! ಸುಮಾರು ಹತ್ತೂವರೆ ವರ್ಷಗಳ ಕಾಲ ಕೋಟ್ಯಂತರ ಯುವಕರ ಸಂವಹನ ಮಾಧ್ಯಮವಾಗಿದ್ದ ಆರ್ಕುಟ್‌ನ ಸಾವಿನ ಮುನ್ಸೂಚನಾ ಸಂದೇಶವನ್ನು ಗೂಗಲ್ ಕಳುಹಿಸಿದೆ... ನಿಮ್ಮ ಪ್ರೀತಿಯ ಆರ್ಕುಟ್ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು ಸೆ.30, 2014ರ ಬೆಳಗಿನವರೆಗೆ ಕೃತಕ ಉಸಿರಾಟ ಘಟಕದಲ್ಲಿರಲಿದೆ! ಆ ನಂತರ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದಾರೆ. ಆದ್ದರಿಂದ ಈಗಲೇ ಆರ್ಕುಟ್‌ನ ವೈಕುಂಠ ಸಮಾರಾಧನೆಗೆ ಆಹ್ವಾನ ನೀಡುತ್ತಿದ್ದೇವೆ. ಅಕೌಂಟ್ ಹೊಂದಿರುವವರೆಲ್ಲರೂ ದಯವಿಟ್ಟು ಆರ್ಕುಟ್ ಪೇಜ್‌ಗೆ ಭೇಟಿ ನೀಡಿ. ಸೆ.30ರವರೆಗೆ ಉಭಯ ಕುಶಲೋಪರಿ ವಿಚಾರಿಸಲು ಅವಕಾಶವಿದ್ದು, ಅಂತಿಮ ದರ್ಶನಕ್ಕೆ ಇಡಲಾಗಿದೆ! ಸುಮಾರು ಹತ್ತೂವರೆ ವರ್ಷಗಳ ಕಾಲ ಕೋಟ್ಯಂತರ ಯುವಕರ ಸಂವಹನ ಮಾಧ್ಯಮವಾಗಿದ್ದ ಆರ್ಕುಟ್‌ನ ಸಾವಿನ ಮುನ್ಸೂಚನಾ ಸಂದೇಶವನ್ನು ಗೂಗಲ್ ಕಳುಹಿಸಿದೆ. ಸಾವಿನ ದಿನವನ್ನು ನಿಗದಿಮಾಡಿ ಅಂತಿಮ ದರ್ಶನಕ್ಕೂ ಆಹ್ವಾನಿಸಿದೆ. ಒಂದು ದಶಕದ ಮೇಲೆ ಅರ್ಧ ವರ್ಷಗಳಾದ ಬಳಿಕ ಖ್ಯಾತ ಸಾಮಾಜಿಕ ತಾಣ ಗತಿಸುವ ದಿನ ಬಂದಿದೆ. ಸೆ.30ರ ನಂತರ ಆರ್ಕುಟ್ ಕಾರ್ಯನಿರ್ವಹಿಸುವುದಿಲ್ಲ ಎಂದು ಗೂಗಲ್ ಅಧಿಕೃತ ಹೇಳಿಕೆ ಪ್ರಕಟಿಸಿದೆ. ಫೇಸ್‌ಬುಕ್ ಎಂಟ್ರಿ ಬಳಿಕ ಅಸಂಖ್ಯಾತ ಜನರಿಗೆ ಆರ್ಕುಟ್ ಎಂದರೆ ವಾಕರಿಕೆ ಬಂದಿರಬಹುದು. ಆದರೆ ಸಾಮಾಜಿಕ ತಾಣದ ಹುಚ್ಚು ಹಿಡಿಸಿದ್ದು ಆರ್ಕುಟ್. ಅಂತರ್ಜಾಲ ಯಾನದ ಆರಂಭಿಕ ದಿನಗಳ ಸಾಕಷ್ಟು ನೆನಪುಗಳನ್ನು ನಿಮ್ಮ ಆರ್ಕುಟ್ ಅಕೌಂಟ್ ಹೊಂದಿದೆ. 2004ರ ಜನವರಿಯಲ್ಲಿ ಅಂತರ್ಜಾಲ ತಾಣಕ್ಕೆ ಆರ್ಕುಟ್ ದಾಳಿಯಾಯಿತು. ಆ ಸಂದರ್ಭದಲ್ಲಿ ಸಾಮಾಜಿಕ ತಾಣಗಳು ಅಷ್ಟೊಂದು ಖ್ಯಾತವಾಗಿರಲಿಲ್ಲ. ಚಾಟ್ ಹಾಗೂ ಮೆಸೇಜಿಂಗ್‌ಗೆ ಮಾತ್ರ ಗೂಗಲ್ ಅಕೌಂಟ್‌ಗಳು ಸೀಮಿತಗೊಂಡಿದ್ದವು. ತಮ್ಮ ಸ್ನೇಹಿತರು, ಇಷ್ಟಪಡುವ ವ್ಯಕ್ತಿಗಳು ಅಥವಾ ಬಿಸಿನೆಸ್ ಕಾಂಟ್ಯಾಕ್ಟ್‌ಗೆ ಆರ್ಕುಟ್ ವೇದಿಕೆಯಾಗಿತ್ತು. ಸುಮಾರು ಅರ್ಧ ದಶಕಗಳ ಕಾಲ ಸಾಮಾಜಿಕ ತಾಣವನ್ನು ಅಕ್ಷರಶಃ ಆಳಿತು. ಆದರೆ ನಂತರದ ದಿನಗಳಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗದೇ ಇಂದು ಮುಚ್ಚುವ ಸ್ಥಿತಿಗೆ ಬಂದು