ಜಪಾನಿ ಮೀನುಗಳ ಅಮೆರಿಕ ಯಾನ! ನಾವು ಕೆಲ ಸುದ್ದಿಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಭೂಕಂಪದಿಂದ ಕುಸಿತವಾದ ಮನೆಯಿಂದ ವಾರದ ಬಳಿಕ ಜೀವಂತವಾಗಿ ಸಿಕ್ಕ ಬೆಕ್ಕು, ನಾಯಿ ಅಥವಾ ಮನುಷ್ಯರು... ಹೀಗೆ ಹಲವಾರು ಕಥೆ ಕೇಳಿರುತ್ತೇವೆ. ಆದರೆ ಇದೊಂದು ವಿಚಿತ್ರ ಪ್ರಕರಣ. ಜಪಾನ್‌ನಲ್ಲಿ ಸಂಭವಿಸಿದ ಸುನಾಮಿ ವೇಳೆಯಲ್ಲಿ ಬೋಟ್‌ವೊಂದರಲ್ಲಿ ಸಿಕ್ಕಿ ಹಾಕಿಕೊಂಡ 5 ಮೀನುಗಳ ಗುಂಪೊಂದು ಅಮೆರಿಕದಲ್ಲಿ ಕಾಣಸಿಕ್ಕಿದೆ! ವಾಷಿಂಗ್ಟನ್‌ನ ಬೀಚ್‌ನಲ್ಲಿ ಈ ಮೀನುಗಳು ಸಿಕ್ಕಿದ್ದು ವಿಜ್ಞಾನಿಗಳಿಗೇ ಅಚ್ಚರಿ ಹುಟ್ಟಿಸಿದೆ. ಈ 2 ವರ್ಷದಲ್ಲಿ ಈ ಮೀನುಗಳು ಫೆಸಿಫಿಕ್ ಸಾಗರದಲ್ಲಿ ಸುಮಾರು 5 ಸಾವಿರ ಮೈಲಿಗಳ ಪ್ರಯಾಣ ಮಾಡಿ ಅಮೆರಿಕದ ದಡಕ್ಕೆ ಬಂದು ತಲುಪಿವೆ. 2011ರಲ್ಲಿ ಜಪಾನ್‌ನ ಫುಕೋಶಿಮಾದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿ ದಾಳಿಗೆ ಸಿಕ್ಕ ಈ ಮೀನುಗಳು ಬೋಟ್‌ವೊಂದರಲ್ಲಿ ಸಿಕ್ಕಿಕೊಂಡಿದ್ದವು. ಈ ಮೀನುಗಳಿದ್ದ ಬೋಟ್ ಕೂಡ ಸಾಗರದ ಅಬ್ಬರಕ್ಕೆ ಸಿಲುಕಿ ಅನಾಥವಾಗಿತ್ತು. ಫುಕುಶಿಮಾದಿಂದ ವಾಷಿಂಗ್ಟನ್‌ವರೆಗೆ ಬಂದಿರುವ ಈ ಮೀನುಗಳು ಬೀಕ್ ಎಂಬ ವರ್ಗಕ್ಕೆ ಸೇರಿದ್ದಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 'ಸಾಯಿ ಶೋ ಮರು' ಎಂಬ ಹೆಸರಿನ ಬೋಟ್‌ನಲ್ಲಿ ಈ ಮೀನುಗಳ ಗುಂಪು ಸಿಕ್ಕಿದ್ದು, ಜಪಾನ್‌ನ ಸಾಗರದಲ್ಲಿ ಸಿಗುವ ಮೀನುಗಳಿವು ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಮೀನುಗಳು 6 ಇಂಚು ಉದ್ದವಿದ್ದು, ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣ ಹೊಂದಿವೆಯಂತೆ.