕಾರಿಗಿಂತ ಹಳೆಯ ಕಾರೇ ಚೆನ್ನಾಗಿತ್ತು ಎಂಬಂತಿತ್ತು ಹೊಸ ವಿನ್ಯಾಸ. ಇದೆಲ್ಲದರ ಪರಿಣಾಮವಾಗಿ ಸರ್ಕಾರ ಮಾತ್ರ ಅಂಬಾಸಿಡರ್ ಕಾರುಗಳನ್ನು ಖರೀದಿಸುತ್ತಿತ್ತು. ಇತ್ತೀಚೆಗೆ ಸರ್ಕಾರಗಳೂ ಅಂಬಾಸಿಡರ್ ಕೈಬಿಟ್ಟಿವೆ. ಇನ್ನೋವಾ, ಫಾರ್ಚುನರ್, ಸ್ವಿಫ್ಟ್ ಡಿಸಾಯರ್ ಮುಂತಾದ ಹೊಸ ಕಾರುಗಳು ಅಂಬಾಸಿಡರ್ ಜಾಗ ಕಬಳಿಸಿವೆ. ಬೇರೇನು ಇಲ್ಲದಿದ್ದರೂ ಅಂಬಾಸಿಡರ್ ಗಟ್ಟಿಮುಟ್ಟಾಗಿದೆ ಎಂಬ ಕಾರಣವೊಂದಿತ್ತು. ಕಾರುಗಳಿಗೆ ಏರ್‌ಬ್ಯಾಗ್‌ಗಳು ಬಂದಮೇಲೆ ಆ ಕಾರಣವೂ ಗೌಣವಾಗಿ, ಅಧಿಕಾರಿಗಳ, ರಾಜಕಾರಣಿಗಳ ದೃಷ್ಟಿ ಬೇರೆ ಕಾರುಗಳತ್ತ ಹರಿಯಲು ಕಾರಣವಾಯಿತು. ಆದರೂ ಇತ್ತೀಚಿನವರೆಗೆ ಕೋಲ್ಕತಾದಲ್ಲಿ ಬಾಡಿಗೆ ಕಾರುಗಳೆಲ್ಲ ಅಂಬಾಸಿಡರ್‌ಗಳೇ ಆಗಿದ್ದವು. ಈಗಲೂ 33,000 ಅಂಬಾಸಿಡರ್‌ಗಳು ಕೋಲ್ಕತಾದಲ್ಲಿ ಕಪ್ಪು-ಹಳದಿ ಬಣ್ಣ ಬಳಿದುಕೊಂಡು ಓಡಾಡುತ್ತಿವೆ. ಆದರೆ ಹೆಚ್ಚಿನವುಗಳಿಗೆ ವಯಸ್ಸಾಗಿದೆ. ನಮ್ಮ ರಾಜ್ಯದ ದಕ್ಷಿಣಕನ್ನಡದ ಪುತ್ತೂರು, ಬೆಳ್ತಂಗಡಿ ಮುಂತಾದ ಪ್ರದೇಶಗಳಲ್ಲಿ ಅಂಬಾಸಿಡರ್ ಈಗಲೂ ಕಾಣಸಿಗುತ್ತದೆ. 8-10 ವರ್ಷ ಹಿಂದನವರೆಗೂ ಮಂಗಳೂರಿನಿಂದ ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ ಮುಂತಾದ ಕಡೆಗಳಿಗೆ ಹೋಗಲಿಕ್ಕೆ ಈ ಅಂಬಾಸಿಡರ್‌ಗಳೇ ಪ್ರಮುಖ ಸಾಧನವಾಗಿದ್ದವು. ಕೆಲವು ಕಡೆ ಅವೊಂದೇ ಏಕೈಕ ಸಂಪರ್ಕ ಕೊಂಡಿಯಾಗಿದ್ದವು. ಬ್ರಿಟಿಷ್ ಮಾರಿಸ್ ಆಕ್ಸ್‌ಫರ್ಡ್ ಮಾದರಿಯ ಆಧಾರದಲ್ಲಿ 1957ರಲ್ಲಿ ಅಂಬಾಸಿಡರ್ ಕಾರು ಉತ್ಪಾದನೆ ಆರಂಭವಾಯಿತು. 20 ವರ್ಷಕ್ಕೂ ಹೆಚ್ಚು ಕಾಲ ಭಾರತದಲ್ಲಿ ಲಭ್ಯವಿದ್ದ ಏಕೈಕ ಕಾರು ಇದಾಗಿತ್ತು. ಆಗ ಹೆಚ್ಚು ಕಡಿಮೆ ಶೇ.70ಕ್ಕೂ ಹೆಚ್ಚು ಮಾರುಕಟ್ಟೆ ಪಾಲನ್ನು ಅಂಬಾಸಿಡರ್ ಕಾರು ಹೊಂದಿತ್ತು. ಆಗೆಲ್ಲ ಅಂಬಾಸಿಡರ್ ಕಾರು ಖರೀದಿಸಬೇಕೆಂದರೆ ವರ್ಷಗಟ್ಟಲೆ ಕಾಯಬೇಕಾಗುತ್ತಿತ್ತು. ಎಂತಹ ಬದಲಾವಣೆ ನೋಡಿ. 