ಬಾಹ್ಯಕಸ ತ್ಯಾಜ್ಯ ವಿಲೇವಾರಿಗೆ ಮಾನವ ಭೂ ಪ್ರದೇಶ, ನದಿ, ಸಮುದ್ರಗಳನ್ನಷ್ಟೇ ಗುರಿಯಾಗಿಸಿಕೊಂಡಿದ್ದಾನೆ ಅಂದುಕೊಳ್ಳಬೇಡಿ. ತ್ಯಾಜ್ಯ ವಿಲೇವಾರಿಗೆ ಮಾನವ ಕೇವಲ ಭೂ ಪ್ರದೇಶ, ನದಿ, ಸಮುದ್ರಗಳನ್ನಷ್ಟೇ ಗುರಿಯಾಗಿಸಿಕೊಂಡಿದ್ದಾನೆ ಅಂದುಕೊಳ್ಳಬೇಡಿ. ಆತ ಬೇಡದ ವಸ್ತುಗಳನ್ನು ಬಾಹ್ಯಾಗಸಕ್ಕೂ ಒಗೆದು ಮಲಿನಗೊಳಿಸಿದ್ದಾನೆ! ಅಲ್ಲಿ ಚೆದುರಿ ಹೋದ ಚೂರುಗಳ ರಾಶಿಯೇ ಬರೋಬ್ಬರಿ. ಸಾಸಿವೆ ಕಾಳಿನಿಂದ ಫುಟ್‌ಬಾಲ್ ಗಾತ್ರದವರೆಗೆ ವೈವಿಧ್ಯಮಯ ಲಕ್ಷ ಲಕ್ಷ ತುಣುಕುಗಳು, ಹಳೇ ಉಪಗ್ರಹಗಳ ಅವಶೇಷಗಳಾಗಿರುವ ಅವು ಭೂಮಿಯ ಸುತ್ತ ಕಕ್ಷಾಯಿಸುತ್ತಿವೆ. ವೇಗವಾಗಿ ಸಾಗುವ ಅಂತರಿಕ್ಷ ನೌಕೆಯೊಂದಕ್ಕೆ ಬಣ್ಣದ ಚೂರೊಂದು ಬಡಿದರೂ ಘೋರ ಅವಘಡವೇ! ಬಾಹ್ಯಾಕಾಶ ನೌಕೆಯನ್ನು ಉಡಾಯಿಸುವ ಹಲವು ಹಂತಗಳಲ್ಲಿ ಕಸ, ರದ್ದಿ ಹೊರಬೀಳುವುದು. ನೌಕೆ ಕಕ್ಷಾಯಿಸುವಾಗ ಸ್ಫೋಟಗೊಂಡರಂತೂ ಅಪಾರ ಪ್ರಮಾಣದಲ್ಲಿ ತ್ಯಾಜ್ಯದ ಉತ್ಪತ್ತಿ. ಉಪಗ್ರಹವನ್ನು ಕಕ್ಷೆಯಲ್ಲಿರಿಸುವಾಗ ಖಾಲಿಯಾದ ಬೂಸ್ಟರ್‌ಗಳು, ರಾಕೆಟ್‌ನ ಮೂತಿ ಭಾಗ ದೂರಕ್ಕೆ ಚಿಮ್ಮಿ ಹೋಗುವುದು ಇದ್ದಿದ್ದೇ. ಜಖಂಗೊಂಡ ಉಪಗ್ರಹಗಳು, ನಿರುಪಯುಕ್ತ ಉಪಗ್ರಹಗಳು ಕಕ್ಷೆಯಲ್ಲೇ ಸಹಸ್ರಾರು ವರ್ಷಗಳು ಉಳಿದಾವು. ಜಗತ್ತಿನ ನಾನಾ ರಾಷ್ಟ್ರಗಳು ಪೈಪೋಟಿಯಲ್ಲಿ ವಿವಿಧೋದ್ದೇಶಗಳಿಗೆ ಉಪಗ್ರಹಗಳನ್ನು ಉಡಾಯಿಸುತ್ತಲೇ ಇವೆ. ಪರಿಣಾಮವಾಗಿ ಬಾಹ್ಯಾಕಾಶದಲ್ಲಿ ಅಪಾರ ಪ್ರಮಾಣದಲ್ಲಿ ಕಸದ ರಾಶಿ ಒಂದೇ ಸಮನೆ ಶೇಖರಗೊಳ್ಳುತ್ತಿದೆ. ಸಹಜವಾಗಿಯೇ ಘರ್ಷಣೆಯ ಆತಂಕವೂ ತೀವ್ರವಾಗುತ್ತಿದೆ. ಕಸದ ವಿಲೇವಾರಿ ಹೇಗೆ? ಒಂದು ಯೋಜನೆ ಹೀಗಿದೆ. ವಿಶೇಷವಾಗಿ ಸಜ್ಜಾದ ಉಪಗ್ರಹವೊಂದು ಭೂಮಿಯ ಸುತ್ತ ಪರಿಭ್ರಮಿಸುತ್ತ ಲೇಸರ್ ಕಿರಣ ಹಾಯಿಸಿ ತ್ಯಾಜ್ಯದ ತುಣುಕುಗಳನ್ನು ನಾಶಪಡಿಸುವುದು. ಆ ಕಿರಣ, ತುಣುಕು