ತಲುಪಿತು. ಫೇಸ್‌ಬುಕ್‌ನ ಭರಾಟೆಯಲ್ಲಿ ಆರ್ಕುಟ್ ನಲುಗಿಹೋಯಿತು. ಈ ಟೀಕೆ, ಹೊಗಳಿಕೆ ಮಾಡಲು ಸಾಕಷ್ಟು ಅವಕಾಶಗಳಿವೆ. ಆದರೆ ನಿಮ್ಮ ಅಕೌಂಟ್‌ನಲ್ಲಿನ ನೆನಪುಗಳು ಸೆ.30ರ ನಂತರ ದೊರೆಯುವುದಿಲ್ಲ. ಈ ಆರ್ಕುಟ್‌ನಲ್ಲಿ ಏನಿದೆ ಎಂದು ಮೂಗು ಮುರಿಯುವ ಮುಂಚೆ ಒಮ್ಮೆ ಭೇಟಿ ನೀಡಿ. ನಿಮ್ಮ ಹಳೆಯ ಅಥವಾ ಕಾಲೇಜು ದಿನಗಳ ಅಪರೂಪದ ಫೋಟೋಗಳು ಸಿಗಬಹುದು. ಯಾವುದೋ ಖುಷಿ ಕ್ಷಣವನ್ನು ಹಂಚಿಕೊಂಡ ವಿಚಾರ ನೆನಪಿಗೆ ಬರಬಹುದು. ಇದಕ್ಕಾಗಿ ಮತ್ತೊಮ್ಮೆ, ಕೊನೆಯದಾಗಿ ಸೆ.30ರೊಳಗೆ ಲಾಗ್ ಇನ್ ಆಗಿ ಎಲ್ಲ ಫೈಲ್‌ಗಳನ್ನು ಗೂಗಲ್ ಟೇಕ್‌ಔಟ್ ಮೂಲಕ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ. ಹಾಗೆಯೇ ಅಲ್ಲಿರುವ ಅಪರೂಪದ ಫೋಟೋಗಳನ್ನು ಗೂಗಲ್ ಪ್ಲಸ್‌ಗೆ ವರ್ಗಾಯಿಸಿ. ಅಂದಹಾಗೆ ತನ್ನ ಸಾಮಾಜಿಕ ತಾಣಗಳ ಅಥವಾ ಆರ್ಕುಟ್ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳಲು ಶೀಘ್ರದಲ್ಲೇ ಗೂಗಲ್ ಪ್ಲಸ್ ಅನ್ನು ರೀಲಾಂಚ್ ಮಾಡುತ್ತಾರೆ ಎನ್ನುವ ಸುದ್ದಿಯಿದೆ. ಆರ್ಕುಟ್ ಮರಣಶಯ್ಯೆ ತಯಾರಾಗಲು ಎರಡು ಕಾರಣಗಳಿವೆ. ಬ್ರೆಝಿಲ್ ಹಾಗೂ ಭಾರತ ಹೊರತುಪಡಿಸಿ ಮತ್ಯಾವ ದೇಶಗಳಲ್ಲೂ ಕಳೆದ 3 ವರ್ಷಗಳಿಂದ ಆರ್ಕುಟ್ ಬಳಕೆಯಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರ್ಕುಟ್‌ನಿಂದ ಗೂಗಲ್‌ಗೆ ಯಾವುದೇ ಆದಾಯ ಬರುತ್ತಿರಲಿಲ್ಲ. ಇದರೊಡನೆ ಇವೆರಡು ದೇಶಗಳಲ್ಲಿ ಫೇಕ್ ಆರ್ಕುಟ್ ಅಕೌಂಟ್ ಹಾಗೂ ಹೇಟ್ ಕಮ್ಯುನಿಟಿಗಳಿಂದ ಗೂಗಲ್ ಸಂಸ್ಥೆಯು ಕಾನೂನು ಕಟ್ಲೆ ಎದುರಿಸಬೇಕಾಯಿತು. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮುಚ್ಚುವುದೊಂದೇ ಮಾರ್ಗ ಎಂಬ ಸ್ಥಿತಿಗೆ ಗೂಗಲ್ ತಲುಪಿದೆ. ಆದರೆ ಆರ್ಕುಟ್ ಅವನತಿ ಆರಂಭವಾಗಿದ್ದು 2008- 09ರಲ್ಲಿ. ಆಗತಾನೆ ಫೇಸ್‌ಬುಕ್ ಕುಟುಂಬ ಬೆಳೆಯುತ್ತಿತ್ತು. ಕಾಕತಾಳೀಯವೆಂಬಂತೆ ಆರ್ಕುಟ್‌ಗೆ ಹ್ಯಾಕರ್ಸ್‌ಗಳ ಕಾಟ ಅತಿಯಾಯಿತು. ಅಕೌಂಟ್‌ಗಳು ಹ್ಯಾಕ್ ಆಗಿ ಹೇಸಿಗೆಯ ಸಂದೇಶಗಳು ಪೋಸ್ಟ್ ಆಗಲು ಆರಂಭಿಸಿದ್ದವು. ಇದೇ ಕಾರಣದಿಂದ ಸಾಕಷ್ಟು ಜನ ಆರ್ಕುಟ್‌ನಿಂದ ದೂರವಾಗಿದ್ದರು. ಒಂದರ್ಥದಲ್ಲಿ ಕಳೆದ 3 ವರ್ಷದಿಂದ ಆರ್ಕುಟ್ ಎಂಬ ಸಾಮಾಜಿಕ ತಾಣ ಐಸಿಯುನಲ್ಲಿಯೇ ಇದೆ.