50 ವರ್ಷ ಕಳೆಯುವಷ್ಟರಲ್ಲಿ ತಯಾರಾದ ಅಂಬಾಸಿಡರ್ ಕಾರು ಮಾರಾಟವಾಗುವುದಕ್ಕೆ ಗ್ರಾಹಕರಿಗಾಗಿ ವರ್ಷಗಟ್ಟಲೆ ಕಾಯುವ ಸ್ಥಿತಿ ಬಂದುಬಿಟ್ಟಿತು. ಮೊದಲ ಹೊಡೆತ ಬಿದ್ದಿದ್ದು 1980ರಲ್ಲಿ. ಮಾರುತಿ ಕಾರುಗಳಿಂದ. ಕರ್ಟನ್ ಹಾಕಿಕೊಂಡು, ಒಳಗೆ ಒಂದೆರಡು ಚಿಕ್ಕ ಫ್ಯಾನು ಹೊಕಿಕೊಂಡು ಹೋಗುವ ಅಂಬಾಸಿಡರ್‌ಗಿಂತ ಬಟನ್ ಒತ್ತಿದ ತಕ್ಷಣ ತಣ್ಣನೆ ಗಾಳಿ ನೀಡುವ ಎಸಿ ಹೊಂದಿರುವ ಕಾರುಗಳು ಜನರಿಗೆ ಇಷ್ಟವಾಗುತ್ತ ಹೋಯಿತು. ಇದರ ಪರಿಣಾಮವಾಗಿಯೇ 2014ರಲ್ಲಿ ಮಾರಾಟವಾದದ್ದು ಕೇವಲ 2,200 ಅಂಬಾಸಿಡರ್ ಕಾರುಗಳು! ಅದೇ ವರ್ಷ ದೇಶದಲ್ಲಿ ಒಟ್ಟು 18 ಲಕ್ಷ ಕಾರುಗಳು ಮಾರಾಟವಾಗಿದ್ದವು. ಒಂದು ಕಾಲದಲ್ಲಿ ಕಾರುಗಳೇ ಇಲ್ಲದಾಗ ಅಂಬಾಸಿಡರ್ ರಾಜನಂತೆ ಮೆರೆದಿತ್ತು. ಆದರೆ ಜಗ್ವಾರ್, ಲ್ಯಾಂಡ್‌ರೋವರ್‌ಗಳಿಗೆ ನಮ್ಮ ದೇಶದವರು ಮಾಲೀಕರಾಗುತ್ತಿರುವ, ಪೋರ್ಶೆ, ಬಿಎಂಡಬ್ಲ್ಯು, ಬೆಂಝ್‌ಗಳು ಕಾಲಿಡುತ್ತಿರುವ ಕಾಲದಲ್ಲಿ ಅಂಬಾಸಿಡರ್ ಮೂಲೆಗೆ ಸೇರಿ ಬಾಗಿಲುಮುಚ್ಚಿಕೊಂಡಿದೆ. ಜಾಗತೀಕರಣದಿಂದ ಏನಾಗುತ್ತದೆ ಎಂಬುದಕ್ಕೆ ಬಹುಶಃ ಅಂಬಾಸಿಡರ್ ಒಂದು ಉತ್ತಮ ಉದಾಹರಣೆ ಎನಿಸುತ್ತದೆ. ಜಾಗತೀಕರಣಕ್ಕಿಂತ ಮುಂಚೆ ಅಂಬಾಸಿಡರ್ ಹೇಗಿತ್ತು? ಜಾಗತೀಕರಣ ಅಂಬಾಸಿಡರ್ ಮೇಲೆ ಹೇಗೆ ಪರಿಣಾಮಬೀರಿತು? ಎಂಬುದರ ಬಗ್ಗೆ ಅಧ್ಯಯನ ನಡೆಸಿದರೆ ಆಸಕ್ತಿಕರ ಅಂಶಗಳು ದೊರೆಯಬಹುದು. ಸಾಕಷ್ಟು ಹಳೆಯ ವಾಹನಗಳು (ಬೀಟೆಲ್, ವೆಸ್ಪಾ, ಯಮಹಾ ಆರ್‌ಎಕ್ಸ್ 100) ಇಂದಿಗೂ ತಮ್ಮ ಹಳೆಯ ಶೈಲಿಯೊಂದಿಗೇ ಜನರ ವಿಶ್ವಾಸಗಳಿಸಿವೆ. ವೆಸ್ಪಾ ಸ್ಕೂಟರ್‌ಗಳು ಮತ್ತು ಬೀಟೆಲ್ ಕಾರುಗಳು ವಿನ್ಯಾಸವನ್ನು ಹೊಸತನದೊಂದಿಗೆ ನೀಡುವ ಮೂಲಕ ಜನರನ್ನು ಇಂದಿಗೂ ಆಕರ್ಷಿಸುತ್ತಿವೆ. ಆದರೆ ಅಂಬಾಸಿಡರ್ ಮಾತ್ರ ತನ್ನ ಹೊಳಪು ಕಳೆದುಕೊಂಡಿದೆ. -ವಿನಾಯಕ ಭಟ್ಟ ಮೂರೂರು