ಹೇಳ ಹೇಸರಿಲ್ಲದಂತೆ ಧ್ವಂಸವಾಗುವಷ್ಟು ಶಕ್ತಿಯುತವಾಗಿರಬೇಕಷ್ಟೆ. ಇನ್ನು ರೇಡಾರ್‌ಗಳು ದೊಡ್ಡ ಗಾತ್ರದ ವಸ್ತುಗಳ ಮೇಲೆ ಹದ್ದುಗಣ್ಣಿರಿಸಿ ಸಾಕಷ್ಟು ಮುಂಚಿತವಾಗಿಯೇ ಉಪಗ್ರಹಗಳಿಗೆ ಎಚ್ಚರಿಕೆ ನೀಡಬೇಕು. ಉಪಗ್ರಹಗಳು, ಗಗನನೌಕೆಗಳು, ಅಂತರಿಕ್ಷ ನಿಲ್ದಾಣಗಳನ್ನು ವಿಶೇಷ ಪಿಂಗಾಣಿ ತಂತುವಿನಿಂದ ಹೊದಿಸಿರುವುದು ಕ್ಷೇಮಕರ. ಇದರಿಂದ ತ್ಯಾಜ್ಯ ಪದಾರ್ಥಗಳ ಢಿಕ್ಕಿಯಿಂದ ಪರಿಣಮಿಸುವ ಆಘಾತವನ್ನು ನೌಕೆ ತಕ್ಕಮಟ್ಟಿಗಾದರೂ ತಡೆದುಕೊಂಡೀತು. ವಿಜ್ಞಾನಿಗಳ ಯೋಜನೆಗಳು ಕಟ್ಟು ಕಥೆಗಳನ್ನೂ ಮೀರಿಸುತ್ತವೆ. ರೊಬಾಟ್ ಅಥವಾ ಯಂತ್ರಮಾನವರ ಕೈನಲ್ಲಿ ಪೊರಕೆಗಳನ್ನಿಟ್ಟು 'ಹೋಗಿ ಗುಡಿಸಿ ನೇರವಾಗಿ ನಮ್ಮ ಅಂತರಿಕ್ಷ ನಿಲ್ದಾಣಕ್ಕೆ ರದ್ದಿ ತಂದು ಬಿಡಿ. ಇಲ್ಲಿ ಹೇಗೂ ಮರುಬಳಕೆ ಘಟಕಗಳುಂಟಲ್ಲ...' ಎನ್ನುವುದು. ಅಂದಹಾಗೆ ಇಂದಿಗೆ ಭೂಮಿಯನ್ನು ಕಕ್ಷಾಯಿಸುತ್ತಿರುವ ವ್ಯರ್ಥ ಪದಾರ್ಥಗಳ (4 ಕೋಟಿ ತುಣುಕುಗಳೆನ್ನಿ!) ಪೈಕಿ ಬಹುತೇಕ 10 ಸೆಂ.ಮೀ.ಗೂ ದೊಡ್ಡ ಗಾತ್ರದವು. 'ಸ್ಪೇಸ್ ಶಟಲ್‌' (ವ್ಯೂಮ ಲಾಳೆ)ನಂಥ ಗಗನನೌಕೆಗಳು ಅಗಾಧ ವೇಗದಲ್ಲಿ ಸಾಗುತ್ತವೆ. ಒಂದು ವೇಳೆ ಅವು ತಾಜ್ಯ ತುಣುಕುಗಳೊಂದಿಗೆ ಘರ್ಷಣೆ ಹೊಂದಿದರೆ ಫಲಶ್ರುತಿ ಅತ್ಯಂತ ಅಪಾಯಕಾರಿ. ಏಕೆಂದರೆ ನೌಕೆಗೆ ಬಡಿಯುವ ಸಣ್ಣ ಚೂರು ಕೂಡಾ ತಾಸಿಗೆ 40,000 ಕಿ.ಮೀ. ವೇಗದಲ್ಲಿರುತ್ತದೆ. ನೌಕೆಯ ಕಿಟಕಿ ಧ್ವಂಸಗೊಳ್ಳಲು ಈ ಹೊಡೆತ ಸಾಕು! ನೌಕೆಯೊಳಗೆ ದಿಢೀರನೆ ಒತ್ತಡವಿಳಿದು ಎಲ್ಲ ಗಗನಯಾತ್ರಿಗಳೂ ಬದುಕಿಗೆ ವಿದಾಯ ಹೇಳುವುದನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ. ಅಂತರಿಕ್ಷವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ವಿಶ್ವ ಪ್ರಜೆಗಳೆಲ್ಲರ ಹೊಣೆ. - ಬಿಂಡಿಗನವಿಲೆ ಭಗವಾನ್ --- ಸಂಖ್ಯಾ ಕೌತುಕ